ಅಕ್ಕನಿಗಿಂತ ತಂಗಿ ಮದುವೆ ಮೊದಲೆ?

7
ಓದುಗರ ಬರಹ

ಅಕ್ಕನಿಗಿಂತ ತಂಗಿ ಮದುವೆ ಮೊದಲೆ?

Published:
Updated:

ನಾನು ನನ್ನ ಅಣ್ಣ ಅತ್ತಿಗೆ ಮತ್ತು ಅವರ ಪುಟ್ಟ ಮಗನ ಜೊತೆ ಇದ್ದೆ. ಅಣ್ಣನಿಗೆ ಹೊಳೆನರಸೀಪುರದಲ್ಲಿ ಕೆಲಸವಿತ್ತು, ಅತ್ತಿಗೆಯ ತವರು ಮನೆ ಸಹ ಅದೇ ಊರಿನಲ್ಲಿತ್ತು. ಪೇಟೆಯಲ್ಲಿ ನಾವಿದ್ದ ಕೋಟೆಯಿಂದ ಪ್ರತಿದಿನ ಸಂಜೆ ಅವರ ಮನೆಗೆ ಹೋಗಿ ಬರುವಾಗ ತರಕಾರಿ, ಹಣ್ಣುಗಳನ್ನು ತರುತ್ತಿದ್ದೆವು. ಅತ್ತಿಗೆ ತಂದೆ ಸಿ.ಟಿ.ನರಸಿಂಹ ಶೆಟ್ಟರು ಖ್ಯಾತ ವಕೀಲರಾಗಿದ್ದರು. ಅವರ ಮನೆಗೆ ಹೋದಾಗಲೆಲ್ಲಾ ‘ನಮ್ಮ ನೆಂಟರ ಮಗ ಚಂದ್ರ ಅಂತ ಮಹಾರಾಷ್ಟ್ರದಲ್ಲಿದ್ದಾನೆ ಅವನಿಗೆ ನಿನ್ನ ಗಂಟುಟಹಾಕ್ತೀನಿ’ ಅಂತ ಕೀಟಲೆ ಮಾಡುತ್ತಿದ್ದರು. ನಾನು ನಾಚಿಕೆಯಿಂದ ಮೌನವಾಗಿರುತ್ತಿದ್ದೆ. ಆದರೆ ಒಂದು ದಿನ ಅವರು ಹೇಳಿದ ಹುಡುಗ ಊರಿನಿಂದ ಬಂದಿರುವುದಾಗಿ ತಿಳಿಸಿ ನನ್ನನ್ನು ತೋರಿಸಲು ತಮ್ಮ ಮನೆಗೆ ಬರುವಂತೆ ತಿಳಿಸಿದರು.

 ಆದರೆ ನಾನು ಬಿಲ್‌ಕುಲ್‌ ಒಪ್ಪಲಿಲ್ಲ. ಕಾರಣ ನನ್ನ ಅಕ್ಕ ಬೆಂಗಳೂರಿನ ಬಿಇಎಲ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಮದುವೆ ಆದ ಮೇಲೆ, ನನ್ನ ಮದುವೆ ಅಂತ ಹಟ ಹಿಡಿದರೂ ಕೇಳದ ಅತ್ತಿಗೆಯವರು ‘ನೋಡಿದಾಕ್ಷಣ ಮದುವೆ ಆಗೇ ಬಿಡುತ್ತಾ?’  ಎಂದು ಬಲವಂತವಾಗಿ ನನ್ನ ಕರೆದುಕೊಂಡು ಹೋಗಿ ತೋರಿಸಿದರು. ನನ್ನ ನೋಡಿದ ಅವರು ಒಪ್ಪೇ ಬಿಟ್ಟರು. ನಾನಂತೂ ಅವರನ್ನು ನೋಡೇ ಇರಲಿಲ್ಲ. ನಾನಂತೂ ಅಳುತ್ತಾ ಕೂತೆ. ಬಂದವರಿಗೆ ನನ್ನ ಅಕ್ಕನ ವಿಷಯ ಹೇಳಿದಾಗ, 3 ತಿಂಗಳು ಗಡುವು ಕೊಟ್ಟರು.

ಅದರಂತೆ ಬೆಂಗಳೂರಿನಲ್ಲಿ ದೊಡ್ಡ ಅಕ್ಕನ ಮನೆಯಲ್ಲಿದ್ದು ಕೆಲಸಕ್ಕೆ ಹೋಗುತ್ತಿದ್ದ ನನ್ನ ಅಕ್ಕನಿಗೆ ಬೆಂಗಳೂರಿನಲ್ಲಿಯೇ ಕೆಲಸ ಮಾಡುವ ಹುಡುಗನಿಗಾಗಿ ಹುಡಕಾಟ. ಪ್ರತಿ ಭಾನುವಾರ ವಧುಪರೀಕ್ಷೆ ಸತತವಾಗಿ ನಡೆದರೂ ಯಾವುದೂ ನಿಶ್ಚಯವಾಗಲಿಲ್ಲ. ಮತ್ತೆ 3ತಿಂಗಳ ಗಡುವು ಕೇಳಿ ಒಪ್ಪಿಸಿದಾಯಿತು. ಆದರೆ ನನ್ ಹುಡುಗನ ಕಡೆಯವರೆಲ್ಲರೂ ನಿಶ್ಚಿತಾರ್ಥ ಮಾಡೇ ಬಿಟ್ಟರು. ನನ್ನೊಬ್ಬಳನ್ನೇ ಕೂರಿಸಿ ಬಂಧು–ಬಳಗದವರೆಲ್ಲಾ ಸೇರಿ ಸಿಂಪಲ್‌ ಶಾಸ್ತ್ರ ಮಾಡೇ ಬಿಟ್ಟರು. ನನ್ನ ಮದುವೆ 1972ರ ನವೆಂಬರ್‌ನಲ್ಲಿ  ಹೊಳೇನರಸೀಪುರದಲ್ಲಿ  ಸರಾಗವಾಗಿ ನಡೆಯಿತು. ನನ್ನ ಇಬ್ಬರು ಅಣ್ಣಂದಿರು, ಅತ್ತಿಗೆಯರೂ, ಅಕ್ಕ–ತಂಗಿಯರು ಸಹಕರಿಸಿದರು.

ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಅತ್ತಿಗೆ ಮನೆಯ ಸದಸ್ಯರೆಲ್ಲರೂ ತಮ್ಮ ಮನೆ ಮಗಳ ಮದುವೆಯೆಂತೆ ಸಂಭ್ರಮದಿಂದ ಸಹಕರಿಸಿದರು. ಆದರೆ ಆಗಿನ ಕಾಲದಲ್ಲಿ ಅಕ್ಕನಿಗಿಂತ ಮುಂಚೆ ತಂಗಿ ಮದುವೆ ಆಗಿರುವುದು ನನ್ನದೇ ಮೊದಲ ಘಟನೆ. ನಾನಂತೂ ತಳಮಳದಿಂದಲೇ ಮದುವೆಯಾಗಿದ್ದೆ. 15 ದಿನಗಳ ನಂತರ ನನ್ನವರ ಮತ್ತು ಮಾವನವರ ಜೊತೆ ನಾಸಿಕ್‌ಗೆ ಹೊರಟೆ. 46 ವರ್ಷಗಳ ಹಿಂದೆ ಮಹಾರಾಷ್ಟ್ರ ಎಂದರೆ ವಿದೇಶದಷ್ಟೇ ದೂರವಾಗಿತ್ತು. 2 ಹಗಲು, ಒಂದು ರಾತ್ರಿ ರೈಲಿನಲ್ಲಿ ಪ್ರಯಾಣಿಸಬೇಕಿತ್ತು. ಕಾಣದ ಊರು, ಅರಿಯದ ಭಾಷೆ ಅಲ್ಲಿ ಇರುವುದು ಹೇಗಪ್ಪಾ? ಒಂದು ಕಡೆ ಮನೆಯವರನ್ನೆಲ್ಲ ಬಿಟ್ಟು ಹೇಗಿರುವುದು ಎನ್ನುವ ಆಲೋಚನೆ, ಬೇಸರ ಸಹ ಆಗಿತ್ತು. ಆದರೆ ನನ್ನವರ ಸಹಕಾರದಿಂದ ನನಗೆ ಕಷ್ಟವೇನು ಆಗಲಿಲ್ಲ.

ಮನೆಗೆ ಮರಾಠಿ ಪತ್ರಿಕೆ  ತರಿಸುತಿದ್ದರು. ಗಂಡ, ಮಾವ ಓದಿ ಅರ್ಥ ಮಾಡಿಸುತ್ತಿದ್ದರು. ನಾನು ಹಿಂದಿ ಪ್ರವೇಶ ಪರೀಕ್ಷೆ ಮಾಡಿದ್ದ ಕಾರಣ ಭಾಷೆ ಅರಿಯಲು ಸುಲಭವಾಯಿತು. ಈಗ ಮಗನೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿ 16 ವರ್ಷಗಳಾಗಿವೆ. ಸೊಸೆ ಮತ್ತು ಇಬ್ಬರು ಹೆಣ್ಣು ಮೊಮ್ಮಕ್ಕಳೊಂದಿಗೆ ಖುಷಿಯಾಗಿದ್ದೇವೆ. ಇದಕ್ಕೆಲ್ಲಾ ಕಾರಣರಾದ ನನ್ನ ಅಣ್ಣ, ಅತ್ತಿಗೆ ನಮ್ಮೊಂದಿಗೆ ಇಲ್ಲ. ಪ್ರತಿದಿನ ದೇವರಿಗೆ ದೀಪ ಹಚ್ಚುವಾಗ ದೇವರ ಜತೆ ಇವರನ್ನು ತಪ್ಪದೇ ಸ್ಮರಿಸುತ್ತೇನೆ. ಅಗಲಿ ಹೋದವರನ್ನು ನೆನದು ದುಃಖ ಮತ್ತು ಬೇಸರವೂ ಆಗುತ್ತದೆ.
***
ಸಾಂಪ್ರದಾಯಿಕ ಮದುವೆ ನನ್ನ ಆಯ್ಕೆ
ಮದುವೆ ಎನ್ನುವುದು ಎರಡು ಮನಗಳು ಮಿಲನ. ಬಾಳ ಸಂಗಾತಿ ಜೊತೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುವ ಸುಂದರ ಸಂದರ್ಭ. 

ಇಂದಿನ ದಿನಗಳಲ್ಲಿ ಮದುವೆ ತುಂಬಾ ಐಷಾರಾಮಿಯಾಗಿ, ವೈಭವಪೂರ್ಣವಾಗಿ ಆಗಲು ಬಯಸುತ್ತಾರೆ. ಸರಳ ಮದುವೆ ಬಗ್ಗೆ ಒಲವು ತೋರುವವರು ಬೆರಳೆಣಿಕೆಯಷ್ಟು ಮಾತ್ರ. ನಾನು ಸಂಪ್ರದಾಯಬದ್ಧವಾಗಿ ಮದುವೆ ಆಗಲು ಬಯಸುವವನು. ಹಸೆಮಣೆ ಏರಿರುವ ವಧು– ವರ, ಪುರೋಹಿತರ ಮಂತ್ರಘೋಷ, ಗದ್ದಲ ನಡುವೆಯೇ ಕಿವಿಗೆ ಇಂಪೆನಿಸುವ ಸಂಗೀತ ವಾದ್ಯ, ನೆರೆದಿರುವ ಅತಿಥಿಗಳ ಮುಖದಲ್ಲಿ ಸಂತಸ... ಇನ್ನು ಹೆತ್ತವರ ಮುಖದಲ್ಲಿ ಮಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಖುಷಿಯನ್ನು ನಾನು ನೋಡಬೇಕು. 

ಮದುವೆಗೂ ಮುಂಚೆ ಮಾಡಲಾಗುವ ಅರಿಶಿನ ಶಾಸ್ತ್ರ, ಬಳೆ ಶಾಸ್ತ್ರ, ದೇವತಾ ಕಾರ್ಯಗಳು, ಮದುವೆಯಲ್ಲಿ ಸಪ್ತಪದಿ ತುಳಿಯುವುದು, ಅರುಂಧತಿ ನಕ್ಷತ್ರ ತೋರಿಸುವುದು ಮದುವೆ ಖುಷಿಯನ್ನು ಹೆಚ್ಚಿಸುತ್ತವೆ. ಹಾಗಾಗಿ ನಾನು ಸರಳವಾಗಿ ಸಂಪ್ರದಾಯ ಬದ್ಧವಾಗಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತೆ ಮದುವೆಯಾಗಬೇಕು. 
ಸಿದ್ದಾರ್ಥ್‌, ಬೆಂಗಳೂರು
***
ಕಣ್ಣೀರ ಒರೆಸಿ, ನೋವು ಮರೆಸಲಿ

ನನ್ನನ್ನು ತನಗಿಂತ ಹೆಚ್ಚಾಗಿ ಪ್ರೀತಿಸುವ, ನನ್ನ ಮನಸ್ಸಿನ ಭಾವನೆಯನ್ನು ಅರ್ಥ ಮಾಡಿಕೊಳ್ಳುವ ಸಂಗಾತಿಯೊಂದಿಗೆ ಕೊನೆಯುಸಿರಿರುವವರೆಗೂ ಜೀವನವನ್ನು ಕಳೆಯುವ ಹಂಬಲ, ಆಸೆ ನನ್ನದು.

ಮನೆಯಲ್ಲೆಲ್ಲಾ ನನ್ನ ಮದುವೆಯ ಪಿಸುಪಿಸು ಮಾತು ಆರಂಭವಾಗಿದೆ. ಅದನ್ನು ಕೇಳಿದಾಗ ನನ್ನ ಮನದಲ್ಲೂ ನನ್ನ ಮದುವೆಯ ಕನಸು. ನನ್ನ ಹುಡುಗ ನನಗೆ ತೋರಿಸುವ ಪ್ರೀತಿಯಲ್ಲಿ ಬಡವನಾಗಿರಬಾರದು. ನನ್ನ ತಂದೆ ತಾಯಿ, ಬಳಗದವರನ್ನು ತನ್ನವರಂತೆ ಕಂಡು, ನನ್ನ ಕಣ್ಣೀರನ್ನು ಒರೆಸಿ, ನೋವನ್ನು ಮರೆಸಿ, ಸಾಂತ್ವನ ನೀಡುವಂಥ ಸಂಗಾತಿ ಆತನಾಗಿರಬೇಕು.

ನಮ್ಮ ಮದುವೆ ಹಾಡು, ನೃತ್ಯದಿಂದ ತುಂಬಿರಬೇಕು. ಮದುವೆಯಲ್ಲಿ ನಡೆಯುವ ಪ್ರತಿಯೊಂದು ಸನ್ನಿವೇಶ, ಸಂಪ್ರದಾಯಗಳನ್ನು ನೆರವೇರಿಸುವ ಸಂದರ್ಭಗಳನ್ನು ಕ್ಯಾಮೆರಾ ಸೆರೆ ಹಿಡಿದಿರಬೇಕು. ತರ ತರಹದ ಹೂವುಗಳಿಂದ ಸಿಂಗಾರಗೊಂಡ ಮಂಟಪ, ಮಂತ್ರಗಳ ಜೊತೆಯಲ್ಲಿ ಅಕ್ಷತೆ ಕಾಳು, ಸಪ್ತಪದಿ ತುಳಿದು ಕನಸಿನಂತೆ ಮತ್ತೊಂದು ಬದುಕಿಗೆ ಪ್ರವೇಶಿಸಬೇಕು. 
ಸ್ಮಿತಾ ಅಂಗಡಿ, ಧಾರವಾಡ

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !