ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯದ ಕನಸಿಗೆ ಶ್ರುತಿ ಸೇರಿದಾಗ...

Last Updated 8 ಜೂನ್ 2018, 19:30 IST
ಅಕ್ಷರ ಗಾತ್ರ

‘ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್’ ವಿಚಿತ್ರ ಕಾಯಿಲೆ. ಇದಕ್ಕೆ ತುತ್ತಾದವರ ಎಡಗೈ ಹದ್ದು ಬಸ್ತಿನಲ್ಲಿರುವುದಿಲ್ಲ. ಅದು ಸೃಷ್ಟಿಸುವ ಅವಾಂತರಗಳು ಒಂದೆರಡಲ್ಲ. ಈ ರೋಗದ ಸುತ್ತಲೇ ಕಥೆ ಹೆಣೆದಿರುವ ಎಸ್‌. ಅರ್ಜುನ್‌ಕುಮಾರ್‌ ನಿರ್ದೇಶನದ ‘ಸಂಕಷ್ಟಕರ ಗಣಪತಿ’ ಚಿತ್ರದ ಮೂಲಕ ಹೊಸ ಪ್ರತಿಭೆ ಚಂದನವನಕ್ಕೆ ಪರಿಚಯವಾಗುತ್ತಿದೆ. ಅವರ ಹೆಸರು ಶ್ರುತಿ ಗೊರಾಡಿಯಾ.

ಶ್ರುತಿ ಮೂಲತಃ ಗುಜರಾತಿನವರು. ಆದರೆ ಹುಟ್ಟಿ, ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿಯೇ. ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ಬಣ್ಣದ ಬದುಕಿನ ಬಗ್ಗೆ ಕನಸು ಕಂಡವರು. ದೂರದರ್ಶನದಲ್ಲಿ ಮಕ್ಕಳ ಧಾರಾವಾಹಿಯೊಂದರಲ್ಲಿ ನಟಿಸಲು ಶಾಲೆಯಿಂದ ಆಯ್ಕೆಯಾಗಿದ್ದ ಮೂವರು ವಿದ್ಯಾರ್ಥಿಗಳ ಪೈಕಿ ಅವರು ಕೂಡ ಒಬ್ಬರಾಗಿದ್ದರು. ಆಗ ಅವರಿಗೆ ಆರು ವರ್ಷ. ಆದರೆ, ದೂರದರ್ಶನದ ಕಚೇರಿ ಮನೆಯಿಂದ ದೂರವಿದ್ದ ಹಿನ್ನೆಲೆಯಲ್ಲಿ ಅವರ ಬಾಲ್ಯದ ನಟನೆಯ ಕನಸು ಈಡೇರಲಿಲ್ಲ.

ಬಯೋಟೆಕ್ನಾಲಜಿ ವಿಷಯದಲ್ಲಿ ಬಿ.ಎಸ್ಸಿ ಪದವಿ ಪೂರೈಸಿರುವ ಅವರು, ಹಾಸ್ಪಿಟಾಲಿಟಿ ಸೇವೆ ಒದಗಿಸುವ ಖಾಸಗಿ ಕಂಪನಿಯಲ್ಲಿ ವೃತ್ತಿಜೀವನ ಆರಂಭಿಸಿದರು. ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ ದಟ್ಟ ಅನುಭವವೂ ಅವರಿಗಿದೆ.

ನಿರ್ಮಾಪಕರಲ್ಲಿ ಒಬ್ಬರಾದ ಪೈಜಾನ್‌ ಖಾನ್ ‘ಸಂಕಷ್ಟಕರ ಗಣಪತಿ’ ಚಿತ್ರಕ್ಕೆ ನಾಯಕಿಯ ಹುಡುಕಾಟದಲ್ಲಿದ್ದರು. ನಟನೆ ಬಗ್ಗೆ ಆಸಕ್ತಿ ಇರುವ ಪರಿಚಿತ ಹುಡುಗಿಯರು ಇದ್ದರೆ ಆಡಿಶನ್‌ಗೆ ಕಳುಹಿಸಿಕೊಡುವಂತೆ ಶ್ರುತಿ ಅವರಿಗೆ ಕೋರಿದರಂತೆ. ಆಗ ‘ನಾನೇ ನಿಮ್ಮ ಚಿತ್ರದಲ್ಲಿ ನಟಿಸುತ್ತೇನೆ’ ಎಂದು ತಮಾಷೆಯಾಗಿ ಹೇಳಿದರಂತೆ ಶ್ರುತಿ.

‘ನನ್ನ ಭಾವಚಿತ್ರಗಳನ್ನು ಕಳುಹಿಸಿ ಕೊಡುವಂತೆ ಪೈಜಾನ್‌ ಹೇಳಿದರು. ಅವರ ಕರೆಗೆ ತಕ್ಷಣವೇ ಸ್ಪಂದಿಸಿದೆ. ಆಡಿಶನ್‌ಗೆ ಕರೆಯೂ ಬಂತು. ಸಂಕಷ್ಟಕರ ಗಣಪತಿ ಚಿತ್ರದ ಮೂಲಕ ನಾಯಕಿಯಾಗುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಬಾಲ್ಯದ ಕನಸು ಈಡೇರಿದ ಖುಷಿ ತಂದಿದೆ’ ಎನ್ನುತ್ತಾರೆ ಅವರು.

ಶ್ರುತಿ ಅವರ ಅಪ್ಪ ಉದ್ಯಮಿ. ಅಮ್ಮ ಗೃಹಿಣಿ. ಅವರ ಕುಟುಂಬಕ್ಕೆ ಚಿತ್ರರಂಗ ಹೊಸದು. ‘ಸಿನಿಮಾದಲ್ಲಿ ನಟನೆಗೆ ಅವಕಾಶ ಸಿಕ್ಕಿದಾಗ ಮೊದಲಿಗೆ ಅಮ್ಮ ಭಯಪಟ್ಟಿದ್ದು ಉಂಟು. ಆದರೆ, ನನ್ನ ವೃತ್ತಿ ಬಗ್ಗೆ ಅವರಿಗೆ ನಂಬಿಕೆ, ಗೌರವವಿದೆ. ಚಿತ್ರೀಕರಣದ ವೇಳೆ ಚಿತ್ರತಂಡದ ಸದಸ್ಯರು ಕನ್ನಡದಲ್ಲಿಯೇ ನನ್ನೊಂದಿಗೆ ಮಾತನಾಡುತ್ತಿದ್ದರು. ಇದು ನನ್ನ ನಟನೆಯ ಕಲಿಕೆಗೆ ಸಹಕಾರಿಯಾಯಿತು’ ಎಂದು ಸ್ಮರಿಸುತ್ತಾರೆ.

‘ಈ ಚಿತ್ರದಲ್ಲಿ ನಾನು ಸೇಲ್ಸ್‌ ಎಕ್ಸಿಕ್ಯುಟಿವ್. ಇದು ನನ್ನ ಮೂಲ ವೃತ್ತಿಗೆ ಸಾಮೀಪ್ಯ ಇರುವ ಪಾತ್ರ. ಆದರೆ, ಪಾತ್ರದಲ್ಲಿನ ನಿರೂಪಣೆ ಭಿನ್ನವಾಗಿದೆ’ ಎಂದು ವಿವರಿಸುತ್ತಾರೆ.

ಚಿತ್ರರಂಗಕ್ಕೆ ಬಂದ ಮೇಲೂ ಅವರು ಮೂಲ ವೃತ್ತಿಯನ್ನು ಮರೆತಿಲ್ಲ. ಕಾರ್ಯಕ್ರಮಗಳ ನಿರೂಪಣೆಗೆ ಅಗತ್ಯವಿರುವ ನೆರವು ನೀಡುವಲ್ಲಿ ಅವರು ನಿರತರಾಗಿದ್ದಾರೆ. ಸಿನಿಮಾ ನೋಡುವುದು ಅವರ ಮೆಚ್ಚಿನ ಹವ್ಯಾಸ. ಬಿಡುವಿನ ವೇಳೆ ಸ್ನೇಹಿತರೊಟ್ಟಿಗೆ ಕಾಲ ಕಳೆಯುವುದೆಂದರೆ ಅವರಿಗೆ ಅಚ್ಚುಮೆಚ್ಚು.

‘ಇದೀಗ ಚಂದನವನಕ್ಕೆ ಕಾಲಿಟ್ಟಿದ್ದೇನೆ. ಅವಕಾಶಗಳ ನಿರೀಕ್ಷೆಯಲ್ಲಿದ್ದೇನೆ. ಇಲ್ಲಿಯೇ ಭದ್ರವಾಗಿ ನೆಲೆಯೂರುವ ಆಸೆಯಿದೆ. ಒಂದಕ್ಕಿಂತ ಒಂದು ಭಿನ್ನವಾಗಿರುವ ಪಾತ್ರಗಳಲ್ಲಿ ನಟಿಸಲು ನನಗಿಷ್ಟ.

ಜೊತೆಗೆ, ಪರಭಾಷೆಯ ಚಿತ್ರಗಳಲ್ಲಿ ನಟನೆಗೆ ಅವಕಾಶ ಸಿಕ್ಕಿದರೆ ಹಿಂದೇಟು ಹಾಕಲಾರೆ’ ಎನ್ನುತ್ತಾರೆ. ಎಲ್ಲ ತರಹದ ಪಾತ್ರಗಳಲ್ಲಿ ನಟಿಸುವ ಹಂಬಲ ಹೊಂದಿರುವ ಅವರಿಗೆ, ಕಾಮಿಡಿ ಮತ್ತು ಹಾರರ್‌ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆಲ್ಲಬೇಕೆಂಬ ಆಸೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT