ಮಂಗಳವಾರ, ಸೆಪ್ಟೆಂಬರ್ 21, 2021
26 °C

ಸ್ಪೆಷಲ್‌ ಆಪ್ಸ್‌ನಿಂದ ನೀರಜ್ ಕಲಿತ ಪಾಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪತ್ತೇದಾರಿ, ಥ್ರಿಲ್ಲರ್ ಕಥೆಗಳನ್ನು ಜನ ಹೆಚ್ಚು ಬಯಸುತ್ತಾರೆ ಎನ್ನುತ್ತಾರೆ ‘ಬೇಬಿ’, ‘ಅಯ್ಯಾರಿ’ಯಂತಹ ಸಿನಿಮಾಗಳ ಸೃಷ್ಟಿಕರ್ತ ನೀರಜ್ ಪಾಂಡೆ. ‘ಕಥೆ ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು. ಅದು ನಿರ್ದೇಶಕನ ಕೆಲಸ’ ಎಂಬುದು ಅವರ ಅನುಭವದ ಮಾತು.

ಈಗ ಹಾಟ್‌ಸ್ಟಾರ್‌ ಒಟಿಟಿ ವೇದಿಕೆಗಾಗಿ ನೀರಜ್ ಅವರು ‘ಸ್ಪೆಷಲ್ ಆಪ್ಸ್’ ಎನ್ನುವ ವೆಬ್ ಸರಣಿ ಸಿದ್ಧಪಡಿಸಿ ಕೊಟ್ಟಿದ್ದಾರೆ. ಈ ಸರಣಿಗೆ ಸಿಕ್ಕಿರುವ ಸಾರ್ವಜನಿಕರ ಸ್ಪಂದನವು ನೀರಜ್ ಅವರಲ್ಲಿ ಸಂತಸ ಮೂಡಿಸಿದೆ. ಈ ಸರಣಿಗೆ ಐಎಂಡಿಬಿ ವೇದಿಕೆಯಲ್ಲಿ 10ಕ್ಕೆ 8.8 ಅಂಕ ದೊರೆತಿದೆ.

‘ಜನರಿಗೆ ಮನರಂಜನೆ ನೀಡಲು ಇಂತಹ ಕಥೆಗಳು ಬಹಳ ಉತ್ತಮ. ಈಗ ನಾವು ಥ್ರಿಲ್ಲರ್, ಪತ್ತೇದಾರಿ ಕಥೆಯನ್ನು ವೆಬ್ ಸರಣಿಯ ರೂಪದಲ್ಲಿ ಹೇಳಿದ್ದೇವೆ. ಇದನ್ನು ಜನ ಇಷ್ಟಪಟ್ಟಿದ್ದಾರೆ. ಅಂದರೆ, ಇಂತಹ ಕಥೆಗಳನ್ನು ಜನ ಬಯಸುತ್ತಾರೆ ಎಂಬುದು ಖಚಿತವಾಗುತ್ತದೆ’ ಎಂದು ನೀರಜ್ ಹೇಳುತ್ತಾರೆ.

‘ನೀವು ಎಷ್ಟು ಪ್ರೀತಿಯಿಂದ ಕಾರ್ಯಕ್ರಮ ಸಿದ್ಧಪಡಿಸುವಿರೋ, ಜನ ಕೂಡ ಅಷ್ಟೇ ಪ್ರೀತಿಯಿಂದ ಕಾರ್ಯಕ್ರಮ ವೀಕ್ಷಿಸಿದಾಗ ತೃಪ್ತಿ ಸಿಗುತ್ತದೆ. ವೆಬ್‌ ಸರಣಿಗಳ ಮೂಲಕ ಕಥೆ ಹೇಳುವುದು ಹೊಸದು. ಈ ಮಾಧ್ಯಮವು ಎಲ್ಲರಿಗೂ ಮುಕ್ತವಾಗಿ ತೆರೆದಿದೆ. ಚೆನ್ನಾಗಿ ಸಿದ್ಧಪಡಿಸಿದ ಕಾರ್ಯಕ್ರಮಕ್ಕೆ ಇಲ್ಲಿ ವೀಕ್ಷಕರು ಇದ್ದೇ ಇರುತ್ತಾರೆ’ ಎಂದು ಅವರು ವಿವರಿಸುತ್ತಾರೆ.

ಎಂಟು ಕಂತುಗಳ ಸ್ಪೆಷಲ್ ಆಪ್ಸ್ ವೆಬ್‌ ಸರಣಿಯು ಸುದೀರ್ಘ 19 ವರ್ಷಗಳ ಕಥೆಯನ್ನು ಹೊಂದಿದೆ. ಇದು 2001ರಲ್ಲಿ ಸಂಸತ್ತಿನ ಮೇಲೆ ನಡೆದ ದಾಳಿಯ ಹಿಂದಿನ ಸೂತ್ರಧಾರನನ್ನು ಹುಡುಕುವ ಕಥೆ. ಈ ಸರಣಿಯ ನಿರ್ದೇಶನದ ಕಾರ್ಯದಲ್ಲಿ ಶಿವಂ ನಾಯರ್ ಕೂಡ ಕೈಜೋಡಿಸಿದ್ದಾರೆ.

ಕೆ.ಕೆ. ಮೆನನ್ ಅವರು ಈ ಸರಣಿಯಲ್ಲಿ ಗುಪ್ತದಳದ ಅಧಿಕಾರಿ ಹಿಮ್ಮತ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಬರಿ ಮಸೀದಿ ಧ್ವಂಸ, ಮುಜಫ್ಫರ್‌ನಗರ ಗಲಭೆ, ಮುಂಬೈನಲ್ಲಿ ನಡೆದ ಭಯೋತ್ಪಾದಕರ ದಾಳಿ ಕುರಿತೂ ಈ ಸರಣಿಯಲ್ಲಿ ಉಲ್ಲೇಖ ಇದೆ.

‘ನಾನು ಈ ಕಥೆಯನ್ನು ವೆಬ್ ಸರಣಿಯ ಮಾದರಿಯಲ್ಲಿ ಹೇಳಿರುವುದಕ್ಕೆ ಒಂದು ಕಾರಣ ಇದೆ. ಇದು ನನಗೆ 19 ವರ್ಷಗಳ ಅವಧಿಯ ಕಥೆಯನ್ನು ವೀಕ್ಷಕರಿಗೆ ತಲುಪಿಸಲು ಸಾಧ್ಯ ಮಾಡಿತು’ ಎಂದು ನೀರಜ್ ವಿವರಿಸಿದ್ದಾರೆ. 

‘ಇದು ಪತ್ತೇದಾರಿ ಕಥೆ ಮಾತ್ರವೇ ಅಲ್ಲ. ಇದರಲ್ಲಿ ಹಟ ಹಿಡಿದು ಕೆಲಸ ಮಾಡಿದ ವ್ಯಕ್ತಿಯೊಬ್ಬನ ಕಥೆ ಕೂಡ ಇದೆ. ಇದು ನಂಬಿಕೆಗೆ ಸಂಬಂಧಿಸಿದ ಕಥೆ’ ಎಂದು ನೀರಜ್ ಹೇಳಿಕೊಂಡಿದ್ದಾರೆ. ಈ ವೆಬ್ ಸರಣಿಯ ಅಂತ್ಯದಲ್ಲಿ ಕಥೆ ಪೂರ್ಣಗೊಳ್ಳುತ್ತದೆ. ಈ ಸರಣಿಯ ಎರಡನೆಯ ಸೀಸನ್‌ ಸಿದ್ಧಪಡಿಸುವುದಾದರೆ ಅದರಲ್ಲಿ ಹೊಸ ಕಥೆ ಇರುತ್ತದೆ ಎಂದು ನೀರಜ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು