ಗುರುವಾರ , ಮೇ 19, 2022
19 °C
ಕಾಡಿನ ಕಸ ತೆಗೆಯಲು ಸಿಎಸ್‌ಆರ್‌ ಫಂಡ್‌ಗೆ ಮನವಿ: ಸಚಿವ ಅರವಿಂದ ಲಿಂಬಾವಳಿ

‘ಪರ್ವ’ ನಾಟಕಕ್ಕಾಗಿ ಅನುದಾನ: ಸಚಿವ ಅರವಿಂದ ಲಿಂಬಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಪರ್ವ ಕಾದಂಬರಿಯ ರಂಗ ಪ್ರಯೋಗ ನಡೆಯಲೇಬೇಕು. ಈ ಆರ್ಥಿಕ ವರ್ಷದಲ್ಲೇ ಅಗತ್ಯವಿರುವ ಅನುದಾನವನ್ನು ಮೈಸೂರು ರಂಗಾಯಣಕ್ಕೆ ಬಿಡುಗಡೆ ಮಾಡಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಅರವಿಂದ ಲಿಂಬಾವಳಿ ಭಾನುವಾರ ರಾತ್ರಿ ಇಲ್ಲಿ ಪ್ರಕಟಿಸಿದರು.

ಸಾಹಿತಿ ಎಸ್‌.ಎಲ್‌.ಭೈರಪ್ಪ ಜೊತೆ ಸುದೀರ್ಘ ಸಮಯ ಸಮಾಲೋಚಿಸಿದ ಬಳಿಕ ಮಾಧ್ಯಮದವರೊಟ್ಟಿಗೆ ಮಾತನಾಡಿದ ಸಚಿವರು, ‘ಮಾರ್ಚ್‌ನಲ್ಲೇ ಪರ್ವ ರಂಗ ಪ್ರಯೋಗ ಮೈಸೂರಿನಲ್ಲೇ ನಡೆಯಲಿದೆ. ನಂತರ ರಾಜ್ಯದ ಎಲ್ಲೆಡೆಯೂ ಪ್ರದರ್ಶನಗೊಳ್ಳಲಿದೆ’ ಎಂದು ತಿಳಿಸಿದರು.

‘ಭೈರಪ್ಪ ಹುಟ್ಟೂರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೆಶಿವರದಲ್ಲಿ ₹ 5 ಕೋಟಿ ವೆಚ್ಚದಲ್ಲಿ ಸಾಹಿತ್ಯಾಸಕ್ತ ಯುವಕರಿಗೆ ತರಬೇತಿ ಕೇಂದ್ರ ನಿರ್ಮಿಸಲಾಗುವುದು. ಅಲ್ಲಿಗೆ ಭೈರಪ್ಪನವರನ್ನು ಕರೆದೊಯ್ದ ಬಳಿಕ, ಅವರ ಸೂಚನೆಯಂತೆ ಯೋಜನೆಯನ್ನು ಮರುವಿನ್ಯಾಸಗೊಳಿಸಲಾಗುವುದು’ ಎಂದು ಹೇಳಿದರು.

ಕಸ ತೆಗೆಯುತ್ತೇವೆ: ‘ಲಂಟಾನಾ ಹಾವಳಿಯಿಂದ ಕಾಡಿನಲ್ಲಿ ಹುಲ್ಲು ಬೆಳೆಯುವುದು ಕಡಿಮೆಯಾಗುತ್ತಿದೆ. ಇದು ಮಾನವ–ವನ್ಯಜೀವಿ ಸಂಘರ್ಷಕ್ಕೂ ಮೂಲ ಕಾರಣವಾಗಿದೆ. ಕಾಡಿನ ಕಸ ತೆಗೆಯಲು ಖಾಸಗಿ ಕಂಪನಿಗಳ ಸಿಎಸ್‌ಆರ್‌ ಫಂಡ್‌ಗೆ ಅರಣ್ಯ ಇಲಾಖೆ ಮನವಿ ಮಾಡಿಕೊಳ್ಳಲಿದೆ’ ಎಂದು ಅರಣ್ಯ ಸಚಿವರೂ ಆಗಿರುವ ಅರವಿಂದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಕಾಡಾನೆಗಳು ನಾಡಿಗೆ ನುಗ್ಗದಂತೆ ತಡೆಯುವಲ್ಲಿ ರೈಲ್ವೆ ಕಂಬಿಯ ಬೇಲಿ ಪರಿಣಾಮಕಾರಿಯಾಗಿದೆ. ಇದನ್ನು ಕಾಡಂಚಿನ ಎಲ್ಲೆಡೆ ವಿಸ್ತರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕಾಗಿ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್ ಜೊತೆ ಹಾಗೂ ಕಡಿಮೆ ದರದಲ್ಲಿ ರೈಲ್ವೆ ಕಂಬಿ ಪಡೆಯಲಿಕ್ಕಾಗಿ ರೈಲ್ವೆ ಸಚಿವ ಪೀಯೂಷ್‌ ಗೋಯೆಲ್‌ ಜೊತೆ ಮಾತುಕತೆ ನಡೆಸುವುದಾಗಿ’ ಲಿಂಬಾವಳಿ ತಿಳಿಸಿದರು.

‘ಭಗವಂತನ ಆಶೀರ್ವಾದದಿಂದ ಈ ವರ್ಷ ಕಾಡ್ಗಿಚ್ಚು ಸಂಭವಿಸಲ್ಲ. ಇಲಾಖೆ ಅಗ್ನಿ ಅನಾಹುತ ನಡೆಯದಂತೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಫೈರ್‌ ಫೈಟರ್ಸ್‌ ಸಹ ಸನ್ನದ್ಧರಾಗಿದ್ದಾರೆ. ರಸ್ತೆ ಪಕ್ಕ ಬೆಂಕಿ ರೇಖೆ ನಿರ್ಮಾಣವಾಗಿದೆ. ಬೇಸಿಗೆ ಮುಗಿಯುವ ತನಕವೂ ಕಾಡಿನೊಳಗೆ ಕೆಲಸ ಮಾಡುವ ಯಾವೊಬ್ಬ ಅರಣ್ಯ ಅಧಿಕಾರಿಯನ್ನು ವರ್ಗಾಯಿಸಬಾರದು ಎಂದು ಈಗಾಗಲೇ ಸೂಚಿಸಿರುವೆ’ ಎಂದು ಅರಣ್ಯ ಸಚಿವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

***

ಮಾರ್ಚ್‌ 9ರಂದು ವಿವಿಧ ಅಕಾಡೆಮಿ ಅಧ್ಯಕ್ಷರು, ರಂಗಾಯಣ ಸದಸ್ಯರ ಸಭೆ ಕರೆಯಲಾಗಿದೆ. ‘ಪರ್ವ’ಕ್ಕಾಗಿ ಮೊದಲ ಕಂತು ₹ 50 ಲಕ್ಷ ಬಿಡುಗಡೆ ಮಾಡುತ್ತೇವೆ

- ಅರವಿಂದ ಲಿಂಬಾವಳಿ, ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು