ಮಾನವೀಯ ಕಳ್ಳ ತೋರಿಸಿದ ಅಪರಾಧ ಜಗತ್ತು

7

ಮಾನವೀಯ ಕಳ್ಳ ತೋರಿಸಿದ ಅಪರಾಧ ಜಗತ್ತು

Published:
Updated:
ಪ್ಲೀಸ್‌ ಅರೆಸ್ಟ್‌ ಮಿ ನಾಟಕದಲ್ಲಿ ನ್ಯಾಯಾಧೀಶರಾಗಿ ಮಹಾದೇವ ಹಡಪದ ಹಾಗೂ ಕಳ್ಳನಾಗಿ ಜಗದೀಶ ನೆರಳೂರ

ಪಾಪ ಹೆಚ್ಚಿನದೋ, ಅಪರಾಧ ಹೆಚ್ಚಿನದೋ?’
‘ಕಾನೂನು ಉಲ್ಲಂಘನೆ ಅಪರಾಧವಾಗ್ತದೆ’
‘ಹಾಗಾದ್ರೆ, ಪಾಪ ಎಲ್ಲಿ ಬರ್ತದ? ಪಾಪದ ಬಗ್ಗೆ ಕಾನೂನಿನಲ್ಲಿ ಎಲ್ಲೂ ಉಲ್ಲೇಖ ಇಲ್ಲ, ಅದು ಇರೋದು ಮನುಷ್ಯ ಧರ್ಮದಲ್ಲಿ’

‘ದೇವರ ನಿಯಮಗಳನ್ನು ಮುರಿಯುವವರು ಪಾಪಿಗಳು’ ಎಂದು ನ್ಯಾಯಾಧೀಶ ಹೇಳುತ್ತಾರೆ. ‘ಹಾಗಾದರೆ ನಾನು ಪಾಪಿಯಲ್ಲ, ಅಪರಾಧ ಮಾಡಿದ್ದೇನೆ. ಕಳ್ಳತನ ಮಾಡುವುದರ ಮೂಲಕ ಅಪರಾಧ ಮಾಡಿದ್ದೇನೆ. ಯಾರಿಗೂ ಅನ್ಯಾಯ ಮಾಡಿಲ್ಲ’

ಇದು ಕಳ್ಳ ಹಾಗೂ ನ್ಯಾಯಾಧೀಶರ ನಡುವೆ ನಡೆಯುವ ಸಂಭಾಷಣೆ. ಚಾರ್ವಾಕ ಸಂಸ್ಥೆಯು ನಗರದ ಕಿರು ರಂಗಮಂದಿರದಲ್ಲಿ ಏರ್ಪ ಡಿಸಿದ್ದ ‘ಕಥಾನಾಟಕೋತ್ಸವ’ ಅಂಗವಾಗಿ ಜುಲೈ 4ರಂದು ಪ್ರದರ್ಶನಗೊಂಡ ‘ಪ್ಲೀಸ್‌ ಅರೆಸ್ಟ್ ಮಿ’ ನಾಟಕದ ಗಮನ ಸೆಳೆಯುವ ಸಂಭಾಷಣೆ. ನ್ಯಾಯಾಧೀಶರಾಗಿ ಮಹಾದೇವ ಹಡಪದ ಹಾಗೂ ಕಳ್ಳನಾಗಿ ಜಗದೀಶ ನೆಗಳೂರ ಅವರು ಇಡೀ ನಾಟಕವನ್ನು ತೂಗಿಸಿಕೊಂಡು ಹೋಗುತ್ತಾರೆ. ಇಲ್ಲಿ ದೃಶ್ಯಗಳು ಬದಲಾಗುವುದಿಲ್ಲ. ಒಂದಂಕದ ನಾಟಕದ ಹಾಗೆ. ಸರಳ ರಂಗಸಜ್ಜಿಕೆಯಲ್ಲಿ ಮಹಾದೇವ ಹಡಪದ ಹಾಗೂ ಜಗದೀಶ ಅವರ ಅಭಿನಯವೇ ಈ ನಾಟಕದ ಜೀವಾಳ. ಆದರೆ, ಕೆಲವು ಕಡೆ ಸಂಗೀತದ ಅಬ್ಬರ ತುಸು ಹೆಚ್ಚಿ, ಮಾತುಗಳು ಕೇಳದಂತಾಗುತ್ತವೆ. ಆದರೂ ಒಂದೂಕಾಲು ಗಂಟೆಯ ಈ ನಾಟಕ ಕುತೂಹಲ ಕೆರಳಿಸುತ್ತ ಪ್ರೇಕ್ಷಕರನ್ನು ಹಿಡಿದಿಡುತ್ತದೆ.

ರಾತ್ರಿ ಹೊತ್ತು ನ್ಯಾಯಾಧೀಶರ ಮನೆಗೆ ನುಗ್ಗುವ ಕಳ್ಳ, ಅವರು ಎಚ್ಚರವಾದ ಕೂಡಲೇ ಆರಾಮವಾಗಿ ಅವರೊಂದಿಗೆ ಮಾತಾಡುತ್ತಾನೆ, ಸಂವಾದ ನಡೆಸುತ್ತಾನೆ. ನ್ಯಾಯಾಧೀಶರ ಮನೆಗೇ ಕಳ್ಳತನ ಮಾಡುವುದು ಕೂಡಾ ಅವನ ಉದ್ದೇಶ. ಏಕೆಂದರೆ, ಆತನ ವಕೀಲರ ಸಲಹೆ ಮೂಲಕ ಬೇಗ ಅರೆಸ್ಟ್ ಆಗಬಹುದು. ಜೈಲಲ್ಲಿಯೇ ಆರಾಮವಾಗಿರಬಹುದು ಎನ್ನುವ ಯೋಜನೆಯಿಂದ ನ್ಯಾಯಾಧೀಶರ ಮನೆಗೇ ನುಗ್ಗುತ್ತಾನೆ. ಮುಖ್ಯವಾಗಿ ಆತನಿಗೆ ಜೀವಭಯ ಇರುತ್ತದೆ. ಅವನನ್ನು ಬೆನ್ನತ್ತಿ ಬರುವ ವ್ಯಕ್ತಿಯಿಂದ ತಪ್ಪಿಸಿಕೊಳ್ಳಲು ಜೈಲೇ ಸರಿಯಾದ ಸ್ಥಳ ಎಂದು ತಿಳಿದು ‘ಪ್ಲೀಸ್‌ ಅರೆಸ್ಟ್‌ ಮಿ’ ಎಂದು ನ್ಯಾಯಾಧೀಶರ ಬಳಿ ವಿನಂತಿಸಿಕೊಳ್ಳುತ್ತಾನೆ, ಗೋಗರೆಯುತ್ತಾನೆ, ಒತ್ತಾಯಿಸುತ್ತಾನೆ.

ಇದಕ್ಕೆ ನ್ಯಾಯಾಧೀಶರು, ‘ಮಾನವೀತೆಯ ದೃಷ್ಟಿಯಿಂದ ನಿನ್ನ ಅರೆಸ್ಟ್ ಮಾಡಿಸುವೆ’ ಎಂದಾಗ, ‘ಜಡ್ಜ್ ಆಗಿಯೂ ನಿಮ್ಮ ಹತ್ರ ಮಾನವೀಯತೆ ಐತಿ’ ಎಂದು ಕಳ್ಳ ಬೆರಗಾಗುತ್ತಾನೆ. ಕೋರ್ಟ್‌ ಒಳಗೆ ಸತ್ಯ ಪ್ರತಿಪಾದಕರಾದ ನ್ಯಾಯಾಧೀಶರು, ಹೊರಗಿನ ಜಗತ್ತಿನ ಸತ್ಯಕ್ಕೆ ಮುಖಿಮುಖಿಯಾಗುತ್ತಾರೆ. ಜತೆಗೆ, ವಂಚನೆಯ ಜಾಲವೊಂದರ ಮುಖ್ಯಸಾಕ್ಷಿಯನ್ನು ಎದುರಾಗುತ್ತಾರೆ. ನಾಳೆ ತೀರ್ಪು ಇರುವ ಪ್ರಕರಣಕ್ಕೆ ಸಂಬಂಧಪಟ್ಟ ಸಾಕ್ಷಿಯಾದ ಕಳ್ಳನೊಂದಿಗೆ ಮುಖಾಮುಖಿಯಾಗುತ್ತಾರೆ. ಜತೆಗೆ, ಕಥನದ ಕುತೂಹಲದ ಭಾಗವೂ ಆಗುತ್ತಾರೆ. ಕಳ್ಳನ ವಿವರಗಳನ್ನು ಕೆದುಕುತ್ತಾರೆ. ಕಳ್ಳನ ತಾಯಿ ಕೊಳೆಗೇರಿ ವಾಸಿ. ಯಾರೊಂದಿಗೋ ಓಡಿಹೋಗಿರುತ್ತಾಳೆ. ಆಮೇಲೆ ಹಸಿವು, ಬಡತನದಿಂದಾಗಿ ಅನಿವಾರ್ಯವಾಗಿ ಕಳ್ಳನಾದ ಕುರಿತು ಹೇಳುತ್ತಾನೆ. ಆದರೆ ತಾನು ಮಾನವೀಯ ಕಳ್ಳ ಎಂದು ಸಾಬೀತುಪಡಿಸುತ್ತಾನೆ.

ಚಾಕು, ಚೂರಿ, ಪಿಸ್ತೂಲ್‌ ಇಟ್ಟುಕೊಳ್ಳದೆ ಕಪ್ಪುಹಣ ಇರುವವರ ಬಳಿಯೇ ಕಳ್ಳತನಕ್ಕೆ ಮುಂದಾಗುತ್ತಾನೆ. ಈ ನಡುವೆ ಪತ್ರಕರ್ತನ ಜೀವ ಉಳಿಸುವ ಸಲುವಾಗಿ ಕಳ್ಳ ಒದ್ದಾಡುತ್ತಾನೆ. ಪತ್ರಕರ್ತ ಸತ್ತರೂ ವಿಷಯ ಮುಚ್ಚಿಡದೆ ನ್ಯಾಯಾಧೀಶರಿಗೆ ತಲುಪಿಸುವ ಉದ್ದೇಶದಿಂದ ಕಳ್ಳತನಕ್ಕೆಂದು ಬರುತ್ತಾನೆ. ನ್ಯಾಯಾಧೀಶರ ಮನೆ ಪಕ್ಕದಲ್ಲಿಯೇ ಇರುವ ಪತ್ರಕರ್ತ, ಬ್ರೆಕ್ಕಿಂಗ್ ನ್ಯೂಸ್‌ ಕೊಡಲು ತವಕಿಸುತ್ತಾನೆ. ಕೊನೆಗೆ ಕಳ್ಳನನ್ನು ಅರೆಸ್ಟ್‌ ಮಾಡಲು ಪೊಲೀಸರು ಬರುವ ಮುನ್ನ ಕಳ್ಳ ಫೈಲೊಂದನ್ನು ನ್ಯಾಯಾಧೀಶರಿಗೆ ಒಪ್ಪಿಸುತ್ತಾನೆ. ಇದರೊಂದಿಗೆ ಅಪರಾಧ ಜಗತ್ತಿನ ರೋಚಕ ಕಥೆಗಳನ್ನು, ಕಪ್ಪುಹಣ ಉಳ್ಳವರ ತೊಳಲಾಟಗಳನ್ನು ಈ ನಾಟಕ ಕಟ್ಟಿಕೊಡುತ್ತದೆ. ಜತೆಗೆ, ತನ್ನ ಕಳ್ಳತನ ವೃತ್ತಿಯ ತಮಾಷೆಯ ಸಂಗತಿಗಳನ್ನೂ ಕಳ್ಳ ಹೇಳುತ್ತ ನ್ಯಾಯಾಧೀಶರು ಕಂಡಿರದ ಜಗತ್ತೊಂದನ್ನು ಪರಿಚಯಿಸುತ್ತಾನೆ. ಹೀಗೆ ‘ಪ್ಲೀಸ್ ಅರೆಸ್ಟ್ ಮಿ’ ನಾಟಕ ನಮ್ಮನ್ನು ಬಂಧಿಸುತ್ತದೆ.

 

ಬರಹ ಇಷ್ಟವಾಯಿತೆ?

 • 20

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !