ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಭಾರತಕ್ಕೆ ‘ಬಾಹುಬಲಿ’ಯ ಸ್ಪರ್ಶ

Last Updated 30 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

‘ಜಗತ್ತಿನಲ್ಲಿರುವುದೆಲ್ಲವೂ ಮಹಾಭಾರತದಲ್ಲಿದೆ; ಮಹಾಭಾರತದಲ್ಲಿ ಇಲ್ಲದ್ದು ಲೋಕದಲ್ಲಿ ಎಲ್ಲೂ ಇರದು’ ಎಂಬ ಪ್ರಶಂಸೆಯೊಂದೇ ಸಾಕು ಮಹಾಭಾರತದ ಮೌಲ್ಯವನ್ನು ಎತ್ತಿಹಿಡಿಯಲು. ಮಹಾಭಾರತದ ಭಾಗವಾಗಿರುವುದೇ ಭಗವದ್ಗೀತೆ; ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ತತ್ತ್ವಗಳ ಗುಚ್ಛ. ಕೃಷ್ಣಾರ್ಜುನರ ಈ ಸಂವಾದದ ಬಳಿಕವೇ ಮಹಾಭಾರತದ ಯುದ್ಧ ನಡೆದದ್ದು; ಹದಿನೆಂಟು ದಿನಗಳ ಮಹಾಸಂಗ್ರಾಮವದು!

ಭಗವದ್ಗೀತೆಯಲ್ಲಿ ವಿಶ್ವರೂಪ ದರ್ಶನದ ಪ್ರಸಂಗವೊಂದಿದೆ; ಶ್ರೀಕೃಷ್ಣನು ಅರ್ಜುನನಿಗೆ ತನ್ನ ಮಹಿಮೆಯ ವಿಸ್ತಾರವನ್ನು ಪ್ರತ್ಯಕ್ಷವಾಗಿ ತೋರಿಸಿದ ಸಂದರ್ಭವದು. ಸೃಷ್ಟಿಯಲ್ಲಿರುವ ಎಲ್ಲ ವಿವರಗಳೂ ತನ್ನಲ್ಲಿಯೇ ಒಂದಾಗಿವೆ ಎನ್ನುವುದನ್ನು ಶ್ರೀಕೃಷ್ಣ ತೋರಿಸುವ ಪ್ರಸಂಗ ಅದು. ಮಹಾಭಾರತದ ಯುದ್ಧವನ್ನೇ ಪ್ರಧಾನ ವಿಷಯವನ್ನಾಗಿಸಿಕೊಂಡ ನೃತ್ಯನಾಟಕವೊಂದು ಇದೇ ದಾರಿಯಲ್ಲಿ ಮುನ್ನಡೆದು ಕಲಾವಿಶ್ವರೂಪವನ್ನು ತೋರಿಸಿದೆ. ‘ಪ್ರಭಾತ್‌ ಆರ್ಟ್ಸ್ ಇಂಟರ್‌ನ್ಯಾಷನಲ್‌’ ಕಲಾಸಂಸ್ಥೆ ‘ಆ ಹದಿನೆಂಟು ದಿನಗಳು’ ಎಂಬ ನೃತ್ಯನಾಟಕವನ್ನು ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿತು. ಕಲಾಸೃಷ್ಟಿಗೆ ತಂತ್ರಜ್ಞಾನದ ನೆರವು ದಕ್ಕಿದರೆ ಏನೆಲ್ಲ ಪ್ರಯೋಗಗಳನ್ನು ಮಾಡಬಹುದು ಎಂಬುದಕ್ಕೆ ಇದು ಸಾಕ್ಷಿಯಾಯಿತು. ನೃತ್ಯ, ಅಭಿನಯ, ನರ್ತನಗಳ ಜೊತೆಗೆ ಅನಿಮೇಶನ್‌, ಲೇವಿಟೇಷನ್‌, 3ಡಿ ಎಫೆಕ್ಟ್‌ಗಳಂಥ ತಾಂತ್ರಿಕ ವಿವರಗಳೂ ಮಿಳಿತಗೊಂಡು, ಸುಮಾರು ಒಂದೂವರೆ ಗಂಟೆಗಳ ಕಾಲ ಸದ್ಯದ ನಮ್ಮ ಭಾವ–ಬುದ್ಧಿಗಳನ್ನು ಬೇರೊಂದು ಲೋಕಕ್ಕೇ ತೆಗೆದುಕೊಂಡುಹೋದದ್ದು ಸುಳ್ಳಲ್ಲ.

ಸೃಷ್ಟಿಚಕ್ರಕ್ಕೂ ಕಾಲಧರ್ಮಕ್ಕೂ ಧರ್ಮಾಧರ್ಮಗಳಿಗೂ ಇರುವ ನಂಟು ಏನು – ಎಂಬ ಪ್ರಶ್ನೆ ಈ ನೃತ್ಯನಾಟಕದ ಭಿತ್ತಿ. ವೇದವ್ಯಾಸರ ಸೃಷ್ಟಿಯಾದ ಮಹಾಭಾರತಕ್ಕೆ ಗಣಪತಿಯು ಜೊತೆಯಾದ ಪ್ರಸಂಗದೊಂದಿಗೆ ರಂಗಪ್ರದರ್ಶನ ಆರಂಭವಾಗುತ್ತದೆ. ಶ್ರೀಕೃಷ್ಣನೇ ಮಹಾಭಾರತದ ದಿಟವಾದ ಸೂತ್ರಧಾರ ಎಂಬುದು ಆರಂಭದಲ್ಲಿಯೇ ಸಿದ್ಧವಾಗುತ್ತದೆ; ಧರ್ಮವನ್ನು ಎತ್ತಿಹಿಡಿಯಲು ಅವತರಿಸಿದವನು ಅವನು ಎಂಬುದು ಇಡಿಯ ನಾಟಕದಲ್ಲಿ ಅನಾವರಣವಾಗುತ್ತ ಹೋಗುತ್ತದೆ.

ಧರ್ಮ ಎಂದರೇನು? ಯುದ್ಧವು ಧರ್ಮಬದ್ಧವಾಗಿತ್ತೋ? ಶ್ರೀಕೃಷ್ಣ ಮಾಡಿದ್ದೆಲ್ಲವೂ ಧರ್ಮಸ್ಥಾಪನೆಗಾಗಿಯೆ ಹೌದೋ? – ಮಹಾಭಾರತದಲ್ಲಿ ಇಂಥ ಹಲವು ಪ್ರಶ್ನೆಗಳಿಗೆ ಕಾರಣವಾಗುವ ಮೂಲಸ್ಥಾನ ಎಂದರೆ ಕುರುಕ್ಷೇತ್ರ ಯುದ್ಧದ ‘ಆ ಹದಿನೆಂಟು ದಿನಗಳು’. ಇದನ್ನೇ ವಸ್ತುವನ್ನಾಗಿಸಿಕೊಂಡು ಸಿದ್ಧವಾದದ್ದು ಈ ನೃತ್ಯನಾಟಕ. ಧರ್ಮದ ವಿಶ್ಲೇಷಣೆಯನ್ನು ಅದು ಕಲಾರೂಪದಲ್ಲಿ ಕಟ್ಟಿಕೊಟ್ಟು, ಧರ್ಮ ಎಂದರೆ ಅದು ಕೇವಲ ಸತ್ಯವಷ್ಟೆ ಅಲ್ಲ, ಸೌಂದರ್ಯವೂ ಹೌದು ಎಂಬುದನ್ನು ಧ್ವನಿಸಿತು.

ಅರ್ಜುನನ ವಿಷಾದ, ಅವನಿಗೆ ಶ್ರೀಕೃಷ್ಣನ ತತ್ತ್ವೋಪದೇಶ ಮಾಡಿದ ದೃಶ್ಯಗಳು ಗೀತೆಯ ಸಾರವನ್ನು ಕೆಲವೇ ನಿಮಿಷಗಳಲ್ಲಿ ನಿರೂಪಿಸಿದವು. ಶ್ಲೋಕಗಳ ಆಯ್ಕೆಯೂ ಉಚಿತವಾಗಿತ್ತು. ಭೀಷ್ಮನ ಪ್ರತಿಜ್ಞೆ, ದ್ರೋಣನ ವಧೆ, ಕರ್ಣನ ಅವಸಾನ, ಅಭಿಮನ್ಯುವಿನ ಹತ್ಯೆ, ಘಟೋತ್ಕಚನ ಶೌರ್ಯ ಮತ್ತು ದುರ್ಯೋಧನನ ಸೋಲು – ಇವು ಕುರುಕ್ಷೇತ್ರ ಯುದ್ಧದ ಪ್ರಮುಖ ಘಟನೆಗಳು. ಇವನ್ನೇ ರಂಗದ ಮೇಲೆ ತಂದು, ಈ ಸನ್ನಿವೇಶಗಳ ಧರ್ಮಾಧರ್ಮದ ವಿಶ್ಲೇಷಣೆಯನ್ನು ಶ್ರೀಕೃಷ್ಣನ ಮೂಲಕ ನೆರವೇರಿಸಿದ್ದು ನಿರ್ದೇಶಕರ ಜಾಣ್ಮೆಯನ್ನು ತೋರಿಸುತ್ತದೆ. ಈ ಕೆಲವೇ ದೃಶ್ಯಗಳು ಮಹಾಭಾರತದ ತಿರುಳನ್ನೇ ಪ್ರೇಕ್ಷಕರಿಗೆ ಉಣಬಡಿಸುವಂತಿವೆ.

ನೃತ್ಯನಾಟಕದಲ್ಲಿ ಸಂಭಾಷಣೆಯು ಹಿನ್ನೆಲೆಯ ರೂಪದಲ್ಲಿರುವುದರಿಂದ, ನಾಟಕಕಲೆಯ ಮುಖ್ಯ ಅಂಶಗಳಾದ ವಾಚಿಕಾಭಿನಯ ಮತ್ತು ಆಂಗಿಕಾಭಿನಯಗಳಿಗೆ ಇಲ್ಲಿ ಸಿದ್ಧ ಚೌಕಟ್ಟೊಂದಿದೆ. ಹೀಗಿದ್ದರೂ ಶ್ರೀಕೃಷ್ಣ, ಅಭಿಮನ್ಯು, ಭೀಮ, ದುರ್ಯೋಧನ, ಶಕುನಿ ಮುಂತಾದವರ ಅಭಿನಯ ಗಮನಾರ್ಹ. ತಾಂತ್ರಿಕತೆಯೇ ಒಂದು ಪಾತ್ರವಾಗಿದೆ. ಘಟೋತ್ಕಚ ರಾಕ್ಷಸ; ಮಾಯಾವಿ; ಅವನ ಗಾತ್ರದ ಮುಂದೆ ಕೌರವಸೈನ್ಯ ಮಕ್ಕಳಂತೆ. ಈ ವಿವರಗಳನ್ನು ಬಳಸಿಕೊಂಡಿರುವ ರೀತಿ ಗಮನ ಸೆಳೆಯುತ್ತದೆ. ಈ ದೃಶ್ಯದಲ್ಲಿ ಮಕ್ಕಳನ್ನೇ ಕೌರವರ ಪಾತ್ರಧಾರಿಗಳನ್ನಾಗಿ ಬಳಸಿಕೊಂಡಿರುವುದು ರಂಜನೀಯವಾಗಿದೆ. ಆದರೆ ತಾಂತ್ರಿಕತೆಯ ಅಬ್ಬರ–ನಾಟಕೀಯತೆಗಳು ಇಂಥ ಪ್ರದರ್ಶನ ಕಲೆಗಳಿಗೆ ಎಷ್ಟು ಅನಿವಾರ್ಯ – ಎಂಬ ಪ್ರಶ್ನೆಯನ್ನೂ ಈ ಪ್ರದರ್ಶನ ಹುಟ್ಟಿಸದಿರದೆನ್ನಿ! ಟೆಕ್ನಾಲಜಿಯ ಮಾಯಾಪಾಶವು ಸಾತ್ವಿಕತೆಯನ್ನು ಉಸಿರುಗಟ್ಟಿಸದಿದ್ದೀತೆ? ‘ಬಾಹುಬಲಿ’ಯಂಥ ಸಿನಿಮಾಗಳೊಂದಿಗೆ ಅಭಿಜಾತ ದೃಶ್ಯಕಲೆಗಳು ಸ್ಪರ್ಧಿಸಬೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT