ಮಧುರ ನೆನಪು ಮರೆಯುವುದಂಟೆ?

7
ಓದುಗರ ಬರಹ

ಮಧುರ ನೆನಪು ಮರೆಯುವುದಂಟೆ?

Published:
Updated:

ಮಳೆಯನ್ನು ನೆನಪಿಸಿಕೊಂಡರೆ ಸಾಕು ಮನಸ್ಸು ಬಾಲ್ಯಕ್ಕೆ ಜಾರುತ್ತದೆ. ಮಳೆ ಬಂದಾಗ ಮಳೆ ನೀರಿನಲ್ಲಿ ಆಡುತ್ತಿದ್ದ ಆಟ, ತುಂಟಾಟ, ಹುಡುಗಾಟಗಳು ತಕ್ಷಣ ಕಣ್ಮುಂದೆ ಬಂದು ನಿಲ್ಲುತ್ತವೆ. ಸುರಿವ ಮಳೆಗೆ ಕೈಚಾಚಿ, ಮೈಯೊಡ್ಡಿ, ತಲೆಯೆಲ್ಲ ತೋಯ್ದು ಬಟ್ಟೆ ಒದ್ದೆಯಾಗಿದ್ದರೂ ಮೈ ಮರೆಯುತ್ತಿದ್ದ ಕ್ಷಣಗಳನ್ನು ಮರೆಯುವುದುಂಟೆ?

ಸುರಿವ ಧಾರಾಕಾರ ಮಳೆಗೆ ಬೀಳುತ್ತಿದ್ದ ಆಲಿಕಲ್ಲುಗಳನ್ನು ಹಿಡಿದು ಹಲ್ಲಿಗೆ ಸೋಕಿಸದೆ ನುಂಗುತ್ತಿದ್ದ ನೆನಪು ಇನ್ನೂ ಹಸಿರಾಗಿದೆ. ನಾನಾಗ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ಊರಾಚೆ ಶಾಲೆ, ಶಾಲೆಯ ಸ್ವಲ್ಪ ದೂರದಲ್ಲೆ ಇದ್ದ ಹಳ್ಳ ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿಯುತ್ತಿತ್ತು. ಮಳೆ ಬಂದಾಗ ತರಗತಿಗಳಿಗೆ ಚಕ್ಕರ್ ಹೊಡೆದು ಕಾಗದ ದೋಣಿಗಳನ್ನು ಹಳ್ಳದ ನೀರಿನಲ್ಲಿ ತೇಲಿ ಬಿಡುತ್ತ, ಅವುಗಳೊಟ್ಟಿಗೆ ಓಡುತ್ತ, ಚಪ್ಪಾಳೆ ತಟ್ಟುತ್ತ ಖುಷಿ ಪಡುತ್ತಿದ್ದೆವು. ಮಳೆ ನಿಂತ ನಂತರ ಮುಗಿಲಿನಲ್ಲಿ ಮೂಡುವ ಕಾಮನಬಿಲ್ಲನ್ನು ಮನದಣಿಯೆ ನೋಡುತ್ತ ಕಣ್ತುಂಬಿಕೊಳ್ಳುತ್ತಿದ್ದೆವು. ತರಗತಿಗೆ ಚಕ್ಕರ್ ಹೊಡೆದ ಕಾರಣಕ್ಕೆ ಶಿಕ್ಷಕರಿಂದ ಬೀಳುತ್ತಿದ್ದ ಹೊಡೆತಗಳು ಆ ಕ್ಷಣದ ನಮ್ಮ ಖುಷಿಯ ಮುಂದೆ ಯಾವ ಲೆಕ್ಕ? ಶಾಲೆ ಬಿಟ್ಟ ನಂತರ ಪ್ಲಾಸ್ಟಿಕ್ ಚೀಲದಲ್ಲಿ ಪುಸ್ತಕಗಳನ್ನು ಹಾಕಿ ಬಗಲಲ್ಲಿಟ್ಟುಕೊಂಡು ತಲೆ ತೋಯಿಸಿಕೊಂಡು, ಬಟ್ಟೆ ನೆನೆಸಿಕೊಂಡು ಮನೆಗೆ ಓಡೋಡಿ ಬಂದಾಗ ಬೈಯುತ್ತಲೇ ತಲೆ ಒರೆಸುತ್ತಿದ್ದ ಅಮ್ಮನ ಪ್ರೀತಿಯ ನೆನಪುಗಳು ಮುದ ನೀಡುತ್ತವೆ.

ಇನ್ನೊಂದು ಮುಖ್ಯ ಘಟನೆಯನ್ನು ಹೇಳದಿದ್ದರೆ ಮಳೆಯೊಂದಿಗಿನ ನನ್ನ ಮಧುರ ನೆನಪು ಅಪೂರ್ಣವೆನಿಸುತ್ತದೆ. ಆಗ ನಾನು ಪ್ರೌಢಶಾಲಾ ಶಿಕ್ಷಕನಾಗಿ ಒಂದು ವರ್ಷವಾಗಿತ್ತು. ಅಂದು ಶಾಲೆಯಲ್ಲಿ ಗಾಂಧಿ ಜಯಂತಿ ಆಚರಿಸಿ ಮನೆಗೆ ಹೊರಡುವಷ್ಟರಲ್ಲಿ ಎರಡು ಮೂರು ದಿನಗಳಿಂದ ಸುರಿದ ಭರ್ಜರಿ ಮಳೆಗೆ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿ, ಊರಿಗೆಲ್ಲ ನೀರು ನುಗ್ಗಿ ಸಂಚಾರ ಸ್ಥಗಿತಗೊಂಡಿತ್ತು. ಕೇವಲ ಟಿ.ವಿ. ಸಿನಿಮಾಗಳಲ್ಲಿ ನೋಡುತ್ತಿದ್ದ ಪ್ರವಾಹದ ಭೀಕರತೆ ಅಂದು ನನಗೆ ಪ್ರತ್ಯಕ್ಷದರ್ಶಿಯಾಗಿ ಮಳೆ ತನ್ನ ರುದ್ರಾವತಾರವನ್ನು ತೋರಿಸಿತ್ತು. ಆ ದಿನ ಶಿಕ್ಷಕರು ಶಾಲೆಯಲ್ಲೆ ತಂಗಿದ್ದ ನೆನಪು ಜೀವಮಾನವೆಲ್ಲ ಮರೆಯಲಾರದ್ದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !