ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಮೂರ್ತಿ ಕವತ್ತಾರ್ ಸಂದರ್ಶನ | ಸಂಬಂಧಗಳ ಪರದೆ ತೆಳುವಾಗಿಸುವ ‘ನವ್ಯ ರಂಗಭೂಮಿ’

ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ಸಂದರ್ಶನ
Last Updated 17 ಸೆಪ್ಟೆಂಬರ್ 2021, 2:45 IST
ಅಕ್ಷರ ಗಾತ್ರ

ಶಿವಮೊಗ್ಗ: ಮೂರು ದಶಕಗಳಿಂದ ರಂಗಭೂಮಿಯ ಭಾಗವೇ ಆಗಿರುವ ಕೃಷ್ಣಮೂರ್ತಿ ಕವತ್ತಾರ್ ಅವರು 250ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಸಂಗೀತ ನಿರ್ದೇಶನ ನೀಡಿದ್ದಾರೆ. ನಾಟಕಕ್ಕೆ ಬೇಕಾದ ಸೂಕ್ತ ಹಾಗೂ ಸೂಕ್ಷ್ಮ ಸಂಗೀತ ವಿನ್ಯಾಸ ರೂಪಿಸುವುದರಲ್ಲಿ ಖ್ಯಾತರಾಗಿದ್ದಾರೆ. ಅವರ ರಂಗಗೀತೆಗಳು ಹೆಚ್ಚು ಜನಪ್ರಿಯವಾಗಿವೆ. ಕರ್ನಾಟಕ ನಾಟಕ ಅಕಾಡೆಮಿ ಸೇರಿ ಹಲವು ಗೌರವಗಳು ಅವರಿಗೆ ಸಂದಿವೆ. ಅವರ ಅಭಿನಯದ ಏಕವ್ಯಕ್ತಿ ರಂಗಪ್ರಯೋಗ ‘ಸಾಯುವವನೇ ಚಿರಂಜಿವಿ’ 100ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.

ದಕ್ಷಿಣ ಕನ್ನಡದ ಪ್ರಾದೇಶಿಕ ವೈಭವ ಕವಾತ್ತಾರರ ಒಳಗಿನ ಕಲಾವಿದನನ್ನು ರೂಪಿಸಿದೆ. ಯಕ್ಷಗಾನ, ಭೂತ ಕೋಲ, ಭಜನೆ ಮತ್ತಿತರ ಆಚರಣೆಗಳ ನೆಲದಲ್ಲಿ ಬೆಳೆದ ಅವರು ಸಾಂಸ್ಕೃತಿಕವಾಗಿ ರೂಪುಗೊಂಡಿದ್ದಾರೆ. ಕಿರುತೆರೆ, ಬೆಳ್ಳಿತೆರೆಯಲ್ಲೂ ಹೆಸರು ಮಾಡಿದ್ದಾರೆ. ಕಲಾವಿದರಲ್ಲಿ ಜೀವನಧರ್ಮ ಬಿತ್ತಿದ್ದಾರೆ.

ಶಿವಮೊಗ್ಗ ರಂಗಾಯಣಸೆ. 18 ಮತ್ತು 19ರಂದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ನಾಟಕೋತ್ಸವದ ಹೊಣೆ ಹೊತ್ತಿರುವ ಅವರ ಜತೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಸಂಕ್ಷಿಪ್ತ ಭಾಗ ಇಲ್ಲಿದೆ.

* ರಂಗಭೂಮಿಯ ಸವಾಲುಗಳೇನು?

ರಂಗಭೂಮಿ ಇಂದು ನವ್ಯ ರಂಗಭೂಮಿಯ ಸವಾಲುಗಳನ್ನು ಎದುರಿಸುತ್ತಿದೆ. ಸಮಾನ ಮನಸ್ಕರು ಅಂತರಂಗ ಹಂಚಿಕೊಳ್ಳಲು ಇರುವ ವೇದಿಕೆಯೇ ರಂಗಭೂಮಿ. ರಂಗ ಚಟುವಟಿಕೆಗಳಿಗೆ ನೆಲದ (ಭೂಮಿ) ಸ್ಪರ್ಶವಿದೆ. ಭೂಮಿ ಪ್ರತಿಯೊಂದು ಕ್ಷಣವನ್ನೂ ತನ್ನ ಒಡಲಲ್ಲಿ ಇಟ್ಟುಕೊಳ್ಳದೇ ಬೇರೆ ರೂಪದಲ್ಲಿ ಪ್ರತಿಫಲ ಕೊಡುತ್ತದೆ. ಇದೇ ರಂಗ ಸಂಸ್ಕೃತಿ. ನವ್ಯ ಎನ್ನುವುದು ತಲೆಯಿಂದ ಬಂದಿದೆ. ಹಾಗಾಗಿ, ಅದು ಎಂದಿಗೂ ಕಲೆಯಾಗದು. ವ್ಯಾಪಾರಿ ಭಾಷೆಯ ಪ್ರತಿನಿಧಿಯಾಗಿ ಜಗತ್ತನ್ನೇ ಪ್ರತಿನಿಧಿಸುವ ಭ್ರಮೆ ಹುಟ್ಟಿಸುತ್ತದೆ. ಸಂಬಂಧಗಳ ಪರದೆ ತೆಳುವಾಗಿಸುತ್ತದೆ. ಸಂಬಂಧಗಳು ಮುರಿದಾಗ ಶಬ್ದವಾಗುವುದೇ ಇಲ್ಲ. ಅದು ಎಂದಿಗೂ ಸಾಂಸ್ಕೃತಿಕ ಭಾಷೆಯ ಸ್ಥಾನ ಪಡೆಯಲಾರದು.

* ರಂಗಭೂಮಿ ವಿಶ್ವಮಾನ್ಯವಲ್ಲವೇ?

ರಂಗಭೂಮಿ ಎಂದಿಗೂ ವಿಶ್ವಮಾನ್ಯ. ಅದು ಎಲ್ಲರನ್ನೂ ಒಳಗೊಳ್ಳುವ ದೊಡ್ಡ ವಲಯ. ರಂಗಭೂಮಿ ಆಯಾ ನೆಲದ ಭಾವನೆ, ಬದುಕು ಪ್ರತಿಬಿಂಬಿಸಿದರೂ ಜಗತ್ತಿನಾದ್ಯಂತ ಇರುವ ಭಾವನೆಗಳು ಒಂದೇ ಆಗಿವೆ. ಅಳು, ನಗು, ಸುಖ, ದುಃಖ, ಕೋಪ ತಾಪಗಳು ಎಲ್ಲ ನೆಲದಲ್ಲೂ ಸಹಜ. ಅವುಗಳ ಅಭಿವ್ಯಕ್ತಿ ಬೇರೆಬೇರೆ ಅಷ್ಟೇ. ಅದು ಮನುಕುಲದ ಹೃದಯ ಅರಳಿಸುತ್ತದೆ.

* ರಂಗಶಿಕ್ಷಣ ಕೇಂದ್ರಗಳು ನಿಷ್ಕ್ರಿಯವಾಗಿವೆಯಲ್ಲ?

ಕಾಲಮಾನಕ್ಕೆ ತಕ್ಕಂತೆ ಬದಲಾಗಿಲ್ಲ. ಅಲ್ಲೂ ಮಠ ಸಂಸ್ಕೃತಿ ನೆಲೆಗೊಂಡಿದೆ. ಇಂದಿಗೂ ಹಳೇ ಪ್ರಯೋಗಗಳಿಗೆ ಜೋತುಬಿದ್ದಿವೆ. ಬದುಕಿನಿಂದ ಪ್ರತ್ಯೇಕವಾಗಿ ನಿಂತಿವೆ. ಹೊಸ ಪ್ರಯೋಗಗಳಿಗೆ ತೆರೆದುಕೊಂಡಿಲ್ಲ.

* ರಂಗಾಯಣಗಳು ಸರ್ಕಾರಿ ಪ್ರಾಯೋಜಿತ ಕಂಪನಿಗಳಾಗಿವೆಯಲ್ಲ?

ಸರ್ಕಾರದ ಅನುದಾನದ ಮೇಲೆ ಅವಲಂಬಿತವಾದರೆ ಇಂತಹ ಸಮಸ್ಯೆ ಎದುರಿಸಬೇಕಾಗುತ್ತದೆ. ಆದರೆ, ಬಹುತೇಕ ರಂಗಾಯಣಗಳು ಕ್ರಿಯಾಶೀಲವಾಗಿವೆ. ಬಿ.ವಿ.ಕಾರಂತರ ಕನಸಿಗೆ ಪೂರಕವಾಗಿವೆ. ಒಂದಷ್ಟು ಕಲಾವಿದರಿಗೆ ಅನ್ನ ನೀಡುತ್ತಿವೆ. ‌ಇನ್ನಷ್ಟು ಪರಿಣಾಮಕಾರಿಯಾದರೆ ಸಮಾಜಕ್ಕೆ ಸಹಕಾರಿ.

* ಸರ್ಕಾರದ ಸ್ಪಂದನ ಹೇಗಿದೆ?

ನಿರೀಕ್ಷೆ ಮಾಡಬಾರದು. ಸರ್ಕಾರದಿಂದ ರಂಗಭೂಮಿ ಬೆಳೆಸಲು ಸಾಧ್ಯವಿಲ್ಲ. ದಾನಿಗಳ ನೆರವಿನಲ್ಲಿ ಹೆಚ್ಚು ಕಾರ್ಯಕ್ರಮಗಳು ರೂಪುಗೊಳ್ಳಬೇಕು. ಜನರ ತೊಡಗಿಸುವಿಕೆಗೆ ಆದ್ಯತೆ ಇರಬೇಕು.

* ಯುವ ಪೀಳಿಗೆ ರಂಗಭೂಮಿಯಿಂದ ವಿಮುಖವಾಗುತ್ತಿದೆಯೇ?

ಸಾಕಷ್ಟು ಯುವ ಪೀಳಿಗೆ ರಂಗಭೂಮಿಯತ್ತ ಬರುತ್ತಿದ್ದಾರೆ. ಸಂಸ್ಥೆಗಳೂ ಹೆಚ್ಚಾಗಿವೆ. ಆದರೆ, ಅವಕಾಶಗಳ ಕೊರತೆ ಇದೆ. ಶೇ 90ರಷ್ಟು ಕಲಾವಿದರು ಬಣ್ಣದಲ್ಲಿ ಬೆಳಕು ಕಾಣುವ ಬದಲು ಭ್ರಮೆಯಲ್ಲೇ ಬದುಕುತ್ತಿದ್ದಾರೆ. ತಮ್ಮದೇ ಬದುಕು ಮರೆಯುತ್ತಿದ್ದಾರೆ. ಅನಾಥ ಪ್ರಜ್ಞೆ ಕಾಡುತ್ತಿದೆ. ವ್ಯಸನಿಗಳಾಗುತ್ತಿದ್ದಾರೆ. ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಟಿವಿ, ಸಿನಿಮಾಗಳು ಒಂದಷ್ಟು ಜನರಿಗೆ ನೆಲೆ ಕಲ್ಪಿಸಿವೆ ಎನ್ನುವುದು ಸಮಾಧಾನದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT