ಬೆಳಕು ಹುಡುಕುವ ಹೆಬ್ಬಾಗಿಲು

ಭಾನುವಾರ, ಮಾರ್ಚ್ 24, 2019
31 °C

ಬೆಳಕು ಹುಡುಕುವ ಹೆಬ್ಬಾಗಿಲು

Published:
Updated:
Prajavani

‘ಪಂಚಾಕ್ಷರವೆಂಬುದು ನನ್ನೊಳಗಿನ ಬೆಳಕನ್ನು ಹುಡುಕುವ ಹೆಬ್ಬಾಗಿಲು ಚಂದಯ್ಯ, ಕ್ರಾಂತಿಯು ಹೊರಗೆ ಆಗಬೇಕಿಲ್ಲ. ನಿನ್ನೊಳಗೆ, ನಿನ್ನ ಅರಿವಿನೊಳಗೆ ಬೆಳಕು ಸಂಚರಿಸಿದರೆ ನೀನು ಬದಲಾಗುತ್ತೀಯ. ಲೋಕವೂ ನಿನ್ನೊಂದಿಗೆ ಬದಲಾಗುತ್ತದೆ...’ ಹೀಗೆ ಚಂದಯ್ಯನಿಗೆ ಬಸವಣ್ಣ ಹೇಳುತ್ತಾರೆ.

ಇದು ‘ನುಲಿಯ ಚಂದಯ್ಯ’ ನಾಟಕದ ಮಹತ್ವದ ಮಾತು. ರಂಗಕರ್ಮಿ ಮಹಾದೇವ ಹಡಪದ ಅವರ ಧಾರವಾಡದ ಆಟಮಾಟ ತಂಡದ ಗಮನ ಸೆಳೆಯುವ ನಾಟಕವಿದು. ಈಗಾಗಲೇ ಒಂದೂವರೆ ತಿಂಗಳಲ್ಲಿ ಈ ನಾಟಕ 18 ಪ್ರಯೋಗಗಳನ್ನು ಕಂಡಿದೆ. ಲೇಖಕ ಚಂದ್ರಶೇಖರ ವಸ್ತ್ರದ ಅವರ ಪ್ರಸಂಗರೂಪದಲ್ಲಿದ್ದ (ತಾಳಮದ್ದಲೆ ಹಾಗೆ) ಇದು 2000ದಲ್ಲಿ 15 ಪ್ರಯೋಗಗಳನ್ನು ಕಂಡಿತ್ತು. ಆಗ ಗದಗಿನ ತೋಂಟದಾರ್ಯ ಮಠದ ಡಾ.ಸಿದ್ಧಲಿಂಗ ಸ್ವಾಮೀಜಿ ಅವರು ನಿರ್ಣಾಯಕ ಪಾತ್ರವಾದ ಚನ್ನಬಸವಣ್ಣನ ಪಾತ್ರ ಹಾಗೂ ಚಂದ್ರಶೇಖರ ವಸ್ತ್ರದ ಅವರು ನುಲಿಯ ಚಂದಯ್ಯ ಪಾತ್ರ ನಿರ್ವಹಿಸಿದ್ದರು. ಜನರ ಎದುರಿಗೆ ನುಲಿಯ ಚಂದಯ್ಯನ ತತ್ವಗಳನ್ನು ಸಾರಬೇಕೆಂದು ಈ ಪ್ರಸಂಗವನ್ನು ಎತ್ತಿಕೊಂಡಿದ್ದರು. ಗದಗಿನ ತೋಂಟದಾರ್ಯ ಶ್ರೀಗಳ ನೆನಪಿಗೆ ಇದನ್ನು ಮತ್ತೆ ಕೈಗೆತ್ತಿಕೊಂಡಿದ್ದು ಮಹಾದೇವ ಹಡಪದ. ಮತ್ತೆ ಇದು ಪ್ರಯೋಗಗೊಂಡಿದ್ದು ಕಳೆದ ವಾರದ ಧಾರವಾಡದಲ್ಲಿ ನಡೆದ ‘ಆಟಮಾಟ ಪ್ರಯೋಗ ರಂಗೋತ್ಸವದ’ದಲ್ಲಿ.

ನುಲಿಯ ಚಂದಯ್ಯನೆಂಬ ಶರಣ ಸಮಾಜಸೇವೆಯನ್ನೇ ಜಂಗಮ ಸೇವೆ ಎಂದುಕೊಂಡು ಕಾಯಾ–ವಾಚಾ– ಮನಸಾ ಕಾಯಕದಲ್ಲಿ ನಿರತನಾಗಿರುವ ನಿಜಶರಣ. ಒಮ್ಮೆ ಹಳ್ಳದಲ್ಲಿ ಹೊಡೆಹುಲ್ಲು ಕೊಯ್ಯುವಾಗ ಲಿಂಗದೇವ ಅಂಗದಿಂದ ಕೆಳಗುರುಳುತ್ತದೆ. ಕಾಯಕಕ್ಕೆ ಭಂಗ ಬಂದಿತೆಂದು ಚಂದಯ್ಯ ಇಷ್ಟಲಿಂಗವಾದ ಲಿಂಗದೇವನನ್ನು ಮರಳಿ ಸ್ವೀಕರಿಸದೆ ಹೋದಾಗ ಅದು ಆಕಾರ ಪಡೆದು ಮನುಷ್ಯರೂಪಿಯಾಗಿ ಬಂದು ಸ್ವೀಕರಿಸಬೇಕೆಂದು ಚಂದಯ್ಯನನ್ನು ಬೆನ್ನು ಹತ್ತುತ್ತದೆ. ಆಗ ಚಂದಯ್ಯ ಲಿಂಗವನ್ನು ಸ್ವೀಕರಿಸಲಾರದೆ ಜಂಗಮಸೇವೆಯಲ್ಲೇ ಲಿಂಗ ಕಾಣುತ್ತೇನೆಂದು ಹಟ ತೊಡುತ್ತಾನೆ. ಸಮಾಜಸೇವೆಯೇ ನಿಜವಾದ ಕಾಯಕದ ನೆಲೆ, ಶರಣರ ನೆಲೆ ಎಂದು ವಾದಿಸುತ್ತಾನೆ. ಈ ಕುರಿತು ಮಡಿವಾಳ ಮಾಚಿದೇವರ ಬಳಿ ನ್ಯಾಯ ಹೋದಾಗ, ಆ ಲಿಂಗದೇವನು ಕಾಯಕ ಮಾಡಿ ಜಂಗಮದಾಸೋಹ ಮಾಡಬೇಕೆಂಬ ನಿಬಂಧನೆಯಲ್ಲಿ ಒಪ್ಪಂದವಾಗುತ್ತದೆ.

ಆದರೆ, ಲಿಂಗದೇವ ಹಗ್ಗ ಮಾರಲು ಹೋದಾಗ ಹತ್ತು ಹಗ್ಗಗಳಿಗೆ ಇಪ್ಪತ್ತು ಹಾಗ (ಆ ಕಾಲದ ನಾಣ್ಯ) ತರುವ ಬದಲು ಬಸವಣ್ಣ ನೀಡಿದ ಸಾವಿರ ಹೊನ್ನು ತಂದು ಬಿಡುತ್ತಾನೆ. ಭಾವಮೂಲದ ಬಸವಣ್ಣ ದೇವರಿಗೇಕೆ ಕಾಯಕಷ್ಟವೆಂದು ಆ ಹತ್ತು ಹಗ್ಗಗಳಿಗೆ ಸಾವಿರ ಹೊನ್ನು ಕೊಟ್ಟಿರುವುದು ತಿಳಿದ ಚಂದಯ್ಯ ಲಿಂಗದೇವನನ್ನು ನಿರಾಕರಿಸುತ್ತಾನೆ. ಆಗ ಮಡಿವಾಳಯ್ಯ, ಲಿಂಗಯ್ಯ ಸಮೇತ ಚಂದಯ್ಯ ಅನುಭವ ಮಂಟಪಕ್ಕೆ ಬರುತ್ತಾನೆ. ಅನುಭವ ಮಂಟಪದಲ್ಲಿ ಚನ್ನಬಸವಣ್ಣನು ತಾತ್ವಿಕ ವಾದದ ಮೂಲಕ ಗುರು- ಲಿಂಗ- ಜಂಗಮದ ಮಹತ್ವ ಹೇಳುತ್ತಾನೆ. ಲಿಂಗದೇವನನ್ನು ಚಂದಯ್ಯ ಮತ್ತೆ ಸ್ವೀಕರಿಸುವಲ್ಲಿಗೆ ನಾಟಕ ಮುಗಿಯುತ್ತದೆ.

ನುಲಿಯ ಚಂದಯ್ಯನ ಪ್ರಕಾರ ಲಿಂಗಜಂಗಮಕ್ಕಿಂತ ಕಾಯಕವೇ ಮಹತ್ವವಾದುದು. ಕಾಯಕದಲ್ಲಿ ನಿರತನಾದರೆ ಇಷ್ಟಲಿಂಗ ಅಗತ್ಯವಿಲ್ಲ ಎನ್ನುವ ವಾದ. ಆದರೆ, ಇಷ್ಟಲಿಂಗ ಅಗತ್ಯವಿದೆ ಎಂಬುದು ಅನುಭವ ಮಂಟಪದಲ್ಲಿ ನಿರ್ಣಯವಾಗುತ್ತದೆ. ಅಂದರೆ ಕಾಯಕದ ಅಂತಿಮ ಗುರಿ ಜಂಗಮ ದಾಸೋಹ. ಆ ಜಂಗಮ, ಇಷ್ಟಲಿಂಗ ಇರದವರ ಹತ್ತಿರ ದಾಸೋಹ ಸ್ವೀಕರಿಸುವುದಿಲ್ಲ. ಹೀಗಾಗಿ ಇಷ್ಟಲಿಂಗ ಅಗತ್ಯ ಎಂದು ಅನುಭವ ಮಂಟಪದಲ್ಲಿ ನಿರ್ಣಯವಾಗುತ್ತದೆ. ಈ ಕುರಿತು ತಾರ್ಕಿಕ ಚುರುಕು ಸಂಭಾಷಣೆ ನಾಟಕದುದ್ದಕ್ಕೂ ಗಮನ ಸೆಳೆಯುತ್ತದೆ.

ಲಿಂಗದೇವನಾಗಿ ಕೆ.ಪಿ. ಭೈರವ್ ತಮ್ಮ ಆಂಗಿಕ ಅಭಿನಯದ ಮೂಲಕ ಮನಮುಟ್ಟುವಂತೆ ಅಭಿನಯಿಸಿದ್ದಾರೆ. ನುಲಿಯ ಚಂದಯ್ಯನಾಗಿ ಶಾಶ್ವತ್, ಮಡಿವಾಳ ಮಾಚಿದೇವನಾಗಿ ರೋಹನ್ ಪಾಟೀಲ, ಚನ್ನಬಸವಣ್ಣನಾಗಿ ಆದಿತ್ಯ ಯಲಿಗಾರ, ಬಸವಣ್ಣನಾಗಿ ಸಂಗಮೇಶ ಸೋರಗಾಂವಿ, ಅಲ್ಲಮನಾಗಿ ಮಹಾದೇವ ಹಡಪದ ನಾಟಕವನ್ನು ಯಶಸ್ವಿಗೊಳಿಸುತ್ತಾರೆ. ರಾಮಚಂದ್ರ ಶೇರಿಕಾರ್‌ ಅವರ ಸರಳ ರಂಗಸಜ್ಜಿಕೆಯಲ್ಲಿ ಈ ನಾಟಕ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಅರುಣಕುಮಾರ್ ಅವರ ಸಂಗೀತವೂ ಸಂದರ್ಭಕ್ಕೆ ತಕ್ಕಂತೆ ಸೊಗಸಾಗಿದೆ. ಗಾಯತ್ರಿ ಮಹಾದೇವ ಅವರ ನಿರ್ದೇಶನ ನಾಟಕದ ಮಹತ್ವವನ್ನು ಹೆಚ್ಚಿಸಿದೆ.

ಮುಖ್ಯವಾಗಿ ನಾಟಕವನ್ನೇ ವೃತ್ತಿಯಾಗಿಸಿಕೊಂಡ ಆಟಮಾಟ ತಂಡವು 2007ರಲ್ಲಿ ಧಾರವಾಡದಲ್ಲಿ ಶುರುವಾಯಿತು. ಆಧುನಿಕ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿರುವ ನಟರ ಓದು–ಗ್ರಹಿಕೆ–ಅಭಿವ್ಯಕ್ತಿ ಮತ್ತು ಸಂವಹನದ ಸಾಧ್ಯತೆಗಳನ್ನು ಹುಡುಕುವ ಹಂಬಲ ಈ ತಂಡದ್ದಾಗಿದೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !