ಭಾನುವಾರ, ಆಗಸ್ಟ್ 14, 2022
27 °C

ಮುದುಡಿದ ಕಲೆ ಅರಳಿದಾಗ..: ಮತ್ತೆ ಅರಳಿದೆ ರಂಗ ಬದುಕು

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

ಪ್ರದರ್ಶನ ಕಲೆಗಳ ಪಾಲಿಗೆ ಕೋವಿಡ್‌–19 ಒಂದು ರೀತಿಯಲ್ಲಿ ಸುಂಟರಗಾಳಿಯಾಗಿ ಪರಿಣಮಿಸಿತು. ಅನ್ನದ ಮಾರ್ಗ ಕಾಣದೆ, ಸ್ವಾಭಿಮಾನದ ಹಾದಿಯನ್ನೂ ಬಿಡದೆ ಸಾವಿರಾರು ಸಂಖ್ಯೆಯ ಕಲಾವಿದರು ಹಸಿದ ಹೊಟ್ಟೆಯಲ್ಲೇ ಜೀವನ ಸಾಗಿಸಬೇಕಾದ ಸಂದರ್ಭ ಸೃಷ್ಟಿಯಾಯಿತು. ಅವರ ಕಷ್ಟವನ್ನು ನೋಡಲಾಗದೆ ಹಲವು ಕಲಾವಿದರು, ಕಲಾ ಸಂಸ್ಥೆಗಳು ಸದ್ದಿಲ್ಲದೆ ನೆರವಿಗೆ ಧಾವಿಸಿದ ವಿವರಗಳು ಅಪ್ಪಟ ಮಾನವೀಯ ಕಥನಗಳು. ಜಗತ್ತು ನಿಧಾನವಾಗಿ ಮತ್ತೆ ಪ್ರದರ್ಶನ ಕಲೆಗಳಿಗೆ ದಾರಿ ಮಾಡಿಕೊಡುತ್ತಿರುವ ಈ ಹೊತ್ತಿನಲ್ಲಿ ಅಂತಹ ಮಾನವೀಯ ಕಥನಗಳ ಮೇಲೊಂದು ಹಿನ್ನೋಟ...

***

ಬಹುತೇಕರ ಬದುಕಿನಲ್ಲಿ ಬದಲಾವಣೆಯ ಗಾಳಿ ತಂದಿರುವ ಕೊರೊನಾ, ರಂಗ ಕಲಾವಿದರ ಬದುಕಿನಲ್ಲಿ ಬಿರುಗಾಳಿಯನ್ನೇ ತಂದೊಡ್ಡಿತು. ನಾಟಕ ನಡೆದರಷ್ಟೇ ಹೊಟ್ಟೆ ತುಂಬುವ ಸ್ಥಿತಿಯಲ್ಲಿದ್ದ ಬಹುತೇಕ ಕಲಾವಿದರು ದಿನಸಿ, ಔಷಧಿಗೂ ಪರದಾಡುವಂತಾಯಿತು. ಕೊರೊನಾಕ್ಕೂ ಮುನ್ನ ರಂಗದ ಮೇಲೆ ಸ್ಟಾರ್ ಕಲಾವಿದರಾಗಿ ಗುರುತಿಸಿಕೊಂಡಿದ್ದವರು, ಕೊರೊನಾದ ನಂತರ ವಾಸ್ತವದ ಬದುಕಿನಲ್ಲಿ ಆಟೊರಿಕ್ಷಾ ಚಾಲಕರೋ ಕೃಷಿ ಕಾರ್ಮಿಕರೋ ತರಕಾರಿ ಮಾರಾಟಗಾರರೋ ಹೋಟೆಲ್ ಕೆಲಸಗಾರರೋ ಆದರು. ರಟ್ಟೆಯಲ್ಲಿ ಬಲವಿದ್ದವರು ದುಡಿಯಲು ನಾನಾ ಮಾರ್ಗ ಕಂಡುಕೊಂಡರೆ, ಮುಪ್ಪಾವಸ್ಥೆಯ ಕಲಾವಿದರು ಸ್ವಾಭಿಮಾನ ಬಿಟ್ಟುಕೊಡದೇ ಹಸಿದ ಹೊಟ್ಟೆಯಲ್ಲೇ ಜೀವ ಕೈಯಲ್ಲಿ ಹಿಡಿದುಕೊಳ್ಳುವಂತಾಯಿತು...

ಸಮಾಜದ ಆಗು–ಹೋಗುಗಳಿಗೆ ತುಡಿಯುತ್ತಿದ್ದ ರಂಗಭೂಮಿ ಕೊರೊನಾದ ಬಿರುಗಾಳಿಗೆ ಸಿಲುಕಿ ಕೆಲಕಾಲ ನೇಪಥ್ಯಕ್ಕೆ ಸರಿಯುವಂತಾಯಿತು. ಆದರೆ, ಈ ಕಲಾವಿದರ ಸಂಕಷ್ಟಕ್ಕೆ ಮಿಡಿಯುವ ರಂಗಮನಸ್ಸುಗಳು ಮಾತ್ರ ಹಿಂದೆ ಸರಿಯಲಿಲ್ಲ. ಹವ್ಯಾಸಿ, ವೃತ್ತಿ ಕಂದಕವನ್ನು ಮೀರಿ ನಾಡಿನ ಅನೇಕ ರಂಗತಂಡಗಳು, ರಂಗಪ್ರಿಯರು ನೇಪಥ್ಯದಲ್ಲಿದ್ದುಕೊಂಡೇ ಪ್ರಚಾರ ಪಡೆಯದೇ ಕಲಾವಿದರಿಗೆ ನೆರವು ನೀಡಿದರು. ನಾಟಕ ಬೆಂಗ್ಳೂರು, ಸಂಚಯ, ರಂಗಶಂಕರ, ಸಂಚಿ, ಸ್ಪಂದನ, ಸಾತ್ವಿಕ...  ಹೆಸರಿಸಿದಷ್ಟೂ ಪಟ್ಟಿ ಬೆಳೆಯುವ ರಂಗ ತಂಡಗಳು ಕಲಾವಿದರಿಗೆ ಅದರಲ್ಲೂ ವೃತ್ತಿ ಕಲಾವಿದರಿಗೆ ತಿಂಗಳಿಗೆ ಇಂತಿಷ್ಟು ಅಂತ ಧನ ಸಹಾಯದ ಜತೆಗೆ ಆಹಾರದ ಕಿಟ್‌ಗಳನ್ನೂ ನೀಡಿದವು. 

ನಾಟಕ ಬೆಂಗ್ಳೂರು ಬಳಗವು 20ಕ್ಕೂ ಹೆಚ್ಚು ವೃತ್ತಿ ಕಲಾವಿದರನ್ನು ದತ್ತು ಪಡೆದು ಆಗಸ್ಟ್‌ನಿಂದ ಜನವರಿ ತನಕ ಪ್ರತೀ ತಿಂಗಳೂ ₹2 ಸಾವಿರ ಹಣ ತಲುಪಿಸಿದರೆ, ಸಂಚಯ ರಂಗತಂಡವು ‘ಸಂಚಯ ಕೇರ್ಸ್‌’ ಹೆಸರಿನಡಿ ಸಂಗ್ರಹಿಸಿದ ₹ 25 ಲಕ್ಷವನ್ನು 300 ವೃತ್ತಿ ಕಲಾವಿದರಿಗೆ ತಿಂಗಳಿಗೆ ₹ 3 ಸಾವಿರದಂತೆ ಮೂರು ತಿಂಗಳು ನೀಡಿತು. ಅದರಲ್ಲೂ 60 ವರ್ಷದ ದಾಟಿದ ವೃತ್ತಿರಂಗದ ಹಿರಿಯ ನಟಿಯರಿಗೆ ಆದ್ಯತೆ ನೀಡಿತು. ಕಲಾವಿದರ ನೆರವಿಗಾಗಿಯೇ ಆನ್‌ಲೈನ್‌ನಲ್ಲಿ ನಾಟಕ ಪ್ರದರ್ಶನಗಳನ್ನೂ ಆಯೋಜಿಸಿತು. ಈ ಸದುದ್ದೇಶಕ್ಕೆ ಜನಪ್ರಿಯ ಚಿತ್ರನಟರು, ನಿರ್ದೇಶಕರು, ಕ್ರೀಡಾಪಟುಗಳೂ ಸಹಕಾರ ನೀಡಿದರು.

ರಂಗಶಂಕರ 100 ಕಲಾವಿದರಿಗೆ ಸಹಾಯಹಸ್ತ ಚಾಚಿತು. ಒಟ್ಟು 6 ರಂಗ ತಂಡಗಳಿಗೆ ₹ 50 ಸಾವಿರ ನೆರವಿನ ಜತೆಗೆ ಹೊಸ ಪ್ರೊಡಕ್ಷನ್ ಮಾಡಲೂ ಸಲಹೆ ನೀಡಿತು. ಬಿ. ಜಯಶ್ರೀ, ಸುಷ್ಮಾವೀರ್, ಸುನಂದಾ ಹೊಸಪೇಟೆ, ನಯನಾ ರಾಜಗುರು, ಮಂಜುನಾರಾಯಣ, ಗಾಯತ್ರಿ ಕೃಷ್ಣ ಸೇರಿದಂತೆ ಹಲವರು ಹೆಸರು ಹೇಳಲಿಚ್ಛಿಸದೇ ರಂಗಬದ್ಧತೆ ಮೆರೆದರು. ಲಾಕ್‌ಡೌನ್ ನಡುವೆ ಅನೇಕ ಕಲಾವಿದರಿಗೆ ತಮ್ಮ ಮಕ್ಕಳ ಶಾಲೆಯ ಆನ್‌ಲೈನ್ ಫೀಜು ಕಟ್ಟಲು ಹಣವಿರಲಿಲ್ಲ. ಅಂಥ ಸಂದರ್ಭಗಳಲ್ಲಿ ನಾಟಕ ಬೆಂಗ್ಳೂರು ನೇರವಾಗಿ ಶಾಲೆಗೆ ಹಣ ಸಂದಾಯ ಮಾಡಿತು.

ವಿಶ್ವಜ್ಯೋತಿ ಶ್ರೀಪಂಚಾಕ್ಷರಿ ನಾಟ್ಯಸಂಘದ ಮಾಲೀಕ ಜೇವರ್ಗಿ ರಾಜಣ್ಣ ಸೇರಿದಂತೆ ವೃತ್ತಿ ನಾಟಕ ಕಂಪನಿಗಳ ಮಾಲೀಕರು ತಮ್ಮ ಕೈಲಾದಷ್ಟು ವೃತ್ತಿ ಕಲಾವಿದರಿಗೆ ಸಹಾಯ ಹಸ್ತ ಚಾಚಿದ್ದಾರೆ. ಅನಾಥಾಶ್ರಮ ಕಟ್ಟುವ ಆಸೆ ಹೊಂದಿದ್ದ ಹಾವೇರಿ ಜಿಲ್ಲೆಯ ತೆಗ್ಗಿಹಳ್ಳಿಯ ಕತಾಲ್ ಸಾಬ್ ಆರ್. ಬಣಗಾರ ನಾಟಕದ ಮೋಹಕ್ಕಾಗಿ ನಾಟಕ ಕಂಪನಿ ಕಟ್ಟಿದ್ದರು. ವರ್ಷದ ಹಿಂದಷ್ಟೇ ಕಂಪನಿ ಆರಂಭಿಸಿದ್ದರೂ ‘ಕೊಟ್ಟಿದ್ದನ್ನು ಹಾಗೆಲ್ಲ ಹೇಳಬಾರದು’ ಎಂಬ ಕರಾರಿನೊಂದಿಗೆ ಕಂಪನಿಯ 30 ಕಲಾವಿದರಿಗೆ ₹ 5 ಸಾವಿರ ಕೊಟ್ಟು ಸನ್ಮಾನವನ್ನೂ ಮಾಡಿದರು. ‌ಹಲವು ವೃತ್ತಿ ನಾಟಕ ಕಂಪನಿಗಳು ಈಗಷ್ಟೇ ತಮ್ಮ ಕಂಪನಿಯನ್ನು ಪುನರಾರಂಭಿಸಿವೆ. ತಿಂಗಳುಗಟ್ಟಲೇ ಮಂಕಾಗಿದ್ದ ರಂಗ ಕಲಾವಿದರ ಬದುಕು ಈಗಷ್ಟೇ ಮತ್ತೆ ಬಣ್ಣದ ಬದುಕಿಗೆ ನಿಧಾನವಾಗಿ ತೆರೆದುಕೊಳ್ಳುತ್ತಿದೆ, ಅಂಕದ ಪರದೆಯೂ ಮೇಲೇಳುತ್ತಿದೆ, ಸದ್ದಡಗಿಸಿ ಕೂತಿದ್ದ ಧ್ವನಿವರ್ಧಕಗಳಿಗೂ ಮಾತು ಮೂಡತೊಡಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು