‘ಪ್ರತಿಭಾ’ರಊರ್ಮಿಳಾ ದರ್ಶನ

7

‘ಪ್ರತಿಭಾ’ರಊರ್ಮಿಳಾ ದರ್ಶನ

Published:
Updated:

ನಾಟಕದುದ್ದಕ್ಕೂ ಊರ್ಮಿಳೆ ಪ್ರತಿರೋಧ ಶಕ್ತಿಯಾಗಿ ಕಾಣಿಸುತ್ತಾಳಾ?

ಎರಡು ರೀತಿಯ ಪ್ರತಿಭಟನೆ. ಒಂದು ಜಗತ್ತಿನ ವಿದ್ಯಮಾನಕ್ಕೆ ನನ್ನ ತೀವ್ರವಾದ ಪ್ರತಿಭಟನೆ. ಇನ್ನೊಂದು ಒಡಲಾಳದ ಪ್ರತಿಭಟನೆ. ಇಲ್ಲಿ ಅವಳದು ಅಂತರಂಗದ ತೊಳಲಾಟ. ಇಲ್ಲಿ ಆಕೆ ವ್ಯವಸ್ಥೆಯನ್ನು ಪ್ರತಿನಿಧಿಸುತ್ತಾಳೆ ಮತ್ತು ವಿರೋಧಿಸ್ತಾಳೆ ಕೂಡ. ರಾಮಾಯಣಕ್ಕೆ ಅಥವಾ ಆರ್ಯ ವ್ಯವಸ್ಥೆಗೆ ಆಕೆ ಪ್ರತಿರೋಧವಾಗಿ ನಿಲ್ಲುತ್ತಾಳೆ ಅನ್ನೋದು ತಪ್ಪಾಗಬಹುದು. ಆದರೆ, ಹೌದು ಆಕೆ ತನ್ನ ಪರಿಧಿ ಒಳಗೆ ಪ್ರತಿರೋಧ ಶಕ್ತಿ ಆಗಿ ನಿಲ್ಲುತ್ತಾಳೆ.

‘ಬೆಂಕಿಯೂ ಸೀತೆಯನ್ನು ಸುಡಲಿಲ್ಲ’ ಎಂದು ಹೇಳುವ ಊರ್ಮಿಳೆ  ಸೀತೆಯ ಕಷ್ಟಗಳನ್ನು ನಗಣ್ಯ ಮಾಡುತ್ತಾಳೆಯೇ?

ನನಗೆ ಹಾಗೆ ಅನ್ನಿಸುವುದಿಲ್ಲ. ಸೀತೆ ನನಗಿಂತ ಗಟ್ಟಿಗಿತ್ತಿ ಎನ್ನುವ ಭಾವ ಊರ್ಮಿಳೆಗೆ. ಹೊರತು ಬೇರೆ ಯಾವ ದೂರು ಇಲ್ಲ. ರಾಮ ಕಾಡಿಗೆ ಹೊರಡುವ ಮುನ್ನ ಆತ ಸೀತೆಗೆ ಕಾಡಿನ ವರ್ಣನೆ ಮಾಡುವಾಗ, ರಾಮನಂಥ ರಾಮನನ್ನೇ ಮಾತಿನಲ್ಲಿ ಸೋಲಿಸಿ ಹೊರಟವಳು ಸೀತೆ. ಆದರೆ, ನನಗೆ ಲಕ್ಷ್ಮಣನಡನ್ನು ಒಪ್ಪಿಸಲು ಆಗಲಿಲ್ಲ ಎನ್ನುವ ಕೊರಗಷ್ಟೇ ಊರ್ಮಿಳೆಯದು.

ಏಕವ್ಯಕ್ತಿ ರಂಗಪ್ರಯೋಗದ ಪ್ರಾಮುಖ್ಯತೆ ಹಾಗೂ ಅಗತ್ಯ?

ಏಕವ್ಯಕ್ತಿ ಮಹಿಳಾ ಪ್ರದರ್ಶನಗಳು ಮೊದಲು ಪ್ರಾರಂಭವಾಗಿದ್ದು. ಹೆಣ್ಣು ತನ್ನ ಅಂತರಂಗವನ್ನು ಗಟ್ಟಿ ಧ್ವನಿಯಲ್ಲಿ ಹೇಳಿಕೊಳ್ಳಲು ಸಾಧ್ಯವಾದಾಗ ಇದು ಮುಖ್ಯವಾಗುತ್ತದೆ. ಪುರುಷರೂ ಈ ಪ್ರಯೋಗವನ್ನು ಸಮರ್ಥವಾಗಿಯೇ ಮಾಡುತ್ತಿದ್ದಾರೆ. ಈ ರೀತಿಯ ಪ್ರಯೋಗದಲ್ಲಿ ಒಂದಂಶವನ್ನು ಗಮನಿಸಬೇಕು. ಇಲ್ಲಿ ಹೆಚ್ಚು ಪ್ರರ್ದಶಿತವಾಗುವುದು ನಿರ್ಲಕ್ಷಿತ ಹೆಣ್ಣು ಪಾತ್ರಗಳೇ ಆಗಿವೆ. ಮಂಥರೆ, ಊರ್ಮಿಳಾ ಅಂತಹ ಪಾತ್ರಗಳ ಕುರಿತು ಏಕವ್ಯಕ್ತಿಯಲ್ಲಿ ಹೆಚ್ಚಿನ ಬರವಣಿಗೆ ಆಗಿದೆ.

ಏಕವ್ಯಕ್ತಿ ಪ್ರಯೋಗದ ಮೇಲೂ ಅಪವಾದಗಳಿವೆ. ನಾಟಕ ಎಂದರೆ ಅದು ಸಂಘಟಿತ ಕೆಲಸ. ಆದರೆ, ಏಕವ್ಯಕ್ತಿ ಹಾಗಾಗುವುದಿಲ್ಲ ಎನ್ನುವುದೇ ಆ ಅಪವಾದ. ಆದರೆ, ಇಲ್ಲಿ ವೇದಿಕೆ ಮೇಲೆ ಒಬ್ಬರೇ ಅಭಿನಯಿಸಿದರೂ, ಈ ಪ್ರದರ್ಶನದ ಹಿಂದೆ ಹಲವರ ಪರಿಶ್ರಮ ಇರುತ್ತದೆ. ನಿರ್ದೇಶನ, ಪ್ರಸಾದನ, ಬೆಳಕು, ಸಂಗೀತ ಮುಂತಾದವು. ಆದ್ದರಿಂದ ಇದು ಸಂಘಟಿತ ಕೆಲಸವೇ ಆಗಿದೆ.

ಏಕವ್ಯಕ್ತಿ ನಟನ ಮಾನಸಿಕ ತಯಾರಿ ಹೇಗಿರುತ್ತದೆ?

ಮೊದಲನೆಯದು ಆಸಕ್ತಿ. ಮಾಡೇ ಮಾಡುತ್ತೀನಿ ಎನ್ನುವ ಛಲ ಮತ್ತು ನಂಬಿಕೆ. ಭಯ ಅಂತೂ ಎಲ್ಲರಿಗೂ ಇದ್ದೇ ಇರುತ್ತೆ. ಮುಖ್ಯವಾಗಿ ರಿಹರ್ಸಲ್‌ಗೆ ಹೆಚ್ಚು ಸಮಯ ಕೊಡಬೇಕು. ಏಕಾಗ್ರತೆ ಮುಖ್ಯ. ಪಾತ್ರದ ಆವಾಹನೆ ಮಾಡಿಕೋಬೇಕು. ಅನುಭವಿ ನಟನಿಗೆ ನಾಟಕ ಎಲ್ಲಿ ಸೋಲುತ್ತೆ, ಎಲ್ಲಿ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳಬೇಕು ಎನ್ನುವುದು ತಿಳಿದಿರುತ್ತೆ. ಏಕವ್ಯಕ್ತಿಯಲ್ಲಿ ಒಬ್ಬ ನಟ ಆಗಿರುವುದರಿಂದ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವುದು ಮುಖ್ಯ. ಈ ರೀತಿಯ ಪ್ರಯೋಗದಲ್ಲಿ ನಾಟಕದ ಮೂಲ ಪ್ರತಿ ಗಟ್ಟಿ ಆಗಿರಬೇಕು.  

ಏಕವ್ಯಕ್ತಿ ರಂಗ ಪ್ರಯೋಗ ಒಂದು ಥರಕ್ಕೆ ಪ್ರಮೋಷನ್‌ ಇದ್ದ ಹಾಗೆ. ತುಂಬಾ ವರ್ಷಗಳ ಕಾಲ ನಟನೆ ಮಾಡಿರುತ್ತೀವಿ. ಎಲ್ಲೋ ಒಂದು ಕಡೆ ಹಿಡಿದುಕೊಳ್ಳೋಕೆ ಸಾಧ್ಯವಾ ಅಂತ ಪ್ರಶ್ನಿಸಿಕೊಂಡು ನಮ್ಮನ್ನ ನಾವು ಪರೀಕ್ಷೆ ಮಾಡಿಕೊಳ್ಳೋದು ಇದು. ಈ ಪ್ರಯೋಗ ತುಂಬಾ ಕಷ್ಟ. ಅಷ್ಟು ಹೊತ್ತು ಸಂಭಾಷಣೆಯನ್ನು ನೆನಪಿಟ್ಟುಕೊಳ್ಳೋದು ಕಷ್ಟ. ಸಣ್ಣ ಪುಟ್ಟ ಅಡಚಣೆಯೂ ಪ್ರದರ್ಶನಕ್ಕೆ ಹೊಡೆತ ಬೀಳುತ್ತದೆ. ಅಂತಾದರೂ ಈ ರೀತಿಯ ಪ್ರಯೋಗ ಖುಷಿ ಕೊಡುತ್ತದೆ. 

ರಂಗಭೂಮಿಯಲ್ಲಿ ಮಹಿಳಾ ನಟರು ಸಾಕಷ್ಟು ಇದ್ದಾರೆ. ಆದರೆ, ಮಹಿಳಾ ನಿರ್ದೇಶಕರ ಕೊರತೆ ಇದೆಯೇ. ಇದ್ದರೆ ಯಾಕಾಗಿ?

ನನ್ನ ವ್ಯಯಕ್ತಿಕ ಅನುಭವ ಹಂಚಿಕೊಳ್ಳುತ್ತೇನೆ. ಇಲ್ಲಿ ನಾನೇ ಸಂಘಟಕಿ, ನಿರ್ದೇಶಕಿ ಮತ್ತು ನಟನೆ ಕೂಡ ಮಾಡ್ತೀನಿ. ಇದು ಕಷ್ಟ. ಹಿಂದೆ, ಹೆಣ್ಣಿಂದ ಹೇಳಿಸಿಕೊಳ್ಳೋದು ಅಂದರೆ ಏನು ಎನ್ನು ಪ್ರವೃತ್ತಿ ಇತ್ತು. ಆದರೆ, ಈಗ ಅದು ಕಡಿಮೆ ಆಗಿದೆ. ನನ್ನ ಮಟ್ಟಿಗೆ, ಈ ಸಮಸ್ಯೆ ನನ್ನನ್ನು ಎಂದೂ ಕಾಡಿಲ್ಲ.

ನಿಜ, ನಿರ್ದೇಶನಕ್ಕೆ ಬರುವ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇರಬಹುದು. ಆಗ ಹೇಳಿದ ಹಾಗೆ, ಸಂಘಟನೆ, ಅದಕ್ಕಾಗಿ ಸಮಯ, ಹಣಕಾಸು, ಮನೆ ಸಂಸಾರ ಹೀಗೆ ಎಲ್ಲವನ್ನೂ ಸರಿದೂಗಿಸಿಕೊಳ್ಳಲು ಕಷ್ಟ. ಆದ್ದರಿಂದಲೇ ಮಹಿಳೆಯರು ಹಿಂದೇಟು ಹಾಕುತ್ತಿರಬಹುದು. ಆದರೆ, ಈ ಎಲ್ಲವನ್ನೂ ಮೀರಿ ಬೆಳೆದವರು ಇದ್ದಾರೆ. ಅವರು ನಮಗೆ ಆದರ್ಶವಾಗಬೇಕು. ಜತೆಗೆ, ಹೆಚ್ಚು ಹೆಚ್ಚು ಹೆಣ್ಣು ಮನಸ್ಸು ನಿರ್ದೇಶನಕ್ಕೆ ಬರಬೇಕು. 

ನಿರ್ದೇಶನಕ್ಕೆ ಬರುವ ಆಸಕ್ತಿ ಇರುವವರಿಗೆ ನಿಮ್ಮ ಕಿವಿ ಮಾತು?

ನಟನೆ, ನಿರ್ದೇಶನ ಎಲ್ಲವೂ ತಪಸ್ಸು. ಹತ್ತಿ ದಿನ ಕಲಿತರೆ ನಟನೆಯೂ ಬರಬಹುದು. ಆದರೆ, ನಿರ್ದೇಶನ ಹಾಗಲ್ಲ. ನಿರ್ದೇಶನಕ್ಕೆ ಬರುವವರು ಎಲ್ಲಾ ರೀತಿಯ ನಾಟಕ ಹೆಚ್ಚೆಚ್ಚು ನೋಡಬೇಕು. ಬೇರೆ ಬೇರೆ ನಿರ್ದೇಶಕರ ನಾಟಕ ನೋಡಬೇಕು. ಏನೆ ಆದರೂ, ನಿರ್ದೇಶನ ನಮ್ಮೊಳಗೆ ಹುಟ್ಟಬೇಕು. ಅದಕ್ಕೆ ತಾಯಿ ಹೃದಯಬೇಕು. ಕೃತಿಯನ್ನು ಸಮುದಾಯಕ್ಕೆ ಮುಟ್ಟಿಸುವುದು ನಿರ್ದೇಶಕನ ಕೆಲಸ. ಆ ಕಣ್ಣು ನಿರ್ದೇಶಕ
ಪಡೆಯಬೇಕು.

ನಾಟಕ: ಊರ್ಮಿಳಾ

ರಚನೆ: ಎಚ್‌.ಎಸ್‌. ವೆಂಕಟೇಶ ಮೂರ್ತಿ 

ನಿರ್ದೇಶನ: ಡಾ. ಶ್ರೀಪಾದ ಭಟ್‌

ರಂಗದಲ್ಲಿ: ಎಂ.ವಿ. ಪ್ರತಿಭಾ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !