ಬುಧವಾರ, ಜೂನ್ 3, 2020
27 °C

ರಾಘಣ್ಣ: 25 ನಾಟ್‌ಔಟ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಅಮ್ಮನ ಮನೆ’ ಮೂಲಕ ದಶಕದ ನಂತರ ನಟನಾ ವೃತ್ತಿಗೆ ಮರಳಿದ್ದಾರೆ ರಾಘವೇಂದ್ರ ರಾಜ್‌ಕುಮಾರ್‌. ‘ಅಮ್ಮನ ಮನೆ ನನಗೆ ಸಿನಿಮಾ ಅಲ್ಲ; ಅದು ನನ್ನ ಪಾಲಿಗೆ ಥೆರಪಿ’ ಎಂದಿದ್ದರು ರಾಘಣ್ಣ. ಅವರ ಮಾತು ನಿಜವಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಆರು ವರ್ಷಗಳ ಅನಾರೋಗ್ಯದ ನಂತರ ನಟಿಸಿದ ಈ ಸಿನಿಮಾ ಅವರ ದೈಹಿಕ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರಿದೆಯೋ ಗೊತ್ತಿಲ್ಲ, ಆದರೆ ಮಾನಸಿಕವಾಗಿಯಂತೂ ಇನ್ನಷ್ಟು ಚೇತೋಹಾರಿಯನ್ನಾಗಿ ಮಾಡಿದೆ.

‘ಅಮ್ಮನ ಮನೆ’ ತೆರೆ ಕಾಣುತ್ತಿರುವ ಹಾಗೆಯೇ ಅವರು ಇನ್ನಷ್ಟು ಚಿತ್ರಗಳನ್ನು ಒಪ್ಪಿಕೊಂಡು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅವರು ನಟಿಸಿರುವ ‘ತ್ರಯಂಬಕಂ’ ಬಿಡುಗಡೆಗೆ ಸಜ್ಜಾಗಿದೆ. ತಮ್ಮ ನಟನಾಜೀವನದ ಸೆಕೆಂಡ್‌ ಇನಿಂಗ್ಸ್‌ನಲ್ಲಿ ಒಂದರ ಹಿಂದೊಂದರಂತೆ ಸಿನಿಮಾ ಒಪ್ಪಿಕೊಳ್ಳುತ್ತ 25ನೇ ಸಿನಿಮಾ ಗಡಿಯನ್ನು ತಲುಪಿದ್ದಾರೆ.

ಫಣೀಶ್‌ ಭಾರದ್ವಾಜ್‌ ನಿರ್ದೇಶಿಸುತ್ತಿರುವ ‘ಆಡಿಸಿದಾತ’, ರಾಘಣ್ಣನ 25ನೇ ಸಿನಿಮಾ. ಇತ್ತೀಚೆಗೆ ಕಂಠೀರವ ಸ್ಟುಡಿಯೊದಲ್ಲಿ ಚಿತ್ರದ ಮುಹೂರ್ತ ನಡೆದಿದೆ. ಶೀರ್ಷಿಕೆಗೆ ತಕ್ಕ ಹಾಗೆ ಸಿನಿಮಾದಲ್ಲಿನ ಹಲವು ಪಾತ್ರಗಳನ್ನು ಆಡಿಸುವ ಸೂತ್ರಧಾರನ ಪಾತ್ರದಲ್ಲಿ ರಾಘಣ್ಣ ಕಾಣಿಸಿಕೊಂಡಿದ್ದಾರಂತೆ. ಸಾವಿನ ಸಮ್ಮುಖದಲ್ಲಿ ಎದುರಾಗುವ ಬದುಕಿನ ಸತ್ಯಗಳನ್ನು ಕುರಿತಾಗಿ ಈ ಸಿನಿಮಾದಲ್ಲಿ ಹೇಳಲಾಗಿದೆ. ‘ಹಣದ ವ್ಯಾಮೋಹ ಮತ್ತು ಮನುಷ್ಯತ್ವ ಈ ಎರಡರಲ್ಲಿ ಯಾವುದು ಮುಖ್ಯ? ಯಾವುದು ಮನುಷ್ಯನನ್ನು ಸುಲಭವಾಗಿ ಸೆಳೆಯುತ್ತದೆ ಎಂಬುದರ ಕುರಿತಾಗಿ ಈ ಸಿನಿಮಾದಲ್ಲಿ ಹೇಳಹೊರಟಿದ್ದೇವೆ’ ಎನ್ನುವುದು ಚಿತ್ರತಂಡದ ವಿವರಣೆ.‌

ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವ ಜವಾಬ್ದಾರಿಯನ್ನು ಕದ್ರಿ ಮಣಿಕಾಂತ್‌ ವಹಿಸಿಕೊಂಡಿದ್ದಾರೆ. ರಾಜ್‌ಕುಮಾರ್ ಹಾಡಿರುವ ‘ಬಾನಿಗೊಂದು ಎಲ್ಲೆ ಎಲ್ಲಿದೆ?’ ಹಾಡನ್ನು ಮರುಬಳಕೆ ಮಾಡಿಕೊಳ್ಳುವ ಸೂಚನೆಯನ್ನೂ ಅವರು ನೀಡಿದ್ದಾರೆ. ರಾಘಣ್ಣನ ತಂದೆಯಾಗಿ ಭಗವಾನ್‌ ನಟಿಸುತ್ತಿರುವುದು ಇನ್ನೊಂದು ವಿಶೇಷ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.