ಈ ಮರ ನೀರು ಕೊಡುತ್ತದೆ!

7

ಈ ಮರ ನೀರು ಕೊಡುತ್ತದೆ!

Published:
Updated:

ಸಾಮಾನ್ಯವಾಗಿ ಮರ ಏನು ಕೊಡುತ್ತದೆ ಎಂದು ಯಾರನ್ನಾದರೂ ಕೇಳಿದರೆ, ನೆರಳು ಕೊಡುತ್ತದೆ, ಹಣ್ಣು ಕೊಡುತ್ತದೆ, ಗಾಳಿ ಬೀಸುತ್ತದೆ ಎಂದು ಉತ್ತರಿಸುತ್ತಾರೆ. ಆದರೆ ಈ ಮರದ ವಿಷಯ ಮಾತ್ರ ಸ್ವಲ್ಪ ಭಿನ್ನ. ಇದು ಎಲ್ಲ ಮರಗಳಂತೆ ಹೂ, ಹಣ್ಣು, ನೆರಳು, ಗಾಳಿ ನೀಡುವುದರ ಜತೆಗೆ ನೀರನ್ನೂ ಕೊಡುತ್ತದೆ. ಈ ವಿಶೇಷ ಮರದ ಬಗ್ಗೆ ತಿಳಿಯೋಣ.

ಮರಗಳಿಂದ ನಮಗೆ ಸಿಗುತ್ತಿರುವ ಉಪಯೋಗಗಳನ್ನು ಹೇಳುತ್ತಾ ಹೋದರೆ, ದಿನಗಳು ಸಾಲುವುದಿಲ್ಲ. ಅವು ವಾಯು ಮಾಲಿನ್ಯ ಕುಗ್ಗಿಸಲು ಇಂಗಾಲದ ಡೈಆಕ್ಸೈಡ್‌ ಅನ್ನು ಹೀರಿಕೊಳ್ಳುತ್ತಿವೆ. ನಾವು ಸ್ವಚ್ಛಂದವಾಗಿ ಉಸಿರಾಡಲು ಆಮ್ಲಜನಕ ಒದಗಿಸುತ್ತಿವೆ. ನಮ್ಮ ಹಸಿವು ನೀಗಿಸಲು ಹಣ್ಣುಗಳನ್ನು ಕೊಡುತ್ತದೆ. ನಮ್ಮ ಮನೆಗಳ ಅಲಂಕಾರಕ್ಕಾಗಿ ಹೂಗಳನ್ನೂ ಕೊಡುತ್ತದೆ. ಹೀಗೆ ನಮ್ಮ ನಿತ್ಯ ಜೀವನದ ಹಲವು ಅಗತ್ಯಗಳನ್ನು ಪೂರೈಸುತ್ತದೆ. ಇಷ್ಟು ಸಾಲದು ಎಂಬಂತೆ ಈ ಮರ ನೀರು ಕೂಡ ಕೊಡುತ್ತಿದೆ. ಕೊಳವೆ ಬಾವಿಯಿಂದ ನೀರು ಉಕ್ಕಿ ಬರುವಂತೆ ಈ ಮರದ ಕಾಂಡದಿಂದ ಧಾರಾಕಾರವಾಗಿ ನೀರು ಸುರಿಯುತ್ತಿದೆ. 

ಈ ಅಪರೂಪದ ಮರ ಇರುವುದು ಯುರೋಪ್ ಖಂಡದ ಮೊಂಟೆನಾಗ್ರೊ ಎಂಬ ಪುಟ್ಟ ದೇಶದ ಡಿನೊಸಾ ಗ್ರಾಮದಲ್ಲಿ. ಇದು ಮುಲ್‌ಬರ್ರಿ ವೃಕ್ಷ (ಇದರ ಹಣ್ಣುಗಳು ಬ್ಲೂ ಬರ್ರಿ ಹಣ್ಣುಗಳನ್ನೇ ಹೋಲುತ್ತವೆ). ಅದೂ ಕೂಡ ಇಂದು ನಿನ್ನೆಯದಲ್ಲ. ಸುಮಾರು 150 ವರ್ಷ ಹಳೆಯದು ಎಂದು ಸ್ಥಳೀಯರು ಹೇಳುತ್ತಾರೆ. ಸುಮಾರು 25 ವರ್ಷಗಳಿಂದ ಹೀಗೆಯೇ ನೀರು ಉಕ್ಕುತ್ತಿದೆಯಂತೆ.

ಈ ಮರವಿರುವ ಪ್ರದೇಶದಲ್ಲಿ ಮಳೆ ಸುರಿದು ನಿಂತ ನಂತರ, ಮರದಿಂದ ನೀರು ಉಕ್ಕಲು ಶುರುವಾಗುತ್ತದೆ. ಅದು ಕೂಡ ಎಷ್ಟರ ಮಟ್ಟಿಗೆ ಎಂದರೆ ಸುತ್ತ–ಮುತ್ತಲಿನ ಪ್ರದೇಶವೆಲ್ಲ ಜಲಾವೃತವಾಗುತ್ತದೆ. ಅಷ್ಟೇ ಅಲ್ಲ, ಹೀಗೆ ಹೊರ ಬಂದ ನೀರು ಪುಟ್ಟ ಕಾಲುವೆ ರೀತಿ ಹರಿದು ಹೋಗುತ್ತಿದೆ. 

ಕೆಲವು ದಿನಗಳ ನಂತರ, ಉಕ್ಕುವುದು ನಿಲ್ಲುತ್ತದೆ. ಈ ವಿಚಿತ್ರವನ್ನು ನೋಡಲು ಹಲವರು ಈ ಗ್ರಾಮಕ್ಕೆ ಭೇಟಿ ನೀಡುತ್ತಾರೆ.

ಈಚೆಗಷ್ಟೇ ರೇಡಿಯೊ ಫ್ರೀ ಯುರೋಪ್ ಎಂಬ ಜಾಲತಾಣ ಈ ಸುದ್ದಿಯನ್ನು ಪ್ರಕಟಿಸಿ, ಈ ಮರದ ಬಗ್ಗೆ ವಿಶ್ವದಾದ್ಯಂತ ತಿಳಿಯುವಂತೆ ಮಾಡಿತು. 

ಬರಹ ಇಷ್ಟವಾಯಿತೆ?

 • 38

  Happy
 • 3

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !