ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ‘ಮಾಳವಿಕಾಗ್ನಿಮಿತ್ರ’ ನಾಟಕ ಪ್ರದರ್ಶನ

Last Updated 5 ಮಾರ್ಚ್ 2019, 20:00 IST
ಅಕ್ಷರ ಗಾತ್ರ

‘ಮಾಳವಿಕಾಗ್ನಿಮಿತ್ರ’ ಐತಿಹಾಸಿಕ ಹಿನ್ನೆಲೆಯುಳ್ಳ ರಂಜನೀಯ ನಾಟಕ. ಇದು ಕಾಳಿದಾಸನ ಮೊಟ್ಟಮೊದಲ ನಾಟಕ. ಕ್ಷೀಣಿಸುತ್ತಿದ್ದ ಮೌರ್ಯ ರಾಜವಂಶದ ಕೊನೆಯ ರಾಜ ಬೃಹದೃಥನನ್ನು ಕೊಂದ ಆತನ ಸೇನಾಪತಿ ಪುಷ್ಯಮಿತ್ರನು ಮಗದ ರಾಜ್ಯದ ಪ್ರಭುವಾಗಿ ಶುಂಗ ವಂಶದ ಸ್ಥಾಪಕನಾದನು. ಪ್ರಜೆಗಳ ಆಕ್ರೋಶಕ್ಕೆ ಹೆದರಿ ಸೇನಾಪತಿ ಪದವಿಯಲ್ಲಿದ್ದುಕೊಂಡೇ ರಾಜ್ಯಭಾರ ಮಾಡಿದ. ಈತ ತನ್ನ ಮಗ ಅಗ್ನಿಮಿತ್ರನನ್ನು ನರ್ಮದಾ ನದಿ ತೀರದ ವಿದಿಶೆ ನಗರಕ್ಕೆ ರಾಜನನ್ನಾಗಿ ನೇಮಕ ಮಾಡಿದ. ಹೀಗಾಗಿ ಅಗ್ನಿಮಿತ್ರನು ಶುಂಗವಂಶದ ಪ್ರಥಮ ದೊರೆಯೆನಿಸಿಕೊಂಡ.

ಅಗ್ನಿಮಿತ್ರನ ಮಗ ವಸುಮಿತ್ರ ತನ್ನ ಅಜ್ಜ ಪುಷ್ಯಮಿತ್ರನೊಡಗೂಡಿ ಅನೇಕ ಯುದ್ಧಗಳಲ್ಲಿ ತಲ್ಲೀನನಾದ. ಅತ್ತ ವಿದರ್ಭ ದೇಶದಲ್ಲಿ ಇನ್ನೂ ಮೌರ್ಯ ವಂಶದ ಹೆಸರಿನಲ್ಲಿಯೇ ರಾಜ್ಯಭಾರ ಮಾಡುತ್ತಿದ್ದ ಕ್ರೂರ, ವಿಲಾಸಿ ರಾಜ ಯಜ್ಞಸೇನನ ಆಳ್ವಿಕೆಗೆ ಬೇಸತ್ತ ಆತನ ದಾಯಾದಿ ಮಾಧವ ಸೇನ, ತನ್ನ ತಂಗಿ ಮಾಳವಿಕಾ, ಪಂಡಿತೆ ಕೌಶಿಕಿ ಮತ್ತು ಈಕೆಯ ಸಹೋದರ ಸುಮತಿಯೊಡನೆ ರಾತ್ರೋ ರಾತ್ರಿ ವಿದರ್ಭವನ್ನು ತೊರೆದು ವಿದಿಶೆಯತ್ತ ಹೊರಡುತ್ತಾನೆ.ಮಾಳವಿಕಾಳ ವಿವಾಹ ಅಗ್ನಿಮಿತ್ರನೊಡನೆ ಮಾಡಿದರೆ ಅತ್ತ ಯಜ್ಞಸೇನನ್ನು ಸದೆಬಡಿದು, ವಿದರ್ಭವನ್ನು ತನ್ನ ಕೈಗೆ ಒಪ್ಪಿಸಬಹುದು ಎಂಬ ಯೋಜನೆ ಮಾಧವ ಸೇನನದ್ದು. ಆದರೆ ಮಾರ್ಗಮಧ್ಯೆ ಯಜ್ಞಸೇನ ಮಾಧವ ಸೇನನನ್ನು ಸೆರೆ ಹಿಡಿಯುತ್ತಾನೆ.

ಕಾಳಗದಲ್ಲಿ ಸುಮತಿ ಮರಣಿಸುತ್ತಾನೆ. ಪಂಡಿತೆ ಕೌಶಿಕಿ ಮತ್ತು ಮಾಳವಿಕಾ ಮಾರುವೇಷದಲ್ಲಿ ವಿದಿಶಿಗೆ ಬರುತ್ತಾರೆ. ಇತ್ತ ಅಗ್ನಿಮಿತ್ರ ದಾಸಿಯ ರೂಪದಲ್ಲಿರುವ ಮಾಳವಿಕಾಳಲ್ಲಿ ಅನುರಕ್ತನಾಗುತ್ತಾನೆ. ಮಾಳವಿಕಾಗೂ ಅವನಲ್ಲಿ ಅನುರಾಗ ಮೂಡುತ್ತದೆ.

ಅಗ್ನಿಮಿತ್ರನ ಪಟ್ಟದರಾಣಿ ಧಾರಿಣಿ ದೇವಿ ಮತ್ತು ಕಿರಿಯ ರಾಣಿಗೆ ಇದು ನುಂಗಲಾರದ ತುತ್ತಾಗುತ್ತದೆ. ಇವರಿಬ್ಬರೂ ಸೇರಿ ಮಾಳವಿಕಾ ಮತ್ತು ಅಗ್ನಿಮಿತ್ರನನ್ನು ಬೇರ್ಪಡಿಸಲು ತಂತ್ರಗಳನ್ನು ಹೂಡುತ್ತಾರೆ. ರಾಜನ ಆಸೆಗಳಿಗೆ ಬೆನ್ನೆಲುಬಾಗಿ ನಿಂತ ವಿದೂಷಕ ಆರ್ಯ ಗೌತಮ, ಮಾಳವಿಕಾ ಮತ್ತು ಅಗ್ನಿಮಿತ್ರರನ್ನು ಒಂದುಗೂಡಿಸಲು ತಂತ್ರ ರೂಪಿಸುತ್ತಾನೆ.

ತಂಡದ ಬಗ್ಗೆ: 2017ರಲ್ಲಿ ಹುಟ್ಟಿಕೊಂಡ ಅಭಿಜ್ಞಾ ತಂಡ ಇಲ್ಲಿಯವರೆಗೆ ಹಲವು ನಾಟಕಗಳನ್ನು ಪ್ರದರ್ಶಿಸಿ, ರಾಜ್ಯ–ರಾಷ್ಟಮಟ್ಟದ ಸ್ಫರ್ಧೆಗಳಲ್ಲಿ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ. ಈ ತಂಡದಲ್ಲಿ ಇರುವವರೆಲ್ಲ ಕಾಲೇಜು ವಿದ್ಯಾರ್ಥಿಗಳೇ ಆಗಿರುವುದು ವಿಶೇಷ.

ಪ್ರಸ್ತುತಿ–ಅಭಿಜ್ಞಾ ತಂಡ. ರಚನೆ–ಕಾಳಿದಾಸ. ಸಂಗೀತ–ಭಿನ್ನ ಷಡ್ಜ. ವಿನ್ಯಾಸ ಮತ್ತು ನಿರ್ದೇಶನ–ಆಸಿಫ್ ಕ್ಷತ್ರಿಯ, ಶ್ವೇತಾ ಶ್ರೀನಿವಾಸ್. ಸ್ಥಳ–ಕೆ.ಎಚ್.ಕಲಾಸೌಧ, ಹನುಮಂತನಗರ. ರಾತ್ರಿ 7.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT