ಗುರುವಾರ , ಏಪ್ರಿಲ್ 9, 2020
19 °C

20 ರಾಜ್ಯಗಳನ್ನು ಒಬ್ಬಳೆ ಸುತ್ತಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಕಾಂಗಿ ಪ್ರವಾಸ
ಬಾಲ್ಯದಿಂದಲೂ ನನಗೆ ಇತಿಹಾಸದ ಬಗ್ಗೆ ಅತೀವ ಆಸಕ್ತಿ. ದೇಶ ನೋಡಬೇಕು ಕೋಶ ಓದಬೇಕು ಎಂಬ ಹಂಬಲದೊಂದಿಗೆ ಭಾರತ ದರ್ಶನ ಮಾಡುವ ಸಾಹಸಕ್ಕೆ ಕೈ ಹಾಕಿದೆ. ನನ್ನ ಬಿಡುವಿಲ್ಲದ ಸಾಫ್ಟ್‌ವೇರ್‌ ಕಂಪನಿಯ ಕೆಲಸದ ನಡುವೆಯೂ ಕಳೆದ ಎರಡು ವರ್ಷಗಳಲ್ಲಿ ನಮ್ಮ ದೇಶದ ಸುಮಾರು 20 ರಾಜ್ಯಗಳನ್ನು ಒಬ್ಬಳೇ ಸಂಚರಿಸಿದ್ದೇನೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತ್‌ನಿಂದ ಅರುಣಾಚಲ... ಹೀಗೆ ನನ್ನ ಒಂಟಿ ಪಯಣ ಭಾರತದ ಉದ್ದಗಲಕ್ಕೂ ಸಾಗುತ್ತಲೇ ಇದೆ. 

ಸಹಜವಾಗೇ ನನ್ನ ಮನೆಯವರು ಹಾಗು ಸ್ನೇಹಿತರು, ಭಾರತದಂತಹ ದೇಶದಲ್ಲಿ ಮಹಿಳೆಯೊಬ್ಬಳು ಒಂಟಿ ಪಯಣ ಮಾಡುವುದು ಸೂಕ್ತವಲ್ಲ ಅಂತ ಕಿವಿಮಾತು ಹೇಳಿದ್ದರು. ಆದರೆ ನಾನು ಅದಾಗಲೇ ನಿಶ್ವಯಿಸಿದಂತೆ ನನ್ನ ಪಯಣಕ್ಕೆ ಸಿದ್ಧತೆ ಮಾಡತೊಡಗಿದೆ. ಮೊದಲನೇ ಸಲ ಉತ್ತರ ಭಾರತಕ್ಕೆ ಹೋದಾಗ ಸ್ವಲ್ಪ ಅಂಜಿಕೆ ಇತ್ತು. ಅನುಭವ ಆದ ಹಾಗೆ ನನ್ನಲ್ಲಿ ಆತ್ಮವಿಶ್ವಾಸ ಬೆಳೆಯಿತು. ನಾನು ಭೇಟಿಯಾಗುವ ಸ್ಥಳ ವಿಮರ್ಶೆ ಮಾಡುವುದೊಂದಿಗೆ ಅಲ್ಲಿನ ಪರಿಸರ, ಹಿನ್ನಲೆ, ಸಂಸ್ಕೃತಿ, ಜನರ ನಿತ್ಯದ ಬದುಕು ತಿಳಿದುಕೊಂಡು ಎಲ್ಲರೊಳಗೊಂದಾಗಿರಲು ಇಷ್ಟ ಪಡುತ್ತೆನೆ. ಈ ನನ್ನ ಒಂಟಿ ಪಯಣದಲ್ಲಿ ಅಪರಿಚಿತರು ಪರಿಚಿತರಾದರು. ಸಹಪ್ರಯಾಣಿಕರೊಂದಿಗಿನ ಕೆಲವೇ ನಿಮಿಷಗಳ ಸಂಭಾಷಣೆ ಸ್ನೇಹವೆಂಬ ಸೇತುವೆಗೆ ನಾಂದಿ ಹಾಡಿತು. ಸರಿಯಾದ ಯೋಜನೆ, ಸಮಯ ಪ್ರಜ್ಞೆ ಹಾಗು ಮಾತುಗಾರಿಕೆಯೊಂದಿದ್ದರೆ ನಮ್ಮ ದೇಶದ ಉದ್ದಗಲಕ್ಕೂ ಒಂಟಿ ಮಹಿಳೆ ಸರಾಗವಾಗಿ ಸಂಚರಿಸಬಹುದು. 

ಅಂದಹಾಗೆ ನನ್ನ ಮುಂದಿನ ಪಯಣ ಉತ್ತರಾಖಂಡದ ಸ್ವಯಂ ಸೇವಾ ಸಂಸ್ಥೆಗೆ ಭೇಟಿ ಹಾಗು ಪರ್ವತಾರೋಹಣ.
– ಶುಭ, ಬೆಂಗಳೂರು
**
ನನ್ನ ಕನಸಿನ ಮದುವೆ: ಮದುವೆ ತಯಾರಿಗೆ ಬಂದರೆ ಮದುವೆಯೇ ಆಯಿತು

 

ನನ್ನದು ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಯರಡಾಲ ಎಂಬ ಪುಟ್ಟ ಗ್ರಾಮ. ಅದು 2003ರ ಸಮಯ. ನಾನಾಗ ಧಾರ್ಮಿಕ ಸಂಸ್ಥೆಯೊಂದರಲ್ಲಿ ಸೇವಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಮನೆಯಲ್ಲಿ ಸಹೋದರನಿಗೆ ವಧು ನೋಡಿ ಮದುವೆಯು ನಿಶ್ಚಯವಾಗಿತ್ತು. ಮದುವೆಗೆ 15 ದಿನಗಳಿರುವಾಗಲೇ ಮದುವೆಯ ತಯಾರಿಗೆ ಊರಿಗೆ ಬಂದಿದ್ದೆ. ಲಗ್ನದ ಪತ್ರಿಕೆಯನ್ನು ಹಂಚಿಯಾಗಿತ್ತು.

ಅದೇ ಸಂದರ್ಭದಲ್ಲಿ ಗ್ರಾಮದ ಹಿರಿಯರಿಂದ ನನ್ನ ಮದುವೆಯ ವಿಚಾರವೂ ಪ್ರಾರಂಭವಾಯಿತು. ನನ್ನ ಸೋದರ ಮಾವನ ಮಗಳನ್ನು ಪ್ರೀತಿ ಮಾಡಿದ್ದರಿಂದಲೂ, ಮದುವೆಯಾದರೆ ಅವಳನ್ನೇ ಮಾಡಿಕೊಳ್ಳುವುದಾಗಿಯೂ ಆಗಾಗ ಹೇಳಿದ್ದರಿಂದ ಈ ಪ್ರಸ್ತಾಪ ಬಂತು. ಮಾವನ ಮಗಳ ಜೊತೆಯೂ ಮದುವೆಯೂ ನಿಶ್ಚಯವಾಯಿತು. ಕೇವಲ ಏಳೆಂಟು ದಿನದಲ್ಲಿ  ಮದುವೆ ನಿಶ್ಚಯ, ಮದುವೆಯ ಆಮಂತ್ರಣ, ಸಂಬಂಧಿಕರಿಗೆ ತಿಳಿಸುವುದು ಮುಗಿಯಿತು. 

ಆತ್ಮೀಯ ಗೆಳೆಯರು, ಸಂಬಂಧಿಕರು ನೀಡಿದ ಸಹಕಾರ, ನಿಭಾಯಿಸಿದ್ದು ಎಂದೆಂದೂ ಮರೆಯಲಾರೆ. ಬಸವ ಜಯಂತಿ ದಿನ ನನ್ನ ಹಾಗೂ ಸಹೋದರನ ಮದುವೆಯು ನಿರ್ವಿಘ್ನವಾಗಿ ನಮ್ಮೂರಿನ ಬಸವೇಶ್ವರ ದೇವಸ್ಥಾನದಲ್ಲಿ ಜರುಗಿತು. ಸಹೋದರರು, ಮಾವನು ಸಹ ಮದುವೆಯ ತಯಾರಿಗೆ ಕರೆಸಿ ಅವರೊಟ್ಟಿಗೆ ನಾನು ಮದುವೆ ಮಾಡಿಕೊಂಡಿದ್ದನ್ನು ಈಗಲೂ ನೆನಪಿಸಿಕೊಂಡು ಆಗಾಗ ನಗುತ್ತಿರುತ್ತಾರೆ.
– ಮಹಾಂತೇಶ ರಾಜಗೋಳಿ, ಬೈಲಹೊಂಗಲ, ಬೆಳಗಾವಿ
*

ಮಂತ್ರ ಮಾಂಗಲ್ಯದ ಮದುವೆ ಇಷ್ಟ
ಯೌವನಕ್ಕೆ ಕಾಲಿಟ್ಟ ದಿನದಿಂದಲೇ ನನ್ನ ಬಾಳ ಸಂಗಾತಿಯಾಗುವವಳ ಹಾಗೂ ನನ್ನ ಮದುವೆಯ ಬಗ್ಗೆ ಕನಸು ಕಾಣುತ್ತಾ ಬಂದವನು ನಾನು. ಸಾಹಿತ್ಯದ ವಿದ್ಯಾರ್ಥಿಯಾಗಿ ಸರಳತೆಯ ಬದುಕನ್ನು ಇಷ್ಟಪಡುವ ನನಗೆ ಕುವೆಂಪು ಅವರ ‘ಮಂತ್ರ ಮಾಂಗಲ್ಯ’ ಕೃತಿ ಓದಿದ ನಂತರ ನಾನು ಸಹ ಅನಗತ್ಯ ಆಡಂಬರ ಹಾಗೂ ಅರ್ಥವಾಗದ ಆಚರಣೆಗಳನ್ನ ತಿರಸ್ಕರಿಸಿ ಸರಳವಾಗಿ ಮದುವೆಯಾಗಬೇಕು ಎಂಬ ಕನಸು ಮೊಳೆಯಿತು.

ಪೆರಿಯಾರ್ ಅವರ ‘ಸ್ವಾಭಿಮಾನದ ಮದುವೆಗಳು’ ಬಗ್ಗೆ ಓದಿದ ನಂತರ ಅದು ಮತ್ತಷ್ಟು ಗಟ್ಟಿಯಾಗಿದೆ. ನನ್ನ ಸಂಗಾತಿಯಾಗುವವರಿಗೂ ಸರಳ ಮದುವೆಯೇ ಇಷ್ಟವಿದ್ದು, ನಮ್ಮಿಬ್ಬರ ಮನೆಗಳಲ್ಲಿ ಇದರ ಬಗ್ಗೆ ಹೇಳಿ ಒಪ್ಪಿಸಿ, ಆತ್ಮೀಯರ ಸಮ್ಮುಖದಲ್ಲಿ ತೀರಾ ಸರಳವಾಗಿ ಮದುವೆಯಾಗುವುದು ನಮ್ಮ ಕನಸು.
– ಮುರಳಿ ಮೋಹನ್‌ ಎಂ. ಈಸ್ತೂರು, ಹೊಸಕೋಟೆ
****

ಮಳೆಹಾಡು

ಹೊಸ ಕೊಡೆ ಒಂದೇ ದಿನಕ್ಕೆ ಹಾಳಾಯ್ತು

ನಮ್ಮೂರು ಕೊಟ್ಟಿಗೆಹಾರ ಸಮೀಪ ತರುವೆ. ಹೇಳಿ ಕೇಳಿ ಮಳೆಯ ತವರೂರು. ಮಳೆಗಾಲ ಆರಂಭವಾಯಿತೆಂದರೆ ಮೂರ್ನಾಲ್ಕು ತಿಂಗಳ ಕಾಲ ಸೂರ್ಯನ ದರ್ಶನವಿಲ್ಲ. ಒಮ್ಮೊಮ್ಮೆ ಜಿಟಿ ಜಿಟಿ ಮಳೆ, ಮಗದೊಮ್ಮೆ ರಭಸದಿಂದ ಸುರಿವ ಮಳೆ, ಜೊತೆಗೆ ಮನೆ ಮಠ ಹಾರಿ ಹೋಯ್ತೇನೊ ಎಂದು ಬೀಸುವ ಗಾಳಿ, ಬೇಡಪ್ಪಾ ಈ ಊರಿನ ಸಹವಾಸ ಎಂಬ ರೇಜಿಗೆ ಬರುತ್ತದೆ.

ಮಳೆ ಗಾಳಿಗೆ ಹೆದರಿ 6ನೇ ತರಗತಿವರೆಗೂ ಪ್ಲಾಸ್ಟಿಕ್ ಹೊದ್ದು ನಾನು ಶಾಲೆಗೆ ಹೋಗುತ್ತಿದ್ದೆ. 7ನೇ ತರಗತಿಗೆ ಬಂದಾಗ ಹಟಮಾಡಿ ಕೊಡೆ ತೆಗಿಸಿಕೊಂಡೆ. ಬೆಳಿಗ್ಗೆ ಮಳೆ ಕಡಿಮೆ ಇದ್ದ ಕಾರಣ ಖುಷಿಯಿಂದ ಹೊಸ ಕೊಡೆ ತೆಗೆದುಕೊಂಡು ಶಾಲೆಗೆ ಹೋದೆ. ಸಂಜೆಯ ತನಕ ಜೋಪಾನ ಮಾಡಿ ಬ್ಯಾಗ್‌ನಲ್ಲಿದ್ದ ಕೊಡೆಯನ್ನು ಸಂಜೆ ಬರುವಾಗ, ಮಳೆಯ ಕಾರಣದಿಂದ ಹೊರ ತೆಗೆಯಬೇಕಾಯಿತು. ಈ ರಕ್ಕಸ ಮಳೆ ಎಲ್ಲಿ ಅಡಗಿತ್ತೋ ಏನೋ ಆಗಸಕ್ಕೆ ತೂತು ಬಿದ್ದಂತೆ ಸುರಿಯಲಾರಂಭಿಸಿತು. ನಾನು ಗದ್ದೆಯ ಬದಿಯ ಬದುವಿನಲ್ಲಿ ನಡೆದು ಮನೆಗೆ ಹೋಗಬೇಕಿತ್ತು. ಆಗ ಬೀಸಿದ ಬಿರುಗಾಳಿಗೆ ನನ್ನ ಕೊಡೆ ಹಾರಿ ಹೋಯಿತು. ಕಡ್ಡಿ ಎಲ್ಲ ಮುರಿದು, ಹೊಸ ಕೊಡೆ ಒಂದೇ ದಿನಕ್ಕೆ ಹಾಳಾಯಿತು. ಬ್ಯಾಗ್ ,ಪುಸ್ತಕ ಎಲ್ಲಾ ಒದ್ದೆ. ಮರು ದಿನದಿಂದ ಪ್ಲಾಸ್ಟಿಕ್ ನನ್ನ ಪಾಲಿಗೆ ಗತಿಯಾಯಿತು. 
ಮಂಜುನಾಥ್ ಟಿ.ಎಸ್.ತರುವೆ, ಕೊಟ್ಟಿಗೆಹಾರ
**
ಸೂರಿನ ನೀರಿಗೆ ಕೈ ಚಾಚಿದಾಗ

ಮನೆ ಸುತ್ತ ಜಡಿ ತಟ್ಟಿ ಕಟ್ಟಿ ಸೂರು ತುದಿಗೆ ಅಡಕೆ ಮರದ ಅದ್ಲೆ ಹಾಕಿದಾಗ, ಉಂಬಳವೊಂದು ಅಪ್ಪನ ಕಾಲಿನ ರಕ್ತ ಹೀರಿ ಸಂತಸ ಪಟ್ಟಾಗ, ಕಪ್ಪೆಯ ಕರಕರ ಕಿವಿಗಟ್ಟಿದಾಗ ಊರಲ್ಲಿ ಮಳೆ ಹನಿ ಹತ್ತಿದೆ ಎಂದರ್ಥ.

ಮಲೆನಾಡಿನ ಮಣ್ಣಿನ ಮನೆಗಳ ಗೋಡೆ ಮಳೆ ಜಡಿಗೆ ನೆನೆಯುತ್ತದೆಯೆಂಬ ಕಾರಣಕ್ಕೆ ತೆಂಗು ಮತ್ತು ಅಡಿಕೆ ಸೋಗೆಯಲ್ಲಿ ಮನೆ ಸುತ್ತ ತಟ್ಟಿ ಕಟ್ಟಲಾಗುತ್ತದೆ. ಒಂದು ಮಳೆ ಬಿತ್ತು ಎಂದರೆ ಮಲೆನಾಡಲ್ಲಿ ಅರ್ಧಕ್ಕೆ ನಿಂತ ಕೆಲಸಗಳಿಗೆಲ್ಲಾ ಚುರುಕು ಮುಟ್ಟುತ್ತದೆ. ಗದ್ದೆ ಮತ್ತು ಹಿತ್ತಲಿನ ಬೇಲಿ ಕಟ್ಟುವುದು, ಬೆಂಕಿ ಹಾಕಲು ಬೇಕಾಗುವ ಅಡಿಕೆ ಹಾಳೆ ಹೊರೆ, ಕಟ್ಟಿಗೆ ಹೊರೆ, ದನ–ಕರು ಮೇವಿನ ಬಿಳಿ ಹುಲ್ಲು ಬೆಚ್ಚಗಿಡುವ ಕೆಲಸ, ತಮ್ಮದೇ ಬೆಟ್ಟದಲ್ಲಿ ಉಳಿದ ದರಕು ಒಟ್ಟು ಮಾಡುವ ಕೆಲಸ ಭರದಿಂದ ನಡೆಯುತ್ತದೆ.

ಉಂಬಳಗಳ ಅಂತ್ಯಕ್ರಿಯೆ ಬಚ್ಚಲ ಮನೆ ಒಲೆಯಲ್ಲಿ! ಮಕ್ಕಳು ಅಮ್ಮಂದಿರು ಮಳೆಗಾಲಕ್ಕೆ ಕೂಡಿಟ್ಟ ಗೇರು, ಹಲಸಿನ ಬೀಜಗಳ ಸುಡುವ ಕಾರ್ಯದಲ್ಲಿ ಅಡುಗೆ ಮನೆಯಲ್ಲಿ ನಿರತರಾಗಿರುತ್ತಾರೆ. ರಾತ್ರಿ ಕರೆಂಟ್ ಇಲ್ಲದಿದ್ದರೆ ಮನೆ ಮಂದಿಯ ಮಾತುಕತೆಯಲ್ಲಿ ಹಳೆ ನೆನಪುಗಳು ಅರಳುತ್ತದೆ.

ಈಗ ಹಳ್ಳಿ ಬದಲಾಗುತ್ತಿದೆ. ಮಕ್ಕಳು ಓದಿಗೆ ಕೆಲಸಕ್ಕೆಂದು ಪೇಟೆ ಸೇರಿದ್ದಾರೆ. ಜಡಿ ತಟ್ಟಿಯ ಬದಲು ಮನೆಗಳ ಮುಂದೆ ಜಿಂಕ್ ಶೀಟ್ ಆವರಿಸಿವೆ. ವಿಶೇಷ ಆಚರಣೆ, ನೆನಪು, ವಸ್ತುಗಳು ಕಣ್ಮರೆಯಾಗುತ್ತಿವೆ. ಅದೇ ಬೇಸರ. 
 ಚೈತ್ರಿಕಾ ನಾಯ್ಕ ಹರ್ಗಿ, ಸಿದ್ಧಾಪುರ, ಉತ್ತರಕನ್ನಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)