ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಂತ್ಯದ ನಾಟಕ ‌‘ನನ್ನ ಕತೆ’

Last Updated 4 ಏಪ್ರಿಲ್ 2019, 6:30 IST
ಅಕ್ಷರ ಗಾತ್ರ

ಈ ವಾರಾಂತ್ಯ ಚಾಂದ್ರಮಾನ ಯುಗಾದಿ ಹಬ್ಬ. ಆದರೆ ರಂಗಭೂಮಿಯ ಆಸಕ್ತರಿಗೆ ಮರುದಿನ ಅಂದರೆ ಏಪ್ರಿಲ್‌ ಏಳರಂದು ಏಕ ವ್ಯಕ್ತಿ, ಏಕಾಂಕ ನಾಟಕವೊಂದು ಹಬ್ಬದ ವಾತಾವರಣ ಕಟ್ಟಿಕೊಡಲಿದೆ.

ಗುರುಪ್ರಸಾದ್ ಟಿ.ಎಸ್. ರಚಿಸಿ ನಿರ್ದೇಶಿಸಿರುವ ‘ನನ್ನ ಕತೆ’ ನಾಟಕವನ್ನುವರ್ಷಿಣಿ ಭಾರದ್ವಾಜ್‌ ಪ್ರಸ್ತುತಪಡಿಸಲಿದ್ದಾರೆ. 70 ನಿಮಿಷಗಳ ಈ ನಾಟಕ, ಮಧ್ಯಂತರವಿಲ್ಲದೆ ಪ್ರದರ್ಶನಗೊಳ್ಳಲಿರುವುದು ವಿಶೇಷ. ಒಂದಾದ ಮೇಲೊಂದರಂತೆ ಎರಡು ಪ್ರದರ್ಶನಗಳು ಅಂದು ನಡೆಯಲಿವೆ.

ತನ್ನ ಕತೆಯನ್ನು ಹೇಳುವ ಕಥಾನಾಯಕಿ ಎಂಟು ಬಗೆಯ ಪಾತ್ರಗಳ ರೂಪದಲ್ಲಿ ಪ್ರೇಕ್ಷಕರಿಗೆ ಮುಖಾಮುಖಿಯಾಗುವುದು ಈ ನಾಟಕದ ಹೈಲೈಟ್‌.

ಯುವತಿಯೊಬ್ಬಳು ತನ್ನ ಶೈಶವದಿಂದ ಆರಂಭಿಸಿ ಗರ್ಭವತಿಯಾಗುವವರೆಗಿನ ಕತೆಯನ್ನು ಸ್ವಗತವೆಂಬಂತೆಯೂ, ನಿರೂಪಣೆಯಂತೆಯೂ ಪ್ರೇಕ್ಷಕರೊಂದಿಗೆ ಹೇಳಿಕೊಳ್ಳುತ್ತಾಳೆ. ಜೀವನದ ವಿವಿಧ ಹಂತಗಳಲ್ಲಿ ವಿವಿಧ ಪ್ರಶ್ನೆಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳುವುದು, ಉತ್ತರ ನೀಡಲು ಬಯಸದ ಪ್ರಶ್ನೆಗಳಿಗೆ ಉತ್ತರ ನೀಡಲು ಬದ್ಧವಾಗುವ ಕತೆಯೇ ‘ನನ್ನ ಕತೆ’ ಎಂದು ಹೇಳುತ್ತಾರೆ, ನಿರ್ದೇಶಕ ಗುರುಪ್ರಸಾದ್.

ಆಟವಾಡುವುದೇ ಬದುಕು ಎಂದುಕೊಂಡಿದ್ದ ಬಾಲಕಿ, ಜೀವನದ ಹಲವಾರು ದಾರಿಗಳನ್ನು ಅಳೆದು ತೂಗಿ ಸಾಗುವ ಪ್ರಕ್ರಿಯೆ, ತಾಯಿಯ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊರುವ ಮಗಳಾಗಿ, ಸಹಜೀವಿಯಾಗಿ, ಜೀವ ನೀಡುವ ತಾಯಿಯಾಗಿ ಸಾಗುವುದು, ಮುಂದೊಂದು ದಿನ ಅಕಾಲದಲ್ಲಿ ಯುವವೃದ್ಧಳಾಗುತ್ತಾಳೆ– ಇದು ‘ನನ್ನ ಕತೆ’ಯಲ್ಲಿ ಪ್ರೇಕ್ಷಕರು ಕಾಣುವ ಹಂತಗಳು ಎಂದು ಅವರು ವಿವರಿಸುತ್ತಾರೆ.

ಈ‌‌‌ ಏಕವ್ಯಕ್ತಿ ನಾಟಕವು ನಮ್ಮ ಸುತ್ತಮುತ್ತಲ ನಡೆಯುವ ನೈಜ ಘಟನೆಗಳು ಮತ್ತು ಕಾಲ್ಪನಿಕ ಸನ್ನಿವೇಶಗಳ ಮಿಶ್ರಣ. ಸ್ವಾರ್ಥ, ಅಸೂಯೆ, ಕಾಮ, ಮೋಹ, ಮದ, ಮಾತ್ಸರ್ಯದಿಂದ ಸಮಾಜ ಕಶ್ಮಲಗೊಂಡಿರುವ ಕಾರಣ ಹೆಣ್ಣೊಬ್ಬಳನ್ನು ಸ್ವಾರ್ಥದಿಂದಲೇ ನೋಡಲಾಗುತ್ತದೆ. ತಾಯಿ, ಅಕ್ಕ, ತಂಗಿ, ಹೆಂಡತಿ, ಸ್ನೇಹಿತೆಯಾಗಿ ಹೆಣ್ಣು ಬೇಕು ಆದರೆ ಮಗಳಾಗಿ ಮಾತ್ರ ಬೇಡ ಎನ್ನುವ ಧೋರಣೆಯ ಬಗೆಗಿನ ಅಳುಕಿನಿಂದಲೇ ನಾಟಕ ಶುರುವಾಗುತ್ತದೆ ಎನ್ನುತ್ತಾರೆ ನಿರ್ದೇಶಕರು.

ಸ್ಥಳ: ಪ್ರಭಾತ್ ಕಲಾಪೂರ್ಣಿಮಾ, ಎನ್.ಆರ್. ಕಾಲೊನಿ. ಸಂಜೆ 4.30 ಮತ್ತು ರಾತ್ರಿ 7.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT