ಗುರುವಾರ , ಏಪ್ರಿಲ್ 9, 2020
19 °C

ಕನ್ನಡಿಗರ ಹೃದಯ ಕೋಗಿಲೆ ಗಂಗಮ್ಮ

ಚಿತ್ರ ಬರಹ: ಈರಪ್ಪ ನಾಯ್ಕರ್‌ Updated:

ಅಕ್ಷರ ಗಾತ್ರ : | |

Deccan Herald

ಕನ್ನಡಿಗರ ಹೃದಯ ಕೋಗಿಲೆ ಎಂದು ಖ್ಯಾತಿ ಪಡೆದ ಕೊಪ್ಪಳದ ಗಂಗಮ್ಮನದು ಅದ್ಭುತ ಪ್ರತಿಭೆ. ಕೂಲಿ ಕೆಲಸ ಮಾಡಿಕೊಂಡು ತಾನು ತನ್ನ ಮನೆ ಕೆಲಸವಾಯಿತು ಎಂದು ತನ್ನ ಪಾಡಿಗೆ ತಾನಿರುವ ಇಂಥ ಪ್ರತಿಭೆಯೊಂದು ಕೊಪ್ಪಳದಿಂದ ಹೊರಕ್ಕೆ ಪರಿಚಯವಾಗಲು ಎಷ್ಟೊಂದು ವರ್ಷಗಳೇ ಬೇಕಾದವು. ಹೌದು; ಕೊಪ್ಪಳದ ಗಂಗಮ್ಮನ ಹಾಡು ಕೇಳಿದರೆ ಎಸ್‌.ಜಾನಕಮ್ಮ ನೆನಪಾಗೋದು ಖಂಡಿತ. ಗಂಗಮ್ಮನ ಈ ಪ್ರತಿಭೆಯನ್ನು ಅವರೂರಿನ ಯುವಕರು ಗುರುತಿಸಿದ್ದರಿಂದ ಅವರು ಹಾಡಿದ ಹಾಡುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೇಳುವಂತಾಗಿದೆ.

ಅಷ್ಟಕ್ಕೂ ಕೊಪ್ಪಳದ ಗಂಗಮ್ಮ ಹೊರಜಗತ್ತಿಗೆ ಪರಿಚಯವಾಗಿದ್ದಾದರೂ ಹೇಗೆ?

ಗಂಗಮ್ಮ ಕೊಪ್ಪಳದಲ್ಲಿ ಆರ್ಕೆಸ್ಟ್ರಾದಲ್ಲಿ ಹಾಡುಗಾರ್ತಿ. ಅವರ ಹಾಡು ಕೇಳಿದ್ದ ಶಿವಪ್ರಸಾದ್ ಮಠಪತಿ ಹಾಗೂ ಹುಸೇನ್ ಭಾಷಾ ಸಂಡೂರ (ಸೋನು) ಅವರ ಹಾಡನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಒಂದೇ ದಿನದಲ್ಲಿ ಅಂದರೆ 24 ತಾಸುಗಳಲ್ಲಿ ಆರು ಲಕ್ಷ ಜನರನ್ನು ತಲುಪಿದ ಇವರ ಹಾಡು ‘ಸತ್ಯಂ ಶಿವಂ ಸುಂದರಂ’, ‘ಮಧುಮಾಸ ಚಂದ್ರಮ ನೈದಿಲೆಗೆ ಸಂಭ್ರಮ’ ಎಲ್ಲರ ಬಾಯಿಯಲ್ಲೂ ಗುನುಗುವಂತಾಯಿತು. ಇಷ್ಟಾದ ನಂತರ ಈಗ ಎಲ್ಲರ ಬಾಯಲ್ಲೂ ಕೊಪ್ಪಳದ ಗಂಗಮ್ಮನವರದೇ ಮಾತು ಇವರ ಹಾಡು ಕೇಳಲು ಜನ ಮುಗಿಬೀಳುತ್ತಾರೆ. ದೂರದೂರಿನಿಂದ ಸಂಗೀತ ಪ್ರೇಮಿಗಳು ಇವರ ಸಂಗೀತ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಇವರು ದಿಢೀರ್‌ ಜೂನಿಯರ್‌ ಎಸ್‌. ಜಾನಕಿಯಾಗಿ ಪ್ರಸಿದ್ಧಿ ಪಡೆದರು.ಇಷ್ಟಾದ ನಂತರ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಒಂದು ತಾಸು ಇವರ ನೇರ ಸಂದರ್ಶನದ ಪ್ರಸಾರವಾಗುತ್ತಿದ್ದಂತೆಯೇ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟರು. ಸಿನಿಮಾದಲ್ಲೂ ಹಾಡಲು ಅವಕಾಶಗಳು ಅರಸಿ ಬಂದವು. ರಾಜಶೇಖರ ನಿರ್ದೇಶನದ ವಿಜಯರಾಘವೇಂದ್ರ ನಟಿಸಿರುವ ಪರದೇಶಿ ಕೇರ್ ಆಫ್ ಲಂಡನ್ ಮತ್ತು ಪದ್ಮಾವತಿ ಎಂಬ ಎರಡು ಚಿತ್ರಕ್ಕೆ ಗಂಗಮ್ಮ ಹಾಡಿದ್ದಾರೆ. 

ಮೂಲತಃ ಕೊಪ್ಪಳದ ಅಂಬೇಡ್ಕರ್ ನಗರದ ನಿವಾಸಿಯಾಗಿರುವ ಗಂಗಮ್ಮನಿಗೆ ಈಗ 50 ವರ್ಷ. ಇವರ ಒಬ್ಬಳೇ ಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ತೀರ ಬಡತನದಿಂದ ಬಂದ ಇವರು ಶಾಲೆ ಕಲಿತಿತ್ತು ಐದನೇ ತರಗತಿಯವರೆಗೆ ಮಾತ್ರ. ಬಡತನ ಅವರನ್ನು ಮುಂದೆ ಓದಲು ಬಿಡಲಿಲ್ಲ. ವಿದ್ಯಾಭ್ಯಾಸ ನಿಲ್ಲಿಸಿ, ಹೊಲ ಮನೆ ಕೆಲಸ ಪ್ರಾರಂಭಿಸಿದರು. ಮೊದಲೆಲ್ಲ ಇವರನ್ನು ನೋಡಿದವರ್ಯಾರೂ ಇವರು ಹಾಡುತ್ತಾರೆಂದರೆ ನಂಬುತ್ತಿರಲಿಲ್ಲ. ಕೂಲಿ ಕಾರ್ಮಿಕರಾಗಿ, ಸಾಮಾನ್ಯರಲ್ಲಿ ಅಸಮಾನ್ಯರಾಗಿ ದುಡಿದು ಜೀವನ ಸಾಗಿಸುತ್ತಿದ್ದ ಇವರು, ಕೆಲವು ಮದುವೆ ಸಮಾರಂಭಗಳಿಗೆ ಹೋಗಿ ಅಲ್ಲಿ ಆರ್ಕೆಸ್ಟ್ರಾ ಸಂಗೀತ ಕಾರ್ಯಕ್ರಮದಲ್ಲಿ ಹಾಡಿ, ಅದರಿಂದ ಬಂದ ಅಷ್ಟು ಇಷ್ಟು ಹಣದಿಂದ ಜೀವನ ಸಾಗಿಸುತ್ತಿದ್ದರು. 20 ವರ್ಷಗಳ ಹಿಂದೆಯೇ ಅಂಬಣ್ಣ ಗುರುಗಳಲ್ಲಿ ಐದು ತಿಂಗಳ ಕಾಲ ಸಂಗೀತಾಭ್ಯಾಸವನ್ನು ಮಾಡಿದ್ದಾರೆ. ನಂತರ ಮಾಜಿದ್‌ ಖಾನ್ ಮಧು ಮೆಲೊಡಿಯಸ್, ಹೇಮಂತ, ಅಂಬರೀಶ್ ಜವಳಿ ಮತ್ತು ಬೆಲ್ಲದವರ ಆರ್ಕೆಸ್ಟ್ರಾ ತಂಡದಲ್ಲಿ ಹಾಡಿದ್ದಾರೆ.

ಇವರು ಮೂರು ಭಾಷೆಗಳಲ್ಲಿ ಹಾಡುತ್ತಾರೆ. ಆದರೆ ಇವರಿಗೆ ತಿಳಿದಿರುವ ಭಾಷೆ ಅದು ಕನ್ನಡ ಮಾತ್ರ. ಗಂಗಮ್ಮನ ಅದ್ಭುತ ಪ್ರತಿಭೆಗೆ ಹಿರಿಯ ಗಾಯಕಿ ಎಸ್. ಜಾನಕಿಯವರೇ ತಲೆದೂಗಿದ್ದಾರೆ. ಈ ಹಿಂದೆ ಹೊಸಪೇಟೆಯಲ್ಲಿ ಸ್ವತಃ ಎಸ್. ಜಾನಕಿಯವರು ಗಂಗಮ್ಮಳ ಹಾಡು ಹಾಡುವುದನ್ನು ಕೇಳಿ ನೀನೇ ಎಸ್. ಜಾನಕಿ ಎಂದಿದ್ದರಂತೆ. ಆಗಿನಿಂದ ಗಂಗಮ್ಮ ಸ್ಥಳೀಯರಿಗೆ ಜೂನಿಯರ್ ಎಸ್. ಜಾನಕಿ ಆಗಿದ್ದಾರೆ. ಹುಬ್ಬಳ್ಳಿ, ಗದಗ, ದಾವಣಗೆರೆ ಅಷ್ಟೇ ಅಲ್ಲ; ಅರಬ್ ದೇಶಗಳಲ್ಲೂ ಹಾಡುವ ಅವಕಾಶಗಳು ದೊರೆತಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು