ಚಾರ್ಲಿ ಸಿನಿಮಾಕ್ಕೆ ಸಂಗೀತಾ

7

ಚಾರ್ಲಿ ಸಿನಿಮಾಕ್ಕೆ ಸಂಗೀತಾ

Published:
Updated:

‘ಕಿರಿಕ್‌ ಪಾರ್ಟಿ’ ಚಿತ್ರದ ಕ್ಯೂಟ್‌ ಹೀರೊ, ‘ಉಳಿದವರು ಕಂಡಂತೆ’ ಚಿತ್ರದ ರಫ್‌ ಹೀರೊ ರಕ್ಷಿತ್‌ ಶೆಟ್ಟಿ ಅಭಿನಯದ ‘777 ಚಾರ್ಲಿ’ ಚಿತ್ರದ ನಾಯಕಿ ಯಾರು ಎಂಬ ಕುತೂಹಲ ಕೊನೆಯಾಗಿದೆ! ‘ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ನಟಿಸಿರುವ, ‘ಎ+’ ಚಿತ್ರದ ಮೂಲಕ ‘ಚಂದನವನ’ ಪ್ರವೇಶಿಸಿರುವ ಸಂಗೀತಾ ಈ ಚಿತ್ರದ ನಾಯಕಿ.

ಎರಡು ಸಾವಿರಕ್ಕೂ ಹೆಚ್ಚು ಯುವತಿಯರ ಜೊತೆ ಈ ಚಿತ್ರದ ಆಡಿಷನ್‌ ಸಾಲಿನಲ್ಲಿ ಕುಳಿತಿದ್ದ ಸಂಗೀತಾ ಅವರು ಈಗ ರಕ್ಷಿತ್ ಜೊತೆ ಹೆಜ್ಜೆ ಹಾಕಲಿದ್ದಾರೆ. ‘ರಕ್ಷಿತ್ ಜೊತೆ ನಾನು ಅಭಿನಯಿಸುವ ಮೊದಲ ಸಿನಿಮಾ ಇದು. ವಿಭಿನ್ನ ಪಾತ್ರವೊಂದು ನನಗೆ ಸಿಕ್ಕಿದೆ. ನಾಯಕಿಯ ವ್ಯಕ್ತಿತ್ವವನ್ನು ಇದುವರೆಗೆ ತೋರಿಸಿರದಂತಹ ರೀತಿಯಲ್ಲಿ ಇದರಲ್ಲಿ ಚಿತ್ರೀಕರಿಸಲಾಗುತ್ತದೆ. ಆದರೆ, ಪಾತ್ರದ ವೈಶಿಷ್ಟ್ಯ ಏನು ಎಂಬುದನ್ನು ಈಗಲೇ ಹೇಳಲು ಆಗದು’ ಎನ್ನುತ್ತಾರೆ ಸಂಗೀತಾ.

ರಕ್ಷಿತ್ ಶೆಟ್ಟಿ ಅವರ ‘ಪರಂವಹ ಸ್ಟುಡಿಯೋಸ್‌’ ಈ ಚಿತ್ರವನ್ನು ನಿರ್ಮಿಸುತ್ತಿದೆ. ಕೆ. ಕಿರಣ್‌ ರಾಜ್ ಅವರು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ‘ಇದುವರೆಗಿನ ಲೀಡ್‌ ಹಿರೋಯಿನ್ ಪಾತ್ರದ ತರಹ ಇರಲ್ಲ ನನಗೆ ಸಿಕ್ಕಿರುವ ಪಾತ್ರ. ಇದು ಹೊಸ ಟ್ರೆಂಡ್ ಆರಂಭಿಸುವಂಥದ್ದು’ ಎಂದರು ಸಂಗೀತಾ. ಅವರ ಪಾತ್ರವು ಹಲವು ಗುಣಗಳ ಮಿಶ್ರಣ. ವೀಕ್ಷಕರ ಪಾಲಿಗೆ ಒಂದಿಷ್ಟು ಪ್ರಶ್ನೆಗಳನ್ನು ಹುಟ್ಟಿಸುವ ಸಾಧ್ಯತೆಯೂ ಇದೆಯಂತೆ.

‘777 ಚಾರ್ಲಿ’ ಚಿತ್ರದ ನಾಯಕ ಏಕತಾನತೆಯ ಸುಳಿಯಲ್ಲಿ ಸಿಲುಕಿರುತ್ತಾನೆ. ಏಕಾಂಗಿ ಜೀವನ ಸಾಗಿಸುತ್ತಿರುತ್ತಾನೆ. ಏಕಾಂಗಿತನ ಕೊಡುವ ಸುಖದಲ್ಲಿಯೇ ದಿನ ಕಳೆಯುತ್ತಿರುತ್ತಾನೆ. ಹೀಗಿರುವ ನಾಯಕನ ಜೀವನದಲ್ಲಿ ‘ಚಾರ್ಲಿ’ ಎಂಬ ಹೆಸರಿನ ತುಂಟ ನಾಯಿಯೊಂದರ ಪ್ರವೇಶ ಆಗುತ್ತದೆ. ಆ ನಾಯಿಯಲ್ಲಿರುವ ಗುಣ ಹಾಗೂ ನಾಯಕನ ಗುಣ ಸಂಪೂರ್ಣ ತದ್ವಿರುದ್ಧ. ಆದರೆ ಇದೇ ನಾಯಿ, ನಾಯಕನ ಜೀವನಕ್ಕೊಂದು ಹೊಸ ನೋಟವನ್ನು ಕೊಡುತ್ತದೆ. ಇದು ಈ ಸಿನಿಮಾದ ಕಥೆಯ ಎಳೆ.

‘ಕಥೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಕೊಡುವಿರಾ’ ಎಂದು ಕೇಳಿದಾಗ, ಸಂಗೀತಾ ಅದಕ್ಕೆ ಒಪ್ಪಲಿಲ್ಲ. ‘ನಾನು ಸಿನಿಮಾ ಕುರಿತಾಗಿ ರಕ್ಷಿತ್ ಜೊತೆ ಮಾತನಾಡಿದೆ. ಅವರು ಬಹಳ ಸರಳ ವ್ಯಕ್ತಿ’ ಎಂದು ಹೇಳಿ ಮಾತು ತೇಲಿಸಿದರು!

ನೀರಿನಂತಹ ಗುಣ: ಸಂಗೀತಾ ಅವರದ್ದು ನೀರಿಗೆ ಇರುವಂತಹ ಗುಣ. ಹಾಗಂತ ಅವರೇ ಹೇಳಿಕೊಂಡರು. ‘ನಾನು ಯಾವ ಪಾತ್ರ ಬಂದರೂ ಸ್ವೀಕರಿಸುತ್ತೇನೆ. ಆ ವಿಷಯದಲ್ಲಿ ನಾನು ಬಹಳ ಮುಕ್ತವಾಗಿದ್ದೇನೆ. ಕಲಾವಿದೆ ನೀರಿನಂತೆ ಇರಬೇಕು. ಯಾವ ರೂಪವನ್ನು ಬೇಕಿದ್ದರೂ ತಾಳಬೇಕು. ನಾನು ಖಂಡಿತವಾಗಿಯೂ ನಿರ್ದೇಶಕರ ನೆಚ್ಚಿನ ಕಲಾವಿದೆ ಆಗಿರುವೆ. ನನ್ನ ಅನಿಸಿಕೆಗಳನ್ನು, ನನಗೆ ಸರಿ ಅನಿಸಿದ್ದನ್ನು ನಿರ್ದೇಶಕರ ಮೇಲೆ ಹೇರಲು ಹೋಗುವುದಿಲ್ಲ’ ಎಂದರು ಅವರು. ಅಂದಹಾಗೆ, ನಿರ್ದೇಶಕರು ಇವರಿಗೆ ಸಿನಿಮಾ ಕಥೆಯ ಒಂದು ಎಳೆಯನ್ನು ಮಾತ್ರ ಹೇಳಿದ್ದಾರಂತೆ.

ಈ ಚಿತ್ರಕ್ಕೆ ಪುಷ್ಕರ್ ಫಿಲಂಸ್ ಕೂಡ ಹಣ ಹೂಡಿದೆ. ‘ನಾನು ಹರಹರ ಮಹಾದೇವ ಧಾರಾವಾಹಿ ಚಿತ್ರೀಕರಣ ಮುಗಿಸಿದ ನಂತರ ಒಮ್ಮೆ ಫೇಸ್‌ಬುಕ್‌ ನೋಡುತ್ತಿದ್ದಾಗ 777 ಚಾರ್ಲಿ ಚಿತ್ರದ ಪೋಸ್ಟರ್‌ ಗಮನಿಸಿದೆ. ಇದೊಂದು ಹ್ಯಾಪನಿಂಗ್ ಸಿನಿಮಾ ಆಗಿರುತ್ತದೆ ಎಂದು ನನ್ನ ಮನಸ್ಸು ಹೇಳಿತು. ಆಡಿಷನ್‌ಗೆ ಹಾಜರಾದೆ. ಈ ಸಿನಿಮಾಕ್ಕೆ ನಾನು ಆಯ್ಕೆಯಾಗಿದ್ದೇನೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಬರುವವರೆಗೂ ಬೇರೆ ಯಾವ ಸಿನಿಮಾವನ್ನೂ ಒಪ್ಪಿಕೊಳ್ಳಬಾರದು ಎಂದು ತೀರ್ಮಾನಿಸಿದ್ದೆ’ ಎಂದರು ಸಂಗೀತಾ.

‘ಈ ಚಿತ್ರದ ನಾಯಕಿಯಾಗಿ ನಾನು ಆಡಿಷನ್ ಮೂಲಕ ಆಯ್ಕೆಯಾಗಿದ್ದು ನನ್ನ ಪಾಲಿಗೆ ಮಿಸ್‌ ಇಂಡಿಯಾ ಸ್ಪರ್ಧೆ ಗೆದ್ದಂತೆ. ಹರಹರ ಮಹಾದೇವ ಧಾರಾವಾಹಿಯ ನಂತರ ನನಗೆ ಎಷ್ಟೋ ಸಿನಿಮಾಗಳಲ್ಲಿ ನಟಿಸುವಂತೆ ಕರೆ ಬಂದಿದ್ದರೂ, ಅವ್ಯಾವುದನ್ನೂ ಒಪ್ಪಿಕೊಂಡಿರಲಿಲ್ಲ. ಆದರೆ, ಈ ಕಥೆಯಲ್ಲಿ ಒಂದು ಗಟ್ಟಿತನ ಇದೆ. ಹಾಗಾಗಿ ಇದರಲ್ಲಿ ಅಭಿನಯಿಸುವ ತೀರ್ಮಾನ ಕೈಗೊಂಡೆ’ ಎಂದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !