ಉಷಾಹರಣ; ಹೃದಯಸ್ಪರ್ಶಿ ಪ್ರದರ್ಶನ

ಶನಿವಾರ, ಏಪ್ರಿಲ್ 20, 2019
27 °C

ಉಷಾಹರಣ; ಹೃದಯಸ್ಪರ್ಶಿ ಪ್ರದರ್ಶನ

Published:
Updated:
Prajavani

ಮೈಸೂರಿನ ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯು ಈಚೆಗೆ ಆಯೋಜಿಸಿದ್ದ ರಂಗೋತ್ಸವ 2019ರ 2ನೇ ದಿನ ಕಿರುರಂಗಮಂದಿರಲ್ಲಿ ಶಾಂತಕವಿ ವಿರಚಿತ ಉಷಾಹರಣ ನಾಟಕವನ್ನು ನಟನ ತಂಡವು ಪ್ರದರ್ಶಿಸಿತು. ಇದರ ಸಂಗೀತ, ವಿನ್ಯಾಸ, ನಿರ್ದೇಶನ ಡಾ.ಶ್ರೀಪಾದಭಟ್‌ ಅವರದ್ದು, ನಿರ್ಮಾಣ ನಿರ್ವಹಣೆ ಮಂಡ್ಯ ರಮೇಶ್‌.

ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂಥ ಈ ನಾಟಕವು ಕನ್ನಡದ ಮೊಟ್ಟಮೊದಲ ಸ್ವತಂತ್ರ ಹಾಗೂ ಐತಿಹಾಸಿಕ ನಾಟಕವಾಗಿಯೂ ಮಹತ್ವ ಪಡೆದುಕೊಂಡಿದೆ.

ಬಲಿಚಕ್ರವರ್ತಿಯ ಹಿರಿಯ ಮಗನಾದ ಬಾಣಾಸುರ ಶಿವನ ಮಹಾಭಕ್ತ. ಶಿವನನ್ನು ತಾಂಡವದಿಂದ ಮೆಚ್ಚಿಸಿ ಸಾವಿರ ತೋಳುಗಳನ್ನು ವರವಾಗಿ ಪಡೆದುಕೊಂಡ ಮಹಾಮಹಿಮ. ಶಿವ ಮತ್ತು ಪಾರ್ವತಿ ಒಮ್ಮೆ ವಿನೋದದಿಂದ ಇದ್ದಾಗ ಪಾರ್ವತಿಯು ಸಾರಂಗ ಪಟ್ಟ ಆಟವನ್ನು ಆಡಬೇಕೆಂದು ಆಶಿಸುತ್ತಾಳೆ. ಈ ಆಟದಿಂದ ನಡೆಯಬಾರದ್ದು ನಡೆಯುತ್ತದೆ ಎಂದು ಈಶ್ವರನು ಸಾರಿ ಸಾರಿ ಹೇಳಿದರೂ ಪಾರ್ವತಿ ಒತ್ತಾಯಿಸುತ್ತಾಳೆ. ಒತ್ತಾಯಕ್ಕೆ ಮಣಿದ ಶಿವ ಪಾರ್ವತಿಯೊಡನೆ ಈ ಆಟವನ್ನು ಆಡುತ್ತಾನೆ. ಪರಾಕ್ರಮಿ ಬಾಣಾಸುರನು ‘ತನ್ನ ಸಹಸ್ರ ಬಾಹುಗಳನ್ನು ಎದುರಿಸುವ ಒಬ್ಬ ವ್ಯಕ್ತಿಯನ್ನು ಸೃಜಿಸು’ ಎಂದು ಶಿವನಲ್ಲಿ ವರ ಕರುಣಿಸಲು ಪ್ರಾರ್ಥಿಸುತ್ತಾನೆ. ಬೇಡವೆಂದರೂ ಕೇಳದೇ ವರ ಪಡೆಯುತ್ತಾನೆ. ಬಾಣಾಸುರನ ಮಗಳಾದ ಉಷೆ ಅಪ್ರತಿಮ ಸುಂದರಿ. ಈಕೆಗೆ ಮದುವೆ ಮಾಡಲು ಬಾಣಾಸುರ ಸ್ವಯಂವರವನ್ನು ಏರ್ಪಡಿಸುತ್ತಾನೆ. ಉಷೆ ಶ್ರೀಕೃಷ್ಣನ ಪುತ್ರ ಪ್ರದ್ಯುಮ್ನನ ಮಗನಾದ ಅನಿರುದ್ಧನನ್ನು ಸ್ವಪ್ನದಲ್ಲಿ ಕಂಡು, ದಾಸಿ ಮೂಲಕ ಅನಿರುದ್ಧನೊಡನೆ ಓಡಿ ಹೋಗುತ್ತಾಳೆ. ಈ ಗುಟ್ಟನ್ನು ತಿಳಿದ ಬಾಣಾಸುರ ಇವರನ್ನು ಸೆರೆಯಲ್ಲಿಡುತ್ತಾನೆ. ಸುದ್ದಿ ತಿಳಿದ ಶ್ರೀಕೃಷ್ಣ ಯುದ್ಧ ಸಾರಿ ತನ್ನ ಸುದರ್ಶನದ ಮೂಲಕ ಬಾಣಾಸುರನನ್ನು ಮಣಿಸುತ್ತಾನೆ. ಶಿವನ ಮಧ್ಯಸ್ತಿಕೆಯಿಂದ ಬಾಣಾಸುರ ತನ್ನ ಮಗಳು ಉಷೆಯನ್ನು ಅನಿರುದ್ಧನಿಗೆ ಕೊಡಲು ಒಪ್ಪುತ್ತಾನೆ. ಅನಿರುದ್ಧ ಉಷೆಯರ ವಿವಾಹದೊಂದಿಗೆ ನಾಟಕ ಮಂಗಳದೊಡನೆ ಅಂತ್ಯಕಾಣುತ್ತದೆ.

ವೃತ್ತಿ ರಂಗಭೂಮಿಗೆ ರಚಿತವಾಗಿದ್ದ ಈ ನಾಟಕವನ್ನು ಆಧುನಿಕ ರಂಗ ಚೌಕಟ್ಟಿಗೆ ಮುರಿದುಕಟ್ಟುವ ಕೆಲಸವನ್ನು ನಿರ್ದೇಶಕರು ತುಂಬಾ ಸೊಗಸಾಗಿ ನಿರ್ವಹಿಸಿದ್ದಾರೆ. ಶಿವ ಪಾರ್ವತಿ ಸಂವಾದ, ಬಾಣಾಸುರನ ಆಗಮನದಲ್ಲಿ ಬಳಸಲಾದ ವಾದ್ಯಗಳು, ಬಾಣಾಸುರ– ಶಿವ ಇವರ ಚರ್ಚೆ, ಸ್ವಯಂವರದ ದೃಶ್ಯ, ಶ್ರೀಕೃಷ್ಣ –ಬಾಣಾಸುರ ಯುದ್ಧ, ಅನಿರುದ್ಧ –ಉಷೆ ವಿವಾಹ ದೃಶ್ಯಗಳ ಸಂಯೋಜನೆ ಹೃದಯಸ್ಪರ್ಶಿಯಾಗಿವೆ. ಬಾಣಾಸುರನಿಗೆ ಸಹಸ್ರಬಾಹು ಜೋಡಣೆ ಸ್ವಯಂವರ ದೃಶ್ಯ ಕಟ್ಟುವಲ್ಲಿನ ಜೀವಂತಿಕೆ, ಯುದ್ಧದಲ್ಲಿ ಸುದರ್ಶನ ಚಕ್ರದ ಚಲನೆಯಲ್ಲಿನ ರಂಗತಂತ್ರಗಳು ನಿರ್ದೇಶಕರ ಯಕ್ಷಗಾನದ ಹಿಡಿತವನ್ನು ನೆನಪಿಸುತ್ತದೆ. ಇಲ್ಲಿ ಬರುವ ಯುದ್ಧ ಮತ್ತು ಪ್ರೀತಿಯ ಸಾರ್ವಕಾಲಿಕ ಮೌಲ್ಯದಿಂದ ಈ ನಾಟಕ ಇಂದಿಗೂ ಪ್ರಸ್ತುತವಾಗುತ್ತದೆ.

ಉಷೆಯಾಗಿ ರಂಜನ್‌ ಬೇರಾ ಅವರ ಆಯ್ಕೆ ಉತ್ತಮವಾಗಿದ್ದು ಪಾತ್ರ ಸಂವಹನೆ ಸಮರ್ಥವಾಗಿದೆ. ಅನಿರುದ್ಧ ಆಗಿ ಮೇಗ ಸಮೀರ ಅವರು ಹದವರಿತು ನಟಿಸಿದ್ದಾರೆ. ಪಾರ್ವತಿಯಾಗಿ ದಿಶಾ ರಮೇಶ್‌ ಅವರು ಪಾತ್ರವನ್ನು ಹುರಿಗೊಳಿಸಿದ್ದಾರೆ. ಬಾಣಾಸುರನಾಗಿ ಚೇತನ್‌ ಸಿಂಗಾನಲ್ಲೂರ ಅವರ ನಟನೆಯನ್ನು ಉಲ್ಲೇಖಿಸಬೇಕು. ಹೊಸಬನಾದರೂ ಪಾತ್ರದಲ್ಲಿ ಅವರ ದೇಹಭಾಷೆ, ಮುಖಚರ್ಯೆ, ಉದ್ವೇಗದಲ್ಲಿ ಉಸಿರಿನ ಏರಿಳಿತ, ಮಾತಿನ ಸೊಗಸು ಇವೆಲ್ಲದರಿಂದ ಪಾತ್ರಕ್ಕೆ ಜೀವತುಂಬಿ ನೆನಪಿನಲ್ಲಿ ಉಳಿಯುತ್ತಾರೆ. ಈಶ್ವರನಾಗಿ ಮನೋಜ್‌ ಪಾರ್ಥ, ನಾರದನಾಗಿ ವಿನಯ್‌, ಕೃಷ್ಣನಾಗಿ ರೋಹಿತ್‌, ಸುದರ್ಶನನಾಗಿ ಋತ್ವಿಕ್‌, ಅಂತಃಶೀಲನಾಗಿ ಪ್ರಭು, ಬಹುಶೀಲ/ದಾಸಿಯಾಗಿ ರ‍್ಯಾವಿಡ್‌ ಅವರ ನಟನೆಯಲ್ಲಿ ಬದ್ಧತೆಯಿತ್ತು.

ರಂಗವಿನ್ಯಾಸ, ವಸ್ತ್ರ ವಿನ್ಯಾಸ ಒಪ್ಪುವುದಾಗಿದೆ. ಮುಕುಟಗಳಲ್ಲಿನ ಅರ್ಧಚಂದ್ರ, ತ್ರಿಶೂಲ ಮುಂತಾದ ಸಂಕೇತಗಳು ಆಯಾ ಪಾತ್ರಕ್ಕೆ ಕಳೆಗಟ್ಟುತ್ತವೆ. ಸಂಗೀತ ಸಂಯೋಜನೆ ಮತ್ತು ಹಾಡುಗಾರಿಕೆ ಆಪ್ಯಾಯಮಾನವಾಗಿದ್ದು, ಮತ್ತೆ ಮತ್ತೆ ಕೇಳಬೆಕೆನಿಸುತ್ತದೆ. ಹಾಡುಗಾರಿಕೆ ವಿಶ್ವನಾಥ ಹಿರೇಮಠ, ನರಸಿಂಹ ಕೋಮಾರ ಅವರು ಚೇತನ್‌ ತಳಗರ ಬೆಳಕು ನಾಟಕಕ್ಕೆ ಪೂರಕವಾಗಿದೆ. ಇಡೀ ನಾಟಕವನ್ನು ಶಿಸ್ತುಬದ್ಧವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕರು ಬೆವರು ಸುರಿಸಿರುವುದಕ್ಕೆ ಈ ಪ್ರದರ್ಶನ ಸಾಕ್ಷಿಯಾಗಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !