ಸೋಮವಾರ, ನವೆಂಬರ್ 18, 2019
23 °C
ರೈಲ್ವೆ, ನಿಲ್ದಾಣ ಸ್ವಚ್ಛತೆಗೆ ಜಾಗೃತಿ ಅಭಿಯಾನ

ಮಾರಕ ಪ್ಲಾಸ್ಟಿಕ್; ಬಳಕೆಯೇ ಬೇಡ

Published:
Updated:
Prajavani

ಸ್ಟಿಕ್ ಬಳಕೆ ಜೀವಸಂಕುಲಕ್ಕೆ ಅತ್ಯಂತ ಮಾರಕ. ಅದರಲ್ಲಿನ ಪದಾರ್ಥಗಳನ್ನು ತಿನ್ನುವುದರಿಂದ ಕಾಯಿಲೆಗಳು ಬರುತ್ತವೆ. ಅತ್ಯಂತ ತೆಳುವಾದ (ಒಂದೇ ಬಾರಿ ಬಳಕೆ) ಪ್ಲಾಸ್ಟಿಕ್‌ ಬಳಸಿ ಎಸೆಯುವುದರಿಂದ ಅದು ಇನ್ನೂ ಅಪಾಯಕಾರಿ.

ಸಾರ್ವಜನಿಕರು ಹಾಗೂ ರೈಲ್ವೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ರೈಲ್ವೆ ಇಲಾಖೆ ‘ಸ್ವಚ್ಛತಾ ಪಾಕ್ಷಿಕ’ ಹಮ್ಮಿಕೊಂಡು ‘ಸ್ವಚ್ಛತಾ ಜಾಗೃತಿ ಮತ್ತು ಪ್ಲಾಸ್ಟಿಕ್‌ ನಿಷೇಧಿಸಿ’ ಬೀದಿ ನಾಟಕದ ಮೂಲಕ  ಜಾಗೃತಿ ಮೂಡಿಸುತ್ತಿದೆ.

ಪ್ರಾಣಿಗಳನ್ನು ನೋಡಲು ಕಾಡಿಗೆ ಹೋದಾಗ ಅಥವಾ ಅಕ್ರಮವಾಗಿ ಪ್ರವೇಶಿಸಿದಾಗ ಪ್ಲಾಸ್ಟಿಕ್‌ನಲ್ಲಿ ಕಟ್ಟಿಕೊಂಡು ಹೋದ ಆಹಾರವನ್ನು ಅರ್ಧಂಬರ್ಧ ತಿಂದು ಎಲ್ಲೆಂದರಲ್ಲಿ ಎಸೆದು ಹೋದರೆ, ಅವುಗಳನ್ನು ತಿಂದ ಜಿಂಕೆ, ಮಂಗಗಳು ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿ ಸಾಯುತ್ತವೆ. ಕಾಡೆಮ್ಮೆ, ಕಾಡುಕೋಣಗಳು ತಿಂದಾಗ ಹೊಟ್ಟೆ ಸೇರಿ ಕ್ಯಾನ್ಸರ್‌ ಸೇರಿದಂತೆ ಹಲವು ರೋಗಗಳಿಂದ ಮೃತಪಡುತ್ತವೆ. ಅವುಗಳನ್ನು ತಿನ್ನುವ ಹುಲಿ, ಚಿರತೆ, ಸಿಂಹಗಳು ಸಹ ಅಸುನೀಗುತ್ತವೆ. ಹೀಗೆ ಜೀವ ಸಂಕುಲ ನಮಗರಿವಿಲ್ಲದಂತೆ ಅವನತಿಯತ್ತ ಸಾಗುತ್ತಿವೆ.

ಈ ಹಂದರವುಳ್ಳ ಬೀದಿ ನಾಟಕವನ್ನು ರೈಲ್ವೆ ಸ್ಕೌಟ್ಸ್ ಮತ್ತು ಗೈಡ್ಸ್‌ ವತಿಯಿಂದ ಸೋಮವಾರ ರೈಲ್ವೆ ನಿಲ್ದಾಣದ ಎದುರು ಪ್ರದರ್ಶಿಸಲಾಯಿತು. ಇದಕ್ಕೂ ಮೊದಲು ರೈಲ್ವೆ ಅಧಿಕಾರಿಗಳ ಕ್ಲಬ್‌ನಿಂದ ನಿಲ್ದಾಣದವರೆಗೆ ಇಲಾಖೆಯ ನೌಕರರು ಪ್ರಭಾತಫೇರಿ ನಡೆಸಿದರು.

ಪ್ಲಾಸ್ಟಿಕ್ ಬಳಸಬೇಡಿ, ರೈಲ್ವೆ ಬೋಗಿ, ನಿಲ್ದಾಣ, ಸುರಂಗಮಾರ್ಗ ಸ್ವಚ್ಛತೆಗೆ ಸಹಕರಿಸಿ, ಡಬ್ಬಾದಲ್ಲಿ ಆಹಾರ ತಂದು ತಿನ್ನಿ, ಪ್ಲಾಸ್ಟಿಕ್‌ ಬೇಡ, ತೆಳುವಾದ ಪ್ಲಾಸ್ಟಿಕ್‌ ಬಳಸಬೇಡಿ, ರೈಲ್ವೆ ಮೇಲೆ ಏನೂ ಕೆತ್ತಬೇಡಿ, ಬರೆಯಬೇಡಿ, ಬೋಗಿಯಲ್ಲಿನ ಬಯೋ ಟಾಯ್ಲೆಟ್‌ನಲ್ಲಿ ಅನುಪಯುಕ್ತ ವಸ್ತು ಹಾಕಬೇಡಿ. ರೈಲು ನಿಂತಾಗ ಶೌಚಾಲಯ ಬಳಸಬೇಡಿ... ಹೀಗೆ ಸ್ವಚ್ಛತೆಯ ಬಗ್ಗೆ ಹದಿನೈದು ದಿನ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ರೈಲ್ವೆ ಇಲಾಖೆ ಮುಂದಾಗಿದೆ.

ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಜನ್ಮದಿನವಾದ ಸೆ. 17ರಿಂದ ಆರಂಭಗೊಂಡು ಅ. 2ರವರೆಗೆ ನಿತ್ಯ ಜಾಗೃತಿ ಮೂಡಿಸಲಿದೆ. ಮಂಗಳವಾರ ರೈಲ್ವೆ ಹಳಿ, ನಿಲ್ದಾಣ, ಬೋಗಿಗಳನ್ನು ಸ್ವಚ್ಛಗೊಳಿಸಿ ಅಭಿಯಾನ ಮುಂದುವರಿಸಲಿದೆ. ರೈಲ್ವೆ ನಿಲ್ದಾಣದ ಸುತ್ತಮುತ್ತ ಶ್ರಮದಾನ ಮೂಲಕ ಸ್ವಚ್ಛಗೊಳಿಲಾಯಿತು. ಪ್ಲಾಸ್ಟಿಕ್‌ ಮರುಬಳಸದಂತೆ ನಾಶಮಾಡಲು ನಿಲ್ದಾಣದಲ್ಲಿ ಯಂತ್ರ ಇಡಲಾಗಿದೆ.

130 ನಿಲ್ದಾಣಗಳಲ್ಲಿ ಜಾಗೃತಿ
ನೈರುತ್ಯ ರೈಲ್ವೆಯ ಮೈಸೂರು ವಿಭಾಗದ 130 ನಿಲ್ದಾಣಗಳಲ್ಲಿ ಪ್ರಯಾಣಿಕರಲ್ಲಿ ಸ್ವಚ್ಛತೆ ಮತ್ತು ಪ್ಲಾಸ್ಟಿಕ್‌ ಬಳಸಬೇಡಿ ಎಂದು ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅವು 15 ದಿನ ನಿರಂತರವಾಗಿ ನಿಲ್ದಾಣಗಳಲ್ಲಿ ನಡೆಯಲಿದೆ.

ನಿಲ್ದಾಣದ ಆವರಣದಲ್ಲಿ ಎಲ್ಲೆಂದರಲ್ಲಿ ಉಗುಳಬೇಡಿ,  ಹಾಗೇನಾದರೂ ತಪ್ಪಿಯೂ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ ಹಾಗೂ ದಂಡವನ್ನು ವಿಧಿಸಲಾಗುವುದು. ಈ ಬಗ್ಗೆ ತಿಳಿವಳಿಕೆ ನೀಡಲಾಗುವುದು.

ಟ್ರ್ಯಾಕ್‌ಸೈಡ್ ಗ್ರೀನ್ ನರ್ಸರಿ ಉದ್ಘಾಟಿಸಿ, ಕಂಬಿಗಳ ಉದ್ದಕ್ಕೂ ಹಸಿರು ಬೆಳೆಸಲು ಸಸಿ ನೆಡಲು ಯೋಜನೆ ರೂಪಿಸಲಾಗಿದೆ.

ಪ್ರತಿಕ್ರಿಯಿಸಿ (+)