ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಜಿಕೆ ನೆನಪಿಗೆ ವಿಶೇಷ ಅಂಚೆ ಲಕೋಟೆ

ಸಿಜಿಕೆ ನೆನಪಿನಲ್ಲಿ ವಿಶೇಷ ಅಂಚೆ ಲಕೋಟೆ
Last Updated 10 ಜನವರಿ 2021, 19:30 IST
ಅಕ್ಷರ ಗಾತ್ರ

‘ಸಿಜಿಕೆ’ ಎಂಬ ಮೂರಕ್ಷರದಿಂದ ಪ್ರಸಿದ್ಧಿಯಾಗಿದ್ದ ಸಿ.ಜಿ. ಕೃಷ್ಣಸ್ವಾಮಿ ಅವರದ್ದು ಕರ್ನಾಟಕ ಸಾಂಸ್ಕೃತಿಕ ಲೋಕದಲ್ಲಿ ಅಚ್ಚಳಿಯದ ಹೆಸರು. ನಿರಂತರ ಪ್ರಯೋಗಶೀಲತೆ ಮತ್ತು ತಾಂತ್ರಿಕ ವೈಶಿಷ್ಟ್ಯಗಳ ಮೂಲಕ ಕನ್ನಡ ಹವ್ಯಾಸಿ ರಂಗಭೂಮಿಗೆ ನವೀನ ಸ್ಪರ್ಶ ನೀಡಿದವರು ಅವರು. ಜೀವಪರ ಮೌಲ್ಯಗಳ ಪ್ರತಿಪಾದಕರಾಗಿದ್ದ ಸಿಜಿಕೆ, ನಾಡಿನ ಅನೇಕ ಪ್ರಗತಿಪರ ಚಳವಳಿಗಳ ಮುಂಚೂಣಿಯಲ್ಲಿದ್ದವರು.

ಅವರು ನೇಪಥ್ಯಕ್ಕೆ ಸರಿದು ಇಂದಿಗೆ 15 ವರ್ಷಗಳಾದರೂ (ಜ.11,2006) ಅವರು ಸ್ಥಾಪಿಸಿದ್ದ ‘ರಂಗನಿರಂತರ’ ಇಂದಿಗೂ ತನ್ನ ರಂಗಪಯಣ ಮುಂದುವರಿಸಿದೆ. ಸಿಜಿಕೆ ಎನ್ನುವ ಪದ ಇಂದಿಗೂ ಅನೇಕರ ಪಾಲಿಗೆ ಸ್ಫೂರ್ತಿಯ ಚಿಲುಮೆ. ಇಂಥ ಅಪರೂಪದ ವ್ಯಕ್ತಿತ್ವ ಸಿಜಿಕೆ ಅವರದು. ಅವರ ನೆನಪಿನಲ್ಲಿ ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ವೃತ್ತ, ‘ರಂಗನಿರಂತರ’ದ ಸಹಯೋಗದಲ್ಲಿ ಸಿಜಿಕೆ ವಿಶೇಷ ಅಂಚೆ ಲಕೋಟೆಯನ್ನು ಇಂದು (ಜ.11) ಬಿಡುಗಡೆ ಮಾಡುತ್ತಿದೆ. ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಅಂಚೆ ಇಲಾಖೆಯ ಗೌರವಕ್ಕೆ ಭಾಜನರಾಗುತ್ತಿರುವ ಮೊದಲ ರಂಗಕರ್ಮಿ ಸಿಜಿಕೆ ಅವರು ಅನ್ನುವುದು ಅವರ ಅಭಿಮಾನಿಗಳ ಪಾಲಿಗೆ ಹೆಮ್ಮೆಯ ಸಂಗತಿ.

‘ಈ ಹಿಂದೆ ನಟರಾದ ರಾಜ್‌ಕುಮಾರ್, ವಿಷ್ಣುವರ್ಧನ್ ಅವರ ವಿಶೇಷ ಲಕೋಟೆ ತರಲಾಗಿತ್ತು. ಈಗ ರಂಗಕರ್ಮಿ ಸಿಜಿಕೆ ಅವರ ವಿಶೇಷ ಅಂಚೆ ಲಕೋಟೆ ತರಲಾಗುತ್ತಿದೆ. ಅಂಚೆ ಚೀಟಿ ಸಂಗ್ರಹಕಾರರು ಇಂಥದ್ದನ್ನು ಮುಗಿಬಿದ್ದು ಖರೀದಿಸಿಟ್ಟುಕೊಳ್ಳುತ್ತಾರೆ. ಮುಂದೊಂದು ದಿನ ಇಂಥ ಚೀಟಿ, ಲಕೋಟೆ ಬೇಕೆಂದರೂ ಲಭ್ಯವಿರುವುದಿಲ್ಲ. ಹಾಗಾಗಿ, ಇಂಥ ಲಕೋಟೆಗಳನ್ನು ಖರೀದಿಸಿಟ್ಟರೆ ಅದರ ಮೌಲ್ಯ ದುಪ್ಪಟ್ಟಾಗುತ್ತದೆ’ ಎನ್ನುತ್ತಾರೆ ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್.

ಕಲಾವಿದ ಸುಭಾಷ್ ಕಮ್ಮಾರ ಅವರ ಪೇಂಟಿಂಗ್ ಇರುವ ಈ ಅಂಚೆ ಲಕೋಟೆಯಲ್ಲಿ ಕೆ. ಶಿವರುದ್ರಯ್ಯ ಅವರು ತೆಗೆದ ಸಿಜಿಕೆ ನಾಟಕಗಳ ಚಿತ್ರಗಳಿವೆ. ಹಿರಿಯ ಕಲಾವಿದ ಶಶಿಧರ ಅಡಪ ಅವರ ವಿನ್ಯಾಸದಲ್ಲಿ ರೂಪುಗೊಂಡಿರುವ ಈ ಲಕೋಟೆಗೆ ಹಿರಿಯ ಪತ್ರಕರ್ತ ಮುರಳೀಧರ ಖಜಾನೆ, ಸಿಜಿಕೆ ವ್ಯಕ್ತಿತ್ವ ಕಟ್ಟಿಕೊಡುವ ಸಾಲುಗಳನ್ನು ಮೂರು ಭಾಷೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಸೀಮಿತ ಪ್ರಕಟಣೆಯಲ್ಲಿ (ಲಿಮಿಟೆಡ್ ಎಡಿಷನ್) ಒಟ್ಟು 2 ಸಾವಿರ ಅಂಚೆ ಲಕೋಟೆಗಳು ಮುದ್ರಿತವಾಗಿದ್ದು, ಇದರಲ್ಲಿ 800 ಲಕೋಟೆಗಳು ‘ರಂಗನಿರಂತರ’ದ ಕೈಸೇರಲಿವೆ. ಉಳಿದ 1,200 ಲಕೋಟೆಗಳು ಅಂಚೆ ಇಲಾಖೆಯಲ್ಲಿ ಲಭ್ಯವಿರುತ್ತವೆ.

‘800 ಲಕೋಟೆಗಳಲ್ಲಿ 150 ಲಕೋಟೆಗಳನ್ನು ದೇಶದ ವಿವಿಧ ರಂಗಸಂಸ್ಥೆಗಳಿಗೆ ಸಿಜಿಕೆ ಪರಿಚಯ ಪತ್ರದೊಂದಿಗೆ ಕಳುಹಿಸಲಾಗುತ್ತದೆ. 100 ಲಕೋಟೆಗಳು ರಾಜ್ಯದ ಆಯ್ದ 100 ಯುವ ರಂಗಕರ್ಮಿಗಳಿಗೆ ನೀಡಲಾಗುತ್ತದೆ. ಈ ಲಕೋಟೆ ತರುವಲ್ಲಿ ರಂಗಕರ್ಮಿ ಜಿಪಿಒ ಚಂದ್ರು ಸಹಕಾರ ಮರೆಯಲಾಗದ್ದು’ ಎಂದರು ‘ರಂಗನಿರಂತರ’ದ ಉಪಾಧ್ಯಕ್ಷ ಶಶಿಧರ ಅಡಪ.

ಇಂದು ಬಿಡುಗಡೆ: ಸಿಜಿಕೆ ವಿಶೇಷ ಅಂಚೆ ಲಕೋಟೆಯನ್ನು ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್, ಬೆಂಗಳೂರು ಎಚ್‌.ಕ್ಯೂ ಪ್ರಾಂತ್ಯದ ಚೀಫ್ ಪೋಸ್ಟ್ ಮಾಸ್ಟರ್ ಶಿಉಲಿ ಬರ್ಮನ್ ಬಿಡುಗಡೆ ಮಾಡುವರು. ಸಿಜಿಕೆ ಅವರ ಸಹಪಾಠಿ, ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಸ್ಥಳ: ರವೀಂದ್ರ ಕಲಾಕ್ಷೇತ್ರ, ಸೋಮವಾರ ಸಂಜೆ 6.

ಸಂಪರ್ಕಕ್ಕೆ: ಸಿಜಿಕೆ ಸೆಂಟರ್,
ಮೊಬೈಲ್ ನಂ. 96635 74999.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT