ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡ್ಡಿದ್ದಾಗ ಹೇಗೆ ಬದುಕಬೇಕೆಂಬ ಅದ್ಭುತ ಸಂದೇಶ ಕೊಟ್ಟ ಸೋನು ಸೂದ್‌

ಅಕ್ಷರ ಗಾತ್ರ

ಮುಂಬೈ: ನಮಗೆ ಜೀವನದಲ್ಲಿ ಐಶ್ವರ್ಯ ಬಂದಾಗ ಹೇಗೆ ಬದುಕಬೇಕು ಎಂಬುದನ್ನು ನಟ ಸೋನು ಸೂದ್‌ ಮೂರು ಸಾಲಿನಲ್ಲಿ ಅದ್ಭುತವಾದ ಸಂದೇಶವನ್ನು ನೀಡಿದ್ದಾರೆ.

ರಾಷ್ಟ್ರದಲ್ಲಿ ಕೋವಿಡ್‌ ಮಹಾಮಾರಿಯನ್ನು ತಡೆಗಟ್ಟಲು ಸರ್ಕಾರಗಳು ಲಾಕ್‌ಡೌನ್‌ ಹೇರಿದ ಸಂದರ್ಭ ಕಾರ್ಮಿಕರ ಸಂಕಷ್ಟಗಳಿಗೆ ಹೆಗಲಾಗಿದ್ದ ಸೋನು ಸೂದ್‌ ನಿರಂತರವಾಗಿ ಸೇವಾಕಾರ್ಯಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ವಲಸೆ ಕಾರ್ಮಿಕರಿಗೆ ಊರಿಗೆ ತೆರಳಲು ಉಚಿತ ಬಸ್‌ ವ್ಯವಸ್ಥೆ, ನಿರ್ಗತಿಕರಿಗೆ ಆಹಾರ ಹೀಗೆ ಒಂದಿಲ್ಲೊಂದು ಸೇವಾ ಕಾರ್ಯದಲ್ಲಿ ತೊಡಗಿರುವ ಸೋನು ಸೂದ್‌ ಕಾರ್ಯಕ್ಕೆ ರಾಷ್ಟ್ರವೇ ಮೆಚ್ಚುಗೆ ವ್ಯಕ್ತ ಪಡಿಸಿದೆ.

ರಾಷ್ಟ್ರದಲ್ಲಿ ಎರಡನೇ ಕೋವಿಡ್‌ ಅಲೆ ಅಪ್ಪಳಿಸಿದ ಸಂದರ್ಭ ಉಂಟಾದ ಆಮ್ಲಜನಕ ಕೊರತೆ ಸಂದರ್ಭದಲ್ಲಿ ಸಕಾಲದಲ್ಲಿ ಸಂಜೀವಿನಿಯನ್ನು ಹೊತ್ತು ತಂದ ಹನುಮಂತನಂತೆ ಜೀವಗಳನ್ನು ಉಳಿಸಲು ಆಮ್ಲಜನಕ ಸಿಲಿಂಡರ್‌ಗಳನ್ನು ಒದಗಿಸಲು ನೆರವಾದರು. ಸಿನಿಮಾಗಳಲ್ಲಿ ಖಳನಟನ ಪಾತ್ರದಲ್ಲೇ ಪರಿಚಿತಗೊಂಡಿರುವ ಸೋನು ಸೂದ್‌ ನಿಜ ಜೀವನದಲ್ಲಿ ಹೀರೋ ಎಂಬುದನ್ನು ಕೊರೊನಾ ಸಂಕಷ್ಟದುದ್ದಕ್ಕೂ ನಿರೂಪಿಸಿ ತೋರಿಸಿದ್ದಾರೆ.

ವಲಸೆ ಕಾರ್ಮಿಕರನ್ನು ವಿಶೇಷ ವಿಮಾನದ ಮೂಲಕ ಊರಿಗೆ ತಲುಪಿಸಿದ ಹೃದಯ ಶ್ರೀಮಂತಿಕೆ ತೋರಿದ್ದ ಸೋನು ಸೂದ್‌, ನಮಗೆ ಆರ್ಥಿಕವಾಗಿ ಆಶೀರ್ವಾದ ಸಿಕ್ಕಿದಾಗ, ಸ್ಟಾಂಡರ್ಡ್‌ ಆಗಿ ಬದುಕುವ ಬದಲು, ಸ್ಟಾಂಡರ್ಡ್‌ಆಗಿ ಕೊಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಸ್ವತಃ ಸೇವೆಗಳನ್ನು ಮಾಡುತ್ತಿರುವ ಸೋನು ಸೂದ್‌ ಮಾತಿನಲ್ಲಿರುವ ತೂಕವನ್ನು ಗ್ರಹಿಸಿದ ನೆಟ್ಟಿಗರು ಸ್ಪೂರ್ತಿಯುತ ಸಂದೇಶವೆಂದು ಪ್ರಶಂಸಿದ್ದಾರೆ.

ಇದೀಗ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲು ಸೋನು ಸೂದ್‌ ಮುಂದಾಗಿದ್ದಾರೆ. ಕೋಚಿಂಗ್‌ ಪಡೆಯಲು ದುಡ್ಡಿಲ್ಲದ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. 'ಸೂದ್‌ ಚಾರಿಟಿ ಫೌಂಡೇಶನ್‌' ವತಿಯಿಂದ 'ಸಂಭವಂ' ಎಂಬ ಹೆಸರಿನ ಯೋಜನೆಯಡಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಎಎಸ್‌ ಕೋಚಿಂಗ್‌ ಕೊಡುವುದಾಗಿ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT