ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಚ್ಚಳ್ಳಿ ಗಾಯನ ಮೋಡಿ

Last Updated 1 ಜೂನ್ 2020, 3:05 IST
ಅಕ್ಷರ ಗಾತ್ರ

ವಿಶಿಷ್ಟ ಕಂಠಸಿರಿಯಿಂದಲೇ ಕೇಳುಗರನ್ನು ಸೆಳೆಯುವ ಖ್ಯಾತ ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಭಾನುವಾರ ಸಂಜೆ‘ಪ್ರಜಾವಾಣಿ‘ ಆಯೋಜಿಸಿದ್ದ ಫೇಸ್‌ಬುಕ್‌ ಲೈವ್ ಗೀತಗಾಯನ ಕಾರ್ಯಕ್ರಮದ ಮೂಲಕ ದೇಶ–ವಿದೇಶಗಳಲ್ಲಿರುವ ಅಭಿಮಾನಿಗಳ ಮನಸೂರೆಗೊಂಡರು.

ಏಕತಾರಿ ಮೀಟುತ್ತಾ, ಪಕ್ಕವಾದ್ಯಗಳ ತಾಳ–ಮೇಳ, ಕೋರಸ್‌ನೊಂದಿಗೆ ಹಾಡುತ್ತಾ ಒಂದು ಗಂಟೆ ‘ಜಾನಪದ ಗಾಯನ ಲೋಕ’ವನ್ನೇ ಅನಾವರಣಗೊಳಿಸಿದರು. ತಮ್ಮ ಗಾಯನದಲ್ಲಿ ಶಿಶುನಾಳ ಷರೀಫಜ್ಜ, ಕೈವಾರ ತಾತಯ್ಯನವರ ತತ್ವಪದ, ಮಂಟೇಸ್ವಾಮಿ ಮಹಾಕಾವ್ಯ, ಜಾನಪದ ಗೀತೆಗಳು, ಬಿ.ವಿ. ಕಾರಂತ, ಬಸವಲಿಂಗಯ್ಯನವರ ನಾಟಕಗಳ ರಂಗಗೀತೆ, ಅಲ್ಲಮಪ್ರಭುವಿನ ವಚನ... ಹೀಗೆ ವಿವಿಧ ಪ್ರಕಾರಗಳ ಗೀತೆಗಳನ್ನು ಹಾಡಿದರು.

ಶರಣಯ್ಯ ಶರಣು.. ಶರಣು ಶರಣು ಶರಣಯ್ಯಾ ಶರಣು.. ಹಾಡಿನೊಂದಿಗೆ ಶ್ರೀನಿವಾಸ್ ಕಾರ್ಯಕ್ರಮವನ್ನು ಆರಂಭಿಸಿದರು. ಏಕತಾರಿ ಹಿಡಿದು ‘ಗುರುವೇ ನಿನ್ನ ಆಟ ಬಲ್ಲವರ‍್ಯಾರೋ.. ಶಿವನೇ ನಿನ್ನಾಟ ಬಲ್ಲವರ‍್ಯಾರೋ..’ ಜಾನಪದ ಗೀತೆಯನ್ನು ಮನದುಂಬಿ ಹಾಡಿದರು. ಏಕತಾರಿ ಮೀಟುತ್ತಾ ಶಿಶುನಾಳ ಷರೀಫಜ್ಜನ ‘ನಾನಾರಿಗಲ್ಲದವಳು.. ಬಿದಿರು.. ಹುಟ್ಟುತ್ತ ಹುಲ್ಲಾದೆ.. ಬೆಳೆಯುತ್ತ ಮರವಾದೆ..’ ತತ್ವಪದ ಹಾಡಿದಾಗ, ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು.

‘ಕಂಗಳ ಮುಂದಣ ಕತ್ತಲೆಯಿದೆ..’ ಎಂಬ ವಚನ ಗೀತೆ, ಪಿ.ಲಂಕೇಶ್ ಅವರ ರಚನೆಯ ಸಂಕ್ರಾಂತಿ ನಾಟಕದ ‘ನೂರು ತಲೆಮಾರವ್ವಾಗೆ ಕೊಟ್ಟೆ ಕೋಳಿ...ಹೊಲೆರಜ್ಜ ನಾನ್ ಕಣವ್ವಾ...’ರಂಗಗೀತೆ ಹಾಡಿದಾಗ, ವೀಕ್ಷಕರು ತಮ್ಮ ಪ್ರತಿಕ್ರಿಯೆ‌ಗಳಲ್ಲಿ ಆ ಗೀತೆಗಳ ಸಾಲುಗಳನ್ನು ಮೆಲುಕು ಹಾಕುತ್ತಿದ್ದರು. ಈ ಸಂದರ್ಭದಲ್ಲಿ ಪಿ.ಲಂಕೇಶ್, ಸಿ.ಬಸವಲಿಂಗಯ್ಯ, ನಟ ದತ್ತಾತ್ರೇಯ ಅವರನ್ನು ನೆನಪಿಸಿಕೊಂಡಿದ್ದಕ್ಕೆ ಶ್ರೀನಿವಾಸ್ ಅವರಿಗೆ ಧನ್ಯವಾದ ಸಲ್ಲಿಸಿದರು. ನಂತರ ಹಾಡಿದ ಮಂಟೇಸ್ವಾಮಿ ಮಹಾಕಾವ್ಯದ ‘ಹಾಡಿದವರ ಮನವ ಬಲ್ಲೆ ನೀಡಿದವರ ನಿಜವಾ ಬಲ್ಲೆ.. ಸಿದ್ಧಯ್ಯ ಸ್ವಾಮಿ’ ಗೀತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಕೋಲಾರದ ಕೆರೆಗಳ ಕಥೆಯನ್ನು ಹೇಳುವ ಜಾನಪ‍ದ ಗೀತೆ, ‘ಜಕ್ಕನಕ ಥೈ ತಮ್ಮ.. ರಂಗು ರಂಗು ರೆಕ್ಕೆಯ ರಾಮಣ್ಣನ ಹುಂಜ.. ಘಲ್ಲಂದು ಹೆಜ್ಜೆ ಹಾಕು ತಮ್ಮ’ ಹಾಡಿಗೆ ಪ್ರೇಕ್ಷರು ಮನಸೋತರು. ಆಸ್ಟ್ರೇಲಿಯಾದ ಮೆಲ್ಬರ್ನ್‌ನಿಂದವೀಕ್ಷಕರೊಬ್ಬರು ‘ಇಲ್ಲಿ ರಾತ್ರಿ 10.45 ಆಗಿದೆ. ಈ ಹಾಡಿಗಾಗಿಯೇ ಕಾಯುತ್ತಿದ್ದೆ’ ಎಂದು ಪ್ರತಿಕ್ರಿಯಿಸಿದರು.

ಕೊನೆಯಲ್ಲಿ ದೇವನೂರ ಮಹಾದೇವ ಅವರ ‘ಕುಸುಮಬಾಲೆ‘ ಕಾದಂಬರಿಯನ್ನು ಹಾಡುತ್ತಾ, ವಾಚಿಸುತ್ತಾ ಕಾರ್ಯಕ್ರಮವನ್ನು ಅಂತಿಮಗೊಳಿಸಿದರು. ಕಾರ್ಯಕ್ರಮ ಮುಗಿಸುತ್ತಿದ್ದರೂ, ‘ತಿಂಗಾಳು ಮುಳುಗಿದವು.. ರಂಗೋಲಿ ಬೆಳಗಿದವು.. ಸೇರಿದಂತೆ ಹಲವು ಜನಪ್ರಿಯ ಜಾನಪದ ಗೀತೆಗಳನ್ನು ತಮ್ಮ ಧ್ವನಿಯಿಂದ ಕೇಳಬೇಕು’ ಎಂದು ಪ್ರೇಕ್ಷಕರು ಕಾಮೆಂಟ್‌ಗಳಲ್ಲಿ ಶ್ರೀನಿವಾಸ್ ಅವರಿಗೆ ಬೇಡಿಕೆ ಸಲ್ಲಿಸುತ್ತಿದ್ದರು.

ಕಾರ್ಯಕ್ರಮ ಮುಗಿಸುವ ಮುನ್ನ ‘ಕೊರೊನಾ ಬಗ್ಗೆ ಆತಂಕ ಬೇಡ. ಹಾಗಂತ ಏನೂ ಆಗಲ್ಲ ಎನ್ನುವ ತಾತ್ಸಾರವೂ ಬೇಡ. ನಮ್ಮ ಎಚ್ಚರಿಕೆಯಲ್ಲಿ ನಾವಿರೋಣ..’ ಎಂಬ ಸಂದೇಶ ನೀಡಿದರು ಪಿಚ್ಚಳ್ಳಿ ಶ್ರೀನಿವಾಸ್.

ಪಿಚ್ಚಳ್ಳಿಯವರಿಗೆ ಪಕ್ಕವಾದ್ಯದಲ್ಲಿಚಿಕ್ಕಇಗ್ಗಲೂರು ಮಂಜು (ಹಾರ್ಮೋನಿಯಂ), ಅಂಚೆಮುಸ್ಕೂರು ವೆಂಕಟೇಶ್ (ತಬಲ) ಸಾಥ್‌ ನೀಡಿದರು. ದೊಡ್ಡಮಲೆ ರವಿ ಮತ್ತು ನಾಗರಾಜ ಕೋರಸ್ ನೀಡಿದರು. ತಾಂತ್ರಿಕ ನೆರವು ನೀಡಿದವರು ಎಸ್‌.ವಿ.ಚಕ್ರವರ್ತಿ, ಆದಿಮ ಹರೀಶ್ ಮತ್ತು ಆನಂದ್.

ಪಿಚ್ಚಳ್ಳಿ ಶ್ರೀನಿವಾಸ್ ಅವರ ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ ಕಾರ್ಯಕ್ರಮ ವೀಕ್ಷಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ; Fb.com/Prajavani.net

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT