ರಂಗದ ಮೇಲೆ ಡೈನೋಸಾರ್‌!

7

ರಂಗದ ಮೇಲೆ ಡೈನೋಸಾರ್‌!

Published:
Updated:
Deccan Herald

ಡೈನೋಸಾರ್‌ಗಳನ್ನು ನೀವು ನೋಡಿದ್ದೀರಾ? ಎಂದು ಪ್ರಶ್ನಿಸಿದಾಗ ಬಹುತೇಕರು ಹೇಳುವುದು ‘ಜುರಾಸಿಕ್ ಪಾರ್ಕ್’ ಎಂಬ ಹಾಲಿವುಡ್ ಸರಣಿ ಚಿತ್ರಗಳ ಬಗ್ಗೆ. ಲಕ್ಷಾಂತರ ವರ್ಷಗಳ ಹಿಂದೆ ವೈಭವಯುತವಾಗಿ ಜೀವಿಸಿ, ಇದ್ದಕ್ಕಿದ್ದಂತೆ ಮಹಾಪ್ರಳಯವೊಂದಕ್ಕೆ ಸಿಲುಕಿ ನಿರ್ನಾಮಗೊಂಡು ಭೂಗರ್ಭ ಸೇರಿದ ಭಯಾನಕ ಹಲ್ಲಿ ರೂಪದ ಈ ಜೀವಿಗಳ ಗತವೈಭವವನ್ನು ಮರುಸೃಷ್ಟಿಸುವಲ್ಲಿ ಈ ಚಿತ್ರಗಳು ಯಶಸ್ವಿಯಾಗಿದ್ದವು.

ಸಿನಿಮಾದಲ್ಲೇನೋ ಅವುಗಳನ್ನು ನೋಡಿಯಾಯಿತು. ಆದರೆ ಇಂಥ ವಿಶಿಷ್ಟ ಡೈನೋಸಾರ್ ಜಗತ್ತನ್ನು ರಂಗಭೂಮಿ ಮೇಲೆ ನೋಡುವಂತಾದರೆ? ಇಂಥದ್ದೊಂದು ಅಪರೂಪದ ಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ ರಂಗಕರ್ಮಿ ಶ್ರವಣಕುಮಾರ್.

ಚಿಕ್ಕ ವಯಸ್ಸಿನಿಂದಲೂ ಶ್ರವಣ್ ಕುಮಾರ್ ಅವರಿಗೆ ಪ್ರಾಣಿ ಪಕ್ಷಿಗಳ ಜೀವನದ ಬಗ್ಗೆ ತುಂಬಾ ಕೂತುಹಲವಂತೆ. ನೀನಾಸಂನಲ್ಲಿ ರಂಗ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಪ್ರಾಣಿ ಪಕ್ಷಿಗಳ ಕತೆಗಳನ್ನು ರಂಗಭೂಮಿಯ ಮೇಲೆ ಏಕೆ ತರಬಾರದು ಎಂದು ಯೋಚಿಸುತ್ತಿದ್ದಾಗ ಅವರ ಕಣ್ಣ ಮುಂದೆ ಬಂದದ್ದು ಡೈನೋಸಾರ್‌ಗಳ ಜಗತ್ತು.

ಜಪಾನ್ ದೇಶದ ಪ್ರಸಿದ್ಧ ‘ಬುನ್ರಾಖು’ ಎಂಬ ಗೊಂಬೆಯಾಟದಿಂದ ಸ್ಫೂರ್ತಿ ಪಡೆದು ‘ರೆಕ್ಸ್ ಅವರ್ಸ್- ಡೈನೋ ಏಕಾಂಗಿ ಪಯಣ’ ಎಂಬ ಪಪೆಟ್ (ಸೂತ್ರದ ಬೊಂಬೆ) ನಾಟಕವನ್ನು ಅವರು ಪ್ರದರ್ಶಿಸುತ್ತಿದ್ದಾರೆ. ಇದರ ವೈಶಿಷ್ಟ್ಯವೆನೆಂದರೆ ನಾಟಕದಲ್ಲಿ ಕಲಾವಿದರೇ ಕೆಲವು ಡೈನೋಸಾರ್‌ ರೂಪದ ಗೊಂಬೆಯೊಳಗೆ ಸೇರಿಕೊಂಡು ಅಭಿನಯಿಸುತ್ತಾರೆ. ವಿಶಿಷ್ಟ ಬೆಳಕಿನ ವಿನ್ಯಾಸದಲ್ಲಿ ಮೂಡಿಬಂದಿರುವ ಈ ನಾಟಕದಲ್ಲಿ ಕಲಾವಿದರು ಕತ್ತಲ ಮರೆಯಲ್ಲಿ ಪಪೆಟ್‌ಗಳ ಚಲನವಲನಗಳನ್ನು ನಿಯಂತ್ರಿಸುತ್ತಾರೆ. ಅಂದ ಹಾಗೇ ಹಿನ್ನೆಲೆ ಸಂಗೀತ ಪ್ರಧಾನವಾಗಿರುವ ಈ ನಾಟಕದಲ್ಲಿ ಯಾವುದೇ ಸಂಭಾಷಣೆಗಳಿಲ್ಲ. ಸುಮಾರು 1 ಗಂಟೆ ಅವಧಿಯ ಈ ನಾಟಕ ಮಕ್ಕಳಿಂದ ಹಿರಿಯರಿಗೂ ಮುದ ನೀಡುವಲ್ಲಿ ಯಶಸ್ವಿಯಾಗುತ್ತದೆ.

ಕತೆ ಹೀಗಿದೆ…
ಮೊಟ್ಟೆಯೊಡೆದು ಅದರಿಂದ ಟಿ-ರೆಕ್ಸ್ (ಡೈನೋಸಾರ್‌ನ ಒಂದು ಪ್ರಬೇಧ) ಹೊರಬರುವ ದ್ರಶ್ಯದೊಂದಿಗೆ ರಂಗದ ಮೇಲೆ ಡೈನೋಸಾರ್‌ಗಳ ವಿಶಿಷ್ಟ ಜಗತ್ತು ಅನಾವರಣಗೊಳ್ಳುತ್ತಾ ಹೋಗುತ್ತದೆ. ಪುಟ್ಟ ಟಿ-ರೆಕ್ಸ್ ಮರಿ ಸಹಜವಾಗಿ ನಿಸರ್ಗದ ಅಚ್ಚರಿಯನ್ನು ಗಮನಿಸುತ್ತ, ಅದಕ್ಕೆ ಹೊಂದಿಕೊಳ್ಳುತ್ತ ಸಾಗುತ್ತದೆ. ಅಷ್ಟರಲ್ಲಿ ಹಸಿದ ರ‍್ಯಾಪ್ಟರ್‌ಗಳ (ಡೈನೋಸಾರ್‌ನ ಮತ್ತೊಂದು ಪ್ರಬೇಧ) ದಾಳಿಯಲ್ಲಿ ಸಿಲುಕುವ ಟಿ- ರೆಕ್ಸ್ ಅನ್ನು ಒಂದು ರ‍್ಯಾಪ್ಟರ್ ಕಾಪಾಡುತ್ತದೆ. ಮರಿಯ ಮುಗ್ಧ ಪ್ರೀತಿಗೆ ಸೋತು ಸಾಕುತಾಯಿಯಾಗಿ ಅದಕ್ಕೆ ಪೋಷಣೆಯಿತ್ತು ಟಿ- ರೆಕ್ಸ್ ಮರಿಯನ್ನು ಬೆಳೆಸಲು ಆರಂಭಿಸುತ್ತದೆ. ಜೊತೆಗೆ ಆ ಮರಿಗೆ ಬೇಕಾದ ಬೇಟೆಯ ವಿದ್ಯೆಯನ್ನು, ಸಂರಕ್ಷಣೆಯ ತಂತ್ರಗಳನ್ನು ಕಲಿಸಿಕೊಡುತ್ತದೆ. ಕ್ರಮೇಣ ನೈಸರ್ಗಿಕ ಅಸಮತೋಲನಗಳು ಆರಂಭವಾಗಿ ಪ್ರಾಣಿಗಳೆಲ್ಲ ವಲಸೆ ಹೊರಡುವ ಸಂದರ್ಭದಲ್ಲಿ ಮರಿ ಟಿ- ರೆಕ್ಸ್ ತನ್ನ ನಿಜವಾದ ತಾಯಿಯನ್ನು ಭೇಟಿಯಾಗುತ್ತದೆ. ಆದರೆ ಅದಕ್ಕೆ ತನ್ನಂತೆಯೇ ದೇಹ ರಚನೆಯನ್ನು ಹೊಂದಿರುವ ಅಪರಿಚಿತ ತಾಯಿಯನ್ನು ಕಂಡಾಗ ತನ್ನಂತೇ ಇಲ್ಲದಿದ್ದರೂ ಪೋಷಿಸಿದ ಸಾಕುತಾಯಿಯೇ ಹೆಚ್ಚು ಆಪ್ತವೆನಿಸಿಬಿಡುತ್ತದೆ. ಆದರೆ ಮರಿಯ ರಕ್ಷಣೆ ಅದರ ಹೆತ್ತ ತಾಯಿಯಿಂದ ಮಾತ್ರ ಸಾಧ್ಯವೆಂದು ತಿಳಿದು ರ‍್ಯಾಪ್ಟರ್ ಟಿ-ರೆಕ್ಸ್ ಮರಿಯನ್ನು ತಾಯಿಯೊಂದಿಗೆ ಕಳುಹಿಸಿಕೊಡುತ್ತದೆ. ಇದು ಈ ನಾಟಕದ ಕಥಾವಸ್ತು.

ರಂಗದ ಮೇಲೆ ಮೈನವಿರೇಳಿಸುವ ಡೈನೋಸಾರ್‌ಗಳ ಕಾದಾಟ, ಅಬ್ಬರ, ಅವುಗಳ ನಡುವಿನ ಭಾವನಾತ್ಮಕ ಸಂಬಂಧದ ಸನ್ನಿವೇಶಗಳನ್ನು ನೋಡುತ್ತಿರುವಾಗ ಪ್ರೇಕ್ಷಕರಿಗೆ ಇದೊಂದು ಪಪೆಟ್ ಷೋ ಎಂದು ಅನ್ನಿಸುವುದೇ ಇಲ್ಲ. ಅಷ್ಟರ ಮಟ್ಟಿಗೆ ನಾಟಕದ ಸನ್ನಿವೇಶಗಳು ನೈಜತೆಯಿಂದ ಕೂಡಿವೆ. ಇಡೀ ನಾಟಕದಲ್ಲಿ ಕಲಾವಿದರು ಅತ್ಯಂತ ಚಾಕಚಾಕ್ಯತೆ ಮತ್ತು ಕಲಾ ನಿಪುಣತೆಯಿಂದ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ಒಂದಿಷ್ಟು ತಾಂತ್ರಿಕ ದೋಷಗಳನ್ನು ಹೊರತು ಪಡಿಸಿದರೆ ನಾಟಕ ಆಪ್ತವೆನಿಸುತ್ತದೆ. ಶ್ರವಣ್ ಕುಮಾರ್ ಮತ್ತು ಅವರ ಸಂಗಡಿಗರಾದ ಗಗನ್ ಕುಮಾರ್, ಪಿ.ಎಂ.ಸಮರ್ಥ ತಯಾರಿಸಿರುವ ಪಪೆಟ್‌ಗಳು ಮನಮೋಹಕವಾಗಿವೆ. ಬೆಳಕು ಪ್ರಧಾನವಾಗಿರುವ ಈ ನಾಟಕದಲ್ಲಿ ಮಹೇಶ್ ಕಲ್ಲತ್ತಿ ವಿಶಿಷ್ಟ ರೀತಿಯ ಬೆಳಕಿನ ವಿನ್ಯಾಸ ಮಾಡಿದ್ದಾರೆ.

ನಾಟಕದ ಕುರಿತು ಮಾತನಾಡಿದ ಶ್ರವಣಕುಮಾರ್ ‘ಪ್ರಾಣಿ ಪಕ್ಷಿಗಳ ಬಗ್ಗೆ ಮಕ್ಕಳಲ್ಲಿ ಕೂತುಹಲ ಮೂಡಿಸುವ ಉದ್ದೇಶದಿಂದಲೇ ಈ ನಾಟಕ ಮಾಡಿದ್ದೇನೆ. ಇಂದು ಮಕ್ಕಳಲ್ಲಿ ಮಾಂಸಾಹಾರಿ ಪ್ರಾಣಿಗಳ ಬಗ್ಗೆ ತಪ್ಪು ಕಲ್ಪನೆಗಳನ್ನು ಬಿತ್ತಲಾಗುತ್ತಿದೆ. ಮಾಂಸಾಹಾರಿ ಪ್ರಾಣಿಗಳೆಲ್ಲ ದುಷ್ಟ ಪ್ರಾಣಿಗಳಲ್ಲ, ಅವು ಸಹಜವಾಗಿ ನೈಸರ್ಗಿಕ ಸಮತೋಲನ ಕಾಯ್ದುಕೊಳ್ಳುವಂತವುಗಳು. ನಿಸರ್ಗದಲ್ಲಿ ಬಲಿಷ್ಠವಾದವು ಉಳಿಯುತ್ತವೆ ಮತ್ತು ಅವು ದುರ್ಬಲ ಪ್ರಾಣಿಗಳನ್ನು ತಿಂದು ಬದುಕುತ್ತವೆ. ಇದು ನಿಸರ್ಗದ ನಿಯಮ. ಮಾಂಸಾಹಾರಿ ಪ್ರಾಣಿಗಳೊಳಗೆ ಪ್ರೀತಿ, ತಾಯಿ ಮಮತೆ ಇದ್ದೇ ಇರುತ್ತದೆ. ಇಂಥ ಪ್ರಕೃತಿದತ್ತ ಸಹಜ ಕ್ರಿಯೆಗಳ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿ ನೋಡದೇ ಸಹಜ ದೃಷ್ಠಿಕೋನದಿಂದ ನೋಡಬೇಕು ಎಂದು ಮಕ್ಕಳಿಗೆ ತಿಳಿಸಿಕೊಡುವುದೇ ಈ ನಾಟಕದ ಆಶಯ’ ಎಂದು ವಿವರಿಸಿದರು.

ರಂಗಾಯಣದ ಸಂಚಾರಿ ರಂಗ ಘಟಕದ ಕಲಾವಿದರು ಈ ವರ್ಷದ ನವರಾತ್ರಿ ರಂಗೋತ್ಸವದಲ್ಲಿ ನಾಟಕದ ಮೊದಲ ಪ್ರದರ್ಶನ ನೀಡಿದ್ದರು. ಅಲ್ಲಿಂದ ಪ್ರತಿ ಭಾನುವಾರ ರಂಗಾಯಣದ ಭೂಮಿಗೀತದಲ್ಲಿ ಸಂಜೆ 7ಕ್ಕೆ ಪ್ರದರ್ಶನಗೊಳ್ಳುತ್ತಲಿದ್ದು, ಡಿಸೆಂಬರ್ ಕೊನೆಯ ಭಾನುವಾರದವರೆಗೂ ಪ್ರೇಕ್ಷಕರಿಗೆ ರಸದೌತಣ ನೀಡಲಿದೆ.

ವೀಕೆಂಡ್‌ನಲ್ಲಿ ನಿಮ್ಮ ಮಕ್ಕಳಿಗೆ ಈ ಅಪರೂಪದ ನಾಟಕವನ್ನು ತೋರಿಸುವುದನ್ನು ಮರೆಯಬೇಡಿ. ಶ್ರವಣ್ ಕುಮಾರ್ ಅವರ ಮೊ: 9449193840.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !