ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಕ್ಷಕರ ಕಾಡಿದ ‘ಎರಡು ನಾಯಿಗಳು’

ಶ್ರೀರಂಗ ರಂಗ ಹವ್ಯಾಸಿ ಕಲಾವಿದರ ತಂಡ ಪ್ರದರ್ಶಿಸಿದ ನಾಟಕ
Last Updated 10 ಜುಲೈ 2018, 19:56 IST
ಅಕ್ಷರ ಗಾತ್ರ

ತುಮಕೂರು: ಇಲ್ಲಿನ ಸದಾಶಿವನಗರ ಬಡಾವಣೆಯ ಶ್ರೀರಂಗ ರಂಗ ಕಲಾ ಮಂದಿರದಲ್ಲಿ ಕಳೆದ ಶನಿವಾರ ‘ಎರಡು ನಾಯಿಗಳು’ ಪ್ರೇಕ್ಷಕರನ್ನು ಕಾಡಿದವು! ಪ್ರೇಕ್ಷಕರ ತಲೆ ಹೊಕ್ಕ ನಾಯಿಗಳು ಇನ್ನೂ ಕಾಡುತ್ತಲೆ ಇವೆ.

ತಾನು ನಂಬಿರುವ ಸಿದ್ಧಾಂತಕ್ಕೆ ಬದ್ಧನಾಗಿ ಬಡತನದಲ್ಲಿಯೇ ಜೀವನ ಕಳೆದರೂ ಸಿದ್ಧಾಂತದ ವಿರುದ್ಧ ರಾಜಿ ಮಾಡಿಕೊಳ್ಳದೇ ಬದುಕುವುದು ಒಂದೆಡೆಯಾದರೆ ಮತ್ತೊಂದೆಡೆ ಸಿದ್ಧಾಂತಕ್ಕಿಂತ ಇಂದಿನ ಬದುಕೇ ಮುಖ್ಯ ಎಂದು ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟು ಬದುಕುವುದು. ಹೀಗೆ, ಇಬ್ಬರು ಆತ್ಮೀಯ ಸ್ನೇಹಿತರ ತದ್ವಿರುದ್ಧ ಮನಸ್ಥಿತಿಯ ಒಳಸುಳಿಗಳನ್ನು ಬಿಚ್ಚಿಡುವ ‘ಎರಡು ನಾಯಿಗಳು’ ನಾಟಕ ಕಳೆದ ಶನಿವಾರ ನಗರದ ಸದಾಶಿವನಗರದ ಶ್ರೀರಂಗ ರಂಗ ಕಲಾ ಮಂದಿರದಲ್ಲಿ ಪ್ರದರ್ಶನಗೊಂಡಿತು.

ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಆಶ್ರಯದಲ್ಲಿ ಶ್ರೀರಂಗ ರಂಗ ಹವ್ಯಾಸಿ ಕಲಾವಿದರ ತಂಡವು ನಾಟಕ ಪ್ರದರ್ಶಿಸಿತು. ಈಚನೂರು ಇಸ್ಮಾಯಿಲ್ ಅವರ ಈ ನಾಟಕವನ್ನು ಎಚ್.ಎಂ.ಟಿ.ನಿವೃತ್ತ ನೌಕರರು ಹಾಗೂ 35 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಎಚ್.ಎಂ.ರಂಗಯ್ಯ ನಿರ್ದೇಶನದಲ್ಲಿ ಶ್ರೀರಂಗ ರಂಗ ಹವ್ಯಾಸಿ ಕಲಾವಿದರ ತಂಡದ ಎಚ್.ಸಿ.ನರಸಿಂಹಮೂರ್ತಿ, ಅಜಯ್‌ಕುಮಾರ್, ರೂಬಿನ್, ಗೀತಾ ಅವರು ಅಭಿನಯಿಸಿದರು.

ಭ್ರಷ್ಟಾಚಾರದಲ್ಲಿ ಸ್ವತಃ ಭಾಗಿಯಾಗುವುದಕ್ಕಿಂತ ನಮ್ಮ ಕಣ್ಣೆದುರಿಗೆ ಭ್ರಷ್ಟಾಚಾರ ನಡೆಯುತ್ತಿದ್ದರೂ ಅದನ್ನು ನೋಡಿಕೊಂಡು ಮೌನವಾಗಿರುವುದು ಸಹ ಭ್ರಷ್ಟಾಚಾರ ಎಂಬ ನಾಟಕದ ತಿರುಳನ್ನು ನಿರ್ದೇಶಕರು ಅತ್ಯಂತ ನೈಜವಾಗಿ ಪ್ರೇಕ್ಷರ ಮನ ಮುಟ್ಟಿಸಿದರು. ರಾಜಕೀಯ ಚದುರಂಗದಾಟಕ್ಕೆ ಪಕ್ಷದಿಂದ ಪಕ್ಷಕ್ಕೆ ಹಾರಾಡುವ ರಾಜಕೀಯ ಮನಸ್ಥಿತಿಗೆ ಈ ನಾಟಕ ಕನ್ನಡಿ ಹಿಡಿದಂತಿತ್ತು.

ಜಾತಿ, ಧರ್ಮದ ಹೆಸರಿನಲ್ಲಿ ಮನುಷ್ಯ ಮನುಷ್ಯರ ನಡುವೆ ವಿಷದ ಬೀಜ ಬಿತ್ತಿ ಅದನ್ನು ಹೆಮ್ಮರವಾಗಿಸಲು ನಿರಂತರ ಪ್ರಯತ್ನಗಳು, ಎಲ್ಲರಿಗೂ ಸಮಾನ ಅವಕಾಶ ಲಭಿಸುವಂತ ಸಮ ಸಮಾಜ ಕಟ್ಟುವಂತಹ ಕೆಲಸ ಆಗಬೇಕು ಎಂಬ ಸಾಮಾಜಿಕ ಕಾಳಜಿಯ ಸಂದೇಶ ಎತ್ತಿ ಹಿಡಿದು ಪ್ರೇಕ್ಷರನ್ನು ಚಿಂತನೆಗೆ ಹಚ್ಚಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT