ಭಾನುವಾರ, ಸೆಪ್ಟೆಂಬರ್ 27, 2020
24 °C

ಸಿಜಿಕೆ ರಾಷ್ಟ್ರೀಯ ರಂಗೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖ್ಯಾತ ರಂಗ ನಿರ್ದೇಶಕ ಸಿ.ಜಿ.ಕೆ. ಅವರ ಕನಸಿನ ಕೂಸು ‘ರಂಗನಿರಂತರ’ ಸಾಂಸ್ಕೃತಿಕ ಸಂಘ ಆರನೇ ವರ್ಷದ ‘ರಾಷ್ಟ್ರೀಯ ರಂಗೋತ್ಸವ–2019’ ಆಚರಿಸುವ ಸಂಭ್ರಮದಲ್ಲಿದೆ. 

ಇದೇ 13ರಿಂದ ಐದು ದಿನಗಳ ಕಾಲ ರವೀಂದ್ರ ಕಲಾಕ್ಷೇತ್ರ ಮತ್ತು ಆವರಣದಲ್ಲಿ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ನಡೆಯಲಿದೆ. ಪ್ರತಿದಿನ ಸಂಜೆ 4ರಿಂದ ಗಾಂಧಿಕಣದಲ್ಲಿ ಹಾಡು, ಹರಟೆ, ದೇಸಿ ಉಡುಪು, ಕೈಮಗ್ಗ ಮತ್ತು ಗುಡಿ ಕೈಗಾರಿಕಾ ಉತ್ಪನ್ನಗಳ ಮಾರಾಟ ನಡೆಯಲಿದೆ. ಲೋಕಿಕಂಡ ರಂಗಭೂಮಿ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ.  

ಭಾನುವಾರ ಸಂಜೆ 5.45ಕ್ಕೆ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜೀವನ ಕತೆ ಕುರಿತಾದ ‘ಅಕ್ಷರದವ್ವನ ಕತೆ’ ಮೂಲಕ ರಂಗೋತ್ಸವಕ್ಕೆ ಚಾಲನೆ ದೊರೆಯಲಿದೆ. ಡಿ.ಕೆ. ಚೌಟ, ಅ.ನಾ. ರಮೇಶ್, ಗಿರೀಶ ಕಾರ್ನಾಡ ವೇದಿಕೆಗಳಲ್ಲಿ ಪ್ರತಿದಿನ ಸಂಜೆ ನಾಟಕ ಪ್ರದರ್ಶನ, ರಂಗ ತಂಡಗಳ ಜತೆ ಸಂವಾದ, ಕಿರುಚಿತ್ರ ಪ್ರದರ್ಶನ, ಸ್ಮರಣ ಸಂಚಿಕೆ ಬಿಡುಗಡೆ ಮತ್ತು ಗಿರೀಶ ಕಾರ್ನಾಡ ನೆನಪಿನ ಕಿರು ಚಿತ್ರೋತ್ಸವ ಸೇರಿದಂತೆ ವೈವಿಧ್ಯಮ ರಂಗ ಚಟುವಟಿಕೆಗಳು ನಡೆಯಲಿವೆ.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ತಂಜಾವೂರು ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸಹಕಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 

ರಾಷ್ಟ್ರೀಯ ರಂಗೋತ್ಸವ ಪರಂಪರೆ 

ರಾಷ್ಟ್ರೀಯ ರಂಗೋತ್ಸವ ಪರಂಪರೆಯನ್ನು ರಾಜ್ಯದಲ್ಲಿ ಹುಟ್ಟು ಹಾಕಿದ ಹೆಗ್ಗಳಿಕೆ ‘ಸಿ.ಜಿ.ಕೆ. ರಾಷ್ಟ್ರೀಯ ರಂಗೋತ್ಸವ’ಕ್ಕೆ ಸಲ್ಲುತ್ತದೆ. ರಂಗನಿರಂತರ ಐದು ವರ್ಷಗಳಲ್ಲಿ ಭಾರತದ ಇತರೆ ಭಾಷೆಗಳ ಮಹತ್ವದ ನಾಟಕಗಳನ್ನು ಬೆಂಗಳೂರಿನ ಪ್ರೇಕ್ಷಕರಿಗೆ ತೋರಿಸುವ ಯಶಸ್ವಿ ಪ್ರಯತ್ನ ಮಾಡಿದೆ. ಸಮಕಾಲೀನ ರಂಗಭೂಮಿಯಲ್ಲಿ ನಡೆಯುತ್ತಿರುವ ರಂಗ ಪ್ರಯೋಗ, ಹೊಸ ಅಲೆಯ ನಾಟಕಗಳನ್ನು ಕನ್ನಡ ರಂಗಭೂಮಿಗೆ ಪರಿಚಯಿಸುವ ಕೆಲಸ ಮಾಡುತ್ತಿದೆ.

150 ದಿನಗಳ ನಿರಂತರ ನಾಟಕೋತ್ಸವ, ಗ್ರಾಮೀಣ ಕಥಾವಸ್ತುಗಳನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವ ‘ಗ್ರಾಮ ಸಮಾಜ’ ನಾಟಕೋತ್ಸವ ಮತ್ತು ರವೀಂದ್ರ ಕಲಾಕ್ಷೇತ್ರಕ್ಕೆ 30 ವರ್ಷ ಸಂದ ಸಂದರ್ಭದಲ್ಲಿ ‘ಕಲಾಕ್ಷೇತ್ರ–30’ ಮುಂತಾದ ವಿಶಿಷ್ಟ ಸಾಂಸ್ಕೃತಿಕ ಉತ್ಸವವನ್ನು ರಂಗ ನಿರಂತರ ನಡೆಸಿಕೊಂಡು ಬಂದಿದೆ. 

‘ಹ್ಯುಮನ್‌ ಬಾಡಿ ಮತ್ತು ಎನರ್ಜಿ ಅನ್ನೇ ಪ್ರಧಾನವಾಗಿ ಸಮೀಕರಿಸಿ ರಂಗಮುಖೇನ ವಸ್ತುವನ್ನು ಸರಳವಾಗಿ ಪ್ರಸ್ತುಪಡಿಸುವ ರಂಗಪ್ರಯೋಗಗಳು ಈ ಸಲದ ವಿಶೇಷ. ಹೆಸರಾಂತ ರಂಗಕರ್ಮಿ ಪ್ರೊಬಿರ್‌ ಗುಹಾ ಅವರ ‘ಘರೇ ಫಿರಾರ್‌ ಗಾನ್‌’ ಪ್ರಯೋಗ ಕೂಡ ಈ ಸಲದ ಆಕರ್ಷಣೆ. ಅವರದೇ ಒಂದು ಆಲ್ಟರ್‌ನೇಟಿವ್‌ ಪಾರಂ ಅನ್ನು ರೂಪಿಸಿಕೊಂಡ ಅವರ ಪ್ರಯೋಗಗಳು ಕಾರ್ಮಿಕರು ಮತ್ತು ಬಡವರ ಬಗ್ಗೆಯೇ ಹೆಚ್ಚು ಕಾಳಜಿ ವ್ಯಕ್ತಪಡಿಸುತ್ತವೆ. ಸುದೀರ್ಘ ರಂಗಪಯಣದಲ್ಲಿ ಅವರು ಹ್ಯುಮನ್‌ ಬಾಡಿ ಮತ್ತು ಎನರ್ಜಿಯನ್ನು ಹೆಚ್ಚಾಗಿ ರಂಗಕ್ಕೆ ಬಳಸಿಕೊಳ್ಳುವುದರಿಂದ ಪ್ರಯೋಗಗಳಲ್ಲಿ ಮಾತುಗಳೇ ಕಮ್ಮಿ. ಒಟ್ಟಾರೆ ಸ್ಕ್ರಿಪ್ಟ್‌ ಹೆಚ್ಚೆಂದರೆ ನಾಲ್ಕರಿಂದ ಐದು ಪುಟಗಳು ಮಾತ್ರ. ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವ ಅವರ ‘ಸೈಕೊಫಿಜಿಕಲ್‌ ಪಾರಂ’ ಅನನ್ಯ ಎನ್ನುವುದು ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ನೇತೃತ್ವ ವಹಿಸಿರುವ ‘ರಂಗನಿರಂತರ’ ತಂಡದ ಉಪಾಧ್ಯಕ್ಷ ಶಶಿಧರ ಅಡಪ.

ಗಾಂಧೀಜಿ ಅವರ 150ನೇ ಜನ್ಮದಿನಾಚರಣೆಯ ಈ ಸಂದರ್ಭದಲ್ಲಿ ಇಡೀ ರಂಗೊತ್ಸವವವನ್ನು ಯಾವುದೇ ಆಡಂಬರವಿಲ್ಲದೇ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ರಂಗವಲಯದಲ್ಲಿ ಅತ್ಯಂತ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ಹೆಸರಾಂತ ಯುವ ಫೊಟೊಗ್ರಾಫರ್‌ ತಾಯ್‌ ಲೋಕೇಶ್‌ ಅವರ ರಂಗಭೂಮಿಗೆ ಸಂಬಂಧಿಸಿದ ಆಯ್ದ ಛಾಯಾಚಿತ್ರಗಳ ಪ್ರದರ್ಶನ ಕೂಡ ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ವಿಶೇಷತೆಗಳಲ್ಲೊಂದು ಎಂದೂ ಅವರು ವಿವರಿಸಿದರು. 

ಇದನ್ನೂ ಓದಿ: ಸಿಜಿಕೆ ನೆನಪಲ್ಲಿ ಬೀದಿರಂಗ ದಿನ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು