ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲುವಂಗಿ ಕನಸಿನ ರಂಗಚಾರಣ

Last Updated 23 ಜನವರಿ 2021, 19:30 IST
ಅಕ್ಷರ ಗಾತ್ರ

ಸಕಲೇಶಪುರದ ಎಮ್ಮೆಗುಂಡಿಯಲ್ಲಿ ಇತ್ತೀಚೆಗೆ ನಡೆದಿದ್ದು ಚಾರಣ–ನಾಟಕ–ಕಾಡೂಟದ ಅಪರೂಪದ ಸಂಗಮ. ಗುಡ್ಡದ ಮೇಲೆ, ನದಿಯ ಒಳಗೆ, ಹಕ್ಕಿಗಳ ಹಾಡಿನ ನಡುವೆ ನಡೆದ ಆ ನಾಟಕ ಅಗಸ್ತೋ ಬೋಲ್‌ ಅವರ ‘ಅದೃಶ್ಯ ರಂಗಭೂಮಿ’ ಪರಿಕಲ್ಪನೆಯನ್ನು ನೆನಪಿಸುತ್ತಿತ್ತು. ಪ್ರಕೃತಿಯ ಸುಖಾನುಭವವನ್ನು ಪಡೆದು ಮೈಮರೆತವರಿಗೆ ಮಲೆನಾಡಿಗರ ನೈಜ ಬದುಕಿನ ದರ್ಶನವನ್ನೂ ಈ ರಂಗಚಾರಣ ಮಾಡಿಸಿತು...

***

ಕಾಡಿನ ನೆಲದಲ್ಲಿ ಹೇಗೆ ಬೀಜವೊಂದು ತಾನಾಗೇ ಮೊಳಕೆಯೊಡೆದು ಹೆಮ್ಮರವಾಗಿ ಸಹಜವಾಗಿ ಬೆಳೆಯುವುದೋ ಅಷ್ಟೇ ಸಹಜವಾಗಿ ‘ಎಮ್ಮೆಗುಂಡಿಯಲ್ ಒಂದು ದಿನ’ ಎಂಬ ಅಪರೂಪದ ಕಾರ್ಯಕ್ರಮವೊಂದು ಹಾಸನದ ಸಕಲೇಶಪುರದ ದಟ್ಟಕಾಡಿನ ನಡುವೆ ಜರುಗಿಹೋದ ಸದ್ದನ್ನ ನಿಮಗೆ ಕೇಳಿಸಬೇಕಿದೆ.

ಪುಟಾಣಿ ಕಂದಮ್ಮಗಳಿಂದ ಹಿಡಿದು ಕೋಲೂರಿ ಹೆಜ್ಜೆಹಾಕಿದ ವಯಸ್ಕರವರೆಗೂ, ವಿಶೇಷವಾಗಿ ಮಹಿಳೆಯರೂ ಒಗ್ಗೂಡಿ ಆನಂದವನ್ನು ಹಂಚಿಕೊಂಡ ಈ ಕಾರ್ಯಕ್ರಮ ಚಾರಣ-ನಾಟಕ-ಕಾಡೂಟದ ಸಂಗಮವಾಗಿತ್ತು. ಗ್ಲೋಕಲ್‌ ಪರಿಕಲ್ಪನೆಯಂತೆ ಗ್ಲೋಬಲ್‌ ಮನಸಿನವರಿಗೆ ಚಾರಣವನ್ನೂ, ಅಲ್ಲಿನ ಲೋಕಲ್‌ ಜನರಿಗೆ ನಾಟಕವನ್ನೂ ನೀಡಿದ ರಂಗಚಾರಣ ಅದಾಗಿತ್ತು.

ಇಳಿಜಾರು, ಪ್ರಪಾತ, ನಿಶ್ಶಬ್ದ, ಹಕ್ಕಿಗಳ ಧ್ವನಿಯ ನಡುವೆ ಕಡಿದಾದ ಗುಡ್ಡ ಹತ್ತಿ ಇಳಿದು ಹೊಳೆಯೊಳಗೇ ನಡೆಯುತ್ತಾ ಸಾಗಿದ ಚಾರಣದ ಹಾದಿಯ ಸೊಗಸು ಮಾತಿನಲ್ಲಿ ಹೇಳಲಾಗದ್ದು.

ನಿಲುವಂಗಿ ಕನಸಿನ ನಾಟಕದ ನೋಟ
ನಿಲುವಂಗಿ ಕನಸಿನ ನಾಟಕದ ನೋಟ

ನಮ್ಮ ಅನುಕೂಲಕ್ಕೆ ತಕ್ಕಂತೆ ಅರೇಂಜ್ ಆದ ಆಸನಗಳಲ್ಲಿ ನಾಲ್ಕು ಗೋಡೆಗಳ ಸುರಕ್ಷಿತ ಕೊಠಡಿಯೊಳಗೆ ಕುಳಿತು, ಸುಸಜ್ಜಿತವಾದ ರಂಗಸಜ್ಜಿಕೆಯ ಮೇಲೆ, ಬೆಳಕು, ಧ್ವನಿ, ಅಲಂಕಾರ, ಆಭರಣ ಇತ್ಯಾದಿ ಅತ್ಯಾಧುನಿಕ ಸೌಲಭ್ಯಗಳ ಸಹಾಯದೊಂದಿಗೆ ನಡೆವ ನಾಟಕದ ಸಿದ್ಧ ಮಾದರಿಯಿಂದ ದೂರದ ಬೇರೊಂದೇ ಲೋಕಕ್ಕೆ ಕರೆದೊಯ್ದ ರಂಗಪ್ರಯೋಗ ಇದಾಗಿತ್ತು. ಕಾರೆಕಾಯ್ ಹಡ್ಲು ಬಳಿಯ ಎಮ್ಮೆಗುಂಡಿಯಲ್ಲಿ ಈ ರಂಗಚಾರಣ ನಡೆಯಿತು.

ಇದೇ ನೆಲಮೂಲದ ಪ್ರಮುಖ ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಅವರ ಕಾದಂಬರಿ ‘ನಿಲುವಂಗಿಯ ಕನಸನ್ನು’ ನಾಟಕ ರೂಪವಾಗಿಸಿ ‘ರಂಗಹೃದಯ’ ತಂಡದವರು ವಿಶಾಲ ಬಯಲಿನಲ್ಲಿ ಪ್ರದರ್ಶಿಸಿದರು. ನೆರೆದಿದ್ದ ಜನಕ್ಕೆ ನೈತಿಕ ಪ್ರಜ್ಞೆ ಮತ್ತು ಸಾಮಾಜಿಕ ಶಿಕ್ಷಣ ಎರಡನ್ನೂ ಮನರಂಜನೆಯ ಮಾಧ್ಯಮದಲ್ಲಿ ನೀಡಿದ ಈ ನಾಟಕದಲ್ಲಿ ಸಿಕ್ಕ ‘ಪ್ರೊಸಿನಿಯಂ’ ಬಹಳ ಭಿನ್ನವಾಗಿತ್ತು ಮತ್ತದು ದೂರದ ಬ್ರೆಜಿಲ್ ದೇಶದ ಅಗಸ್ತೋ ಬೋಲ್ ಎಂಬ ನಿರ್ದೇಶಕರ ‘ಅದೃಶ್ಯ ರಂಗಭೂಮಿ’ ಎಂಬ ಕಲ್ಪನೆಯನ್ನು ನೆನಪಿಸುತ್ತಿತ್ತು.

ಈ ನಾಟಕ ಈಗಾಗಲೇ ಮೂರು ಕಡೆಗಳಲ್ಲಿ ಪ್ರಯೋಗಗಳನ್ನು ಕಂಡಿದೆ. ಎಷ್ಟು ಪ್ರಯೋಗಗಳಾದರೂ ನಿತ್ಯ ನೂತನ. ಕುಟುಂಬ ಮತ್ತು ಬದುಕನ್ನು ಕಟ್ಟಿಕೊಳ್ಳುವಲ್ಲಿ ಮಹಿಳೆಯರ ಪಾತ್ರ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಪುರುಷನ ಅಸಹಾಯಕತೆ, ಬಲಿಷ್ಠರು ಬಡವನ ಬದುಕನ್ನು ಆಟದ ದಾಳವನ್ನಾಗಿ ಬಳಸಿಕೊಳ್ಳುವ ದುಷ್ಟತನವನ್ನು ಸಮರ್ಥವಾಗಿ ಹಿಡಿದಿಟ್ಟಿದೆ. ಬಡವನ ಬದುಕಿನಲ್ಲಿ ಕ್ಷಣಕ್ಷಣಕ್ಕೂ ಕಾಡುವ ಅಸಹಾಯಕತೆಯ ಕ್ರೂರತೆ ನಾಟಕವನ್ನು ಗಂಭೀರತೆಯತ್ತ ಕೊಂಡೊಯ್ಯುತ್ತದೆ. ನವಿರು ಹಾಸ್ಯ ಕಚಗುಳಿ ಇಡುತ್ತದೆ. ಇವೆರಡೂ ಭಾವಗಳ ಆಚೆಗೆ ಚಿಂತನೆಗೂ ಹಚ್ಚುತ್ತದೆ.

ನಿಲುವಂಗಿ ಕನಸಿನ ನಾಟಕದ ನೋಟ
ನಿಲುವಂಗಿ ಕನಸಿನ ನಾಟಕದ ನೋಟ

ಸೌಂದರ್ಯವೆನ್ನ ಹರಿ
ಸೌಂದರ್ಯವೆನ್ನ ಹರ
ಸೌಂದರ್ಯವೆನ್ನ ಪರಮಬ್ರಹ್ಮ
ಸೌಂದರ್ಯವೈಶ್ವರ್ಯ ಸೌಂದರ್ಯವೌದಾರ್ಯ

ಹೀಗೆ ಲೋಕದ ಯಾವುದೇ ಸೌಂದರ್ಯದ ಬಗ್ಗೆ ಅಲೌಕಿಕ ಮಾತುಗಳಾಡುವ, ನಿಸರ್ಗದ ರಸಾನುಭೂತಿಯನ್ನು ಉಣಬಡಿಸುವ ಕವಿಮಹಾಶಯರು ಅದೇ ನಿಸರ್ಗದ ಒಡಲಲ್ಲಿ ಬದುಕುವ ನರಕಸದೃಶ ಜೀವಗಳ ಬವಣೆಯನ್ನು ಹೇಳುವುದಿಲ್ಲ. ಅಂತಹ ಸುಂದರ ನಿಸರ್ಗದ ಮಕ್ಕಳ ಕತೆ, ವ್ಯಥೆಯೇ ‘ನಿಲುವಂಗಿ ಕನಸು’.

ಮಲೆನಾಡ ಮಕ್ಕಳ ಬದುಕಿನ ಚಿತ್ರಣ ‘ನಿಲುವಂಗಿ ಕನಸು’.

ಗೊಬ್ಬರ, ಬೆಳೆಬೀಜ ತರಲು ಊರ ಶ್ರೀಮಂತನ ಬಳಿ ಕೈಸಾಲ ಮಾಡಿ ಹೇಗೋ ಬದುಕು ದೂಡುತ್ತಿದ್ದವರ ಜಮೀನು ಸರ್ಕಾರದ ಯಾವುದೋ ಯೋಜನೆಗೆ ಬಲಿಯಾಗುತ್ತದೆ. ಮಲೆನಾಡಿನ ರೈತ ಹೀಗೆ ಏಟಿನ ಮೇಲೆ ಏಟು ತಿಂದು ಸುಖವಾದ ಬದುಕೂ ಕಟ್ಟಿಕೊಳ್ಳಲಾಗದೆಆ ಕಡೆ ಸಾವನ್ನೂ ಅಪ್ಪಿಕೊಳ್ಳಲಾಗದೆ ಖಿನ್ನನಾಗಿ ಕೊನೆಗೆ ಬಂದದ್ದನ್ನೇ ಅಪ್ಪಿಕೊಳ್ಳುವ ಕತೆಯೇ ನಿಲುವಂಗಿ ಕನಸು.

ನಿಲುವಂಗಿ ಕನಸಿನ ನಾಟಕದ ನೋಟ
ನಿಲುವಂಗಿ ಕನಸಿನ ನಾಟಕದ ನೋಟ

ಅಲ್ಲಿಯವರೆಗೆ ಪ್ರಕೃತಿ ಸುಖಾನುಭೂತಿಯನ್ನು ಪಡೆದವರಿಗೆ ಮಲೆನಾಡಿಗರ ನೈಜಬದುಕಿನ ಒಳನೋಟಗಳು ಸಿಕ್ಕಿದ್ದಂತೂ ನಿಜ. ಯಾವುದೇ ನಾಟಕ, ಯಾವುದೇ ಕಾದಂಬರಿ ಅಥವಾ ಯಾವುದೇ ಸೃಜನಶೀಲ ಕೃತಿಯ ಅಂತಿಮ ಯಶಸ್ಸು ಅದು ಜೀವಗಳನ್ನು ಬೆಸೆದಾಗ, ಅದು ನೊಂದವರಿಗೆ ದನಿಯಾದಾಗ.

ಗಟ್ಟಿಕಥೆ, ಸರಳವಾದ ಸಂಭಾಷಣೆ, ಕ್ಲಿಷ್ಟವಾದ ಸನ್ನಿವೇಶ, ಕಥೆಯೊಳಗೆ ಕಥೆಯ ವಿವರಣೆ ಇರುವ ಕಾರಣ,ಬಾರಿ ಬಾರಿ ಬದಲಾಯಿಸುವ ದೃಶ್ಯಗಳಿಂದ ಈ ನಾಟಕ ಕಾಡಿನ ತೆರೆದ ವೇದಿಕೆಯಲ್ಲಿ ತುಸು ಕಷ್ಟವೆನಿಸಿದರೂ, ಆಸಕ್ತಿಯಿದ್ದರೆ, ನೀರು ಕುಡಿದಷ್ಟು ನಿರಾಳವಾಗಿ ಪ್ರದರ್ಶನ ನೀಡಲು ಸಾಧ್ಯ ಎನ್ನುವುದಕ್ಕೆ ಉದಾಹರಣೆ.

ದುಬಾರಿ ಸಂಭಾವನೆ ನೀಡಿ, ದೂರ ದೂರದ ಕಲಾವಿದರನ್ನು ಕರೆಸಿ ಮನರಂಜನಾ ಕಾರ್ಯಕ್ರಮಗಳನ್ನು ನೀಡುವುದೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ತಾಳ್ಮೆಯಿಂದ ಅಭಿನಯ ಕಲಿತು ನಾಟಕವನ್ನು ಸಮರ್ಥವಾಗಿ ಅಭಿವ್ಯಕ್ತಪಡಿಸಿದ ನಾಟಕ ಇದು. ಸ್ಥಳೀಯ ಹವ್ಯಾಸಿಗಳ ತಂಡ ‘ರಂಗ ಹೃದಯ’ದವರಿಂದ ಉತ್ತಮವಾದ ಅಭಿನಯವನ್ನು ಹೊರತೆಗೆಸಿರುವುದು ಮತ್ತು ಕಲಾವಿದರು ಅಷ್ಟೇ ಶ್ರಮವಹಿಸಿ ಚಂದವಾಗಿ ನಟಿಸಿದ್ದು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು.

ಕಥೆಯ ಖಳನಾಯಕ 'ಕತ್ತೆರಾಮ'ನ ಪಾತ್ರದಲ್ಲಿ ಹವ್ಯಾಸಿ ಕಲಾವಿದ ವಿಶ್ವಾಸ್ ಉಲಿವಾಲ ನಟನೆ ಅತ್ಯಂತ ವಿಶೇಷವಾಗಿತ್ತು. ಕಥಾ ನಾಯಕಿ ಸೀತಾಳ ಪಾತ್ರದಲ್ಲಿ ಪೂಜಾ ರಘುನಂದನ್ ಅವರದು ಸಹಜ ಅಭಿನಯ. ಕಥೆಯ ಜೀವಾಳವಾದ ಅವ್ವನ ಪಾತ್ರದಲ್ಲಿ ಬಟ್ಟಿಕಾಳವ್ವ, ಭವಾನಿ ಪಾತ್ರದಲ್ಲಿ ವೇದ ಹಾಸನ, ಇದ್ದುಕುಃಯಿ ಪಾತ್ರದಲ್ಲಿ ವೇದಮೂರ್ತಿ ಅವರ ಅಭಿನಯ ತುಂಬಾ ಚೆಂದ.

ರಘುನಂದನ್ ಪ್ರಸ್ತುತಿಯ ಸಂಗೀತ ಹಿನ್ನೆಲೆಯಾಗಿತ್ತು. ಎಲ್ಲರ ಮನಸ್ಸನ್ನು ಕದ್ದ ನಾಟಕದ ಅಂತ್ಯದ ಗೀತೆಯ ಸಾಹಿತ್ಯ ಮತ್ತು ಅದು ಉಳಿಸುವ ಇಂಪ್ಯಾಕ್ಟ್ ಅದ್ಭುತ. ಇದರ ಗೀತರಚನಾಕಾರ ಚಲಂ ಹಾಡಲಹಳ್ಳಿ ಇಡೀ ನಾಟಕದ ಒಟ್ಟು ಆಶಯವನ್ನು ಸುಂದರವಾಗಿ ಎಲ್ಲರ ಎದೆಗೆ ‘ಥ್ರೋ’ ಮಾಡ್ತಾರೆ. ಕಾರ್ಯಕ್ರಮದ ಒಟ್ಟಾರೆ ಯಶಸ್ಸಿನ ರೂವಾರಿ ಚಲಂ. ಕಾಡುವ ಕಾಡಿನೊಳಗಿನ ಈ ಕಾರ್ಯಕ್ರಮದಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಮರದ ದಿಮ್ಮಿಗಳನ್ನೇ ಪ್ರಾಪ್ ಆಗಿ, ಗಿಡಮರಗಳನ್ನೇ ತೆರೆಮರೆಗೆ ಬಳಸಿದ್ದು. ಅದು ನಿಜವಾಗಿ ಕಾಡೊಳಗಿನ ಮನೆಯೊಂದರ ಘಟನೆಯೇ ಅನ್ನಿಸುವಂತೆ ಮಾಡಿತ್ತು.

ಒಂದು ಕೃತಿ ಹೀಗೆ ಕನೆಕ್ಟ್ ಆಗಲು ಸಾಕಷ್ಟು ಅಂಶಗಳು ಕಾರಣವಾಗುತ್ತವೆ. ಬಹುಶಃ ‘ನಿಲುವಂಗಿ ಕನಸು’ ನಾಟಕ ದೊಡ್ಡ ರಂಗಮಂದಿರಗಳ ಅದ್ಧೂರಿ ಸೆಟ್‌ನಲ್ಲಿ, ಜಗಮಗ ಬೆಳಕಲ್ಲಿ ನಡೆದ ನಾಟಕವಾಗಿದ್ದರೆ ನಾಟಕದ ಅಥವಾ ಕಾರ್ಯಕ್ರಮದ ಬಗ್ಗೆ ವಿಶೇಷ ಉದ್ಗಾರವಿರುತ್ತಿರಲಿಲ್ಲ. ಆದರೆ ನಾಟಕದ ಜಾಗ ಮಲೆನಾಡಿನ ಪರಿಸರವಾಗಿದ್ದು ನೋಡುವವರೂ ಮಲೆನಾಡಿನ ಅದೇ ಗ್ರಾಮಸ್ಥರಾಗಿದ್ದರಿಂದ ಅದರ ಸಾರ್ಥಕತೆ ಅವರ ಕಣ್ಣಲ್ಲಿ ಕಾಣುತ್ತಿತ್ತು.

ಹಾಡ್ಲಹಳ್ಳಿ ನಾಗರಾಜ್ ಅವರ ಭಾಷಾ ಬಳಕೆ, ಕತೆಯ ಹಂದರ ಅದೆಷ್ಟು ಸರಳ ಎಂದರೆ ನಗರ-ಗ್ರಾಮ ಇತ್ಯಾದಿ ಯಾವ ವ್ಯತ್ಯಾಸ ಇಲ್ಲದೆ ಎಲ್ಲರೂ ಕತೆಯೊಳಗೆ ತಾದಾತ್ಮ್ಯ ಸಾಧಿಸುವುದು ಕಷ್ಟವೇ ಆಗಲಿಲ್ಲ. ಸಾಂಸ್ಕೃತಿಕ ಸಂಚಲನ ಮೂಡಿಸಿದ ಇವರ ನಾಟಕ ಮನರಂಜನೆಯ ಆಚೆಗೆ, ಬೋಧನೆಯ ಈಚೆಗೆ ಮತ್ತೇನನ್ನೋ ಎಲ್ಲರ ಎದೆಯಲ್ಲಿ ಮೂಡಿಸಿ ಅವರ ಭಾವ-ಭಕುತಿಗೆ ಸೇರಿ ಮುಂದೆಲ್ಲೋ ಪರಿಣಾಮಕಾರಿಯಾಗಿ ಪ್ರಯೋಗವಾದರೆ ಸಾಕು, ಈ ಕಾರ್ಯಕ್ರಮಕ್ಕೆ ಯಶಸ್ಸು ದೊರೆತಂತೆಯೇ ಸೈ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT