ಗುರುವಾರ , ಮಾರ್ಚ್ 4, 2021
29 °C
kamaladevi chattopadya

ರಂಗದಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ

ಸಂದರ್ಶನ: ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

‘ಕಮಲಾದೇವಿ ಚಟ್ಟೋಪಾಧ್ಯಾಯ’ ನಾಟಕದಲ್ಲಿ ಭಾಗೀರಥಿ ಬಾಯಿ ಕದಂ

ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಆತ್ಮಚರಿತ್ರೆ ರಂಗಕ್ಕೆ ತಂದ ಬಗ್ಗೆ ಹೇಳಿ...

ನಾನು ಅಸ್ಸಾಂನಲ್ಲಿದ್ದಾಗ ಅಲ್ಲಿಗೆ ಬಂದಿದ್ದ ತುಮರಿಯ ಕೆ.ಜಿ. ಕೃಷ್ಣಮೂರ್ತಿ ಅವರು ವೈದೇಹಿ ಅವರು ಕಮಲಾದೇವಿ ಕುರಿತು ಆತ್ಮಚರಿತ್ರೆ ಬರೆದಿರುವ ಕುರಿತು ಹೇಳಿದ್ದರು. ಅದನ್ನು ರಂಗರೂಪಕ್ಕೆ ಏಕೆ ತರಬಾರದು ಎಂದಾಗ, ಹೌದಲ್ಲ ಅನಿಸಿತು. ಇಡೀ ಆತ್ಮಚರಿತ್ರೆ ಅಧ್ಯಯನ ಮಾಡಿ, ಅದರಲ್ಲಿ ಆಯ್ದ ಕೆಲ ಭಾಗಗಳನ್ನಷ್ಟೇ ರಂಗರೂಪಕ್ಕೆ ವಿನ್ಯಾಸ ಮಾಡಿಕೊಂಡೆ.

ಕಮಲಾದೇವಿ ಅವರ ಶತಮಾನೋತ್ಸವ ಸಮಾರಂಭದಲ್ಲಿ ಮೊದಲ ಬಾರಿಗೆ ಈ ನಾಟಕ ಹಿಂದಿಯಲ್ಲಿ ದೆಹಲಿಯಲ್ಲಿ ಪ್ರದರ್ಶನಗೊಂಡಿತು. ನಂತರ ಹಿಂದಿಯಲ್ಲೇ ಅಸ್ಸಾಂ, ಪಶ್ಚಿಮಬಂಗಾಳ, ಪಂಜಾಬ್, ಭೋಪಾಲ್, ಮುಂಬೈನಲ್ಲೂ ಪ್ರದರ್ಶನ ಕಂಡು ಉತ್ತಮ ಪ್ರತಿಕ್ರಿಯೆ ಪಡೆಯಿತು. ಆದರೆ, ಮಂಗಳೂರಿನವರಾದ ಕಮಲಾದೇವಿ ಅವರ ನಾಟಕ ಕನ್ನಡದಲ್ಲಿ ಬಂದರೆ ಚೆನ್ನ ಅನಿಸಿತು. ಈಗದನ್ನು ಕನ್ನಡಕ್ಕೆ ತಂದಿದ್ದೇನೆ. ಈಗಾಗಲೇ ಮೈಸೂರಿನಲ್ಲಿ ಈ ನಾಟಕ ಎರಡು ಪ್ರದರ್ಶನ ಕಂಡಿದ್ದು, ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸೆ. 4ರಂದು ಪ್ರದರ್ಶನವಾಗಲಿದೆ.

 ನಾಟಕದ ವಿನ್ಯಾಸ, ನಿರ್ದೇಶನ, ನಟನೆ ಮೂರು ಬಗೆಯ ಭಿನ್ನ ಪಾತ್ರಗಳನ್ನು ನಿಭಾಯಿಸಿದ್ದೀರಿ...

ಹೌದು. ನಾಟಕದ ವಿನ್ಯಾಸ, ನಿರ್ದೇಶನ, ನಟನೆ ಮೂರು ಪಾತ್ರಗಳು ನನ್ನದು. ನಮ್ಮಲ್ಲಿ ಬಹುತೇಕರು ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಹೆಸರನ್ನು ಕೇಳಿದ್ದಾರಷ್ಟೇ. ಅವರ ಸಾಧನೆಗಳ ಬಗ್ಗೆ ಅರಿತಿಲ್ಲ. ಚಟ್ಟೋಪಾಧ್ಯಾಯ ಎನ್ನುವ ಹೆಸರು ಕೇಳಿದೊಡನೆ ಯಾರೋ ಬಂಗಾಳದವರು ಇರಬಹುದು ಅಂದುಕೊಂಡವರೇ ಹೆಚ್ಚು. ಆದರೆ, ಕಮಲಾದೇವಿ ಕನ್ನಡದ ಹೆಣ್ಣುಮಗಳು. ನನ್ನನ್ನು ಬಹಳವಾಗಿ ಕಾಡಿದ ಒಬ್ಬ ಧೀಮಂತ ಮಹಿಳೆ. ತಮ್ಮ ಜೀವಿತದ ಬಹು ಪ್ರಮುಖ ಪ್ರತಿ ಘಳಿಗೆಗಳನ್ನು ಭಾರತದ ಮಹಿಳೆಯ ಶ್ರೇಯೋಭಿವೃದ್ಧಿಗಾಗಿ ಮುಡುಪಾಗಿಟ್ಟವರು. ಇಂಥ ಮಹಿಳೆಯನ್ನು ನಾಟಕದ ಮೂಲಕ ಪರಿಚಯಿಸುತ್ತಿರುವುದಕ್ಕೆ ನನಗೆ ಅಪಾರ ಹೆಮ್ಮೆ ಇದೆ. 

ವರ್ತಮಾನಕ್ಕೆ ಈ ನಾಟಕ ಹೇಗೆ ಸೂಕ್ತ?

ಕನ್ನಡ ನೆಲದ ಹೆಣ್ಣುಮಗಳು ಇಷ್ಟೆಲ್ಲಾ ಸಾಧನೆ ಮಾಡಿದ್ದು ಸ್ಫೂರ್ತಿದಾಯಕ. ವಿಧವೆ, ಮರುಮದುವೆ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಿಕೆ ಇವಿಷ್ಟೇ ಅಲ್ಲ ಕಮಲಾದೇವಿ ಅವರು ಆಗಿನ ಕಾಲದಲ್ಲೇ ಸಹಕಾರ ಸಂಘಗಳ ಕುರಿತು ಹೊರದೇಶದಲ್ಲಿ ಅಧ್ಯಯನ ಮಾಡಿದ್ದರು. ಕಲೆ ಮತ್ತು ಕಲಾವಿದರ ಕುರಿತು ಅವರಿಗೆ ಅಪಾರ ಕಾಳಜಿ ಇತ್ತು. ಅವರ ಶ್ರಮದ ಫಲವಾಗಿಯೇ ಕೇಂದ್ರ ಸಂಗೀತ ನಾಟಕ ಅಕಾಡೆಮಿ, ರಾಷ್ಟ್ರೀಯ ನಾಟಕ ಶಾಲೆ (ಎನ್ಎಸ್‌ಡಿ) ರೂಪುಗೊಂಡವರು. ರಾಷ್ಟ್ರಪತಿ, ಉಪರಾಷ್ಟ್ರಪತಿಯಂಥ ಉನ್ನತ ಹುದ್ದೆಗಳ ಅವಕಾಶವಿದ್ದರೂ ಅದನ್ನು ನಯವಾಗಿ ನಿರಾಕರಿಸಿ ತಮ್ಮನ್ನು ಸಮಾಜಮುಖಿಯಾಗಿ ತೊಡಗಿಸಿಕೊಂಡವರು ಕಮಲಾದೇವಿ. ಸ್ವತಂತ್ರ ಮನೋಭಾವದ ಹೆಣ್ಣೊಬ್ಬಳು ಬದುಕನ್ನು ಕಟ್ಟಿಕೊಂಡ ರೀತಿ ಅನನ್ಯ. ವರ್ತಮಾನದ ಹೆಣ್ಣಿಗೆ ಕಮಲಾದೇವಿ ಬದುಕು ಮಾದರಿ.

‘ಕಮಲಾದೇವಿ ಚಟ್ಟೋಪಾಧ್ಯಾಯ – ಕೆಲವು ನೆನಪು’ ನಾಟಕ ಪ್ರದರ್ಶನ

ಪ್ರಸ್ತುತಿ– ಸೀಗಲ್ ಥಿಯೇಟರ್ ಮತ್ತು ಬಾ ಸೃಷ್ಟಿ. ರಚನೆ–ವೈದೇಹಿ, ವಿನ್ಯಾಸ ಮತ್ತು ನಿರ್ದೇಶನ–ಭಾಗೀರಥಿ ಬಾಯಿ ಕದಂ. ಸಂಗೀತ–ಬಾಹರುಲ್ ಇಸ್ಲಾಂ. ರಂಗಗೌರವ–ಪುರುಷೋತ್ತಮ ತಲವಾಟ. ಆಯೋಜನೆ–ಅನಾವರಣ ಟ್ರಸ್ಟ್. ಸ್ಥಳ–ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸೆ.4 ಸಂಜೆ 6.45 ಟಿಕೆಟ್ ದರ: ₹ 100

ಅ.ನ. ರಮೇಶ್ ನೆನಪಿಗೆ ನಾಟಕ

ಅ.ನ. ರಮೇಶ್ ಅವರು ಉತ್ತಮ ಬೆಳಕಿನ ವಿನ್ಯಾಸಕಾರ ಮತ್ತು ರಂಗ ಸಂಘಟಕರಾಗಿದ್ದರು. ಮೈಕೋದಲ್ಲಿ ಲಲಿತಕಲಾ ಸಂಘ ಕಟ್ಟಲು ಕಾರಣಕರ್ತರಲ್ಲಿ ಒಬ್ಬರು. ರಂಗಭೂಮಿಯ ಮೇಲಿನ ಅವರ ಬದ್ಧತೆಯ ಕಾರಣಕ್ಕಾಗಿ ಅವರ ಹುಟ್ಟಿದ ದಿನದಂದು (ಸೆ.4) ಪ್ರತಿವರ್ಷ ಅನಾವರಣ ಟ್ರಸ್ಟ್ ನಾಟಕಗಳನ್ನು ಪ್ರದರ್ಶಿಸುತ್ತಿದೆ ಎನ್ನುತ್ತಾರೆ ಟ್ರಸ್ಟ್‌ನ ರವಿ ಎಂ.

ಬೆಂಗಳೂರಿನಿಂದ ಹೊರಗೆ ಅನೇಕ ಒಳ್ಳೆಯ ನಾಟಕಗಳು ಪ್ರದರ್ಶನವಾಗುತ್ತಿವೆ. ಆ ತಂಡಗಳಿಗೆ ಇಲ್ಲಿ ಬಂದು ಸಂಘಟನೆ ಮಾಡಿಕೊಂಡು ನಾಟಕ ಮಾಡಲು ಕಷ್ಟವಾಗುತ್ತದೆ. ನಗರದ ಪ್ರೇಕ್ಷಕರು ಒಳ್ಳೆಯ ನಾಟಕಗಳಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕಾಗಿ 2012ರಿಂದ ಹೊರಗಿನ ತಂಡಗಳ ನಾಟಕಗಳನ್ನು  ಅನಾವರಣ ಟ್ರಸ್ಟ್ ಪ್ರದರ್ಶಿಸುವ ವ್ಯವಸ್ಥೆ ಮಾಡುತ್ತಿದೆ ಎನ್ನುತ್ತಾರೆ ಅವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.