ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಥಿ ಆಯ್ತು ಮಾರ್ಲಾಮಿ ಬಂತು

Last Updated 13 ಜೂನ್ 2019, 19:30 IST
ಅಕ್ಷರ ಗಾತ್ರ

ಪಿತೃಪಕ್ಷದ ವೇಳೆ ಪೂರ್ವಿಕರನ್ನು ಕೆಲವು ಕಡೆಗಳಲ್ಲಿ ‘ಮಹಾಲಯ ಅಮಾವಾಸ್ಯೆ’ ಹೆಸರಿನಲ್ಲಿ, ಇನ್ನು ಕೆಲವು ಕಡೆಗಳಲ್ಲಿ ‘ಮಾರ್ಲಾಮಿ’ ಹೆಸರಿನಲ್ಲಿ ಹಬ್ಬ ಮಾಡಿಕೊಂಡು ಸ್ಮರಿಸುತ್ತಾರೆ. ಈಗ ‘ಮಾರ್ಲಾಮಿ’ ಹೆಸರಿನ ಸಿನಿಮಾ ಸೆಟ್ಟೇರಿದೆ. ಮಾರ್ಲಾಮಿ ಎನ್ನುವುದು ಮಂಡ್ಯ, ಚಾಮರಾಜನಗರ, ಮದ್ದೂರು, ಹಾಸನ, ಚನ್ನರಾಯಪಟ್ಟಣ ಇನ್ನಿತರ ಭಾಗಗಳಲ್ಲಿ ಹೆಚ್ಚಾಗಿ ದಸರಾ, ಗೌರಿ ಹಬ್ಬದಲ್ಲಿ ಸಂಭ್ರಮದಿಂದ ನಡೆಯುವ ಆಚರಣೆಯಾಗಿದೆ.

‘ಮಗನ್ ಮಾರಾದ್ರು ಮಾರ್ಲಾಮಿ ಮಾಡು’ ಎಂದು ಅಡಿಬರಹ ಇಟ್ಟುಕೊಂಡು ‘ಮಾರ್ಲಾಮಿ’ಯ ಕಥೆಯನ್ನು ಪ್ರೇಕ್ಷಕರಿಗೆ ಹೇಳಲು ಹೊರಟಿದ್ದಾರೆಕೊರಿಯೋಗ್ರಾಫರ್ ಆಗಿರುವ ಟಿ.ವಿನಯ್‍ಕುಮಾರ್.ಚಿತ್ರಕಥೆ ಬರೆದು, ಮೊದಲಬಾರಿಗೆ ನಿರ್ದೇಶನದ ಚುಕ್ಕಾಣಿಯನ್ನೂ ಅವರು ಹಿಡಿದಿದ್ದಾರೆ.ಹಳ್ಳಿಯ ಸಂಸ್ಕೃತಿಯನ್ನು ತಿಳಿಸುವ ಜತೆಗೆ ಹಾರರ್, ಥ್ರಿಲ್ಲರ್ ಸಬ್ಜೆಕ್ಟ್‌ ಕೂಡ ಅದಕ್ಕೆ ಪೋಣಿಸಿದ್ದಾರಂತೆ.

ಗಾಯನದ ಮೂಲಕ ಗಮನ ಸೆಳೆದು, ಸರಿಗಮಪ ಸೀಸನ್ 11ರ ವಿಜೇತರಾದಬಾಗಲಕೋಟೆಯ ಚನ್ನಪ್ಪಹುದ್ದಾರ್ ಈ ಸಿನಿಮಾದಲ್ಲಿನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಸಂಭಾಷಣೆಗಳನ್ನು ಹಾಡಿನ ಮೂಲಕವೇ ಹೇಳುವುದು ನಾಯಕನ ಕಾಯಕವಂತೆ.ನಾಯಕಿಯಾಗಿರುವ ವರ್ಷಿತಾವರ್ಮ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಭವಿಷ್ಯ ಹೇಳುತ್ತಿದ್ದ ದಿನೇಶ್‍ ಗುರೂಜಿ ನಾಯಕಿಯ ತಂದೆ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಹಾಸ್ಯನಟ ಮುತ್ತುರಾಜ್, ಮಜಾ ಟಾಕೀಸ್, ಮಜಾ ಭಾರತ ಕಲಾವಿದರೂ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಐದು ಹಾಡುಗಳಿಗೆ ಅರುಣ್‍ ಆಂಡ್ರು ಸಂಗೀತ ಸಂಯೋಜಿಸಿದ್ದಾರೆ. ಪ್ರತಿ ಹಬ್ಬಗಳಿಗೆ ವಿಶೇಷ ಹಾಡುಗಳು ಇರುವಂತೆ ಪಿತೃಪಕ್ಷ ಆಚರಣೆಗೆ ಯಾವುದೇ ಹಾಡುಗಳು ಇಲ್ಲದಿರುವ ಕೊರತೆ ನೀಗಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆಯಂತೆ. ಪಿತೃಪಕ್ಷ ಮಾಡುವವರಿಗಾಗಿಯೇ ಒಂದು ವಿಶೇಷ ಗೀತೆಯೊಂದನ್ನು ಸಿದ್ಧಪಡಿಸಲಾಗುತ್ತಿದೆ ಎಂದು ನಿರ್ದೇಶಕ ಟಿ.ವಿನಯ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಸಾಹಿತ್ಯ ರಚನೆವಿಜಯಲಕ್ಷೀ,ಛಾಯಾಗ್ರಹಣ ಎರ‍್ರಿಕ್‌ ವಿ.ಜೆ., ಸಂಕಲನ ಕಾರ್ತಿಕ್‍ ವೆಂಕಟೇಶ್, ಸಾಹಸ ಕೌರವ ವೆಂಕಟೇಶ್-ಶಂಕರ್ ಅವರದ್ದು. ಮಂಡ್ಯದ ವಿ.ಕುಮಾರ್, ಮಂಜು ಎಸ್.ಪಾಟೀಲ್, ಬಸವರಾಜು ಮತ್ತು ಯಶಸ್ವಿನಿ ಕೆ.ಗೌಡ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ನಡೆಯಿತು. ಬಿಗ್ ಬಾಸ್ ವಿಜೇತ ಪ್ರಥಮ್, ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT