‘ಗುಣಮುಖ’, ‘ಬಾಬಾ ಕಾರಂತ’ ನಾಟಕ ಪ್ರದರ್ಶನ ಇಂದು

7

‘ಗುಣಮುಖ’, ‘ಬಾಬಾ ಕಾರಂತ’ ನಾಟಕ ಪ್ರದರ್ಶನ ಇಂದು

Published:
Updated:

ನಾಟಕ ಬೆಂಗ್ಳೂರು ಆಯೋಜಿಸಿರುವ ರಂಗೋತ್ಸವದಲ್ಲಿ ಇಂದು ಪಿ. ಲಂಕೇಶ್ ರಚನೆಯ ‘ಗುಣಮುಖ’ ನಾಟಕ ಪ್ರದರ್ಶನವಾಗಲಿದೆ.

ಸಾರಾಂಶ: ಕಾರ್ಯತಂತ್ರ ಮತ್ತು ಆಚರಣೆಗಳ ಮೂಲಕ ಯುದ್ಧ ಮಾಡಿ ಇಡೀ ಹಿಂದೂಸ್ತಾನವನ್ನು ಆಕ್ರಮಿಸಿ ಸಾಮ್ರಾಜ್ಯ ಕಟ್ಟಿ ಚಕ್ರವರ್ತಿಯಾದ ಒಬ್ಬ ಪರ್ಷಿಯನ್ ಸಾಮಾನ್ಯ ಸೈನಿಕ ನಾದಿರ್ ಷಾನ ಕಥಾಹಂದರವುಳ್ಳ ನಾಟಕವೇ ‘ಗುಣಮುಖ’.

ನಾದಿರ್ 1740ರಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿದಾಗ ಮೊಗಲ್ ಮನೆತನ ಶ್ರೀಮಂತವಾಗಿತ್ತು. ಬಾಬರ್ ಮತ್ತು ಆಕ್ಬರ್‌ನ ಕೆಚ್ಚಿನ ಅಭಾವದಿಂದಾಗಿ ದೊರೆ ನಾಜಿರುದ್ದೀನ್ ಷಾ ಮೇಣದ ಬೊಂಬೆಯಂತಾಗಿದ್ದ. ಮೊಗಲ್ ವೈಭವ್ ಪೊಳ್ಳಾಗಿತ್ತು.‌ ದಿವಾನರುಗಳಲ್ಲಿ ಪಿತೂರಿ, ಸಣ್ಣತನವಿತ್ತು. ಮರಾಠರು ಮೊಗಲ್ ಸಾಮ್ರಾಜ್ಯವನ್ನು ಸ್ವಲ್ಪ ಸ್ವಲ್ಪವಾಗಿ ಕಿತ್ತು ತಿನ್ನುತ್ತಿದ್ದರು. ದಿವಾನರ ಕುಟಿಲತನವು ನಾದಿರ್ ಷಾನ ಆಗಮನಕ್ಕೆ ಕಾರಣವಾಯಿತು. ಪರ್ಷಿಯಾದಿಂದ ತನ್ನ ದೊಡ್ಡ ಸೈನ್ಯದೊಂದಿಗೆ ಬಂದು ಇಲ್ಲಿ ತನ್ನ ಅಧಿಪತ್ಯ ಸ್ಥಾಪಿಸುತ್ತಾನೆ.

ಆಡಳಿತ ಮತ್ತು ಪ್ರಜೆಗಳ ನೆಮ್ಮದಿಯ ಬಗ್ಗೆ ಎಂದೂ ಗಮನಕೊಡದಷ್ಟು ತಾಳ್ಮೆಗೆಟ್ಟ ನಾದಿರ್ ಮನುಷ್ಯನ ಸೋಗಲಾಡಿತನ, ಸುಳ್ಳು ಮತ್ತು ಮೋಸ ಕಂಡು ಬೆಂಕಿಯಾಗುತ್ತಿದ್ದ. ಎಂದೂ ಒಂದು ಕಡೆ ನಿಲ್ಲದಿದ್ದ ನಾದಿರ್ ಹಿಂದೂಸ್ತಾನದ ಸಂಪತ್ತು ಮತ್ತು ಅರಾಜಕತೆ ಕಂಡು ಕ್ಷಣ ಇಲ್ಲಿ ಇದ್ದುಬಿಡಲು ಯೋಚಿಸಿದ. ಪರ್ಶಿಯಾಕ್ಕೆ ಹಿಂದಿರುಗುವ ಆಶೆ ಮತ್ತು ಇಲ್ಲಿ ತಂಗುವ ಚಪಲ, ತನ್ನ ಪಡೆ ಮತ್ತು ಇಲ್ಲಿಯ ಕುತಂತ್ರ ಕಂಡು ತನ್ನ ಖಡ್ಗದ ಮೂಲಕ ಅಸ್ತಿತ್ವ ಕಂಡುಕೊಳ್ಳುತ್ತಾ ದೈಹಿಕವಾಗಿ–ಮಾನಸಿಕವಾಗಿ ಅಸ್ವಸ್ಥನಾದ. 

ಈ ನಾಟಕದಲ್ಲಿ ಬರುವ ಹಕೀಮ ನಾದಿರ್‌ನನ್ನು ಆತನ ಆಳದ ನರಕದಿಂದ  ಹೊರತರುತ್ತಾನೆ. ಆದರೆ, ನಾದಿರ್ ಆರಿಸಿಕೊಂಡಿದ್ದು ಕಷ್ಟದ, ಒಬ್ಬಂಟಿ ಹಾದಿ. 1747ರ ಹೊತ್ತಿಗೆ ನಾದಿರ್ ವಿರುದ್ಧ ನೈಸರ್ಗಿಕ, ಮನುಷ್ಯ ಶಕ್ತಿಗಳು ಒಂದಾಗಿ ನಿಂತಿದ್ದವು. ನಾದಿರ್‌ನ ಸೈನಿಕರೇ ಅವನನ್ನು ಕೊಂದರು. ನಾದಿರ್‌ನನ್ನು ರಸಾತಳಕ್ಕೆ ತಳ್ಳಿದರೂ ಆತ ಎದ್ದುಬರುವ ರೀತಿ; ಸತ್ಯ ಮತ್ತು ಸುಳ್ಳು ಒಬ್ಬ ಸ್ವಪ್ರತಿಷ್ಠನನ್ನು ಸ್ಪರ್ಶಿಸುವ ಬಗೆಯನ್ನು ‘ಗುಣಮುಖ’ ನಾಟಕ ಬಿಚ್ಚಿಡುತ್ತದೆ.

ನಾಟಕ ಬೆಂಗ್ಳೂರು ರಂಗೋತ್ಸವ: ಸಂಜೆ 5.30ಕ್ಕೆ ಕನ್ನಡ ರಂಗಭೂಮಿ–ವ್ಯಕ್ತಿವಿಶೇಷ ಮಾತುಕತೆ. ‘ಸಿ.ಆರ್. ಸಿಂಹ’ ಅವರ ಕುರಿತು ಋತ್ವಿಕ್ ಸಿಂಹ ಮತ್ತು ಶಶಿಧರ್ ಭಾರಿಘಾಟ್ ಮಾತುಕತೆ. ‘ಗುಣಮುಖ’ ನಾಟಕ ಪ್ರದರ್ಶನ. ಪ್ರಸ್ತುತಿ–ಸ್ನೇಹರಂಗ. ರಚನೆ–ಪಿ.ಲಂಕೇಶ್. ನಿರ್ದೇಶನ–ಎನ್. ಮಂಗಳಾ. ಆಯೋಜನೆ–ನಾಟಕ ಬೆಂಗ್ಳೂರು. ಸ್ಥಳ–ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ರಾತ್ರಿ 7. ಟಿಕೆಟ್ ದರ ₹ 70.

************

ಬಾಬುಕೋಡಿಯ ಸುಂದರ ಕರಾವಳಿ ಪರಿಸರದಲ್ಲಿ ನಾರ್ಣಪ್ಪಯ್ಯ–ಲಕ್ಷ್ಮಮ್ಮ ದಂಪತಿಯ ಮಗನಾಗಿ ಹುಟ್ಟಿದ ವೆಂಕಟರಮಣ ಕಾರಂತರಿಗೆ ಸಂಗೀತವೆಂದರೆ ಎಲ್ಲಿಲ್ಲದ ಒಲವು. ತನ್ನ ಸುತ್ತಲಿನ ಪ್ರಕೃತಿ, ಪರಿಸರವೇ ಮೊದಲ ಗುರು. ಜೊತೆಗೆ ಓದುವ ಗೀಳು, ಸುಳ್ಳು, ಕಳ್ಳತನದ ಕೆಟ್ಟ ಚಾಳಿ.

ಸಂಗೀತ ಕಲಿಯಲು ಹೊರಟಿದ್ದು ಮೈಸೂರಿಗೆ. ತಲುಪಿದ್ದು ಗುಬ್ಬಿ ಕಂಪನಿಗೆ. ಅಲ್ಲಿಂದ ಶುರುವಾದ ಕಾರಂತರ ರಂಗಪಯಣ, ಮುಂದೆ ಕಾಶಿ ನಗರಕ್ಕೆ ಸಾಗಿತು. ಹಿಂದಿ ಭಾಷೆ ಮತ್ತು ಸಂಗೀತ ಕಲಿತು, ಇದರ ನಡುವೆ ಮದುವೆಯಾಗಿ ದೆಹಲಿಯಲ್ಲಿ ವಾಸ್ತವ್ಯ. ಎನ್‌ಎಸ್‌ಡಿಯಲ್ಲಿ ವಿದ್ಯಾರ್ಥಿಯಾಗಿ ನಂತರ ಅದೇ ಸಂಸ್ಥೆಯ ನಿರ್ದೇಶಕ ಆಗುವ ಸುಯೋಗ. ಹಿಂದೆಯೇ ಭೋಪಾಲದಿಂದ ಕರೆ. ಕರೆಗೆ ಓಗೊಟ್ಟು ರಂಗಮಂಡಲದ ಸ್ಥಾಪನೆ. ಮೈಸೂರಿನಿಂದ ಶುರುವಾದ ಪರಯಣ ಮರಳಿ ಮತ್ತೆ ಮೈಸೂರಿಗೆ. ಈ ಬಾರಿ ರಂಗಾಯಣದ ಸ್ಥಾಪನೆಗೆ. ಒಟ್ಟಾರೆಯಾಗಿ ದೇಶದ ತುಂಬೆಲ್ಳಾ ತನ್ನ ರಂಗಪ್ರೀತಿಯನ್ನು ಪಸರಿಸಿದ ಸಾರ್ಥಕ್ಯ.

ಬಿ.ವಿ. ಕಾರಂತ ಎಂಬ ಅಪ್ರತಿಮ ರಂಗನಿರ್ಮಾತೃ, ರಂಗ ಜಂಗಮನ ಯಾತ್ರೆ ಅಮೋಘ. ರಂಗ ಸಂಗೀತಕ್ಕೆ ವಿಶಿಷ್ಟ ರೂಪ ಕೊಟ್ಟು, ರಂಗ ಘರಾಣೆಯನ್ನೇ ಸೃಷ್ಟಿಸಿದ ಅದ್ಭುತ ಪ್ರತಿಭೆ. ಇಂತಹ ಸೂಕ್ಷ್ಮಮತಿಯ ಬದುಕಿನಲ್ಲಿ ಘಟಿಸಿದ ಘಟನೆಗಳ, ಕಂಡ ಏಳುಬೀಳುಗಳ, ಪಟ್ಟ ನೋವು, ಯಾತನೆಗಳ, ಸಾಧನೆಗಳ ರಂಗರೂಪವೇ ‘ಬಾಬಾ ಕಾರಂತ’ ನಾಟಕ.


‘ಬಾಬಾ ಕಾರಂತ’ ನಾಟಕದ ದೃಶ್ಯ

‘ಬಾಬಾ ಕಾರಂತ’ ನಾಟಕ ಪ್ರದರ್ಶನ: ಪ್ರಸ್ತುತಿ–ಬೆನಕ. ಆಧಾರ–ವೈದೇಹಿಯವರ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಪ್ರೇಮಾ ಕಾರಂತರ ‘ಸೋಲಿಸಬೇಡ ಗೆಲಿಸಯ್ಯ’ ಕೃತಿ. ನಾಟಕರೂಪ–ಕೃಷ್ಣಪ್ರಸಾದ್, ಶ್ರೀಪತಿ ಮಂಜನಬೈಲು. ಪರಿಕಲ್ಪನೆ ಮತ್ತು ನಿರ್ದೇಶನ–ಟಿ.ಎಸ್. ನಾಗಾಭರಣ. ಸ್ಥಳ–ರಂಗಶಂಕರ, ಜೆ.ಪಿ.ನಗರ ಎರಡನೇ ಹಂತ. ರಾತ್ರಿ 7.30. ಆನ್‌ಲೈನ್ ಟಿಕೆಟ್: bookmyshow.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !