‘ಹವ್ಯಾಸಿ–ವೃತ್ತಿ ನಡುವಿನ ಕಂದಕ ನೀಗಿದೆ’

7

‘ಹವ್ಯಾಸಿ–ವೃತ್ತಿ ನಡುವಿನ ಕಂದಕ ನೀಗಿದೆ’

Published:
Updated:

ವೃತ್ತಿ ರಂಗಭೂಮಿಗೂ, ಹವ್ಯಾಸಿ ರಂಗಭೂಮಿಗೂ ಬಹುದೊಡ್ಡ ಕಂದರವಿದೆ. ವೃತ್ತಿ ರಂಗದ ಮೂಲ ಸೊಗಡು ಹವ್ಯಾಸಿಗರಿಗೆ ದಕ್ಕದು, ಹವ್ಯಾಸಿಗರ ರಂಗಶಿಸ್ತು ವೃತ್ತಿಯವರಿಗೆ ಬಾರದು ಅನ್ನುವ ಮಾತುಗಳ ನಡುವೆಯೇ ಈ ಎರಡೂ ರಂಗಗಳ ಕಂದಕವನ್ನು ಸದ್ದಿಲ್ಲದೇ ನೀಗಿಸುವ ಯಶಸ್ವಿಯಾಗಿದ್ದಾರೆ ವೃತ್ತಿ ನಾಟಕಕಾರ ಜೇವರ್ಗಿ ರಾಜಣ್ಣ.

29 ವರ್ಷಗಳಿಂದ ವಿಶ್ವಜ್ಯೋತಿ ಶ್ರೀಪಂಚಾಕ್ಷರ ನಾಟ್ಯಸಂಘವನ್ನು ನಡೆಸುತ್ತಿರುವ ರಾಜಣ್ಣ ತಮ್ಮ ಕಂಪನಿಯ ಮಾಲೀಕರಷ್ಟೇ ಅಲ್ಲ, ನಟ, ನಾಟಕಕಾರ, ನಿರ್ದೇಶಕ, ರಂಗಗೀತೆಗಳ ಗಾಯಕ ಕೂಡಾ. ಅವರ ಇಡೀ ಕುಟುಂಬ ವೃತ್ತಿ ರಂಗಭೂಮಿಯಲ್ಲಿ ಸಕ್ರಿಯವಾಗಿದೆ.

ಗ್ರಾಮೀಣ ಮತ್ತು ನಗರದ ಪ್ರೇಕ್ಷಕರ ನಾಡಿಮಿಡಿತವನ್ನು ಬಲ್ಲ ರಾಜಣ್ಣ ರಾಜ್ಯದ ವಿವಿಧೆಡೆ ತಮ್ಮ ನಾಟಕಗಳನ್ನು ಪ್ರದರ್ಶಿಸಿ, ಪ್ರೇಕ್ಷಕರ ಮೆಚ್ಚುಗೆಗೆ ಭಾಜನರಾಗಿದ್ದಾರೆ. ರಾಜಧಾನಿಯಲ್ಲೂ ಕಳೆದ ವರ್ಷ ‘ಕುಂಟ ಕೋಣ–ಮೂಕ ಜಾಣ’ ಹಾಸ್ಯ ನಾಟಕದ ಮೂಲಕ ಅಪಾರ ಪ್ರೇಕ್ಷಕರನ್ನು ಗಳಿಸಿದ್ದ ರಾಜಣ್ಣ ಈಗ ಮತ್ತೊಮ್ಮೆ ತಮ್ಮ ನಾಟಕಗಳ  ಮೂಲಕ ಪ್ರೇಕ್ಷಕರಿಗೆ ರಸದೌತಣ ಬಡಿಸಲು ಸಜ್ಜಾಗಿದ್ದಾರೆ.

ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ ಅವರ ಸ್ಮರಣಾರ್ಥ ‘ಭಾಗವತರು’ ಸಾಂಸ್ಕೃತಿಕ ಸಂಘಟನೆ ಆಯೋಜಿಸಿರುವ ‘ವೃತ್ತಿ ರಂಗವೈಭವ’ ದಲ್ಲಿ ಜೇವರ್ಗಿ ರಾಜಣ್ಣ ರಚಿಸಿ, ನಿರ್ದೇಶಿಸಿರುವ ಐದು ನಾಟಕಗಳು ಪ್ರದರ್ಶನ ಗೊಳ್ಳುತ್ತಿರುವುದು ವಿಶೇಷ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ಆಡಿದ ಮಾತುಗಳು ಇಲ್ಲಿವೆ.

* ವೃತ್ತಿರಂಗ ವೈಭವದಲ್ಲಿ ಪ್ರದರ್ಶಿಸುತ್ತಿರುವ ನಾಟಕಗಳ ವಿಶೇಷವೇನು?
‘ಕುಂಟ ಕೋಣ–ಮೂಕ ಜಾಣ’, ‘ವರಪುತ್ರ’, ‘ಅಮರ ಫಲ’, ‘ನಗಿಸಿ ನಗಿಸಿ ಅಳಸ್ತಾಳ’, ‘ಸಾರಾಯಿ ಅಂಗಡಿ ಸಂಗವ್ವ’ ಒಟ್ಟು ಐದು ವೃತ್ತಿ ನಾಟಕಗಳು ಪ್ರದರ್ಶನವಾಗಲಿವೆ. ಪ್ರತಿ ನಾಟಕದಲ್ಲೂ ಹಾಸ್ಯದ ಜತೆಗೆ ಸಂದೇಶವಿರುತ್ತದೆ. ಮನುಷ್ಯ ಸಂಬಂಧಗಳು, ಪ್ರಸ್ತುತ ರಾಜಕಾರಣ, ಮನುಷ್ಯ ದೌರ್ಬಲ್ಯ, ಸಮಾಜ ಸೇವೆ, ಶ್ರೀಮಂತಿಕೆಯ ಎಡವಟ್ಟುಗಳು, ಎಂಡೋಸಲ್ಫಾನ್ ಪೀಡಿತರ ನೋವು ಹೀಗೆ ಒಂದೊಂದು ನಾಟಕವೂ ವಿಭಿನ್ನವಾಗಿದೆ.

* ವೃತ್ತಿ ನಾಟಕಗಳಲ್ಲಿ ಬರೀ ಅಶ್ಲೀಲ ಸಂಭಾಷಣೆ ಇರುತ್ತದೆ ಅನ್ನುತ್ತಾರಲ್ಲ...
ಈ ಮಾತು ಸಂಪೂರ್ಣ ನಿಜವಲ್ಲ. ನಾವು ವೃತ್ತಿ ರಂಗಭೂಮಿಗೆ ಬಂದಾಗ ಯಾವ ದ್ವಂದ್ವಾರ್ಥವೂ ಇರಲಿಲ್ಲ. ಆದರೆ, ಟಿವಿ ಮನೆಗೆ ಬಂದಾಗ ಸಿನಿಮಾ, ರಂಗಭೂಮಿಗೆ ಹೊಡೆತ ಬಿತ್ತು. ಆ ಸಮಯದಲ್ಲಿ ಸಿನಿಮಾದಲ್ಲಿ ಬಳಸುತ್ತಿದ್ದ ಸಂಭಾಷಣೆಗಳು ವೃತ್ತಿರಂಗದ ಮೇಲೂ ಪ್ರಭಾವ ಬೀರಿದವು. ಕಂಪನಿಯ ಸಹಾಯಾರ್ಥ ಪ್ರದರ್ಶನಕ್ಕಾಗಿ ಸಿನಿಮಾ ಕಲಾವಿದರನ್ನು ಕರೆಸುತ್ತಿದ್ದಾಗ ಅದನ್ನೇ ನಮ್ಮ ಕಲಾವಿದರೂ ಅನುಸರಿಸಿದರು. ಆಗಲೇ ನಾಟಕಗಳಲ್ಲಿ ಡಬಲ್ ಮೀನಿಂಗ್, ಐಟಂ ಸಾಂಗ್ ಬಂದವು.

ಹಾಗಂತ ಎಲ್ಲ ಕಂಪನಿಗಳಲ್ಲಿ ಇವು ಇದ್ದವು ಅಂತಲ್ಲ. ಗದುಗಿನ ಪಂಚಾಕ್ಷರ ಗವಾಯಿ ಅವರ ಕಂಪನಿ ಸೇರಿದಂತೆ ಅನೇಕ ಕಂಪನಿಗಳು ಇದಕ್ಕೆ ಹೊರತಾಗಿದ್ದವು. ಈಗಂತೂ ಅಂತರ್ಜಾಲ, ಮೊಬೈಲ್ ಬಂದಮೇಲೆ ಬಹುತೇಕ ಕಂಪನಿಗಳಲ್ಲಿ ಐಟಂ ಸಾಂಗ್, ಡಬಲ್ ಮೀನಿಂಗ್ ಕೈಬಿಡಲಾಗಿದೆ. ಅಂಗೈಯಲ್ಲಿನ ಮೊಬೈಲ್‌ನಲ್ಲೇ ಎಲ್ಲವೂ ಸಿಗುವಾಗ ಅಂಥ ದೃಶ್ಯಗಳನ್ನು ನಾಟಕದ ಪ್ರೇಕ್ಷಕರು ರಂಗದ ಮೇಲೆ ನೋಡಲು ಬಯಸುವುದಿಲ್ಲ. ಈ ಹಿಂದೆ ಆ ರೀತಿಯ ಸಿನಿಮಾಗಳನ್ನು ಪ್ರದರ್ಶಿಸುವ ಸಲುವಾಗಿಯೇ ಸಿನಿಮಾ ಮಂದಿರಗಳಿರುತ್ತಿದ್ದವು. ಆದರೆ, ಈಗ ಅಂಥ ಸಿನಿಮಾ ಮಂದಿರಗಳು ಅಷ್ಟಿಲ್ಲ. ಅಂತೆಯೇ ಕೆಲ ನಾಟಕ ಕಂಪನಿಗಳೂ ಈಗ ಅಶ್ಲೀಲ ಸಂಭಾಷಣೆಗಳಿಂದ ದೂರವುಳಿದಿವೆ.

* ವೃತ್ತಿ ಮತ್ತು ಹವ್ಯಾಸಿ ಕಂಪನಿಗಳ ನಡುವಿನ ಕಂದಕ ನೀಗಿದೆಯೇ?
ಖಂಡಿತಾ ನೀಗಿದೆ ಅಂತ ಹೇಳಬಲ್ಲೆ. ಬೆಂಗಳೂರಿನಲ್ಲಿ ‘ಕುಂಟಕೋಣ ಮೂಕಜಾಣ’ ನಾಟಕದ ಯಶಸ್ಸಿನ ಹಿಂದೆ ರಂಗಶಂಕರವಿದೆ. ಈ ನಾಟಕವನ್ನು ಕಲಾಕ್ಷೇತ್ರದಲ್ಲಿ ಪ್ರದರ್ಶಿಸುವ ಮುನ್ನ ಹಿರಿತೆರೆ, ಕಿರುತೆರೆ ಕಲಾವಿದರಿಗಾಗಿಯೇ ಪ್ರತ್ಯೇಕ ಪ್ರದರ್ಶನ ಆಯೋಜಿಸಿದ್ದೆವು. ಅಲ್ಲಿ ಒಂದೇ ಪ್ರದರ್ಶನದಲ್ಲಿ ₹ 50 ಸಾವಿರ ಸಂಗ್ರಹವಾಗಿತ್ತು.

ಈ ನಾಟಕವನ್ನು ಬೆಳಗಾವಿಯಲ್ಲಿ ನೋಡಿ ಸಾಹಿತಿ ಚಂದ್ರಶೇಖರ ಕಂಬಾರರು ಸೇರಿದಂತೆ ಅನೇಕರು ಖುಷಿಪಟ್ಟರು. ನಾನೂ ನಮ್ಮ ಕಂಪನಿಯಲ್ಲಿ ಆಧುನಿಕ ನಾಟಕಗಳನ್ನು ಪ್ರದರ್ಶಿಸಲು ಆಹ್ವಾನಿಸುತ್ತೇನೆ. ನಾವೂ ಅವರಲ್ಲಿಗೆ ಹೋಗಿ ನಾಟಕ ಪ್ರದರ್ಶಿಸುತ್ತಿದ್ದೇವೆ. ಈ ಹಿಂದೆ ವೃತ್ತಿಯವರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿತ್ತು. ಆದರೆ, ಈಗ ಆ ಮನೋಭಾವ ನಿಧಾನವಾಗಿ ತೊಲಗುತ್ತಿದೆ. ‘ರಂಗಾಯಣ’ದಲ್ಲೂ ನಮ್ಮ ನಾಟಕಗಳು ಪ್ರದರ್ಶನಗೊಂಡಿವೆ. ಕುಪ್ಪಳಿಯಲ್ಲಿ ನಡೆದ ಕಾರ್ಯಾಗಾರದಲ್ಲಿ ‘ಬಲಿಯಾಗದಿರು ಬಾಲೆ’ ಎನ್ನುವ ನಾಟಕ ಬರೆಯುವ ಅವಕಾಶ ನನ್ನಂಥ ವೃತ್ತಿ ನಾಟಕಕಾರನಿಗೆ ಸಿಕ್ಕಿತು. ಅದು ನಾಟಕವೂ ಆಯಿತು.

* ನಿಮ್ಮ ನಾಟಕಗಳ ವಿಶೇಷ ಗುಣವೇನು?
ಪ್ರೇಕ್ಷಕರು ಈಗ ಬಹಳ ಬುದ್ಧಿವಂತರಾಗಿದ್ದಾರೆ. ನಾವು ಎಂಥದ್ದೇ ಕಥೆ ಬರೆದರೂ ಮುಂದೇನಾಗುತ್ತದೆ ಎಂಬುದನ್ನು ಕ್ಷಣಾರ್ಧದಲ್ಲಿಯೇ ಊಹಿಸಿಬಿಡುತ್ತಾರೆ. ಬರೀ ಕಥೆ ಹೇಳ್ತೀವಿ ಅಂದ್ರೆ ಪ್ರೇಕ್ಷಕರು ನಾಟಕ ನೋಡಲು ಬರೋದಿಲ್ಲ. ಹಾಗಾಗಿ, ಅವರನ್ನು ಹಾಸ್ಯದ ಮೂಲಕ ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಮ್ಮ ನಾಟಕಗಳದ್ದು. ಆದರೆ, ಹೆಣ್ಣು ಮಕ್ಕಳು ಬಂದು ನೋಡಿದರೂ ತಲೆ ತಗ್ಗಿಸುವಂಥ ಸಂಭಾಷಣೆಗಳು ನಮ್ಮ ನಾಟಕದಲ್ಲಿ ಇರೋದಿಲ್ಲ. ಅಕ್ಕಪಕ್ಕದವರು ನೋಡಿ ಮುಜುಗರ ಪಡುವ ಹಾಸ್ಯವೂ ನಮ್ಮಲ್ಲಿಲ್ಲ.

 * ಬೆಂಗಳೂರಿನ ಪ್ರೇಕ್ಷಕರಿಗಾಗಿಯೇ ನಾಟಕಗಳಲ್ಲಿ ಬದಲಾವಣೆ ಮಾಡಿಕೊಂಡಿದ್ದೀರಾ?
ಖಂಡಿತಾ ಇಲ್ಲ. ನಮ್ಮ ಕಂಪನಿ ಮೈಸೂರು, ಶಿವಮೊಗ್ಗ, ಶಿರಸಿ, ಕುಮುಟಾ, ತುಮಕೂರು, ದಾವಣಗೆರೆ, ಚಿತ್ರದುರ್ಗ ಹೀಗೆ ಎಲ್ಲೆಡೆಯೂ ನಾಟಕ ಪ್ರದರ್ಶಿಸುತ್ತದೆ. ಪ್ರತಿ 30–40ಕಿ.ಮೀ. ವ್ಯಾಪ್ತಿಗೆ ಕನ್ನಡ ಬದಲಾಗುತ್ತದೆ. ಹಾಗಂತ ನಾವು ನಾಟಕದಲ್ಲಿ ಬದಲಿಸಿದರೆ ಅದನ್ನು ಪ್ರೇಕ್ಷಕರೇ ಒಪ್ಪುವುದಿಲ್ಲ. ನಮ್ಮ ಭಾಷೆಯ ಮೂಲ ಸೊಗಡನ್ನೇ ಸವಿಯಲು ಅವರು ಇಷ್ಟಪಡುತ್ತಾರೆ. ನಮ್ಮ ಭಾಷೆಯನ್ನು ಪ್ರೀತಿಸುವ ಪ್ರೇಕ್ಷಕರಿದ್ದಾರೆ. ಹಾಗಾಗಿ, ವಸ್ತು, ಭಾಷೆ ಯಾವ ವಿಚಾರದಲ್ಲೂ ಬದಲಾವಣೆ ಮಾಡಿಕೊಂಡಿಲ್ಲ.

ಭಾಗವತರು ಬಗ್ಗೆ...
‘ಭಾಗವತರು’ ರಂಗಭೂಮಿ, ಸುಗಮಸಂಗೀತ, ಸಾಹಿತ್ಯ, ಕಲೆ ಮುಂತಾದ ಬಹುವಲಯಗಳಲ್ಲಿ ವಿಸ್ತಾರಗೊಂಡು ಕ್ರಿಯಾಶೀಲವಾಗಿರುವ ಸಂಘಟನೆ. ‘ಈ ತನಕ ಭಾಗವತರು 16 ನಾಟಕೋತ್ಸವಗಳನ್ನು ಆಯೋಜಿಸಿದೆ. ಇದರಲ್ಲಿ ಕನ್ನಡ ರಂಗಭೂಮಿಯ ಶ್ರೇಷ್ಠ ನಾಟಕ ಪ್ರಯೋಗಗಳನ್ನು ಇಂದಿನ ಪೀಳಿಗೆಗೆ ನೋಡಲು ಅವಕಾಶ ಮಾಡಿಕೊಡುವುದರ ಜೊತೆಗೆ ಅನೇಕ ರಂಗ ನಿರ್ದೇಶಕರು, ತಂತ್ರಜ್ಞರ, ಕಲಾವಿದರನ್ನು ಗೌರವಿಸುವ, ನಮ್ಮನ್ನಗಲಿದ ಚೇತನಗಳಿಗೆ ಗೌರವ ಸಲ್ಲಿಸುವ ಕಾರ್ಯ ಮಾಡಿದೆ ಎನ್ನುತ್ತಾರೆ ‘ಭಾಗವತರು’ ಸಂಘಟನೆಯ ಅಧ್ಯಕ್ಷ ಕೆ. ರೇವಣ್ಣ.

ವೃತ್ತಿ ರಂಗವೈಭವ: ಸಂಜೆ 4ಕ್ಕೆ ‘ಕುಂಟಕೋಣ ಮೂಕ ಜಾಣ’ ನಾಟಕ ಪ್ರದರ್ಶನ. ಸಂಜೆ 5.45ಕ್ಕೆ ರಂಗಗೀತೆಗಳು–ಎಲ್.ಬಿ.ಶೇಖ್ ಮಾಸ್ತರ, ಬಸವರಾಜ ಹೂಗಾರ, ಸಂಜೆ 6.30ಕ್ಕೆ ಉದ್ಘಾಟನೆ–ನಟಿ ಉಮಾಶ್ರೀ, ಪುಸ್ತಕ ಬಿಡುಗಡೆ–ಜೆ. ಲೋಕೇಶ್, ರಂಗ ಗೌರವ– ಎಲ್.ಬಿ. ಶೇಖ್ ಮಾಸ್ತರ, ಮಾಲತಿ ಸುಧೀರ್ ಅವರಿಗೆ. ರಾತ್ರಿ 7.15ಕ್ಕೆ ‘ಕುಂಟ ಕೋಣ ಮೂಕ ಜಾಣ...’ ನಾಟಕ ಪ್ರದರ್ಶನ, ರಚನೆ– ನಿರ್ದೇಶನ– ಜೇವರ್ಗಿ ರಾಜಣ್ಣ. ಆಯೋಜನೆ– ಭಾಗವತರು, ಸಂಸ್ಕೃತಿ ಸಚಿವಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಸ್ಥಳ– ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಟಿಕೆಟ್ ದರ ₹ 80, ₹ 50

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !