ಗುರುವಾರ , ಏಪ್ರಿಲ್ 9, 2020
19 °C
ಮಳೆ ಹಾಡು

ಮಳೆಯಲ್ಲಿ ನೆನೆದು ಪ್ರಶಸ್ತಿ ಕಳೆದುಕೊಂಡೆ

ಲೀಲಾ ಚಂದ್ರಶೇಖರ ಬೆಂಗಳೂರು Updated:

ಅಕ್ಷರ ಗಾತ್ರ : | |

ನಾವಿದ್ದ ಹುಣಸೂರಿನಲ್ಲಿ ಊರಾಚೆ ಇದ್ದ ಹೈಸ್ಕೂಲಿಗೆ ನಾವು ಮೂರು ಜನ ಗೆಳತಿಯರು ನಡೆದುಕೊಂಡೇ ಹೋಗುತ್ತಿದ್ದೆವು. ಒಮ್ಮೆ ಮಳೆಗಾಲದಲ್ಲಿ ನನ್ನ ಗೆಳತಿಯರಿಬ್ಬರೂ ಸ್ಕೂಲಿಗೆ ರಜೆ ಹಾಕಿ ಬೇರೆ ಊರಿಗೆ ಹೋಗಿದ್ದರು. ನಾನು ಒಬ್ಬಳೇ ಅಷ್ಟುದೊಡ್ಡ ಕಪ್ಪು ಛತ್ರಿ ಹಿಡಿದುಕೊಂಡು, ಎಡೆಗೈಯಲ್ಲಿ ಮೂರ್ನಾಲ್ಕು ಪುಸ್ತಕಗಳನ್ನು ಎದೆಗೆ ಅಪ್ಪಿ ಹಿಡಿದು ಹೊತ್ತುಕೊಂಡು ಹೋಗಲು ಕಷ್ಟವೆನಿಸಿ ಆದಿನ ಛತ್ರಿ ಇಲ್ಲದೆಯೇ ಸ್ಕೂಲಿಗೆ ಹೊರಟೆ.

ಗೆಳತಿಯರಿಬ್ಬರೂ ಇದ್ದರೆ ಮೂರು ಜನವೂ ಆದೊಡ್ಡ ಛತ್ರಿಯನ್ನು ಸ್ವಲ್ಪ ಸ್ವಲ್ಪ ಹೊತ್ತು ಹಿಡಿದುಕೊಳ್ಳುತ್ತಿದ್ದೆವು. ಈಗಿನಂತೆ ಆಗ ಬಣ್ಣ ಬಣ್ಣದ ಚಿಕ್ಕದಾದ ಫೋಲ್ಡಿಂಗ್ ಮಾಡುವಂತಹ ಛತ್ರಿಗಳು ಇರಲಿಲ್ಲ. ನನ್ನ ದುರಾದೃಷ್ಟಕ್ಕೆ ಅರ್ಧ ದಾರಿಗೆ ಹೋದನಂತರ ಮಳೆ ಧೋ ಎಂದು ಬಂದೇ ಬಿಡ್ತು. ವಾಪಸ್ ಮನೆಗೆ ಹೋಗುವ ಬದಲು ಸ್ಕೂಲಿಗೇ ಹೋದೆ. ಪೂರ್ತಿ ಒದ್ದೆಯಾಗಿದ್ದೆ ಲೇಡೀಸ್ ರೂಮ್‌ನಲ್ಲೇ ವಿಶ್ರಮಿಸಿ ಕ್ಲಾಸ್ ಅಟೆಂಡ್ ಮಾಡಿದೆ. ಅಷ್ಟೊತ್ತಿಗಾಗಲೇ ನೆಗಡಿ ಆರಂಭವಾಗಿತ್ತು.. ವಾಪಸ್ ಮನೆಗೆ ಬರುವಾಗ ಸ್ವಲ್ಪ ಎಳೆ ಬಿಸಿಲು ಬಂದಿದ್ದರಿಂದ ಅರಾಮೆನಿಸಿತ್ತು.

ಮನೆಗೆ ಬಂದಮೇಲೆ ಅತ್ತಿಗೆ ಮಾಡಿಕೊಟ್ಟ ಕಷಾಯ ಕುಡಿದು ಮಲಗಿ ಬಿಟ್ಟೆ. ಆದರೂ ಮರುದಿನ ಸ್ಕೂಲಿಗೆ ಹೋಗಲಾಗದಷ್ಟು ಮೈ ಸುಡುತ್ತಿತ್ತು. ನನಗಂತೂ ತುಂಬಾ ನಿರಾಸೆಯಾಗಿತ್ತು. ಕಾರಣ ಆ ದಿನ ನಮ್ಮ ಶಾಲೆಯಲ್ಲಿ ಸ್ಪರ್ಧೆಯಿತ್ತು. ಅದಕ್ಕಾಗಿ ಕನ್ನಡ ಪದ್ಯಕ್ಕೆ (ಎಮ್ಮ ಮನೆಯಂಗಳದಿ.. ಬೆಳದೊಂದ ಹೂವನ್ನು...) ನಾನೇ ರಾಗ ಸಂಯೋಜಿಸಿ ಹಾಡಿ ಪ್ರಾಕ್ಟೀಸ್ ಮಾಡಿಕೊಂಡಿದ್ದೆ. ನನ್ನ ಗೆಳತಿಯರಿಗೂ ನಾನು ಹಾಕಿದ ರಾಗ ಇಷ್ಟವಾಗಿತ್ತು. ಆದರೆ ನಾನು ಹೋಗಲಾಗಲಿಲ್ಲ, ಹೋಗಿದ್ದರೆ ನನಗೇ ಮೊದಲ ಬಹುಮಾನ ದೊರಕುವ ಸಂಭವವಿತ್ತು. ಅದರೆ ನನ್ನ ಪಾಡು ಮಲಗುವಂತಾಗಿತ್ತು. ಈಗಲೂ ಮಳೆಗಾಲ ಬಂತೆಂದರೆ ಈ ಘಟನೆ ನೆನಪಾಗಿ ಬೇಸರವಾಗುತ್ತದೆ. ಮಡಿಕೇರಿಯಲ್ಲಿ ಮಳೆ ಹೆಚ್ಚಾದರೆ ನಮ್ಮ ಹುಣಸೂರಿನಲ್ಲೂ ಅದರ ಪರಿಣಾಮವಾಗಿ ಮಳೆ ಹೆಚ್ಚು ಬರುತ್ತಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)