ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷರಿಗೆ ಮತ್ತೆ ‘ಸಫಾರಿ’ ಗರಿ

Last Updated 29 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಹೆಣ್ಣುಮಕ್ಕಳಿಗೆ ಹಬ್ಬಕ್ಕೋ, ಸಮಾರಂಭಕ್ಕೋ ಉಡುಗೆ ತೊಡುಗೆ ಖರೀದಿಸುವುದು ಸುಲಭ. ಹಲವು ಆಯ್ಕೆಗಳೂ ಸಿಗುತ್ತವೆ. ಆದರೆ ಪುರುಷರಿಗೆ ಪ್ಯಾಂಟು ಮತ್ತು ಶರ್ಟು, ಜುಬ್ಬಾ ಪೈಜಾಮ, ಶೆರ್ವಾನಿ, ಕುರ್ತಾಗಳನ್ನು ಬಿಟ್ಟರೆ ಹೊಸದೇನು ಖರೀದಿಸುವುದು ಎಂಬ ಚಿಂತೆ ಎದುರಾಗುವುದು ಸಹಜ. ಮೀನಮೇಷ ಬಿಟ್ಟು ಸಫಾರಿ ಸೂಟು ಖರೀದಿಸಿದರೆ ಹೊಸ ಬಗೆಯ ಟ್ರೆಂಡ್‌ನ ಉಡುಗೆಯೊಂದು ನಿಮ್ಮ ಸಂಗ್ರಹ ಸೇರಿದಂತಾಗುತ್ತದೆ.

ಎಪ್ಪತ್ತರ ದಶಕದಲ್ಲಿ ಬಡವರಿಗೂ ಶ್ರೀಮಂತರಿಗೂ ಅಚ್ಚುಮೆಚ್ಚಿನ ಫ್ಯಾಷನ್‌ ಎನಿಸಿಕೊಂಡಿದ್ದ ಸಫಾರಿ ಸೂಟುಗಳು ಹೊಸ ಟ್ರೆಂಡ್‌ಗಳ ದಾಳಿಗೆ ಮೂಲೆಗುಂಪಾದವು. ಆದರೆ ಈಗ ಪುರುಷರ ಉಡುಗೆ ತೊಡುಗೆಗಳ ದೊಡ್ಡ ಬ್ರ್ಯಾಂಡ್‌ಗಳೂ ಸಫಾರಿಗೆ ಹೊಂದುವ ವಿವಿಧ ಫ್ಯಾಬ್ರಿಕ್‌ಗಳನ್ನು ಪರಿಚಯಿಸುತ್ತಿವೆ. ಆನ್‌ಲೈನ್‌ ಮಾರುಕಟ್ಟೆಯಲ್ಲಿಯೂ ಸಫಾರಿ ಸೂಟ್‌ಗಳು ಹತ್ತಾರು ಛಾಯೆಗಳಲ್ಲಿ ಲಭ್ಯವಾಗುತ್ತಿವೆ.

ಶರ್ಟಿನಲ್ಲಿ ನಾಲ್ಕು ಜೇಬುಗಳಿರುವ ಸಫಾರಿ ಸೂಟು ತೆಳ್ಳಗಿನವರಿಗೂ, ದಪ್ಪಗಿರುವವರಿಗೂ ಒಪ್ಪುತ್ತಿತ್ತು. ಅರ್ಧ ತೋಳು, ಹಿಂಬದಿಯಲ್ಲೂ ಇರುತ್ತಿದ್ದ ಕಟ್‌ ಮತ್ತು ಸೊಂಟಕ್ಕೆ ಅಡ್ಡಕ್ಕೆ ಅಥವಾ ಉದ್ದಕ್ಕೆ ಕೊಡುತ್ತಿದ್ದ ಪಟ್ಟಿ ಮತ್ತು ಹೊಲಿಗೆ ದೇಹಾಕಾರಕ್ಕೆ ಒಪ್ಪವಾದ ನೋಟವನ್ನು ನೀಡುತ್ತಿತ್ತು. ಸಫಾರಿ ಉಡುಪುಗಳಿಗೆ ಆ ದಿನಗಳಲ್ಲಿ ಸೀಮಿತ ಬಣ್ಣಗಳಷ್ಟೇ ಬಳಕೆಯಾಗುತ್ತಿದ್ದವು. ಹಸಿರಿನ ನಾಲ್ಕು ಛಾಯೆಗಳು, ಗಂಧದ ಬಣ್ಣ, ಕೆನೆ ಬಣ್ಣ, ಕಾಫಿ ಬಣ್ಣ, ಕಪ್ಪು, ಸಿಮೆಂಟ್‌, ಸಿಲ್ವರ್‌ ಹೀಗೆ.

ಅಂದಾಜು ಎರಡು ದಶಕ ವಿವಿಧ ವರ್ಗದ ಜನರ ಮೆಚ್ಚಿನ ಉಡುಗೆಯಾಗಿದ್ದ ಸಫಾರಿ ಈಗ ಮತ್ತೆ ನಿಧಾನವಾಗಿ ಪುರುಷರ ವಾರ್ಡ್‌ರೋಬ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿದೆ. ಫ್ಯಾಷನ್‌ ಜಗತ್ತಿನ ಚಕ್ರದ ಗತಿಗೆ ತಕ್ಕಂತೆ ಕೆಳಗಿಳಿದಿದ್ದ ಸಫಾರಿ ಉಡುಪುಗಳು ಈಗ ನಿಧಾನವಾಗಿ ಮೇಲೇರುತ್ತಿವೆ.

ವಸ್ತ್ರ ವಿನ್ಯಾಸಕರು ಅಂತರರಾಷ್ಟ್ರೀಯ ಮಟ್ಟದ ರ‍್ಯಾಂಪ್‌ಗಳಲ್ಲಿಯೂ ಸಫಾರಿ ಸೂಟ್‌ಗಳನ್ನು ಪರಿಚಯಿಸುತ್ತಿದ್ದಾರೆ. ಅರ್ಧ ತೋಳಿಗೆ ಸೀಮಿತವಾಗಿದ್ದ ಸಫಾರಿ ಶರ್ಟುಗಳು ಈಗ ತುಂಬು ತೋಳಿಗೆ ಬಡ್ತಿ ಪಡೆಯತೊಡಗಿವೆ.

ಎಲ್ಲಾ ಬಗೆಯ ಉಡುಪುಗಳೂ ಇವೆ ಹೊಸದೇನು ಖರೀದಿಸಲಿ ಎಂದು ಬೇಸರಿಸುವ ಬದಲು ಸಫಾರಿ ಸೂಟ್‌ಗೆ ಜೈ ಎನ್ನುವುದೇ ಸರಿ ಅಲ್ವೇ? 

***
‘ಸಫಾರಿ’ಯ ನೆನಪುಗಳು
ಸೂಟಿಗೆ ಬಳಸಿದ ಫ್ಯಾಬ್ರಿಕ್ ಯಾವುದು ಎಂಬುದು ಆ ವ್ಯಕ್ತಿಯ ಪ್ರತಿಷ್ಠೆಯ ಅಳತೆಗೋಲು ಆಗಿತ್ತು. ಕೈಯಲ್ಲೊಂದು ಪರ್ಸ್‌, ಬಂಗಾರದ ಬಣ್ಣದ ಕೈಗಡಿಯಾರ, ಬೆರಳಲ್ಲಿ ದೊಡ್ಡ ಉಂಗುರ ಹಾಕಿಕೊಂಡು, ಒಳ್ಳೆಯ ಫ್ಯಾಬ್ರಿಕ್‌ನ ಸಫಾರಿ ಸೂಟು ಧರಿಸಿದರಂತೂ ಅವರಿಗೆ ಶ್ರೀಮಂತನ ಪಟ್ಟ ಸಿಗುತ್ತಿತ್ತು!

ತಾವು ಶ್ರೀಮಂತರು ಎಂದು ತೋರಿಸಿಕೊಳ್ಳಲೂ, ತಮ್ಮ ಶ್ರೀಮಂತಿಕೆ ಮತ್ತು ಸಾಮಾಜಿಕ ಸ್ಥಾನಮಾನವನ್ನು ಜಗತ್ತಿಗೆ ತೋರಿಸಿಕೊಳ್ಳಲೂ ಸಫಾರಿ ಉಡುಗೆ ಮಾಧ್ಯಮವಾಗಿತ್ತು. ಮತ್ತೊಂದು ತಮಾಷೆಯ ಸಂಗತಿ ಎಂದರೆ, ಈ ಬಗೆಯ ಉಡುಪು ಧರಿಸಿದವರನ್ನು ಪೊಲೀಸ್‌ ಅಧಿಕಾರಿಗಳು ಇಲ್ಲವೇ ದೊಡ್ಡ ಅಧಿಕಾರಿಗಳು ಎಂದೂ ಭಾವಿಸಲಾಗುತ್ತಿತ್ತು! ಸರ್ಕಾರಿ ಅಧಿಕಾರಿಗಳ ನೆಚ್ಚಿನ ಉಡುಗೆಯಾಗಿದ್ದ ಸಫಾರಿ ಕ್ರಮೇಣ ಕಾರಕೂನರಿಗೆ, ಕಾವಲುಗಾರರಿಗೆ ನಿತ್ಯದ ಉಡುಗೆಯಾಗಿಬಿಟ್ಟಿತು, ಸಮವಸ್ತ್ರದ ರೀತಿ!

ಮದುಮಗನ ಉಡುಗೆ ಎಂದೇ ಜನಪ್ರಿಯವಾಗಿತ್ತು ಸಫಾರಿ ಸೂಟ್‌. ಆದರೆ ಟ್ರೆಂಡ್‌ ಕೆಳಗಿಳಿದ ನಂತರ, ಸಫಾರಿ ಸೂಟ್ ಧರಿಸಿದ ಮದುಮಕ್ಕಳು ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದರು!

ನಿಮಗೆ ಗೊತ್ತಾ, ಸಫಾರಿ ಉಡುಗೆ ಮೊದಲ ಬಾರಿಗೆ ಬಳಕೆಯಾದದ್ದು ಎರಡನೇ ಜಾಗತಿಕ ಯುದ್ಧದ ವೇಳೆ. ಯುರೋಪಿನ ಯೋಧರು ಇದನ್ನು ಧರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT