ಭಾನುವಾರ, ಮೇ 9, 2021
25 °C

ನೆನಪಿನ ಬುತ್ತಿ ಬಿಚ್ಚಿಟ್ಟ 40ರ ಹರೆಯದ ‘ಮುಖ್ಯಮಂತ್ರಿ’!

ನಿರೂಪಣೆ: ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

Prajavani

ಸತತ 40 ವರ್ಷಗಳಿಂದ ದರ್ಬಾರ್ ನಡೆಸುತ್ತಿರುವ ‘ಮುಖ್ಯಮಂತ್ರಿ’ ಕನ್ನಡದ ಹವ್ಯಾಸಿ ರಂಗತಂಡ ‘ಕಲಾಗಂಗೋತ್ರಿ’ಯ ಕೊಡುಗೆ. ಅಂದಹಾಗೆ, ‘ಕಲಾಗಂಗೋತ್ರಿ’ಗೂ ಈಗ ಸುವರ್ಣ ಸಂಭ್ರಮ. ಇದೇ ಸಂಭ್ರಮದಲ್ಲಿ ‘ಮುಖ್ಯಮಂತ್ರಿ’ ನಾಟಕದ ಮುಖ್ಯ ಪಾತ್ರಧಾರಿ ‘ಮುಖ್ಯಮಂತ್ರಿ’ ಚಂದ್ರು ‘ಭಾನುವಾರದ ಪುರವಣಿ’ಯೊಂದಿಗೆ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ...

***

‘ಮುಖ್ಯಮಂತ್ರಿ’ ನಾಟಕ 41ನೇ ವರ್ಷದತ್ತ ದಾಪುಗಾಲಿಟ್ಟಿರುವುದನ್ನು ಹಿಂತಿರುಗಿ ನೋಡಿದಾಗ ನನಗೆ ಆಶ್ಚರ್ಯ ಮತ್ತು ಅದ್ಭುತ ಎನಿಸುತ್ತದೆ. ನಾನೊಬ್ಬ ಹಳ್ಳಿಯ ಸಾಧಾರಣ ರೈತನ ಮಗ. ರಂಗಭೂಮಿ, ಕಿರುತೆರೆ, ರಾಜಕಾರಣಕ್ಕೆ ಹೋಗುತ್ತೇನೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲ.

1980ರಲ್ಲಿ ರಣಜಿತ್ ಕಪೂರ್ ಅವರು ಹಿಂದಿಯಲ್ಲಿ ‘ಮುಖ್ಯಮಂತ್ರಿ’ ನಾಟಕ ಪ್ರದರ್ಶಿಸಿದ್ದರು. ಅದನ್ನು ಅದೇ ಹೆಸರಿನಲ್ಲೇ ಟಿ.ಎಸ್. ಲೋಹಿತಾಶ್ವ ಕನ್ನಡಕ್ಕೆ ತಂದರು. ‘ಮುಖ್ಯಮಂತ್ರಿ’ ಹೆಸರೇ ಆಕರ್ಷಕವಾಗಿದ್ದರಿಂದ ಬಿ.ವಿ.ರಾಜಾರಾಂ ಅವರಿಗೆ ಅದನ್ನು ರಂಗಕ್ಕೆ ತರಬೇಕೆಂಬ ಹುಚ್ಚು ಸಾಹಸವಿತ್ತು. ಬರೀ ಸಂಭಾಷಣೆಗಳೇ ತುಂಬಿದ್ದ ಈ ನಾಟಕವನ್ನು ಹೇಗೆ ಮಾಡೋದು ಅನ್ನೋದು ನನ್ನ ಪ್ರಶ್ನೆ. ‘ಕಲಾಗಂಗೋತ್ರಿ’ಯಿಂದ ಹೊಸ ನಾಟಕ ಪ್ರಯೋಗಿಸಲೇಬೇಕೆಂಬ ಹಟಕ್ಕೆ ಬಿದ್ದು ಅಂತೂ ‘ಮುಖ್ಯಮಂತ್ರಿ’ಯನ್ನು ಮಾಡಲು ನಿರ್ಧರಿಸಿದೆವು.

ನನ್ನ ಹಾಗೂ ಬಿ.ವಿ.ರಾಜಾರಾಂ ನಿರ್ದೇಶನ, ಲೋಹಿತಾಶ್ವ ಅವರಿಂದ ‘ಮುಖ್ಯಮಂತ್ರಿ’ ಪಾತ್ರ ಎಂದು ತೀರ್ಮಾನವಾಗಿತ್ತು. ನಾಟಕಕ್ಕೆ ಇನ್ನೇನು ನಾಲ್ಕೈದು ದಿನಗಳಿರುವಾಗ ಲೋಹಿತಾಶ್ವ ಮತ್ತು ನನಗೆ ಜ್ವರ ಕಾಣಿಸಿಕೊಂಡಿತು. ನಾನು ಬೇಗ ಚೇತರಿಸಿಕೊಂಡೆ. ಆದರೆ, ಲೋಹಿತಾಶ್ವ ಅವರಿಗೆ ಟೈಫಾಯಿಡ್ ಜ್ವರ. ಇನ್ನೇನು ನಾಟಕ ಡ್ರಾಪ್ ಮಾಡಿಬಿಡೋಣ ಅಂದುಕೊಳ್ಳುತ್ತಿರುವಾಗ, ಲೋಹಿತಾಶ್ವ ‘ನಾಟಕ ನಿಲ್ಲಿಸೋದು ಬೇಡ. ಮುಂದಿನ ಷೋ ನಾನು ಮಾಡ್ತೀನಿ. ಇದೊಂದು ಷೋ ಮುಗಿಸಿ’ ಎಂದರು. ‘ಮುಖ್ಯಮಂತ್ರಿ’ ಪಾತ್ರ ಮಾಡುವವರಾರು ಎನ್ನುವ ಪ್ರಶ್ನೆ ಬಂದಾಗ ಬಹುತೇಕರು ಹಿಂದೆ ಸರಿದರು. ಅಷ್ಟುದ್ದದ ಸಂಭಾಷಣೆಗಳನ್ನು ನೆನಪಿನಲ್ಲಿಟ್ಟುಕೊಳ್ಳೋದು ಕಷ್ಟವಾಗಿತ್ತು. ಕೊನೆಗೆ ನನಗೆ ‘ಮುಖ್ಯಮಂತ್ರಿ’ ಪಟ್ಟ ಕಟ್ಟಿಬಿಟ್ಟರು.  

ನಾಟಕದ ಸ್ಕ್ರಿಪ್ಟ್‌ನಲ್ಲಿ ಕೆಲ ಬದಲಾವಣೆ ಮಾಡಿಕೊಂಡೆ. ಗಂಭೀರವಾಗಿದ್ದ ನಾಟಕದಲ್ಲಿ ತುಸು ಹಾಸ್ಯ ಸೇರಿಸಿದೆ. 1980ರ ಡಿಸೆಂಬರ್‌ 4ರಂದು ಸಂಸ ಬಯಲು ರಂಗಮಂದಿರದಲ್ಲಿ ನಾಟಕ ಪ್ರದರ್ಶನವಾಗಿ, ಪ್ರೇಕ್ಷಕರಿಗೆ ಹಿಡಿಸಿಬಿಟ್ಟಿತು. ‘ಮುಖ್ಯಮಂತ್ರಿ’ಯನ್ನು ನೋಡಲು ಪ್ರೇಕ್ಷಕರು ಕ್ಯೂ ನಿಂತು ಟಿಕೆಟ್ ಖರೀದಿಸಿದರು. ಅಂದು ‘ಮುಖ್ಯಮಂತ್ರಿ’ಯಾಗಿ ಗದ್ದುಗೆ ಏರಿದವನು ಇಂದಿಗೂ ಕೆಳಗಿಳಿದಿಲ್ಲ ನೋಡಿ!

ಆಕಸ್ಮಿಕ ಎಂಬಂತೆ 80ರಲ್ಲಿ ಈ ನಾಟಕ ಮಾಡಿದ ಐದು ವರ್ಷಗಳಲ್ಲೇ (1985) ನಾನು ನಿಜ ಜೀವನದಲ್ಲಿ ರಾಜಕಾರಣಿಯೂ ಆದೆ. ಆದರೆ, ಎಷ್ಟೇ ಬ್ಯುಸಿ ಇದ್ದರೂ ಕಲಾಗಂಗೋತ್ರಿ ಜತೆಗಿನ ರಂಗನಂಟು ಬಿಡಲಿಲ್ಲ. 80ರಿಂದ ಇಂದಿನವರೆಗೆ ಒಂದು ವರ್ಷವೂ ಈ ನಾಟಕ ಪ್ರದರ್ಶನ ತಪ್ಪಲಿಲ್ಲ.

‘ಮುಖ್ಯಮಂತ್ರಿ’ ಚಂದ್ರು ಆಗಿದ್ದು...
ನನ್ನ ಮೂಲ ಹೆಸರು ಎಚ್‌.ಎನ್.ಚಂದ್ರಶೇಖರ್. ಆಗ ರಂಗಭೂಮಿಯಲ್ಲಿ ಹಲವು ಚಂದ್ರಶೇಖರ್‌ಗಳಿದ್ದರು. ಮಾಧ್ಯಮದವರು ನನ್ನನ್ನು ‘ಮುಖ್ಯಮಂತ್ರಿ’ ಪಾತ್ರಧಾರಿ ಚಂದ್ರು ಅಂತ ಕರೆಯಲು ಶುರು ಮಾಡಿದರು. ಸಿನಿಮಾದವರೂ ‘ಮುಖ್ಯಮಂತ್ರಿ’ ಅನ್ನುವ ಪದ ಕ್ಯಾಚಿಯಾಗಿದೆ, ಅದೇ ಇರಲಿ ಎಂದು ಸಿನಿಮಾಗಳಲ್ಲೂ ‘ಮುಖ್ಯಮಂತ್ರಿ’ ಚಂದ್ರು ಅಂತಲೇ ಉಳಿಸಿಕೊಂಡರು.

ಜನಗಣತಿ ಸಮಯದಲ್ಲಿ ಮನೆಗೆ ಬಂದ ಸಿಬ್ಬಂದಿ, ಇದು ಯಾರ ಮನೆ ಅಂತ ಕೇಳಿದರು. ನನ್ನ ಪತ್ನಿ ‘ಮುಖ್ಯಮಂತ್ರಿ’ ಚಂದ್ರು ಮನೆ ಅಂದರು. ಅವರು ಹಾಗೇ ಬರೆದುಕೊಂಡು ಹೋದರು. ಕೊನೆಗೆ ಮತದಾರರ ಪಟ್ಟಿಯಲ್ಲೂ ಹಾಗೇ ನಮೂದಾಯಿತು. ಗೌರಿಬಿದನೂರು ಕ್ಷೇತ್ರದಿಂದ ನನಗೆ ಚುನಾವಣಾ ಟಿಕೆಟ್ ಕೊಟ್ಟರು. ನನಗೋ ನನ್ನ ಹೆಸರಿನ ಚಿಂತೆ. ನಾನು ‘ಮುಖ್ಯಮಂತ್ರಿ’ ಅಲ್ಲ ಬರೀ ಎಚ್‌.ಎನ್.ಚಂದ್ರಶೇಖರ್ ಅಂತ ಚುನಾವಣಾ ಆಯುಕ್ತರ ಬಳಿಗೆ ಹೋದರೆ, ಅವರು ಚುನಾವಣೆ ಘೋಷಣೆ ಆಗಿಬಿಟ್ಟಿದೆ, ವೋಟರ್ ಪಟ್ಟಿಯಲ್ಲೂ ನಿಮ್ಮ ಹೆಸರು ‘ಮುಖ್ಯಮಂತ್ರಿ’ ಚಂದ್ರು ಅಂತಲೇ ಇದೆ. ಏನೂ ಮಾಡಲಾಗದು ಅಂದರು. ಕೊನೆಗೆ ಅದೇ ಹೆಸರಿನಲ್ಲೇ ಚುನಾವಣೆಯಲ್ಲಿ ಗೆದ್ದದ್ದೂ ಆಯಿತು.

ಸದನದಲ್ಲಿ ಗಲಾಟೆ ಎಬ್ಬಿಸಿದ ‘ಮುಖ್ಯಮಂತ್ರಿ’
‘ಮುಖ್ಯಮಂತ್ರಿ’ಯಾಗಿಯೇ ಶಾಸಕನಾಗಿದ್ದ ನನ್ನ ಹೆಸರು ರಾಜಕಾರಣದಲ್ಲಿ ದೊಡ್ಡ ಗಲಾಟೆಗೆ ಕಾರಣವಾಯಿತು. ‘ಮುಖ್ಯಮಂತ್ರಿ’ ಪದ ಕೈಬಿಡಬೇಕೆಂದು ಸದನದಲ್ಲಿ ಈ ಬಗ್ಗೆ ದೊಡ್ಡ ಚರ್ಚೆಯೇ ನಡೆಯಿತು. ಕೊನೆಗೆ ಅಂದಿನ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲರು ಮಧ್ಯ ಪ್ರವೇಶಿಸಿ, ‘ಅವನು ನಾಟಕದಲ್ಲಿ ಮಾತ್ರ ‘ಮುಖ್ಯಮಂತ್ರಿ’ ಕಣ್ರಪ್ಪಾ. ಮುಖ್ಯಮಂತ್ರಿಯಾಗಿ ನಾನೇ ಸುಮ್ಮನಿದ್ದೀನಿ. ನೀವ್ಯಾಕೆ ಇಷ್ಟು ಗಲಾಟೆ ಮಾಡ್ತೀರಿ. ಆತ ‘ಕಾಯಂ ಮುಖ್ಯಮಂತ್ರಿ’ಯಾಗಿರಲಿ ಬಿಡಿ. ಅವನ ಹೆಸರು ‘ಮುಖ್ಯಮಂತ್ರಿ’ ಚಂದ್ರು ಅಂತಲೇ ಗೆಜೆಟ್‌ನಲ್ಲಿ ನೋಟಿಫೈ ಮಾಡಿ ಎಂದು ಸದನದಲ್ಲಿ ಘೋಷಿಸಿಬಿಟ್ಟರು.

‘ಮುಖ್ಯಮಂತ್ರಿ’ ಕಂಡ ಸಿ.ಎಂ.ಗಳು
ಆರ್‌.ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್‌.ಆರ್. ಬೊಮ್ಮಾಯಿ, ಎಚ್‌.ಡಿ.ದೇವೇಗೌಡ, ವೀರಪ್ಪ ಮೊಯಿಲಿ, ಎಸ್.ಬಂಗಾರಪ್ಪ, ಎಸ್‌.ಎಂ.ಕೃಷ್ಣ, ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಡಿ.ವಿ.ಸದಾನಂದ ಗೌಡ ಹೀಗೆ ಅನೇಕ ಮುಖ್ಯ
ಮಂತ್ರಿಗಳು, ರಾಜಕಾರಣಿಗಳು ಈ ನಾಟಕ ವೀಕ್ಷಿಸಿದ್ದಾರೆ.

ಗುಂಡೂರಾವ್ ಅವರು ಈ ನಾಟಕ ನೋಡಲು ಬರುತ್ತೇನೆ ಅಂದಾಗ ನಾವೆಲ್ಲಾ ಭಯಬಿದ್ದು ಹೋಗಿದ್ದೆವು. ಏಕೆಂದರೆ ನಾಟಕದ ಪಾತ್ರ ಹೆಚ್ಚುಕಮ್ಮಿ ಅವರನ್ನೇ ಹೋಲುತ್ತಿತ್ತು. ಆದರೆ, ನಾಟಕ ಮುಗಿದ ಮೇಲೆ ಗುಂಡೂರಾವ್ ಬಂದು ನಾಟಕ ಚೆನ್ನಾಗಿದೆ ಎಂದು ಬೆನ್ನುತಟ್ಟಿದಾಗಲೇ ನಾವು ನಿಟ್ಟಿಸಿರುಬಿಟ್ಟದ್ದು. ಮತ್ತೊಬ್ಬ ರಾಜಕಾರಣಿ ಎಂ.ಪಿ.ಪ್ರಕಾಶ್‌ ಅವರು ನನಗೆ ‘ಚಂದ್ರು ನೀವು ರಂಗದ ಮೇಲೆ ಸಂಜೆ ಈ ನಾಟಕ ಅಭಿನಯಿಸುತ್ತೀರಿ. ಆದರೆ, ನಾವು ರಾಜಕಾರಣಿಗಳು ಇದಕ್ಕಿಂತ ಚೆನ್ನಾಗಿ ಹಗಲು ಹೊತ್ತಿನಲ್ಲೇ ಅಭಿನಯಿಸುತ್ತೇವೆ’ ಅಂದಿದ್ದರು. ಸಹಾಯಾರ್ಥ ಪ್ರದರ್ಶನದಲ್ಲಿ ರಾಮಕೃಷ್ಣ ಹೆಗಡೆ ಅವರು ಸಾವಿರ ರೂಪಾಯಿ ಬೆಲೆ ನಾಟಕದ ಟಿಕೆಟ್ ಅನ್ನು ₹ 25 ಸಾವಿರ ಕೊಟ್ಟು ಖರೀದಿಸಿದ್ದರು. 13 ಮುಖ್ಯಮಂತ್ರಿಗಳು ನನ್ನನ್ನು ಚಂದ್ರು ಅಂತ ಕರೆಯಲೇ ಇಲ್ಲ. ಎಲ್ಲರೂ ‘ಮುಖ್ಯಮಂತ್ರಿಗಳೇ’ ಅಂತಲೇ ಕರೆಯುತ್ತಿದ್ದರು.

‘ಮುಖ್ಯಮಂತ್ರಿ’ಗೆ ಸ್ಫೂರ್ತಿ ಅರಸು ಉಡುಗೆ
ನಮ್ಮ ಪಾಲಿಗೆ ಮುಖ್ಯಮಂತ್ರಿ ಅಂದರೆ ಡಿ. ದೇವರಾಜ ಅರಸು. ಆ ಸ್ಥಾನಕ್ಕೆ ತಕ್ಕಂತಿದ್ದವರು ಅವರು. ಅರಸು ಅವರಿಗೊಂದು ಗತ್ತು ಇತ್ತು. ಅವರು ಕೈಬೆರಳಲ್ಲಿ ಒಂದು ಉಂಗುರ ಬಿಟ್ಟರೆ ಬೇರೆ ಆಭರಣ ಧರಿಸುತ್ತಿರಲಿಲ್ಲ. ಅವರು ಉಡುತ್ತಿದ್ದ ಕಚ್ಚೆ ಪಂಚೆ, ಉದ್ದನೆಯ ಜುಬ್ಬಾ ಅವರ ಎತ್ತರದ ವ್ಯಕ್ತಿತ್ವಕ್ಕೆ ಶೋಭೆ ನೀಡುತ್ತಿದ್ದವು. ಅವರ ಉಡುಗೆಯೇ ‘ಮುಖ್ಯಮಂತ್ರಿ’ ಪಾತ್ರಕ್ಕೆ ಸ್ಫೂರ್ತಿಯಾಯಿತು. ಕಾಸ್ಟ್ಯೂಮ್‌ಗಾಗಿ ಅರಸು ಅವರನ್ನು ಅನುಸರಿಸಿದರೂ ‘ಮುಖ್ಯಮಂತ್ರಿ’ ಪಾತ್ರ ಆಯಾ ಕಾಲಘಟ್ಟದ ರಾಜಕೀಯ ವಿದ್ಯಮಾನಕ್ಕೆ ತಕ್ಕಂತೆ ಮೌಲ್ಡ್ ಆಗಿದೆ. ನಿಜ ಜೀವನದಲ್ಲಿ ರಾಜಕಾರಣಿಯಾದ ಮೇಲೆ ರಂಗದ ಮೇಲಿನ ‘ಮುಖ್ಯಮಂತ್ರಿ’ ಪಾತ್ರವನ್ನು ಬಹಳಷ್ಟು ತಿದ್ದಿಕೊಂಡಿದ್ದೇನೆ. ನಿಜ ಹೇಳಬೇಕೆಂದರೆ ಇಡೀ ನಾಟಕ ನನಗೆ ಸರಿಯಾಗಿ ಅರ್ಥವಾಗಿದ್ದು ನಾನು ಶಾಸಕನಾದ ಮೇಲೆಯೇ!

ನಾಟಕ ನೋಡಿ ಪಾರ್ವತಿ ಬೈದ್ಲು ಅಂದ್ರು ರಾಜ್!
‘ಮುಖ್ಯಮಂತ್ರಿ’ ನಾಟಕ ನೋಡಿದ ರಾಜ್‌ಕುಮಾರ್ ಅವರು ನನ್ನ ಹತ್ತಿರ ಬಂದು ‘ಅಮೋಘ, ಅದ್ಭುತ’ ಅಂದ್ರು. ಆದರೆ, ನಿಮ್ಮ ನಾಟಕ ನೋಡುವಾಗ ನಮ್ಮ ಶ್ರೀಮತಿ ಅವರ ಕೈಲಿ ಬೈಸಿಕೊಂಡೆ ಅಂದ್ರು. ನನಗೆ ಗಾಬರಿಯಾಗಿ ‘ಯಾಕೆ ಸರ್’ ಅಂದಾಗ,  ‘ಏನಿಲ್ಲ, ನಾಟಕ ಅರ್ಥವಾಗದ ಕಡೆ ಅದೇನು–ಇದೇನು ಅಂತ ಆಗಾಗ ಪಾರ್ವತಿಯನ್ನು ಕೇಳುತ್ತಿದ್ದೆ. ಗಂಭೀರವಾಗಿ ನಾಟಕ ನೋಡುತ್ತಿದ್ದ ಅವರಿಗೆ ಕೋಪ ಬಂದು, ನಿಮಗೆ ಅರ್ಥಹೇಳುತ್ತಾ ಹೋದರೆ ನಾಟಕದ ಮುಂದಿನ ಮಾತು ಹೋಗಿಬಿಡುತ್ತೆ, ಸುಮ್ನಿರಿ. ಮನೆಗೆ ಹೋದ್ಮೇಲೆ ಹೇಳ್ತೀನಿ ಅಂದ್ರು’ ಅಂದರು.

ನಂತರ ರಾಜ್ ನನ್ನ ಕಿವಿ ಹತ್ತಿರ ಬಂದು ‘ನಾಟಕ ನನಗೆ ಅರ್ಥವಾಗಲಿಲ್ಲ ಬೇಸರ ಮಾಡ್ಕೊಬೇಡಿ’ ಅಂದರು. ರಾಜ್‌ಕುಮಾರ್ ಅವರಂಥ ಮುಗ್ಧರಿಗೆ ರಾಜಕಾರಣ ಅರ್ಥವಾಗಿರಲಿಲ್ಲ. ಮುಂದೆ ಸಿನಿಮಾಗಳಿಗೆ ಜತೆಯಲ್ಲಿ ಕೆಲಸ ಮಾಡುವಾಗ ಶೂಟಿಂಗ್‌ ಸಮಯದಲ್ಲಿ ನಾಟಕದ ಬಗ್ಗೆ ಚರ್ಚಿಸುತ್ತಿದ್ದರು. ಮನದಂಗಳದಲ್ಲಿ ಮೆರವಣಿಗೆ ಹೊರಡುವ ಇಂತಹ ನೆನಪುಗಳಿಗೆ ಲೆಕ್ಕವೇ ಇಲ್ಲ.

‘ಕಲಾಗಂಗೋತ್ರಿ’ ಕೈಹಿಡಿದ ‘ಮುಖ್ಯಮಂತ್ರಿ’
‘ಮುಖ್ಯಮಂತ್ರಿ’ ನಾಟಕವನ್ನು ಹಲವರು ಸೂಕ್ಷ್ಮವಾಗಿ ವಿಮರ್ಶಿಸಿದ್ದಾರೆ, ಆರೋಗ್ಯಪೂರ್ಣ ಚರ್ಚೆಗಳನ್ನು ನಡೆಸಿದ್ದಾರೆ. ಎಷ್ಟೋ ರಾಜಕಾರಣಿಗಳು ಚಂದ್ರು ಅವರ ಬಳಿ ತಮಾಷೆಯಾಗಿ ನನ್ನ ಪಾತ್ರವನ್ನೇ ಮಾಡಿದ್ದೀರಿ ಎನ್ನುತ್ತಿದ್ದರಂತೆ’ ಎನ್ನುತ್ತಾರೆ ‘ಮುಖ್ಯಮಂತ್ರಿ’ ನಾಟಕದ ನಿರ್ದೇಶಕ ಬಿ.ವಿ.ರಾಜಾರಾಂ.

ಕಲಾಗಂಗೋತ್ರಿ ತಂಡದ ಹೊಸ ಪ್ರಯೋಗಗಳಿಗೆ ‘ಮುಖ್ಯಮಂತ್ರಿ’ಯೇ ಆಪತ್ಬಾಂಧವ. ಅದರಲ್ಲಿ ಬಂದ ಹಣವೇ ಎಷ್ಟೋ ಬಾರಿ ತಂಡವನ್ನು ಮುನ್ನಡೆಸಿದೆ. ಈಗ ಸುವರ್ಣ ಸಂಭ್ರಮದಲ್ಲಿರುವ ಕಲಾಗಂಗೋತ್ರಿ ತಂಡದಿಂದ ‘ಮತ್ತೆ ಮುಖ್ಯಮಂತ್ರಿ’ ಬರುತ್ತಿದೆ. ಈ ‘ಮುಖ್ಯಮಂತ್ರಿ’ ಹಿಂದಿನಂತಲ್ಲ. ಅದನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕಾತರದಿಂದಿದ್ದೇವೆ’ ಎಂದರು ರಾಜಾರಾಂ.

ಹೊಸ ‘ಮುಖ್ಯಮಂತ್ರಿ’
ಇದೇ ಏಪ್ರಿಲ್ 2ರಿಂದ 4ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಲಾಗಂಗೋತ್ರಿಯ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ‘ಮತ್ತೆ ಮುಖ್ಯಮಂತ್ರಿ’ ಹೊಸ ನಾಟಕ (ಏ.4) ಪ್ರದರ್ಶನವಾಗಲಿದೆ. ಕೆ.ವೈ.ನಾರಾಯಣಸ್ವಾಮಿ ರಚಿಸಿರುವ ಈ ನಾಟಕದ ನಿರ್ದೇಶನ ಬಿ.ವಿ.ರಾಜಾರಾಂ ಅವರದ್ದು. ‘ಮುಖ್ಯಮಂತ್ರಿ’ ಪಾತ್ರದಲ್ಲಿ ‘ಮುಖ್ಯಮಂತ್ರಿ’ ಚಂದ್ರು ಅವರೇ ಅಭಿನಯಿಸುತ್ತಿರುವುದು ವಿಶೇಷ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು