ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಾರ್ಡ್ ಆಫ್‌ ಲಂಕಾ’ ನೃತ್ಯ ನಾಟಕ

Last Updated 24 ಡಿಸೆಂಬರ್ 2018, 19:48 IST
ಅಕ್ಷರ ಗಾತ್ರ

ರಾಮನನ್ನು ದೇವರು ಎಂದುಬಿಂಬಿಸುವ ಭರದಲ್ಲಿ ರಾವಣನನ್ನು ದುಷ್ಟನೆಂದು ಚಿತ್ರಿಸಲಾಗಿದೆ. ರಾವಣ ಒಬ್ಬ ಉತ್ತಮ ಆಡಳಿತಗಾರನಾಗಿದ್ದ ಎಂಬ ವಿಷಯವನ್ನು ಮರೆಮಾಚುವ ಹುನ್ನಾರ ನಡೆದಿದೆ ಎಂಬ ವಾದ ಇಂದು ನೆನ್ನೆಯದಲ್ಲ. ಸೀತೆಯನ್ನು ಅಪಹರಿಸಿ ತನ್ನ ಅರಮನೆಯಲ್ಲಿಟ್ಟುಕೊಂಡಿದ್ದರೂ ಆಕೆಯ ಮೈ ಮುಟ್ಟದ ರಾವಣ ಶ್ರೇಷ್ಠನೋ, ರಾವಣನಿಂದ ಅಪಹರಣವಾದ ಮಾತ್ರಕ್ಕೆ ಪತ್ನಿಯ ಶೀಲವನ್ನು ಸಂಶಯಿಸಿ ಅಗ್ನಿಪರೀಕ್ಷೆಗೆ ಒಡ್ಡಿದ ರಾಮ ಶ್ರೇಷ್ಠನೋ ಎಂಬ ಚರ್ಚೆಯವರೆಗೂ ಈ ವಾದ ಮುಂದುವರಿದಿದೆ. ಇದೇ ಕಾರಣದಿಂದ ಇತ್ತೀಚೆಗೆ ಬರುತ್ತಿರುವ ರಾಮಾಯಣದ ಎಳೆ ಇರುವ ಕತೆಗಳಲ್ಲಿ ರಾವಣನ ಉತ್ತಮ ಗುಣಗಳನ್ನು ತೋರಿಸುವ ಪ್ರಯತ್ನಗಳೂ ನಡೆದಿವೆ.

‘ಬೆಂಗಳೂರು ಕ್ಲಬ್‌ ಫಾರ್ ಅಂಡ್‌ ದಿ ಆರ್ಟ್‌’ ಸಂಸ್ಥೆ ‘ಲಾರ್ಡ್ ಆಫ್‌ ಲಂಕಾ’ ಎಂಬ ನೃತ್ಯ ನಾಟಕವನ್ನು ಸಿದ್ಧಪಡಿಸಿದೆ. ಇದೇ 25ರಂದು (ಮಂಗಳವಾರ) ಸಂಜೆ 6ಕ್ಕೆ ಚೌಡಯ್ಯ ಮೊಮೊರಿಯಲ್‌ ಹಾಲ್‌ನಲ್ಲಿ 1ಗಂಟೆ 40 ನಿಮಿಷಗಳ ಈ ನೃತ್ಯ ನಾಟಕ ಪ್ರದರ್ಶನಗೊಳ್ಳಲಿದೆ.

‘ಲಾರ್ಡ್ ಆಫ್ ಲಂಕಾ’ ಚಿತ್ರಕಥೆ, ನಿರ್ದೇಶನ ಮೀನಾ ದಾಸ್ ನಾರಾಯಣ್‌ ಅವರದ್ದು. ಪರಿಕಲ್ಪನೆ ಲಲಿತಾದಾಸ್‌ ಅವರದ್ದು, ಸುನೀಲ್‌ ಕೋಶಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಕ್ತಿ ರೈ ಅವರು ವಸ್ತ್ರವಿನ್ಯಾಸ ಮಾಡಿದ್ದಾರೆ.

ಬೆಂಗಳೂರಿನ ವಿವಿಧ ನೃತ್ಯ ಶಾಲೆಗಳ 50ಕ್ಕೂ ಹೆಚ್ಚು ನೃತ್ಯ ಕಲಾವಿದರು ಇದರಲ್ಲಿ ಅಭಿನಯಿಸಲಿದ್ದಾರೆ. ಸಂಭಾಷಣೆ ಸಂಪೂರ್ಣ ಇಂಗ್ಲಿಷ್‌ನಲ್ಲಿ ಇರುತ್ತದೆ. ನಾಲ್ಕು ಹಾಡುಗಳು ಸಂಸ್ಕೃತದ್ದು, ಶ್ರೀಲಂಕಾ ನೃತ್ಯ ಮುಖ್ಯವಾಗಿರುತ್ತದೆ. ಉಳಿದಂತೆ ಕಥಕ್ಕಳಿ, ಭರತನಾಟ್ಯ, ಸಮಕಾಲೀನ ನೃತ್ಯಗಳಿರುತ್ತವೆ. ಸಾಹಸ ದೃಶ್ಯಗಳಲ್ಲಿ ಕಲರಿಪಯಟ್ಟು ಬಳಸಿಕೊಳ್ಳಲಾಗಿದೆ. ವೇದಿಕೆಯ ಮೇಲೆ ರಾಮಾಯಣದ ಕಾಲ, ಪ್ರಾಕೃತಿಕ ಸೌಂದರ್ಯ ಕಟ್ಟಿಕೊಡುವಲ್ಲಿ ನವೀನ ತಂತ್ರಜ್ಞಾನ ಬಳಸಲಾಗಿದೆ. ಎಲ್‌ಇಡಿ ಪರದೆಯಲ್ಲಿ ಬರುವ ದೃಶ್ಯಗಳು ನಾಟಕಕ್ಕೆ ಅದ್ದೂರಿತನ ನೀಡಲಿವೆ’ ಎಂದು ಸಂಸ್ಥೆಯ ಜಂಟಿ ಕಾರ್ಯದರ್ಶಿ ಸ್ವಾತಿ ಮಾಹಿತಿ ನೀಡಿದ್ದಾರೆ.

2009ರಲ್ಲಿ ಆರಂಭವಾಗಿರುವ ಸಂಸ್ಥೆ ಇದುವರೆಗೆ 56 ವಿಭಿನ್ನ ಕಾರ್ಯಕ್ರಮಗಳನ್ನು ನೀಡಿದೆ. ಸಂಸ್ಥಾಪಕಿ ಮೀನಾ ದಾಸ್ ನಾರಾಯಣ್ ಅವರ ನಿರ್ದೇಶನದಡಿಯಲ್ಲಿ ‘ಚಿಲಪ್ಪಟಿಕಾರಂ’ ಮತ್ತು ‘ಕರ್ಣ ಇನ್ ಇನ್ವಿನ್ಸಿಬಲ್’, ‘ಮಾನಿಷಾದ’ ಮುಂತಾದ ಪ್ರಯೋಗಗಳನ್ನು ಮಾಡಿದ್ದಾರೆ. ಲಾರ್ಡ್‌ ಆಫ್‌ ಲಂಕಾದ ನಾಲ್ಕನೇ ಪ್ರದರ್ಶನವಿದು. ಸಮೃದ್ಧವಾಗಿದ್ದ ರಾವಣನ ಸಾಮ್ರಾಜ್ಯ, ಆತ ಹೇಗೆ ನ್ಯಾಯಬದ್ಧವಾಗಿ ರಾಜ್ಯವನ್ನಾಳಿದ, ಆತನ ಶಿವಭಕ್ತಿ ಹೇಗಿತ್ತು, ಮುಂತಾದ ವಿವರಗಳಿಂದ ರಾವಣನ ಜೀವನವನ್ನು ಪರಿಶೋಧಿಸುವ ರೀತಿಯಲ್ಲಿ ಈ ನೃತ್ಯ ರೂಪಕ ಗಮನಸೆಳೆಯುತ್ತದೆ.

ಮೀನಾದಾಸ್‌ ಅವರು ನಿರ್ಮಾಣ ಮಾಡಿದ ಮಲಯಾಳಂ ನಟ ಕಲಾಮಂಡಲಂ ಗೋಪಿ ಅವರ ಜೀವನ ಕುರಿತ ಸಾಕ್ಷ್ಯಚಿತ್ರ ‘ಮೇಕಿಂಗ್‌ ಆಫ್‌ ಎ ಮೆಸ್ಟ್ರೋ’ ಕೇರಳದ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ರಾವಣನ ಪಾತ್ರವನ್ನು ನಿರ್ವಹಿಸುತ್ತಿರುವ ಕಾರ್ತಿಕ್ ತಂತ್ರಿಯವರು ಮುಖ್ಯ ಪಾತ್ರಗಳನ್ನು ನಿರ್ವಹಿಸುತ್ತಾರೆ. ನೃತ್ಯಂತರ ಶಾಲೆಯ ಒಡಿಸ್ಸಿ ನರ್ತಕಿ ರಶ್ಮಿ ದಿವಾಕರನ್ ಸೀತಾ ಪಾತ್ರವನ್ನು ವಹಿಸಲಿದ್ದಾರೆ. ಪ್ರಸಿದ್ಧ ನರ್ತಕ ಸತ್ಯನಾರಾಯಣ ರಾಜು ರಾಮನಾಗಿ, ನೃತ್ಯಗಾರ ವಿಕ್ರಮ್ ಸೂರಿ ಲಕ್ಷ್ಮಣನ ಪಾತ್ರ ವಹಿಸಲಿದ್ದಾರೆ. ಕಲಾವಿದೆ ನಮಿತಾ ರಾವ್ ಮಾಂಡೋದರಿ ಪಾತ್ರದಲ್ಲಿ, ಅಪರ್ಣಾ ಪಾಲಿಯತ್ ಶೂರ್ಪನಖಿ ಪಾತ್ರದಲ್ಲಿ, ಒಡಿಸ್ಸಿ ನರ್ತಕಿ ಪರಿಧಿ ಜೋಶಿ ಅವರು ರಂಭಾ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಖ್ಯಾತ ನೃತ್ಯ ಕಲಾವಿದ ಭಾಸ್ಕರ್ ಕಿಟ್ಟು ಮತ್ತು ತಂಡಸಮಕಾಲೀನ ನೃತ್ಯದ ಮೂಲಕ ರಂಜಿಸಲಿದ್ದಾರೆ. ಭರತನಾಟ್ಯ ಕಲಾವಿದೆ ಸಿಂಧು ನಾಯರ್, ಕಲಾಮಂಡಲಂ ಸುಮಿ ಜಯರಾಜ್ ಸಹ ತಂಡದ ಭಾಗವಾಗಿರುತ್ತಾರೆ.ಕೃಷ್ಣ ಪ್ರತಾಪ್ ಅವರ ಕಲರಿ ತಂಡ ವೇದಿಕೆಯಲ್ಲಿ ರಾವಣನ ಪೌರುಷವನ್ನು ಕಟ್ಟಿಕೊಡಲಿದ್ದಾರೆ. ಮಾಹಿತಿಗೆ– 98452 40558.

ವಾರ್ಷಿಕ ಪ್ರಶಸ್ತಿ: ಸಂಸ್ಥೆಯ ವಾರ್ಷಿಕ ಪ್ರಶಸ್ತಿಗಳನ್ನು ಮೋಹಿನಿಯಟ್ಟಂ ಕಲಾವಿದೆ ಸುನಂದಾ ನಾಯರ್‌, ಲೇಖಕ ಸೂರ್ಯ ಕೃಷ್ಣಮೂರ್ತಿ, ಸಂಗೀತ ನಿರ್ದೇಶಕ ಸುನೀಲ್‌ ಕೋಶಿ, ನೃತ್ಯ ಕಲಾವಿದೆ ಅಪರ್ಣಾ ಪಲಿಯತ್‌, ಭರತನಾಟ್ಯ ಕಲಾವಿದರಾದ ನಿಶಾಂತ್‌ ಅರವಿಂದ್‌ ಮತ್ತು ಮಮತಾ ಕಾರಂತ್‌, ಕಲರಿ ಗುರು ಕೃಷ್ಣಪ್ರತಾಪ್‌, ಕಥಕ್‌ ಕಲಾವಿದ ತುಷಾರ್‌ ಭಟ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮುಖ್ಯ ಅತಿಥಿಯಾಗಿ ಪ್ರಮೋದಾದೇವಿ ಒಡೆಯರ್‌ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT