ರಂಗದ ಮೇಲೆ ‘ಪಾರ್ಶ್ವ ಸಂಗೀತ’

7

ರಂಗದ ಮೇಲೆ ‘ಪಾರ್ಶ್ವ ಸಂಗೀತ’

Published:
Updated:
.

ನಗರದ ಕಿರುರಂಗಮಂದಿರದಲ್ಲಿ ‘ರಂಗವಲ್ಲಿ’ ತಂಡದವರು ‘ಪಾರ್ಶ್ವ ಸಂಗೀತ’ ನಾಟಕವನ್ನು ಈಚೆಗೆ ಪ್ರಶಾಂತ್ ಹಿರೇಮಠ್ ಅವರ ನಿರ್ದೇಶನದಲ್ಲಿ ಪ್ರದರ್ಶಿಸಿದರು. ಶ್ರೀನಿವಾಸ ವೈದ್ಯರ ಬರಹಗಳನ್ನು ಒಗ್ಗೂಡಿಸಿ ರಂಗಕ್ಕಿಳಿಸಿದವರು ಬಿ.ಪಿ.ಅರುಣ್.

ಭಾರತೀಯರಿಗೂ ಸಿನಿ ಪ್ರೀತಿಗೂ ಇಂದು ನಿನ್ನೆಯ ನಂಟಲ್ಲ. ಭಾರತೀಯ ಸಿನಿಮಾ ರಂಗದ ಅಜರಾಮರ ಇತಿಹಾಸವನ್ನು ಬದುಕಿಗೆ ಹತ್ತಿರಾಗಿಸುವ ಪ್ರಯತ್ನವೇ ‘ಪಾರ್ಶ್ವ ಸಂಗೀತ’. ಸಿನಿಮಾ ನಟ–ನಟಿಯರನ್ನು ದೇವರಂತೆ ಪೂಜಿಸುವಷ್ಟು ಭಕ್ತಿ ಒಂದೆಡೆಯಾದರೆ, ತಾರಾ ಮೆರುಗನ್ನು ಬಳಸಿ ರಾಜಕೀಯ ಮುತ್ಸದ್ಧಿಯಾದ ಕಲಾವಿದರು ಹಲವರು. 1931ರ ನಮ್ಮ ದೇಶದ ಮೊದಲ ಟಾಕಿ ಚಿತ್ರ ‘ಆಲಂ ಅರಾ’ದ ಹಾಡಿನಿಂದ ಆರಂಭವಾಗುವುದು ಈ ಹಳೆಯ ಹಿಂದಿ ಚಿತ್ರಗೀತೆಗಳ ನಾಟಕ. ಅಂದಿನ ಖ್ಯಾತ ಹಿನ್ನೆಲೆ ಗಾಯಕರ ಹಾಡುಗಳ ಮೂಲಕ ಮುಂದೆ ಸಾಗುತ್ತದೆ.

ಸೈಗಲ್, ಮೊಹಮದ್, ಮೊಹಮದ್ ರಫಿ, ಕಿಶೋರ್ ಕುಮಾರ್, ಲತಾ ಮಂಗೇಶ್ಕರ್, ಮನ್ನಾ ಡೇ ಹೀಗೆ ಆಗಿನ ಸ್ಟಾರ್ ಗಾಯಕರ ಅವಿಸ್ಮರಣೀಯ ಗಾಯನವನ್ನು ಮತ್ತೆ ರಂಗಕ್ಕೆ ತಂದಿದ್ದಾರೆ. ನಾಟಕದ ಹೆಸರೇ ಸೂಚಿಸುವಂತೆ ಸಂದರ್ಭೋಚಿತವಾಗಿ ದೃಶ್ಯಗಳಿಗನುಗುಣವಾಗಿ ಹಳೆ ಹಿಂದಿ ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ನೋಡುಗರಿಗೆ ವಿಶೇಷ ಅನುಭವ; ರೆಟ್ರೋ ಸಂಗೀತದ ರಸಸ್ವಾದದೊಟ್ಟಿಗೆ ಸಾಗುವ ಕಥನ. ಸಾಮಾನ್ಯವಾಗಿ ನಮಗೆ ಅರಿವಿಲ್ಲದಂತೆ ಈ ಸಿನಿ ಹಾಡುಗಳು ನಿತ್ಯದ ಬದುಕಿನೊಟ್ಟಿಗೆ ನಂಟಾಗಿ ಬಿಟ್ಟಿರುತ್ತವೆ. ಆಯಾ ಕಾಲಮಾನದ, ವಯೋಮಾನದ ವಯೋಸಹಜ ಭಾವನೆ, ಅಭಿಲಾಶೆಗಳಿಗೆ ತಕ್ಕಂತೆ ನೆನಪಿನಾಳದಲ್ಲಿ ಮನೆಮಾಡುತ್ತದೆ. ಈ ನಾಟಕ ಪ್ರೇಕ್ಷಕರನ್ನು ಅವರ ಬದುಕಿನ ಹಿನ್ನೋಟವಾಗಿಸಿರುವುದೂ ಉಂಟು!

ಶ್ರೀನಿವಾಸ ವೈದ್ಯರ ಕೆಲವು ಬರಹಗಳನ್ನು ಒಳಗೊಂಡಂತೆ ತಯಾರಾದ ನಾಟಕ ಇದು. ಸ್ವತಃ ಶ್ರೀನಿವಾಸರೇ ಪಾತ್ರವಾಗಿ ತಮ್ಮ ಪೂರ್ವಾಶ್ರಮ, ವರ್ತಮಾನಗಳ ಕಥೆ ರೂಪದಲ್ಲಿ ರಂಗದಲ್ಲಿಡುತ್ತಾರೆ. ಅವರ ಬಾಲ್ಯದ ಪ್ರಸಿದ್ಧ ಹಾಡುಗಳು, ‘ಟ್ರೆಂಡ್ ಸೆಟ್ಟರ್’ಗಳಂತೆ ಕಾಣುತ್ತಿದ್ದ ನಟ–ನಟಿಯರು, ‘ಫ್ಯಾನಿಸಂ’ (ಸಿನಿ ಆರಾಧನೆ), ಹೊಸ ಅಲೆಯ ಸಿನಿಮಾಗಳು, ಪ್ರಯೋಗಾತ್ಮಕತೆ ಹೀಗೆ ಹತ್ತು ಹಲವು ಸೂಕ್ಷ್ಮ ವಿಷಯಗಳನ್ನು ನೆನಪಿಸಿಕೊಳ್ಳುತ್ತಾರೆ ಶ್ರೀನಿವಾಸ ವೈದ್ಯ. ಉತ್ತರ ಕರ್ನಾಟಕದ ಅವಿಭಕ್ತ ಕುಟುಂಬ; ಮನೆಯಲ್ಲೊಂದು ಗ್ರಾಮೋಫೋನ್ ಅದರ ರೆಕಾರ್ಡರ್‌ಗಳು. ಹೊಸ ರೆಕಾರ್ಡ್ ಎಂದರೆ ಕೇಳೋಕೆ ಮುಗಿ ಬೀಳುತ್ತಿದ್ದ ಮಕ್ಕಳು ಈ ಎಲ್ಲವನ್ನು ನಾಟಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಸಮೂಹ ಮಾಧ್ಯಮಗಳು ಆಗಷ್ಟೇ ಭಾರತಕ್ಕೆ ಕಾಲಿಟ್ಟ ದಿನಗಳವು. ಈಸ್ಟ್ ಮನ್ ಕಲರ್, 17ಎಂಎಂ ಹೀಗೆ ಹೊಸ ಪರಿಕಲ್ಪನೆಗಳು ಅಡಿ ಇಟ್ಟ ದಿನಗಳವು. ಸಾಮಾನ್ಯರ ಬದುಕಿನ ಆಗು ಹೋಗುಗಳಿಗೆ ಸಿನಿ ಸ್ಪರ್ಶ ನೀಡಿ ರೆಟ್ರೋ ಗೀತೆಗಳೊಟ್ಟಿಗೆ ಮೇಳೈಸಿ ನಾಟಕವನ್ನು ಕಟ್ಟಲಾಗಿದೆ. ರಂಗದ ಮೇಲೆ ಸೈಕಲ್ ಸವಾರಿ ಹಾಗೂ ಬಾಲಕ ಶ್ರೀನಿವಾಸರ ಪಾತ್ರದಲ್ಲಿ ಸುಖದೇವ್ ತೇಜಸ್ವಿಯ ಚುರುಕು ಅಭಿನಯ ಪ್ರೇಕ್ಷಕರನ್ನು ರಂಜಿಸಿತ್ತು. ನಟರೆಲ್ಲರ ಅಮೋಘ ಅಭಿನಯ ನಾಟಕದ ಯಶಸ್ಸಿಗೆ ಕಾರಣ. ಪ್ರಾರಂಭಕ್ಕೆ ಹಾಸ್ಯ ನಾಟಕದಂತೆ ಭಾಸವಾದರೂ ಆಳದಲ್ಲಿ ಹುದುಗಿದ್ದ ದುರಂತದ ಹೊಗೆ ಅನಂತರದಲ್ಲಿ ಹೊರ ಹೊಮ್ಮುತ್ತದೆ.

ನಾಟಕದ ಮತ್ತೊಂದು ವಿಶೇಷವೆಂದರೆ ರೆಟ್ರೋ ರಾಗಕ್ಕೆ ಹೆಜ್ಜೆ ಹಾಕಿದ ನೃತ್ಯ ಕಲಾವಿದರು, ಹಳೆ ಸಿನಿಮಾ ಹಾಡುಗಳ ‘ದೃಕ್-ಶ್ರವ್ಯ’ ರಂಗದ ಮೇಲಿತ್ತು. ಬರೀ ಆಪ್ಯಾಯಮಾನ ಗೀತೆಗಳಷ್ಟೇ ಅಲ್ಲ ಆ ದಶಕದ ನೃತ್ಯ ಸಂಯೋಜನೆ ಕೂಡ ಜೊತೆ ಜೊತೆಗೆ ಸಾಗಿದ್ದು ವಿಶೇಷವಾಗಿತ್ತು. ರಾಜ್‌ಕಪೂರ್ ಅಭಿನಯಿಸಿರುವ 1959ರಂದು ತೆರೆ ಕಂಡ ‘ಅನಾರಿ’ ಚಿತ್ರದ ‘ಜೀನಾ ಇಸೀಕ ನಾಮ್ ಹೈ...’, 1961ರಲ್ಲಿ ತೆರೆ ಕಂಡ ಶಮ್ಮಿ ಕಪೂರ್ ಹಾಗೂ ಸಾಯಿರಾ ಬಾನು ನಟನೆಯ ‘ಜಂಗ್ಲಿ’ ಸಿನಿಮಾದ ‘ಚಾಯೆ ಕೋಯಿ ಮುಜೆ ಜಂಗಲಿ ಕಹೇ..’, ರಾಜ್‌ಕಪೂರ್ ಹಾಗೂ ನರ್ಗಿಸ್ ಅಭಿನಯದ ‘ಶ್ರೀ 420’ ಚಿತ್ರದ ‘ಪ್ಯಾರ್ ಹುವಾ ಇಕರಾರ್ ಹುವಾ..’, ‘ಬೋಲ್ ರಾಧ ಬೋಲ್ ಸಂಗಮ್..’ 1964ರ ಸಂಗಂ ಚಿತ್ರದ ಹಾಡು ಹೀಗೆ ನಾಟಕದುದ್ದಕ್ಕೂ ರಸಾಸ್ವಾದನೆ...

ಕೆ.ಆರ್.ನಂದಿನಿ ಅವರ ರೆಟ್ರೋ ಮಾದರಿಯ ವಸ್ತ್ರ ವಿನ್ಯಾಸ, ಎಚ್.ಕೆ.ದ್ವಾರಕಾನಾಥ್ ಅವರ ರಂಗ ವಿನ್ಯಾಸ, ಕೃಷ್ಣಕುಮಾರ್ ನಾರ್ಣಕಜೆ ಅವರ ಬೆಳಕು, ಕಾರ್ತಿಕ್ ಉಪಮನ್ಯು ನೃತ್ಯ ಸಂಯೋಜನೆ ನಾಟಕಕ್ಕೆ ಪೂರಕವಾಗಿತ್ತು.

ಓಹಿಲ ಎಂ.ಪಿ.

ನಾಟಕ: ಪಾರ್ಶ್ವ ಸಂಗೀತ
ಮೂಲ: ಶ್ರೀನಿವಾಸ ವೈದ್ಯ
ರಂಗರೂಪ: ಬಿ.ಪಿ. ಅರುಣ್
ನಿರ್ದೇಶನ: ಪ್ರಶಾಂತ್ ಹಿರೇಮಠ್
ತಂಡ: ರಂಗವಲ್ಲಿ, ಮೈಸೂರು
ಪ್ರಸ್ತುತಿ: ಕಿರು ರಂಗಮಂದಿರ

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !