ಶುಕ್ರವಾರ, ಏಪ್ರಿಲ್ 10, 2020
19 °C

700ನೇ ಬಾರಿ ‘ಮುಖ್ಯಮಂತ್ರಿ’ ದರ್ಬಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಚಂದ್ರು ಅವರಿಗೆ ‘ಮುಖ್ಯಮಂತ್ರಿ’ ಎಂಬ ಹೆಸರು ತಂದು ಕೊಟ್ಟ ‘ಮುಖ್ಯಮಂತ್ರಿ’ ನಾಟಕಕ್ಕೆ ಈಗ 700ರ ಹೊಸ್ತಿಲು. ಇದೇ 31ರಿಂದ ಜನವರಿ 5ರವರೆಗೆ ಬೆಂಗಳೂರಿನಲ್ಲಿ ಆರು ದಿನಗಳ ಅಮೃತ ರಂಗ ಹಬ್ಬದಲ್ಲಿ ಈ ನಾಟಕ ಪ್ರದರ್ಶನಗೊಳ್ಳುತ್ತಿದೆ..

ರಂಗಭೂಮಿ, ಕಿರುತೆರೆ, ಸಿನಿಮಾ, ರಾಜಕಾರಣ ಹೀಗೆ ಹಲವು ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು ನಟ ‘ಮುಖ್ಯಮಂತ್ರಿ’ ಚಂದ್ರು. ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಚೇತರಿಸಿಕೊಂಡು, ಮತ್ತೆ ನಟನಾ ಕ್ಷೇತ್ರಕ್ಕೆ ಮರಳಿದ್ದಾರೆ. ಈ ವರ್ಷಾಂತ್ಯ ಮತ್ತು ಹೊಸ ವರ್ಷಾರಂಭದಲ್ಲಿ ನಡೆಯುವ ಮೂರು ಪ್ರದರ್ಶನಗಳಲ್ಲಿ ‘ಮುಖ್ಯಮಂತ್ರಿ’ಯಾಗಿ ಚಂದ್ರು ರಂಗರಸಿಕರಿಗೂ ಕಚಗುಳಿ ಇಡಲಿದ್ದಾರೆ.

ಈ ನಾಟಕವನ್ನು ಹಿಂದಿ ಭಾಷೆಯಲ್ಲಿ ಹೊರತುಪಡಿಸಿ ಒಂದೇ ರಂಗ ತಂಡ 40 ವರ್ಷಗಳಿಂದ ಪ್ರದರ್ಶನ ಮಾಡಿರುವುದು ಮತ್ತು ಮುಖ್ಯಮಂತ್ರಿ ಪಾತ್ರದಲ್ಲಿ ಒಬ್ಬರೇ ಕಲಾವಿದ ನಾಲ್ಕು ದಕಶಗಳಿಂದ ಅಭಿನಯಿಸುತ್ತಿರುವುದು ಒಂದು ದಾಖಲೆಯಾಗಿದ್ದು, ಗಿನ್ನಿಸ್‌ ದಾಖಲೆಗೆ ಸೇರುವ ನಿರೀಕ್ಷೆ ಇದೆ. 80ರ ದಶಕದಿಂದ ಈಚೆಗೆ ರಾಜ್ಯದ ಎಲ್ಲ ಮುಖ್ಯಮಂತ್ರಿಗಳು ಈ ನಾಟಕ ನೋಡಿ ನಟನೆಯನ್ನು ಪ್ರಶಂಸಿಸಿದ್ದಾರೆ ಎಂದು ‘ಮುಖ್ಯಮಂತ್ರಿ’ ಚಂದ್ರು ಸುದ್ದಿಗೋಷ್ಠಿಯಲ್ಲಿ ಮಾತಿಗಾರಂಭಿಸಿದರು 

ಈ ನಾಟಕ ಆರಂಭವಾದಾಗಿನಿಂದ ಈವರೆಗೆ ಕನಿಷ್ಠ ಮೂರು ನಾಲ್ಕು ತಲೆಮಾರಿನವರು ಈ ನಾಟಕದಲ್ಲಿನ ಉಳಿದ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಪಾತ್ರದಲ್ಲಿ ಚಂದ್ರು ಒಬ್ಬರೇ ಅಭಿನಯಿಸಿಕೊಂಡು ಬಂದಿರುವುದು ವಿಶೇಷ. ದೇಶದಾದ್ಯಂತ ಮತ್ತು ವಿದೇಶಗಳಲ್ಲೂ ಈ ನಾಟಕವನ್ನು ಕಲಾ ಗಂಗೋತ್ರಿ ರಂಗ ತಂಡ ಪ್ರದರ್ಶಿಸಿದೆ. ಈಗ ಇಂಗ್ಲೆಂಡಿನಲ್ಲೂ ನಾಲ್ಕೈದು ಪ್ರದರ್ಶನ ನೀಡಲು ರಂಗ ತಂಡ ಯೋಜಿಸುತ್ತಿದೆ. 

ವಯಸ್ಸು, ಅನಾರೋಗ್ಯ ಲೆಕ್ಕಿಸದೇ ರಾಜಕಾರಣ, ಕನ್ನಡದ ಕೆಲಸಗಳ ಜತೆಗೆ ನಟನೆಯಲ್ಲೇ ತೃಪ್ತಿ ಕಾಣುತ್ತಿರುವ ಚಂದ್ರು ಅವರು ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಆರು ವರ್ಷಗಳಿಂದ ಮತ್ತು ‘ಸುಬ್ಬುಲಕ್ಷ್ಮಿ ಸಂಸಾರ’ ಧಾರಾವಾಹಿಯಲ್ಲಿ ಮೂರು ವರ್ಷಗಳಿಂದ ನಟಿಸುತ್ತಿದ್ದಾರೆ. ಎರಡು ವರ್ಷಗಳಿಂದ ಸಿನಿಮಾ ರಂಗದಿಂದ ಸ್ವಲ್ಪ ದೂರವಿದ್ದ ಅವರು, ಈಗ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅವರ ಕೈಯಲ್ಲಿ ಸದ್ಯ ಆರು ಹೊಸ ಸಿನಿಮಾಗಳಿವೆ. 

‘ಸತ್ಯಂ’, ‘ಲಾ’, ‘ಕೆಇಬಿ ಕೆಂಪಣ್ಣ’, ‘ಮತ್ತೆ ಮತ್ತೆ’ ಹಾಗೂ ‘ಮುಗಿದ ಅಧ್ಯಾಯ’  ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಜತೆಗೆ ಟಿ.ವಿ ರಿಯಾಲಿಟಿ ಶೋಗಳಲ್ಲೂ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದು, ಉದಯ ಟಿ.ವಿಯಲ್ಲಿ ಸದ್ಯದಲ್ಲೆ ಪ್ರಸಾರವಾಗಲಿರುವ ‘ಕಾಮಿಡಿ ಹರಟೆ’ ಕಾರ್ಯಕ್ರಮದಲ್ಲಿ ‘ಮುಖ್ಯಮಂತ್ರಿ’ ಚಂದ್ರು ಅವರು ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.

ನಾಟಕ ಎಲ್ಲಿ? ಯಾವಾಗ ಪ್ರದರ್ಶನ?

ಇದೇ 31ರಂದು ಸಂಜೆ 7.30ಕ್ಕೆ ಜೆ.ಪಿ. ನಗರದ ರಂಗಶಂಕರದಲ್ಲಿ ‘ಮುಖ್ಯಮಂತ್ರಿ’ ನಾಟಕದ 698ನೇ ಪ್ರದರ್ಶನ, ಜನವರಿ 1ರಂದು ಇದೇ ರಂಗಮಂದಿರದಲ್ಲಿ 699ನೇ ಪ್ರದರ್ಶನ ಹಾಗೂ 700ನೇ ಪ್ರದರ್ಶನವನ್ನು ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಜ.4ರಂದು ಸಂಜೆ 5.30ಕ್ಕೆ ಆಯೋಜಿಸಿದೆ. 700ನೇ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

ಜ.2ರಂದು ಬಸವನಗುಡಿ ನ್ಯಾಷನಲ್‌ ಹೈಸ್ಕೂಲ್‌ನಲ್ಲಿ ಮಧ್ಯಾಹ್ನ 3.30ಕ್ಕೆ ಮೈಮ್‌– ಮೂಕಾಭಿನಯ ಪ್ರದರ್ಶನ ‘ಮೂಕಿಟಾಕಿ’ಯನ್ನು ಆಯೋಜಿಸಿದೆ. ಜ.3ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 5.30ಕ್ಕೆ ‘ಮೈಸೂರು ಮಲ್ಲಿಗೆ’ ನಾಟಕ ಪ್ರದರ್ಶನ ಮತ್ತು ಅದೇ ದಿನ 75ರ ಹರೆಯದ ಕೆ.ಆರ್‌.ಶ್ರೀನಿವಾಸ್‌ ಮೇಷ್ಟ್ರು ಅವರಿಗೆ ಸನ್ಮಾನವೂ ನಡೆಯಲಿದೆ.

ಜ.5ರಂದು ಎನ್‌.ಆರ್‌. ಕಾಲೋನಿಯ ಸಿ.ಅಶ್ವತ್ಥ್‌ ಕಲಾ ಭವನದಲ್ಲಿ ಬೆಳಿಗ್ಗೆ 11ರಿಂದ ‘ಹಸಿರು ರಿಬ್ಬನ್‌’ ಚಲನಚಿತ್ರ ಪ್ರದರ್ಶನ, ಊರ್ಮಿಳ– ಏಕವ್ಯಕ್ತಿ ರಂಗಪ್ರದರ್ಶನ– ಎನ್‌. ಮಂಗಳ, ಕವಿ ಡಾ.ಎಚ್‌.ಎಸ್‌.ವಿ ಅವರಿಗೆ ಸನ್ಮಾನ ಹಾಗೂ ‘ಮುದಿದೊರೆ ಮತ್ತು ಮೂವರು ಮಕ್ಕಳು’ ನಾಟಕ ಪ್ರದರ್ಶನವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)