‌#ಆರ್‌ಆರ್‌ಆರ್‌... ಬಿಡುಗಡೆ ಮುಹೂರ್ತ ಫಿಕ್ಸ್‌

ಸೋಮವಾರ, ಮಾರ್ಚ್ 18, 2019
31 °C

‌#ಆರ್‌ಆರ್‌ಆರ್‌... ಬಿಡುಗಡೆ ಮುಹೂರ್ತ ಫಿಕ್ಸ್‌

Published:
Updated:
Prajavani

‘#ಆರ್‌ಆರ್‌ಆರ್‌ ಬಿಡುಗಡೆ ಯಾವಾಗ? ಇನ್ನೂ ಎಷ್ಟು ಕಾಯಬೇಕು?’ ಎಂಬ ಪ್ರಶ್ನೆಗೆ ನಸು ನಗೆ ಸೂಸಿ ಸೂಸಿ ಸುಸ್ತಾಗಿರುವ ನಿರ್ದೇಶಕ ರಾಜಮೌಳಿ ಕೊನೆಗೂ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಚಿತ್ರಕತೆ, ತಾರಾಗಣದ ಬಗ್ಗೆಯೂ ಯಾವುದೇ ಗುಟ್ಟು ಬಿಟ್ಟುಕೊಟ್ಟಿರದ ರಾಜಮೌಳಿ ಇದೀಗ ಒಂದೊಂದೇ ಸುದ್ದಿಯನ್ನು ಗುಟುಕು ಗುಟುಕಾಗಿ ಕೊಡುತ್ತಿದ್ದಾರೆ. 

2020ರ ಜುಲೈನಲ್ಲಿ #ಆರ್‌ಆರ್‌ಆರ್‌ ತೆರೆಗೆ ಬರಲಿದೆ ಎಂದು ಗುರುವಾರ ಪ್ರಕಟಿಸಿದ್ದಾರೆ. ಜೂನಿಯರ್‌ ಎನ್‌ಟಿಆರ್‌ ಮತ್ತು ರಾಮ್‌ಚರಣ್‌ ನಾಯಕನಟರಾಗಿ ನಟಿಸಿರುವ ಈ ಚಿತ್ರದ ಬಜೆಟ್‌ ಬರೋಬ್ಬರಿ ₹ 400 ಕೋಟಿ!

ಚಿತ್ರಕತೆಯ ಒಂದೆಳೆಯನ್ನೂ ಇದುವರೆಗೂ ಪತ್ತೆಹಚ್ಚಲು ಟಾಲಿವುಡ್‌ನ ಗಾಸಿಪ್‌ವೀರರಿಗೂ ಸಾಧ್ಯವಾಗಿರಲಿಲ್ಲ. ಆದರೆ ಅದೂ ಈಗ ಗೊತ್ತಾಗಿದೆ. #ಆರ್‌ಆರ್‌ಆರ್‌ನಲ್ಲಿ ಅಲ್ಲುರು ಸೀತಾರಾಮ ರಾಜು ಮತ್ತು ಕೋಮರಂ ಭೀಮ ಎಂಬ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಕತೆ ಇದೆ. 1920ರಲ್ಲಿ ಅಂದರೆ ಬರೋಬ್ಬರಿ 100 ವರ್ಷಗಳ ಹಿಂದೆ ನಡೆದ ಕತೆ ಇದು ಎನ್ನಲಾಗಿದೆ. ಚಿತ್ರದ ನಾಯಕರು ಇವರೇ. 

ಇವರು ನಾಯಕಿಯರು...

ರಾಜಮೌಳಿ ಕ್ಯಾಂಪ್‌ಗೆ ಬರಲಿರುವ ಬಾಲಿವುಡ್‌ ಬೆಡಗಿ ಯಾರು ಎಂಬ ಊಹಾಪೋಹಕ್ಕೂ ಗುರುವಾರ ತೆರೆಬಿದ್ದಿದೆ. ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಪ್ರಶ್ನೆಗೆ ಉತ್ತರ ಕೊಟ್ಟಿರುವ ಅಲಿಯಾ ಭಟ್‌, ಇಷ್ಟರಲ್ಲೇ #ಆರ್‌ಆರ್‌ಆರ್‌ ಸೆಟ್‌ನಿಂದ ಅಪ್‌ಡೇಟ್‌ ಮಾಡುವುದಾಗಿ ಹೇಳಿದ್ದಾರೆ. ಅಜಯ್‌ ದೇವಗನ್‌ ಈಗಾಗಲೇ ಕಾಲ್‌ಶೀಟ್‌ ಕೊಟ್ಟಾಗಿದೆ. ಹಾಗಾಗಿ ಬಿ ಟೌನ್‌ನ ಈ ಇಬ್ಬರು #ಆರ್‌ಆರ್‌ಆರ್‌ನಲ್ಲಿ ನಟಿಸುವುದು ಖಚಿತವಾಗಿದೆ.

ಅದಕ್ಕಿಂತಲೂ ಕುತೂಹಲದ ಸಂಗತಿ ಎಂದರೆ, ಬ್ರಿಟಿಷ್‌ ನಟಿ ಡೈಸಿ ಎಡ್ಗರ್‌ ಜೋನ್ಸ್‌ ಜೂ ಎನ್‌ಟಿಆರ್‌ ಜೊತೆ ಡುಯೆಟ್‌ ಹಾಡಲಿದ್ದಾರೆ. ಕಳೆದ ವರ್ಷ ಈಕೆ ನಟಿಸಿದ್ದ ಹಾಲಿವುಡ್‌ನ ‘ಕೋಲ್ಡ್‌ ಫೀಟ್‌’ ಸಿನಿಮಾ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು.

#ಆರ್‌ಆರ್‌ಆರ್‌ ಚಿತ್ರೀಕರಣ ಮುಗಿಯುವವರೆಗೂ ಇಬ್ಬರೂ ನಾಯಕನಟರು ಬೇರೆ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ರಾಜಮೌಳಿ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ಅದ್ದೂರಿ ಚಿತ್ರವನ್ನಾದರೂ ಬೇಗನೆ ತೆರೆಗೆ ತನ್ನಿ ಎಂದು ಅವರ ಅಭಿಮಾನಿಗಳೂ, ಜೂನಿಯರ್‌ ಎನ್‌ಟಿಆರ್‌ ಮತ್ತು ರಾಮ್‌ಚರಣ್‌ ಅಭಿಮಾನಿಗಳೂ ಆಗ್ರಹಿಸುತ್ತಲೇ ಇದ್ದರು. ಕೊನೆಗೂ ಚಿತ್ರ ಬಿಡುಗಡೆಯ ಮುಹೂರ್ತ ಫಿಕ್ಸ್‌ ಆಗಿರುವುದು ನಿರಾಳ ಎನಿಸಿದೆ ಎಂದು ನೂರಾರು ಮಂದಿ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !