ಭಾನುವಾರ, ಅಕ್ಟೋಬರ್ 17, 2021
23 °C

ಗೋಲ್ಡನ್ ಔಟ್‌ಫಿಟ್‌ನಲ್ಲಿ ವಿಕ್ರಾಂತ ರೋಣನ ‘ಗಡಂಗ್ ರುಕ್ಕಮ್ಮ’ ಜಾಕ್ವೆಲಿನ್...

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಲಿವುಡ್‌ ಬೆಡಗಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಿನಿಮಾ, ರಿಯಾಲಿಟಿ ಶೋ, ಜಾಹೀರಾತು ಎಂದು ಸದಾ ಕ್ರಿಯಾಶೀಲವಾಗಿರುತ್ತಾರೆ.

ಇದೀಗ ಹಿಂದಿಯ ‘ಡ್ಯಾನ್ಸ್‌ ಪ್ಲಸ್ 6’ ರಿಯಾಲಿಟಿ ಶೋಗೆ ವಿಶೇಷ ಫೋಟೊಶೂಟ್ ಮಾಡಿಸಿರುವ ಜಾಕ್ವೆಲಿನ್, ಚಿನ್ನದ ಉಡುಗೆಯಲ್ಲಿ ಕಂಗೊಳಿಸುತ್ತಿದ್ದಾರೆ. ಚಿನ್ನ ಲೇಪಿತ ಸ್ವೆಟರ್ ಹಾಗೂ ಮಿನಿ ಸ್ಕರ್ಟ್‌ನಲ್ಲಿ ಅತ್ಯಾಕರ್ಷಕವಾಗಿ ಕಂಡು ಬಂದಿರುವ ಈ ನಟಿ ಡ್ಯಾನ್ಸ್‌ ಪ್ಲಸ್ 6 ಕಾರ್ಯಕ್ರಮ ಈ ಸಾರಿ ಅದ್ಭುತ ಸ್ಪರ್ಧಿಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.

ಜಾಕ್ವೆಲಿನ್ ಧರಿಸಿರುವ ಚಿನ್ನ ಲೇಪಿತ ಈ ಉಡುಪಿನ ಬೆಲೆ ಸುಮಾರು ಮೂರು ಲಕ್ಷ ರೂಪಾಯಿ ಎಂದು ಹೇಳಲಾಗಿದ್ದು, ವ್ಯಾಲಿಂಟಿನೊ ಫ್ಯಾಶನ್ ಬ್ಯ್ರಾಂಡ್ ಕಂಪನಿ ಇದನ್ನು ಸಿದ್ದಪಡಿಸಿದೆ. ತಮ್ಮ ಇನ್‌ಸ್ಟಾಗ್ರಾಂನಲ್ಲಿ ಈ ಫೋಟೊಗಳನ್ನು ಹಂಚಿಕೊಂಡಿರುವ ಜಾಕ್ವೆಲಿನ್ ಅಪಾರ ಮೆಚ್ಚುಗೆ ಗಳಿಸಿದ್ದಾರೆ.

 

ಅನೂಪ್‌ ಭಂಡಾರಿ ನಿರ್ದೇಶನದ ‘ವಿಕ್ರಾಂತ್‌ ರೋಣ’ ಮುಖಾಂತರ ಚಂದನವನಕ್ಕೆ ಹೆಜ್ಜೆ ಇಟ್ಟು, ಇತ್ತೀಚೆಗೆ ನಟ ಸುದೀಪ್‌ ಜೊತೆ ಹಾಡಿಗೆ ಹೆಜ್ಜೆ ಹಾಕಿದ್ದರು. ರಕೇಲ್‌ ಡಿಕೋಸ್ಟ ಉರ್ಫ್‌ ‘ಗಡಂಗ್‌ ರಕ್ಕಮ್ಮ’ನಾಗಿ ತೆರೆ ಮೇಲೆ ಅವರು ಕಾಣಿಸಿಕೊಂಡಿದ್ದಾರೆ.

ಪ್ಯಾನ್ ಇಂಡಿಯಾ ಬಿಗ್‌ಬಜೆಟ್‌ ಚಿತ್ರ ‘ವಿಕ್ರಾಂತ್‌ ರೋಣ’ದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕುವುದರ ಜೊತೆಗೆ ವಿಶೇಷ ಪಾತ್ರದಲ್ಲೂ ಜಾಕ್ವೆಲಿನ್‌ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರೀಕರಣದ ಕೊನೆಯ ಹಂತದಲ್ಲಿ ಜಾಕ್ವೆಲಿನ್ ಹಾಗೂ ಸುದೀಪ್‌ ಅವರ ನೃತ್ಯದ ಭಾಗವನ್ನು ಚಿತ್ರತಂಡವು ಚಿತ್ರೀಕರಿಸಿಕೊಂಡಿತ್ತು. ಜಾನಿ ಮಾಸ್ಟರ್‌ ನೃತ್ಯ ನಿರ್ದೇಶನದಲ್ಲಿ 300 ಡ್ಯಾನ್ಸರ್‌ ನಡುವೆ, ಬೃಹತ್‌ ಸೆಟ್‌ನಲ್ಲಿ ಜಾಕ್ವೆಲಿನ್ ಹಾಗೂ ಸುದೀಪ್‌ ಹಾಡಿಗೆ ಹೆಜ್ಜೆ ಹಾಕಿದ್ದರು. ಇದಕ್ಕೆ ಸುಮಾರು ₹5 ಕೋಟಿ ವೆಚ್ಚವಾಗಿತ್ತು. ತುಳು ಭಾಷೆಯಲ್ಲಿ ‘ಗಡಂಗ್‌’ ಎಂದರೆ ಸಾರಾಯಿ ಅಂಗಡಿ. ಪೋಸ್ಟರ್‌ನಲ್ಲೂ ಗ್ಲ್ಯಾಮರಸ್‌ ಉಡುಪಿನಲ್ಲಿ ಜಾಕ್ವೆಲಿನ್‌ ಕಾಣಿಸಿಕೊಂಡಿದ್ದು ಮದ್ಯದ ಮಡಕೆಯಿಂದ ಮದ್ಯ ಸುರಿಯುತ್ತಿರುವಂತೆ ಪೋಸ್‌ ನೀಡಿದ್ದಾರೆ.    

ಲಾಕ್‌ಡೌನ್‌ ಇಲ್ಲದೇ ಇದ್ದಿದ್ದರೆ ಆಗಸ್ಟ್‌ 19ಕ್ಕೆ ‘ವಿಕ್ರಾಂತ್‌ ರೋಣ’ ತೆರೆಯ ಮೇಲೆ ಬರಬೇಕಿತ್ತು. ಈಗಾಗಲೇ ಚಿತ್ರದ ಡಬ್ಬಿಂಗ್‌ ಕೆಲಸವೂ ಪೂರ್ಣಗೊಂಡಿದ್ದು, 2ಡಿ ಹಾಗೂ 3ಡಿಯಲ್ಲಿ ಚಿತ್ರವನ್ನು ತೆರೆಯ ಮೇಲೆ ತರಲು ಚಿತ್ರತಂಡ ಅಂತಿಮ ಸಿದ್ಧತೆ ನಡೆಸುತ್ತಿದೆ.

ಇದನ್ನೂ ಓದಿ: ಹೊಸ ಫೋಟೊಗಳನ್ನು ಹರಿಬಿಟ್ಟ ಪೂಜಾ ಹೆಗ್ಡೆ: ಬೋಲ್ಡ್‌ ಲುಕ್‌ನಲ್ಲಿ ನಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು