ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಪು- ಬಾಪುವಿನ ರಂಗಪಯಣ

Last Updated 26 ಜನವರಿ 2019, 19:45 IST
ಅಕ್ಷರ ಗಾತ್ರ

ಭಾರತೀಯ ರಂಗಭೂಮಿಯಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದು ಆಧುನಿಕ ಕನ್ನಡ ರಂಗಭೂಮಿ. ಕನ್ನಡ ರಂಗಭೂಮಿಯ ಭೀಷ್ಮ ಎಂದು ಕರೆಸಿಕೊಳ್ಳುವ ಬಿ.ವಿ. ಕಾರಂತರು 1989ರಲ್ಲಿ ಮೈಸೂರು ರಂಗಾಯಣವನ್ನು ಆರಂಭಿಸಿ ಅನೇಕ ಸಾಹಿತ್ಯಿಕ ಕೃತಿಗಳನ್ನು ರಂಗರೂಪಕ್ಕೆ ಇಳಿಸಿರುವುದು ಹೆಮ್ಮೆಯ ಸಂಗತಿ. ಈಗ ಅದು ಇತಿಹಾಸವೂ ಹೌದು.

ತದನಂತರ ಬಂದ ಅನೇಕ ರಂಗಕರ್ಮಿಗಳು, ಜೆನ್ನಿ, ಕೆ.ವಿ. ಅಕ್ಷರ, ಸಿ. ಬಸವಲಿಂಗಯ್ಯನವರಂತಹ ಸಮಕಾಲೀನರ ಪರಿಶ್ರಮದಿಂದ ರಂಗ ತರಬೇತಿ ಕೇಂದ್ರದ ಮೂಲಕ ಅನೇಕ ನಾಟಕಗಳು ರಂಗರೂಪಕ್ಕೆ ಇಳಿದವು. 2011ರಲ್ಲಿ ಸಿ. ಬಸವಲಿಂಗಯ್ಯ ಅವರ ನಿರ್ದೇಶನದಲ್ಲಿ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯು ರಂಗರೂಪವಾಗಿ ಈವರೆಗೆ 89 ಪ್ರದರ್ಶನ ಕಂಡು ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನು 2017ರಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಜೀವನ ಕುರಿತ ‘ಭಾರತ ಭಾಗ್ಯವಿದಾತ’ ಬಿ.ಎಂ. ಗಿರಿರಾಜರ ನಿರ್ದೇಶನದಲ್ಲಿ ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರದಲ್ಲೂ 36 ರಂಗಪ್ರದರ್ಶನ ನಡೆದು ಯಶಸ್ಸು ಕಂಡಿದೆ. ಕಳೆದ ಡಿಸೆಂಬರ್‌ನಿಂದ ಕನ್ನಡ ರಂಗಭೂಮಿಗೆ ಸಂಬಂಧಿಸಿದಂತೆ ಎರಡು ಮಹತ್ವದ ನಾಟಕಗಳು ರಂಗಪ್ರಯೋಗಕ್ಕೆ ಸಜ್ಜಾಗಿ ಅನೇಕ ಜಿಲ್ಲೆಗಳಲ್ಲಿ ಈಗಾಗಲೇ ಪ್ರದರ್ಶನ ಕಾಣುತ್ತಿವೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಪ್ರಕೃತಿ ಮಡಿಲಲ್ಲಿ ಇರುವ ಶೇಷಗಿರಿಯಿಂದ ‘ಗಾಂಧಿ- 150 ರಂಗಪಯಣ’ ಈಗಾಗಲೇ ಉದ್ಘಾಟನೆಗೊಂಡು ರಂಗಪ್ರಯೋಗ ನಡೆದಿದೆ. ಈಗ ರಾಜ್ಯದ ಎಲ್ಲಾ ಭಾಗಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ರಾಜ್ಯದ ಮೂಲೆಮೂಲೆಗಳಿಂದ ಬಂದ 60 ಜನ ಕಲಾವಿದರನ್ನು 15 ಜನರಂತೆ ನಾಲ್ಕು ತಂಡ ಮಾಡಲಾಗಿದೆ. ಬೆಳಗಾವಿ, ಕಲಬುರ್ಗಿ, ಬೆಂಗಳೂರು, ಮೈಸೂರು ವಿಭಾಗದ ಅನೇಕ ಶಾಲೆ- ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕವಾಗಿ ನಾಟಕ ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ.

ಅಂದಹಾಗೆ ಈ ಕಾದಂಬರಿಯನ್ನು ಬರೆದವರು ಬೊಳುವಾರು ಮಹಮ್ಮದ್ ಕುಂಞ. ಅವರ ‘ಪಾಪು- ಬಾಪುಜೀ’ ಕಾದಂಬರಿಯನ್ನು ರಂಗರೂಪಕ್ಕೆ ನಿರ್ದೇಶನ ಮಾಡಿದ್ದು ಡಾ.ಶ್ರೀಪಾದ ಭಟ್. ಸಹ ನಿರ್ದೇಶನ ರಾಘು ಪುರಪ್ಪರಮನೆ. ನೃತ್ಯ ವಿನ್ಯಾಸ ಪ್ರಶಾಂತ ಮಣಿಪಾಲ್, ಬೆಳಕಿನ ವಿನ್ಯಾಸ ರಾಜು ಮಣಿಪಾಲ್, ಸಂಗೀತ ನಿರ್ದೇಶನ ಡಾ.ಶ್ರೀಪಾದ ಭಟ್, ಪರಿಕಲ್ಪನೆ ಎನ್.ಆರ್. ವಿಶುಕುಮಾರ್ ಅವರದ್ದು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಪ್ರಯತ್ನದ ಫಲವೇ ಕರ್ನಾಟಕದಲ್ಲಿ ಇಂತಹ ರಂಗಪ್ರಯೋಗಗಳು ಕಂಡುಬರುತ್ತಿರುವುದು. ಭಾರತೀಯ ರಂಗಭೂಮಿಯಲ್ಲಿ ಇಂತಹ ಹೊಸ ಪ್ರಯೋಗಗಳು ಸರ್ಕಾರದ ಧನಸಹಾಯ ಪಡೆದು ನಿರಂತರ ರಂಗಸಂಸ್ಥೆಗಳಿಂದ ಮತ್ತು ರಂಗಾಯಣಗಳಿಂದ ಅಹೋರಾತ್ರಿ ಪ್ರಯೋಗ ಕಾಣುತ್ತಿರುವುದು ಕನ್ನಡ ರಂಗಭೂಮಿಯಲ್ಲಿ ಮಾತ್ರ ಅಂದುಕೊಳ್ಳಬೇಕು. ಇಂತಹ ರಂಗಪ್ರಯೋಗಗಳಿಗೆ ರಾಜ್ಯ ಸರ್ಕಾರ ಉತ್ತೇಜನ ನೀಡಿ ಮುತುವರ್ಜಿವಹಿಸಿ ಕನ್ನಡ ರಂಗಭೂಮಿಯನ್ನು ಭಾರತೀಯ ರಂಗಭೂಮಿಯ ಮಟ್ಟದಲ್ಲಿ ಬೆಳೆಸುತ್ತಿರುವುದು ಸಂತಸದ ವಿಚಾರ.

ಜಗತ್ತನ್ನು ಬಿಂಬಿಸುವ ಮಹಾತ್ಮ ಗಾಂಧಿಯವರು (ಗಾಂಧಿ 150) ಪಾಪು-ಬಾಪು ರಂಗಪಯಣ ಶೇಷಗಿರಿಯಿಂದ ಆರಂಭವಾದರೆ, ರಾಷ್ಟ್ರವನ್ನು ಬಿಂಬಿಸುವ ಕುವೆಂಪುರವರ ‘ಶ್ರೀ ರಾಮಾಯಣ ದರ್ಶನಂ’ ಮೈಸೂರು ರಂಗಾಯಣದಲ್ಲಿ ಸುಮಾರು 30 ಜನ ಕಲಾವಿದರನ್ನು ಒಳಗೊಂಡ ತಂಡ. ಮೊದಲ ಪ್ರದರ್ಶನ ಮೈಸೂರಿನಲ್ಲಿ ಮುಗಿಸಿ ಬೆಳಗಾವಿಯಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ.

ಇಂತಹ ಅನೇಕ ರಂಗಪ್ರಯೋಗಗಳಲ್ಲಿ ‘ಗಾಂಧಿ 150 ರಂಗಪಯಣ’ದ ನಿರ್ದೇಶಕ ಶ್ರೀಪಾದ ಭಟ್‌ ಈ ರಂಗಪಯಣದ ಅನುಭವವನ್ನು ಹೀಗೆ ಬಿಚ್ಚಿಟ್ಟರು: ‘ಇಂತಹ ಪ್ರಯೋಗಗಳು ನಡೆಯುವುದಕ್ಕೆ ರಾಜ್ಯ ಸರ್ಕಾರ ಮಾತ್ರ ಕೋಟಿ ಕೋಟಿ ಖರ್ಚು ಮಾಡುತ್ತದೆ. ಇಲ್ಲಿ ಮಾಡುವವರು (ನಟರು), ಮಾಡಿಸುವವರು (ನಿರ್ದೇಶಕರು), ನೋಡುವವರು (ಪ್ರೇಕ್ಷಕರು) ಈ ರೀತಿಯ ತ್ರಿಕೋನ ಸಂಧಿಸಿದರೆ ರಂಗಭೂಮಿಯನ್ನು ಜೀವಂತ ಇಡುವುದಕ್ಕೆ ಸಾಧ್ಯವಾಗುತ್ತದೆ. ಕಲಾವಿದರು ಇಡೀ ಐದು ತಿಂಗಳ ಕಾಲ ಊರೂರು ತಿರುಗಿ ಒಂದು ದಿನಕ್ಕೆ ಎರಡು ಪ್ರದರ್ಶನ ನೀಡಬೇಕು. ನಮ್ಮ ಒಂದೊಂದು ತಂಡಗಳ ತಿರುಗಾಟಕ್ಕೆ ಸರ್ಕಾರ ಬಸ್ಸನ್ನು ಒದಗಿಸಿಕೊಟ್ಟಿದೆ. ರಂಗಸಜ್ಜಿಕೆಗೆ ಬೇಕಾದ ಪರಿಕರವನ್ನು ಧಾರವಾಡ ರಂಗಾಯಣ ಒದಗಿಸಿಕೊಟ್ಟಿದೆ. ಗಾಂಧಿಯುಗದಲ್ಲಿ ಖಾದಿಗೆ ಹೆಚ್ಚು ಮಹತ್ವ ಕೊಟ್ಟಿದ್ದರಿಂದ ಎಲ್ಲಾ ಪಾತ್ರಧಾರಿಗಳಿಗೆ ಬೇಕಾದ ವಸ್ತ್ರವಿನ್ಯಾಸವನ್ನು ಕೂಡ ಅಚ್ಚುಕಟ್ಟಾಗಿ ಮಾಡಿಕೊಂಡಿದ್ದೇವೆ. ಲೈಟ್, ಧ್ವನಿವರ್ಧಕಗಳು ಇರುವುದರಿಂದ ಬಯಲು ರಂಗಮಂದಿರದಲ್ಲಿ ಮಾಡುವ ಪರಿಸ್ಥಿತಿ ಬಂದರೂ ಯಾವುದೇ ತೊಂದರೆ ಆಗುವುದಿಲ್ಲ. ಕೆಲವೊಂದು ಪ್ರಯೋಗಗಳು ಮುಂಜಾನೆ ಮಧ್ಯಾಹ್ನ ನಡೆಯುವುದರಿಂದ ಬೆಳಕಿನ ವಿನ್ಯಾಸ ಬೇಕಾಗುವುದಿಲ್ಲ’ ಎನ್ನುತ್ತಾರೆ.

ಯಾಕೆ ಈ ರೀತಿಯ ಪ್ರಯೋಗಗಳಿಗೆ ಸರ್ಕಾರ ಹೆಚ್ಚು ಮಹತ್ವ ಕೊಡುತ್ತದೆ ಎನ್ನುವ ಪ್ರಶ್ನೆಗೆ, ‘ನೋಡಿ ಈ ಮಕ್ಕಳಿಗೆ, ದೊಡ್ಡವರಿಗೆ ಗಾಂಧಿ ನೆನಪು ಆಗೋದು ಗಾಂಧಿ ಜಯಂತಿ ದಿನ ಮಾತ್ರ. ನಾವೆಲ್ಲ ಅವರನ್ನ (ಗಾಂಧಿ) ದೇವತಾ ಸ್ವರೂಪಿ ಅಂದುಕೊಂಡುಬಿಡುತ್ತೇವೆ. ಆದರೆ, ಗಾಂಧಿ ಕೂಡ ನಮ್ಮಂತೆ ಸಾಮಾನ್ಯ ಮನುಷ್ಯನಾಗಿದ್ದ ಎಂಬುದನ್ನು ಈ ನಾಟಕದಲ್ಲಿ ನೋಡಬಹುದು. ಗಾಂಧಿ ತಮ್ಮ ಜೀವನದುದ್ದಕ್ಕೂ ಅನುಭವಿಸಿದ ಸಿಹಿಕಹಿ ಘಟನೆಗಳಿವೆ ಇಲ್ಲಿ. ಈ ನಾಟಕವನ್ನು ಅಂದಗೊಳಿಸುವುದಕ್ಕಾಗಿ ಯಾವುದೇ ರೀತಿಯ art form ಮತ್ತು folk form ಬಳಸಿಲ್ಲ. ಇದು (realistic ಮತ್ತು biopic) ವಸ್ತುತಃ ಘಟನೆಗಳ ನಾಟಕ ಆಗಿರುವುದರಿಂದ ಆರಂಭದಲ್ಲಿ ಕೈಲಾಸಂ ಅವರ ಒಂದು ಕವಿತೆಗೆ ಯುವಜನತೆಗೆ ಅರ್ಥವಾಗುವ ನಿಟ್ಟಿನಲ್ಲಿ ಪ್ರೇಕ್ಷಕ ವರ್ಗವನ್ನು ನಾಟಕದೆಡೆಗೆ ಕರೆದೊಯ್ಯಲು ಸಣ್ಣ contemporary dance ಇಟ್ಟಿದ್ದೇವೆ. ಮಧ್ಯದಲ್ಲಿ ರಸ್ಕಿನ್ ಅವರ ‘un to the last’ ಕಥೆಯನ್ನು ಗಾಂಧೀಜಿಯ ಜೀವನಕ್ಕೆ ಸಂಬಂಧಿಸಿದ ಕಥೆಯಾಗಿರುವುದರಿಂದ ಅದನ್ನು ಬಳಸಿಕೊಂಡಿದ್ದೇವೆ’ ಎನ್ನುತ್ತಾರೆ ಭಟ್ಟರು.

ಈ ನಾಟಕದುದ್ದಕ್ಕೂ ಜತೆ ನೀಡುವ ರಂಗ ಪರಿಕರಗಳು ಅಂದರೆ ಗಾಂಧಿಯವರ ಭಾವಚಿತ್ರವಿರುವ ಅನೇಕ ಪೇಂಟಿಂಗ್‌ಗಳನ್ನು ಬಳಸಿಕೊಂಡಿದ್ದಾರೆ. ಭಾರತೀಯ ರಂಗ ಪರಂಪರೆಯಲ್ಲಿ ಕಥನ ಕ್ರಮವು ಪ್ರಮುಖ ವಾಗಿರುವುದರಿಂದ ಕಾವ್ಯಾಭಿನಯಕ್ಕೆ ಇಲ್ಲಿ ಹೆಚ್ಚು ಒತ್ತು ಕೊಡಲಾಗಿದೆ.

‘ನಾನು ಯಕ್ಷಗಾನ ಮೂಲದಿಂದ ಬಂದಿದ್ದರೂ ವಾಸ್ತವದ ಪ್ರಯೋಗಕ್ಕೆ ಯಾವ form ಅನ್ನೂ ಬಳಸಿಲ್ಲ. ಇಂತಹ ವಿಭಿನ್ನವಾದ ರಂಗಪ್ರಯೋಗಗಳು ದೆಹಲಿ ಬಿಟ್ಟರೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಯುವರಂಗ ಚಟುವಟಿಕೆಗಳು ನಡೆಯುವುದು ಕರ್ನಾಟಕದಲ್ಲಿ ಮಾತ್ರ. ಆದರೆ, ಇಲ್ಲಿ ಕನ್ನಡ ರಂಗಭೂಮಿಯಲ್ಲಿ ಕೂಡ ಕೆಲವೊಂದು ತೊಂದರೆಗಳಿವೆ. ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳು ರಂಗಪ್ರಾಯೋಗಿಕ ಬದ್ಧತೆಯ ದೃಷ್ಟಿಯಿಂದ ಕರ್ನಾಟಕ ರಂಗಭೂಮಿಗಿಂತ ತುಂಬ ಗಟ್ಟಿಯಾಗಿ ನೆಲೆಯೂರಿವೆ. ನಮ್ಮ ರಂಗಭೂಮಿಯಲ್ಲಿ (corporate) ವಲಯಗಳು ಸೇರಿಕೊಂಡಿರುವುದರಿಂದ ಇತ್ತೀಚಿನ ಕನ್ನಡ ರಂಗಭೂಮಿಯ ನಾಟಕಗಳು ಸಡಿಲಗೊಳ್ಳುವುದಕ್ಕೆ ಕಾರಣ’ ಎನ್ನುತ್ತಾರೆ ಶ್ರೀಪಾದ ಭಟ್ಟರು.

‘ಈ ರಂಗಪ್ರಯೋಗಕ್ಕೆ ಮುಖ್ಯಸ್ಥರು ತಮ್ಮ ಶಾಲಾ, ಕಾಲೇಜುಗಳಲ್ಲಿ ಸ್ಥಳ ನೀಡಿ ‘ಪಾಪು- ಬಾಪು’ ನಾಟಕವನ್ನು ಮಕ್ಕಳಿಗೆ ಕಡ್ಡಾಯವಾಗಿ ತೋರಿಸುವಂತಾಗಬೇಕು. ಸರ್ಕಾರ ಕೋಟಿ ಕೋಟಿ ಖರ್ಚು ಮಾಡಿ ಇಂತಹ ಸಾಹಸದ ಪ್ರಯೋಗಗಳಿಗೆ ದುಡ್ಡು ಹಾಕುತ್ತಿರುವುದು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎನ್ನುವುದನ್ನು ಮರೆಯಬಾರದು’ ಎಂಬುದು ಅವರ ಸಲಹೆ.

‘ಪಾಪು-ಬಾಪು’ ನಾಟಕದ ದೃಶ್ಯ
‘ಪಾಪು-ಬಾಪು’ ನಾಟಕದ ದೃಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT