ಭಾನುವಾರ, ಸೆಪ್ಟೆಂಬರ್ 27, 2020
24 °C

ವಚನಗಳಿಗೆ ಫ್ಯೂಜನ್‌ ಸ್ಪರ್ಶ : ರೂಪಾ ಭಿನ್ನ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಚನ ಹಾಗೂ ಜನಪದ ಗೀತೆಗಳನ್ನು ಕೇಳುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಈ ಪದ್ಯಗಳಿಗೆ ಹೊಸರೂಪ ನೀಡಿದ ರೂಪಾ ಕೊತ್ವಾಲ್‌ ಅವರ ಪ್ರಯತ್ನಕ್ಕೆ ಯೂಟ್ಯೂಬ್‌ ಹಾಗೂ ಸಾಮಾಜಿಕ ಜಾಲತಾಣದ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಫ್ಯೂಜನ್‌ ಶೈಲಿಯಲ್ಲಿ ವಚನಗಳನ್ನು ಹಾಡುವ ಮೂಲಕ ಯೂಟ್ಯೂಬ್‌ನಲ್ಲಿ ಅವರು ಸಂಚಲನ ಮೂಡಿಸಿದ್ದಾರೆ.

ಭರತನಾಟ್ಯ ಕಲಾವಿದೆ ಮಂಜುಶ್ರೀ ಸಂತೋಷ್ ಅವರು ಅಲಂಕಾರ ಮಾಡಿಕೊಳ್ಳುವ ದೃಶ್ಯದಿಂದ ‘ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ’ ಹಾಡು ಆರಂಭವಾಗುತ್ತದೆ. ಮೇಲುಕೋಟೆಯ ದೇವಸ್ಥಾನದ ಮೇಲೆ ಕೂತ ಗಾಯಕಿ, ಮೆಲು ಧ್ವನಿಯಲ್ಲಿ ಹಾಡುತ್ತಾರೆ. ಅದಕ್ಕೆ ತಕ್ಕಂತೆ ಬಂಡೆಗಳ ಮೇಲೆ ಮಂಜುಶ್ರೀ ಅವರು ನೃತ್ಯಮಾಡುತ್ತಾರೆ. ಮೇಲುಕೋಟೆ ದೇವಸ್ಥಾನದ ದೃಶ್ಯವೈಭವದ ಜೊತೆ ಹಾಡಿನ ಸಾಲುಗಳು, ಸಂಗೀತ ಹಾಗೂ ಕ್ಯಾಮೆರಾದ ಸೊಬಗು ನೋಡುಗರನ್ನು ಮೌನವಾಗಿ ಸೆಳೆಯುತ್ತದೆ.

‘ಸೋಜಿಗದ ಸೂಜಿಮಲ್ಲಿಗೆ, ಮಾದೇವ ನಿನ್ನಾ ಮಂಡೆ ಮ್ಯಾಲೆ ದುಂಡುಮಲ್ಲಿಗೆ’ ಹಾಡನ್ನು ಪಾಶ್ಚಿಮಾತ್ಯ ಶೈಲಿಯಲ್ಲಿ ಹಾಡಿದ್ದಾರೆ. ಜನಪದರ ಸಂಪ್ರದಾಯದ ಉಡುಗೆ ಹಾಗೂ ಜಂಕಾರ್‌ ಮ್ಯೂಸಿಕ್‌ ಸ್ಟುಡಿಯೋದಲ್ಲಿ ಅದಕ್ಕೆ ತಕ್ಕಂತೆ ಹಾಕಿರುವ ಸೆಟ್‌, ಇವು ದೃಶ್ಯ ಕಾವ್ಯದಂತೆ ಕಣ್ಣಿಗೆ ಕಟ್ಟುತ್ತವೆ. 

ಹುಬ್ಬಳ್ಳಿಯ ರೂಪಾ ಅವರು ಮದುವೆಯಾದ ಬಳಿಕ ಬೆಂಗಳೂರಿಗೆ ಬಂದು ನೆಲೆಸಿದರು, ಹಿಂದೂಸ್ತಾನಿ ಸಂಗೀತದಲ್ಲಿ ಪದವಿ ಪಡೆದುಕೊಂಡ ಬಳಿಕ, ಉದಯ ಕಾಮಿಡಿ ಚಾನಲ್‌ಗೂ ಧ್ವನಿ ನೀಡಿದ್ದಾರೆ. ದಕ್ಷಿಣ ಭಾರತದ ಅಮೆಜಾನ್‌ ರೇಡಿಯೊದಲ್ಲಿ ಆರ್‌.ಜೆ.ಯಾಗಿ ಕೆಲಸ ಮಾಡುತ್ತಿದ್ದಾರೆ. 

‘ಉಳ್ಳವರು ಶಿವಾಲಯ ಮಾಡುವರು... ಹಾಡನ್ನು ಆಗಸ್ಟ್ ತಿಂಗಳಲ್ಲಿ ಶೂಟಿಂಗ್ ಮಾಡಿದೆವು. ಅಪ್‌ಲೋಡ್‌ ಮಾಡಿದ್ದು ಮೇ ತಿಂಗಳಲ್ಲಿ. ಇದುವರೆಗೂ 68 ಸಾವಿರ ಜನರು ನೋಡಿದ್ದಾರೆ. ಈಗಲೂ ಸಾಕಷ್ಟು ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಲೇ ಇದೆ. ವಚನಗಳನ್ನು ವಿಭಿನ್ನವಾಗಿ ಹಾಡಿದರೆ ಎಲ್ಲ ರೀತಿಯ ಪ್ರೇಕ್ಷಕರನ್ನೂ ತಲುಪಬಹುದು ಎಂಬ ಉದ್ದೇಶದಿಂದ ವಿಡಿಯೊ ಮಾಡಿದೆವು, ಈಗಿನ ಕೇಳುಗರು ಹೊಸತನ ಬಯಸುತ್ತಾರೆ. ಆದ್ದರಿಂದ ನಮ್ಮ ಪ್ರಯತ್ನ ಫಲ ಕೊಟ್ಟಿದೆ’ ಎನ್ನುತ್ತಾರೆ ರೂಪ.

ಉಳ್ಳವರು ಶಿವಾಲಯ... ಹಾಡಿಗೆ ಕ್ಯಾಮೆರಾ ಸುಮುಖ ಅವರದ್ದು. ಸಂಗೀತ ನಿರ್ದೇಶನ ಮಾಡಿದ್ದು ಅನೀಶ್‌ ಮ್ಯಾಥ್ಯೂ.

ಸರಸ್ವತಿ ಹಾಡು: ‘ಸರಸ್ವತಿ ಹಾಡು ಎಂದರೆ ಎಲ್ಲರಿಗೂ ಒಂದು ದೃಶ್ಯ ಕಣ್ಮುಂದೆ ಬರುತ್ತದೆ. ವಿದ್ಯೆ, ಬುದ್ಧಿ ಕೊಡು ಎಂದು ಕೈಮುಗಿದು ಬೇಡಿಕೊಳ್ಳುವುದಕ್ಕಿಂತ ಹೆಚ್ಚು ಹೊಸತನ ಇರುವ ಹಾಡುಗಳೇ ಇದುವರೆಗೂ ಬಂದಿಲ್ಲ’ ಎಂದು ಹೇಳುತ್ತಾರೆ ರೂಪ.

‘ಅಮೆರಿಕದಲ್ಲಿ ನೆಲೆಸಿರುವ ಕಮಲ್‌ ರಾಜೀವ್‌ ಪುರಂದರೆ ‘ಭಗವತಿ ಸರಸ್ವತಿ’ ಹಾಡನ್ನು ಬರೆದು ಸಂಯೋಜನೆ ಮಾಡಿದ್ದಾರೆ. ಜಂಕಾರ್‌ ಮ್ಯೂಸಿಕ್‌ ಅವರ ಸಹಾಯದಿಂದ ಸದ್ಯದಲ್ಲೇ ಶೂಟಿಂಗ್‌ ಆರಂಭಿಸುತ್ತಿದ್ದೇವೆ’ ಎಂದು ತಮ್ಮ ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡರು.

ಇದನ್ನೂ ಓದಿ: ಸೈನಿಕರಿಗೆ ಸಂಗೀತ: ಕದ್ರಿ ಕನಸು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು