ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಬ್‌ಹೌಸ್‌ಗೆ ಬಂದ್ರು ‘ಅಮ್ಮಾವ್ರ ಗಂಡ’

Last Updated 26 ಜೂನ್ 2021, 19:30 IST
ಅಕ್ಷರ ಗಾತ್ರ

ಸೋ ಶಿಯಲ್ ಆಡಿಯೊ ಆಗಿ ಜನಪ್ರಿಯವಾಗಿರುವ ಕ್ಲಬ್‌ಹೌಸ್ ಈಗ ಬರೀ ಹರಟೆಕಟ್ಟೆಯಾಗಷ್ಟೇ ಅಲ್ಲ, ಸೃಜನಶೀಲ ಮಾಧ್ಯಮವಾಗಿಯೂ ಮುಂಚೂಣಿಗೆ ಬರುತ್ತಿದೆ. ಪುಸ್ತಕ ಓದುವಿಕೆ, ಚರ್ಚೆಗಳ ತಾಣವಾಗಿದ್ದ ಈ ಮನೆಗೆ ರಂಗಭೂಮಿಯ ಪ್ರವೇಶವೂ ಆಗಿದೆ. ಕೋವಿಡ್‌ ಕಾಲದಲ್ಲಿ ಫೇಸ್‌ಬುಕ್, ಯುಟ್ಯೂಬ್‌ನಂಥ ಆಧುನಿಕ ಸಾಮಾಜಿಕ ಪರಿಭಾಷೆಗಳಿಗೆ ತೆರೆದುಕೊಂಡಿದ್ದ ರಂಗಭೂಮಿ ಕ್ಲಬ್‌ಹೌಸ್‌ ಮೂಲಕವೂ ರಂಗಪ್ರಿಯರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.

ಈಚೆಗಷ್ಟೇ ಬೆಂಗಳೂರಿನ ಪ್ರದರ್ಶನ ಕಲಾ ಸಂಸ್ಥೆ (ಪ್ರಕಸಂ) ಟಿ.ಪಿ. ಕೈಲಾಸಂ ಅವರ ‘ಅಮ್ಮಾವ್ರ ಗಂಡ’ ನಾಟಕವನ್ನು ಪ್ರದರ್ಶಿಸಿದೆ (ಕೇಳಿಸಿದೆ). ಕ್ಲಬ್‌ಹೌಸ್‌ನ ಮುಚ್ಚಿದ ಕೋಣೆಯಲ್ಲಿ (ಕ್ಲೋಸ್ಡ್ ರೂಂ) ತಾಲೀಮು ನಡೆಸಿ, ತೆರೆದ ಮನೆಯಲ್ಲಿ (ಓಪನ್ ಹೌಸ್‌) ಆಯೋಜಿಸಿದ್ದ ಈ ಮುಕ್ತ ರಂಗ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ. ರಂಗಪರಿಭಾಷೆಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಪ್ರಯೋಗಶೀಲರಾಗಿರುವ ರಂಗಕರ್ಮಿ ಪಿ.ಡಿ. ಸತೀಶ್‌ಚಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದ ‘ಅಮ್ಮಾವ್ರ ಗಂಡ’ ಕೊನೆಯವರೆಗೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲವೂ ಆಗಿದೆ.

‘ಇದೇ ಮೊದಲ ಬಾರಿಗೆ ಕನ್ನಡದ ನಾಟಕ ವೊಂದು ಕ್ಲಬ್‌ಹೌಸ್‌ನಲ್ಲಿ ಪ್ರದರ್ಶನಗೊಂಡಿದ್ದರ ಹಿಂದಿದ್ದ ಸಮಸ್ಯೆಗಳು ಸಣ್ಣವಾಗಿದ್ದರೂ ಅದನ್ನು ಕ್ಲಬ್‌ಹೌಸ್‌ನಲ್ಲಿ ಲೈವ್ ಆಗಿ ಪ್ರದರ್ಶಿಸಿದ್ದು ತುಸು ಸವಾಲಿನದೇ ಆಗಿತ್ತು’ ಎನ್ನುತ್ತಾರೆ ಸತೀಶ್‌ಚಂದ್ರ.

ಎಕ್ಸ್‌ಟ್ರಾ ಪ್ಲೇಯರ್ ಇರಲಿ!

ನನಗೆ ರೇಡಿಯೊ ಅನುಭವದ ಹಿನ್ನೆಲೆ ಇದ್ದದ್ದರಿಂದ ಕ್ಲಬ್‌ಹೌಸ್ ನೀಡುತ್ತಿರುವ ಅನುಭವ ಆಪ್ಯಾಯಮಾನವಾದದ್ದು. ಅಲ್ಲಿ ಸಾಹಿತ್ಯದಂಥ ಸೃಜನಶೀಲ ಚಟುವಟಿಕೆಗಳು ನಡೆಯುತ್ತಿದ್ದಾಗ ಇದನ್ನು ರಂಗಕ್ಕೆ ಒಗ್ಗಿಸಿಕೊಳ್ಳುವ ಯೋಚನೆ ಬಂತು. ಸ್ನೇಹಿತರ ಜತೆಗೂಡಿ ಟ್ರಯಲ್ಸ್‌ ಮಾಡಿದೆವು. ವಾಯ್ಸ್ ಎಕೋ ಆಗುವುದು, ಹೆಡ್‌ಫೋನ್ ಹಾಕಿಕೊಂಡು ಸಂಭಾಷಣೆ ಹೇಳಿದಾಗ ಸ್ಪಷ್ಟವಾಗಿ ಕೇಳಿಸದಿರುವುದು ಇತ್ಯಾದಿ ತಾಂತ್ರಿಕ ಸಂಗತಿಗಳ ಅರಿವಾಯಿತು. ಕ್ಲಬ್‌ಹೌಸ್ ಇಂಟರ್‌ನೆಟ್‌ ಮೇಲೆ ಅವಲಂಬಿತವಾದ್ದರಿಂದ ಯಾವಾಗ ಯಾವ ಪಾತ್ರಧಾರಿಗಳ ನೆಟ್‌ವರ್ಕ್ ಕೈಕೊಡುತ್ತೋ ಗೊತ್ತಿಲ್ಲ. ಹಾಗಾಗಿ, ಯಾವು ದಕ್ಕೂ ಎಕ್ಸ್‌ಟ್ರಾ ಪ್ಲೇಯರ್ ಇಟ್ಟುಕೊಳ್ಳುವುದು ಅಗತ್ಯ. ಮುಖ್ಯವಾಗಿ ಇಡೀ ನಾಟಕವನ್ನು ನಿರಂತರವಾಗಿ ಫಾಲೋ ಮಾಡುತ್ತಿರುವಂಥ ಇಬ್ಬರು ಹೆಚ್ಚುವರಿ ನಟರ ಅಗತ್ಯವೂ ಇದೆ ಅನ್ನುವುದು ಸತೀಶ್‌ಚಂದ್ರ ಅನುಭವದ ನುಡಿ.

‘ನನ್ನ ಅರಿವಿಗೆ ಬಂದಂತೆ ಭಾರತದಲ್ಲಿ ಕ್ಲಬ್‌ಹೌಸ್‌ನಲ್ಲಿ ಇದುವರೆಗೆ ಯಾವುದೇ ರಂಗಪ್ರಯೋಗಗಳಾಗಿಲ್ಲ. ಕನ್ನಡದಲ್ಲೂ ಇದೇ ಪ್ರಥಮಬಾರಿಗೆ ಇಂಥದ್ದೊಂದು ಪ್ರಯೋಗವಾಗಿದೆ. ಕೇಳುಗ ಕೇಂದ್ರಿತವಾಗಿರುವ ಕ್ಲಬ್‌ಹೌಸ್‌ಗೆ ರೇಡಿಯೊ ನಾಟಕಗಳ ಮಾದರಿ ಹೆಚ್ಚು ಸೂಕ್ತ. ಹಾಗಾಗಿ, ‘ಅಮ್ಮಾವ್ರ ಗಂಡ’ ನಾಟಕ ಆಯ್ದುಕೊಂಡೆ. ಡಾ.ಸುಷ್ಮಾ ಎಸ್.ವಿ., ಚಂದನ್, ರಶ್ಮಿ ಮತ್ತು ಸಂತೋಷ್ ಈ ನಾಲ್ವರು ಪಾತ್ರಧಾರಿಗಳಾಗಿ ಅಭಿನಯಿಸಿದ್ದರು’ ಎಂದು ವಿವರಿಸುತ್ತಾರೆ.

‘ಈ ನಾಟಕ ಶುರುವಾದಾಗ 167 ಶ್ರೋತೃಗಳು ಇದ್ದರು. 1 ಗಂಟೆ 20 ನಿಮಿಷ ಅವಧಿಯ ನಾಟಕಕ್ಕೆ ಕೊನೆಯವರೆಗೆ 108 ಶ್ರೋತೃಗಳು ಉಳಿದಿದ್ದರು. ಕೆಲ ನಾಟಕಗಳಿಗೆ ಸಂಗೀತದ ಅವಶ್ಯಕತೆ ಇರುತ್ತದೆ. ಆದರೆ, ಕ್ಲಬ್‌ಹೌಸ್‌ನ ನಾಟಕಗಳಲ್ಲಿ ಅದನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಇನ್ನಷ್ಟೇ ಕಂಡುಕೊಳ್ಳಬೇಕಿದೆ. ನಾಟಕವನ್ನು ರಂಗಭೂಮಿಯ ಮೇಲೇ ಪ್ರದರ್ಶಿಸಬೇಕು ಅಂತ ಹೃದಯ ಹೇಳಿದರೂ, ತಂತ್ರಜ್ಞಾನಕ್ಕೂ ತೆರೆದುಕೊಳ್ಳಬೇಕು ಎಂದು ಮಿದುಳು ಹೇಳುತ್ತದೆ’ ಎನ್ನುತ್ತಾರೆ ಅವರು.

ರೇಡಿಯೊ ನಾಟಕವೂ, ಕ್ಲಬ್‌ಹೌಸ್‌ ಪ್ರಯೋಗವೂ

‘ಕ್ಲಬ್‌ಹೌಸ್‌ನಲ್ಲಿ ನಾಟಕ ಆಡುವುದು ಮೇಲ್ನೋಟಕ್ಕೆ ರೇಡಿಯೊ ನಾಟಕದಂತೆ ಅನಿಸಿದರೂ ಎರಡರಲ್ಲೂ ಭಿನ್ನತೆ ಇದೆ. ರೇಡಿಯೊ ನಾಟಕ ಮಾಡುವಾಗ ನಿಮಗೆ ಉತ್ತಮ ಗುಣಮಟ್ಟದ ಮೈಕ್ ಸಿಸ್ಟಂ, ಫ್ರೀಕ್ವೆನ್ಸಿ, ಶಬ್ದನಿರೋಧಕ ಗೋಡೆ, ಸ್ಯಾಟಲೈಟ್ ಎಲ್ಲವೂ ಇರುತ್ತೆ. ಆದರೆ, ಕ್ಲಬ್‌ಹೌಸ್‌ನಲ್ಲಿ ಪ್ರತ್ಯೇಕ ಮೈಕ್ ಸಿಸ್ಟಂ, ಸ್ಟುಡಿಯೊ ಸೌಲಭ್ಯ ಇಲ್ಲ. ಇಲ್ಲಿ ನಟವರ್ಗಕ್ಕೆ ತಾಂತ್ರಿಕವಾಗಿ ತರಬೇತಿ ಬೇಕಾಗುತ್ತದೆ. ರೇಡಿಯೊ ನಾಟಕಗಳನ್ನು ಮೊದಲೇ ರೆಕಾರ್ಡಿಂಗ್ ಮಾಡಿಟ್ಟುಕೊಂಡು ನಿರ್ದಿಷ್ಟ ದಿನ, ಸಮಯಕ್ಕೆ ಪ್ರದರ್ಶಿಸಬಹುದು. ಆದರೆ, ಇಲ್ಲಿ ನೀವು ಲೈವ್ ಆಗಿಯೇ ನಾಟಕವನ್ನು ಪ್ರದರ್ಶಿಸಬೇಕಾಗುತ್ತದೆ. ಥೇಟ್ ರಂಗದ ಮೇಲೆ ನಾಟಕ ಪ್ರದರ್ಶನದ ರೀತಿಯಂತೆ’ ಎಂದು ಅನುಭವ ಬಿಚ್ಚಿಟ್ಟರು ಪಾತ್ರಧಾರಿ ಡಾ.ಸುಷ್ಮಾ ಎಸ್‌.ವಿ.

ಅಂದೇ ಹುಟ್ಟು, ಅಂದೇ ಸಾವು!

‘ಒಬ್ಬ ನಟ ಹುಟ್ಟುವುದೂ ಅಂದೇ, ಸಾಯುವುದೂ ಅಂದೇ’ ಅನ್ನುವ ಮಾತು ರಂಗಭೂಮಿಯಲ್ಲಿ ಚಾಲ್ತಿಯಲ್ಲಿದೆ. ಇದು ಕ್ಲಬ್‌ಹೌಸ್‌ಗೂ ಅನ್ವಯಿಸುತ್ತದೆ. ರಂಗಮಂದಿರದಲ್ಲಿ ನಾಟಕವೊಂದನ್ನು ಹೇಗೆ ಲೈವ್ ಆಗಿ ಪ್ರದರ್ಶಿಸುತ್ತೇವೋ ಇಲ್ಲಿಯೂ ಅದೇ ರೀತಿ ಪ್ರದರ್ಶಿಸಬಹುದು. ನೆಟ್‌ವರ್ಕ್ ಸಮಸ್ಯೆ, ಡಿಜಿಟಲ್ ಡಿಲೆದಂಥ ಸಮಸ್ಯೆಗಳನ್ನು ಮೀರಿಯೂ ಕ್ಲಬ್‌ಹೌಸ್‌ ಅನ್ನು ರಂಗಭೂಮಿ ಸಮರ್ಥವಾಗಿ ದುಡಿಸಿಕೊಳ್ಳಲು ಅವಕಾಶವಿದೆ. ರಂಗದ ಮೇಲೆ ನಮ್ಮ ಮೇಲಷ್ಟೇ ಬೆಳಕಿರುತ್ತದೆ. ಹಾಗಾಗಿ, ಪ್ರೇಕ್ಷಕರ ಸಾಲಿನಲ್ಲಿ ಯಾರಿದ್ದಾರೆಂದು ತಿಳಿಯದು. ಆದರೆ, ಕ್ಲಬ್‌ಹೌಸ್‌ನಲ್ಲಿ ಯಾರ‍್ಯಾರು ನಾಟಕ ಕೇಳುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಇದು ರಂಗಕರ್ಮಿಗಳ ಉತ್ಸಾಹ ಇಮ್ಮಡಿಗೊಳಿಸುತ್ತದೆ. ನಾಟಕದ ಮೂಲ ಗುಣವನ್ನು ಉಳಿಸಿಕೊಳ್ಳುವ ಸಾಮರ್ಥ್ಯ ಕ್ಲಬ್‌ಹೌಸ್‌ಗಿದೆ’ ಎಂದು ಅಭಿಪ್ರಾಯಪಡುತ್ತಾರೆ ಅವರು.

ಕ್ಲಬ್‌ಹೌಸ್ ಅಲ್ಪಾಯುಷಿಯೇ?

ಕೇಳುಗ ಕೇಂದ್ರಿತವಾಗಿರುವುದೇ ಕ್ಲಬ್‌ಹೌಸ್‌ನ ಮಿತಿ ಆಗಿರುವುದರಿಂದ ಇದು ಅಲ್ಪಾಯುಷಿಯೇ ಎನ್ನುವ ಪ್ರಶ್ನೆಯೂ ಎದುರಾಗುತ್ತದೆ. ಇದು ಕೋವಿಡ್ ಕಾಲದಲ್ಲಷ್ಟೇ ಜನಪ್ರಿಯತೆ ಉಳಿಸಿಕೊಂಡು ನೇಪಥ್ಯಕ್ಕೆ ಸರಿದೀತೇ ಅನ್ನುವ ಅನುಮಾನವೂ ಇದೆ. ಆದರೆ, ಕೋವಿಡ್‌ ನಂತರದ ಕಾಲದಲ್ಲೂ ನಾಟಕಗಳನ್ನು ಕೇಳುವ ವರ್ಗ ಇದ್ದೇ ಇರುತ್ತದೆ. ಹಾಗಾಗಿ, ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳಂತೆ ಕ್ಲಬ್‌ಹೌಸ್ ಕೂಡಾ ಸೀಮಿತ ಮಿತಿಯಲ್ಲೇ ಜನಪ್ರಿಯತೆ ಉಳಿಸಿಕೊಳ್ಳಲಿದೆ ಅನ್ನುವುದು ರಂಗತಜ್ಞರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT