ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕದಲ್ಲೇ ಕಲಿಯಲಿ ನಲಿಯುತ್ತ ನಟಿಸಲಿ

ಮಕ್ಕಳು, ಯುವಕರು, ಪೋಷಕರನ್ನು ಸೆಳೆಯುವ ಕೆಲಸ ಆಗಬೇಕಿದೆ
Last Updated 29 ನವೆಂಬರ್ 2018, 19:47 IST
ಅಕ್ಷರ ಗಾತ್ರ

ಪೋಷಕರು, ವಿದ್ಯಾರ್ಥಿಗಳು ಪರೀಕ್ಷೆಗಳ ಅಂಕದ ಹಿಂದೆ ಬಿದ್ದಿದ್ದಾರೆ. ಹಾಗಾಗಿ ಅವರು ಶಾಲೆ ಹೊರತುಪಡಿಸಿ ಇತರ ಚಟುವಟಿಕೆಗಳತ್ತ ಗಮನ ಹರಿಸುತ್ತಿಲ್ಲ. ಆದರೆ, ಅಂಕ ನೀಡುವ ಪಠ್ಯವನ್ನು ಸರಳವಾಗಿ ಅರ್ಥವಾಗಿ ಸುವಂತಹ ಯಾವುದೇ ಮಾಧ್ಯಮವನ್ನಾದರೂ ಸ್ವೀಕರಿಸಲು ಅವರು ಸಿದ್ಧರಿದ್ದಾರೆ. ಇತಿಹಾಸ, ಪುರಾಣ ವನ್ನು ನಾಟಕಗಳ ಮೂಲಕ ಜನರಿಗೆ ತಲುಪಿಸುತ್ತಿದ್ದೇವೆ. ಹಾಗೆಯೇ ಗಣಿತ, ಇಂಗ್ಲಿಷ್‌, ವಿಜ್ಞಾನ ಸೇರಿದಂತೆ ಎಲ್ಲ ವಿಷಯಗಳ ಪಠ್ಯಗಳನ್ನು ರಂಗದ ಮೇಲೆ ಪ್ರಯೋಗಿಸುವ ಕಾರ್ಯ ಆಗಬೇಕು. ಇದರಿಂದ ಪಾಠಮಕ್ಕಳಿಗೆ ಸರಳವಾಗಿ ಅರ್ಥವಾಗುತ್ತದೆ. ಆಗ ಪೋಷಕರು ರಂಗಭೂಮಿಯತ್ತ ಬರುತ್ತಾರೆ ಎನ್ನುತ್ತಾರೆ ನಟ, ರಂಗಕರ್ಮಿ ಮಂಡ್ಯ ರಮೇಶ್.

ಈ ನಿಟ್ಟಿನಲ್ಲಿ ಈಗಾಗಲೇ ಇಂತಹ ಹಲವಾರು ಪ್ರಯೋಗಗಳು ನಡೆದಿವೆ. ಅವುಗಳ ಸಂಖ್ಯೆ ಹೆಚ್ಚಬೇಕಿದೆ. ಹಣ ಗಳಿಕೆಯೊಂದೇ ಜೀವನದ ಮಾರ್ಗವಾಗಬಾರದು. ಸಂಸ್ಕೃತಿ, ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವಂತಾಗಬೇಕು. ಸಾಮಾಜಿಕವಾಗಿ ಉತ್ತಮ ನಡವಳಿಕೆ, ಬದ್ಧತೆಯ ಶಿಕ್ಷಣ ಒದಗಿಸಬೇಕು. ಪೋಷಕರು ಇತ್ತ ಗಮನ ಹರಿಸಬೇಕಿದೆ.

ನೀನಾಸಂ, ರಂಗಾಯಣದಂತವು ಹೊಸ ಪ್ರತಿಭೆಗಳಿಗೆ ವೇದಿಕೆಯಾಗಿವೆ. ಕಲಿತ ನಂತರ ಅವರಿಗೆ ಮುಂದೆ ಜೀವನದ ಮಾರ್ಗ ತೋರಿಸಲಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ಧಾರಾವಾಹಿ, ಚಲನಚಿತ್ರಗಳಿಗೆ ಹೋಗುತ್ತಾರೆ. ಕೆಲವರು ಅಲ್ಲೊಂದು, ಇಲ್ಲೊಂದು ಪ್ರಯೋಗಕ್ಕೆ ಸೀಮಿತರಾಗುತ್ತಾರೆ.

ಶಾಲೆಗಳಿಗೆ ನಾಟಕ ಕಲಿಸುವ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಆಗ ರಂಗಕರ್ಮಿಗೆ ಜೀವನಕ್ಕೆ ದಾರಿಯಾಗುತ್ತದೆ. ಮಕ್ಕಳಿಗೆ ಪಠ್ಯವನ್ನು ರಂಗದ ಮೂಲಕ ದೃಶ್ಯಾವಳಿಯಾಗಿ ಕಟ್ಟಿಕೊಡಬಹುದು.

ಇಂಡಿಯಾದಲ್ಲಿ ಪ್ರೊಫೆಸರ್‌ ಒಬ್ಬರು ಹೆಂಡತಿ ಮೇಲೆ ಹಲ್ಲೆ ಮಾಡುತ್ತಾರೆ. ಅಷ್ಟೊಂದು ಓದಿಕೊಂಡವರ ನಡವಳಿಕೆ ಹಾಗೇಕೆ ಎಂದು ಕೆದಕಿದರೆ, ಮೌಲ್ಯಗಳಿಲ್ಲದ ಶಿಕ್ಷಣವೇ ಕಾರಣ ಎಂಬುದು ಗೊತ್ತಾಗುತ್ತದೆ. ಜಪಾನಿನಲ್ಲಿ ಆರನೇ ತರಗತಿಯವರೆಗೆ ಪರೀಕ್ಷೆಗಳೇ ಇರುವುದಿಲ್ಲ. ಒಂದನೇ ತರಗತಿಯಲ್ಲಿ ಮನೆಯ ಟಾಯ್ಲೆಟ್‌ ಸ್ವಚ್ಛತೆ, ಕಸ ನಿರ್ವಹಣೆ, ಪ್ರಥಮ ಚಿಕಿತ್ಸೆ ಮುಂತಾದ ಸಾಮಾಜಿಕ ಹೊಣೆಗಾರಿಕೆಯನ್ನು ಕಲಿಸಲಾಗುತ್ತದೆ. ಹಾಗಾಗಿ, ಅಲ್ಲಿ ಅರ್ಧಕ್ಕೂ ಹೆಚ್ಚು ಮನೆಗಳಿಗೆ ಬೀಗ ಹಾಕುವುದಿಲ್ಲ. ಕುಸಿಯುತ್ತಿರುವ ನೈತಿಕ ಮೌಲ್ಯವನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕಿದೆ. ಹಳತು, ಹೊಸದರ ಸಂಗಮವಾಗಬೇಕು. ಆಧುನಿಕ ವಿಚಾರಗಳು ಮೇಳೈಸಬೇಕು.

ನಾಟಕ ಅಕಾಡೆಮಿಗೆ ಒಂದೆರಡು ಕೋಟಿ ನೀಡುವುದು, ನಾಲ್ಕಾರು ಕಾರ್ಯಾಗಾರಗಳನ್ನು ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ರಂಗಭೂಮಿ ಸಂವೇದನೆ, ಸಂಸ್ಕೃತಿ ಬೆಳೆಸುತ್ತದೆ ಎನ್ನುವುದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಅರ್ಥವಾಗಬೇಕಿದೆ.ಆಗ ಒಂದಷ್ಟು ದೊಡ್ಡ ಪ್ರಮಾಣದ ನೆರವು ನಿರೀಕ್ಷಿಸಬಹುದು.

ಉತ್ತರ ಕರ್ನಾಟಕದ ಭಾಷೆಯಲ್ಲಿ ಮಸ್ತಿ ಇದೆ. ಈ ಭಾಗಕ್ಕೆ ಅದರದ್ದೇ ಆದ ಶಕ್ತಿ ಇದೆ. ಚಲನಚಿತ್ರಗಳಲ್ಲಿ ಹಾಸ್ಯಕ್ಕೆ ಬಳಕೆಯಾಗುತ್ತಿದ್ದ ಭಾಷೆ, ‘ನಾಗಮಂಡಲ’, ’ಸಂಗ್ಯಾ–ಬಾಳ್ಯಾ’ ನಂತರ ಸಂಭಾಷಣೆಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ದ.ರಾ. ಬೇಂದ್ರೆ, ಚೆನ್ನವೀರ ಕಣವಿ, ಚಂದ್ರಶೇಖರ ಕಂಬಾರ, ಏಣಗಿ ಬಾಳಪ್ಪ, ಪ್ರಮೋದ ಶಿಗ್ಗಾಂವ್, ಬಸಲಿಂಗಯ್ಯ, ಬಸವರಾಜ ಗುಡಗೇರಿ ಸೇರಿದಂತೆ ಹಲವರು ಬಹುದೊಡ್ಡ ಕೊಡುಗೆಯನ್ನು ಸಾಂಸ್ಕೃತಿಕ ಲೋಕಕ್ಕೆ ನೀಡಿದ್ದಾರೆ.

ಶ್ರೀಕೃಷ್ಣ ಪಾರಿಜಾತ, ಜಾನಪದ, ದೊಡ್ಡಾಟ, ಸಣ್ಣಾಟ, ಹಲಗಿ ವಾದ್ಯ, ಜೋಗೇರ ಆಟ ಮುಂತಾದವುಗಳನ್ನು ಉಳಿಸಿ ಬೆಳೆಸಬೇಕಾಗಿದೆ. ಇಲ್ಲಿನ ವೃತ್ತಿರಂಗಭೂಮಿಯ ಛಾಪು ಉಳಿಯಬೇಕಿದೆ. ಇಲ್ಲಿನ ನಾಟಕಗಳಿಂದ ನಾನೂ ಪ್ರಭಾವಿತನಾಗಿದ್ದೇನೆ. ಹಳೆಯ ಹಾಗೂ ಹೊಸತರ ಸಂಗಮವಾಗಬೇಕಿದೆ.

ರಂಗಭೂಮಿ, ಕಿರಿ, ಹಿರಿತೆರೆಯ ಶಕ್ತಿ ಬೇರೆ. ರಂಗಭೂಮಿಯ ಸಂವೇದನೆ, ಕಲಾತ್ಮಕೆ, ಆಪ್ತಭಾವ ಎಲ್ಲಿಯೂ ಸಿಗುವುದಿಲ್ಲ. ಸಹಜವಾಗಿ ಮುಖಾಮುಖಿಯಾಗಿಸುವ ಏಕೈಕ ಮಾಧ್ಯಮ ರಂಗಭೂಮಿ. ಅಲ್ಲಿ ನಿಜವಾದ ಪ್ರತಿಭೆಗೆ ಮಾತ್ರ ಬೆಳಗಲು ಸಾಧ್ಯ. ಧಾರಾವಾಹಿ ಹಾಗೂ ಚಲನಚಿತ್ರಗಳ ಮೂಲಕ ವೇಗವಾಗಿ ಬಹುಜನರನ್ನು ತಲುಪಬಹುದು. ನಟನಾಗಿ ಗಳಿಸಿರುವ ಖ್ಯಾತಿಯನ್ನು ನಟನಾ ತಂಡದ ಕಟ್ಟುವ ಮೂಲಕ ರಂಗಭೂಮಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇನೆ.

ಎಲ್ಲದಕ್ಕೂ ಸರ್ಕಾರ, ಅಕಾಡೆಮಿಯತ್ತ ಮುಖ ಮಾಡಿ ಕುಳಿತುಕೊಳ್ಳಬಾರದು. ಸಂಘಟನೆಗಳು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ರಂಗಭೂಮಿ ಕಟ್ಟುವ ಕೆಲಸದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು.

ಜೀವನದಲ್ಲಿ ಏನು ಮಾಡಬೇಕು ಎಂದು ಕನಸು ಕಂಡಿದ್ದೇನೋ, ಅದನ್ನೇ ಮಾಡಿದ್ದೇನೆ. ಜೀವನ ರೂಪಿಸಿದ ರಂಗಭೂಮಿಯ ಸೇವೆಯನ್ನು ಮುಂದುವರಿಸಿದ್ದೇನೆ ಎಂಬ ಸಾರ್ಥಕ ಭಾವ ಇದೆ. ಜನರು ಪ್ರೀತಿಯಿಂದ ಕೈ ಹಿಡಿದಿದ್ದಾರೆ.

ಆರ್ಥಿಕವಾಗಿ ದುರ್ಬಲನಾಗಿದ್ದೇನೆ. ಮಾನಸಿಕವಾಗಿ ಸಬಲನಾಗಿದ್ದೇನೆ. ಆದರೆ, ಈಗಿನವರು ಮಾನಸಿಕವಾಗಿ ದುರ್ಬಲರಾಗಿ, ಆರ್ಥಿಕವಾಗಿ ಸಬಲರಾಗುವತ್ತ ಗಮನ ನೆಟ್ಟಿದ್ದಾರೆ. ಹಾಗಾಗಿಯೇ ಸಾಕಷ್ಟು ಜನರು ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗದೇ ಆತ್ಮ ಹತ್ಯೆಯ ಮೊರೆ ಹೋಗುತ್ತಿದ್ದಾರೆ. ರಂಗಭೂಮಿ ಮನುಷ್ಯನನ್ನು ಸಬಲನನ್ನಾಗಿಸುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT