ಪುರಾಣ ಸದೃಶ, ಸೃಜನಾತ್ಮಕ ‘ಮಹಿಷಾಕ್ಯ’

7

ಪುರಾಣ ಸದೃಶ, ಸೃಜನಾತ್ಮಕ ‘ಮಹಿಷಾಕ್ಯ’

Published:
Updated:
Deccan Herald

ನಾಟಕ: ದೇವಿ ಮಹಾತ್ಮೆ
ವಿನ್ಯಾಸ ಮತ್ತು ನಿರ್ದೇಶನ: ವಿದ್ದು ಉಚ್ಚಿಲ್
ತಂಡ: ಅದಮ್ಯ ರಂಗಶಾಲೆ
ಪ್ರಸ್ತುತಿ: ಕಿರು ರಂಗಮಂದಿರ

ಮೈಸೂರು ಕಲಾಮಂದಿರದ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಈಚೆಗೆ ವಿದ್ದು ಉಚ್ಚಿಲ್ ನಿರ್ದೇಶನದೊಂದಿಗೆ ‘ದೇವಿ ಮಹಾತ್ಮೆ’ ನಾಟಕ ಪ್ರದರ್ಶನಗೊಂಡಿತು. ಮೈಸೂರಿನ ಅದಮ್ಯ ರಂಗಶಾಲೆಯ ವಿದ್ಯಾರ್ಥಿಗಳ ನಾಟಕ ಇದು.

ನಾಟಕದ ಶೀರ್ಷಿಕೆ ಕೇಳಿದಾಗ ಭಕ್ತಿ ಕೇಂದ್ರಿತ ನಾಟಕದಂತೆ ಭಾಸವಾದರೂ ಮೂಲದಲ್ಲಿ ಇದೊಂದು ಪ್ರಯೋಗಾತ್ಮಕ ರಂಗಕ್ರಿಯೆ. ಪುರಾಣದ ಎಳೆಯೊಂದನ್ನು ರಂಗಕ್ಕೆ ತರಲಾಗಿದ್ದು, ರಂಗ ವಿದ್ಯಾರ್ಥಿಗಳ ವಿವಿಧ ಹಂತದ ಕಲಿಕೆಯನ್ನು ಒಳಗೊಂಡಿದೆ. ಆಂಗಿಕಾ, ಆಹಾರ‍್ಯಗಳಿಗೆ ಹೆಚ್ಚು ಒತ್ತುಕೊಟ್ಟು ನಾಟಕವನ್ನು ಕಟ್ಟಲಾಗಿದೆ. ಯಕ್ಷಗಾನ - ಭೂತಕೋಲ ಪರಿಕಲ್ಪನೆಗಳನ್ನು ಆಧುನಿಕ ರಂಗಭೂಮಿಯೊಟ್ಟಿಗೆ ಬೆಸೆದು ಹೆಣೆಯಲಾಗಿದೆ.

ಈ ನಾಟಕವು ಪುರಾಣ ಪಾತ್ರಗಳ ಮನೋ ವಿಸ್ತ್ರುತತೆಯನ್ನು ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿ ಗುರುತಿಸಿ ತೆರೆದಿಡುತ್ತದೆ. ನಮ್ಮೊಳಗಿನ ಲಾಲಸೆ, ದರ್ಪ, ದ್ವೇಷ, ಅಸೂಯೆ, ಮತ್ಸರಗಳನ್ನು ತೆರೆ ಮರೆಯಲ್ಲೇ ನಾವು ಕಾಪಿಡುತ್ತೇವೆ.

ಅರಿಷಡ್ವರ್ಗಗಳ ಮರೆಯಲ್ಲಿ ಬದುಕುವ ನಾವೂ ಕೂಡ ಬಣ್ಣ ಅಳಿಸಿದ ರಕ್ಕಸರೆ. ಪ್ರಲೋಭನೆಗಳು ಮಾತ್ರ ವಿಭಿನ್ನ. ಇಲ್ಲೂ ಕೂಡ ಮಹಿಷನನ್ನು ರೂಪಕವಾಗಿ ಬಳಸಿ ವರ್ತಮಾನದ ತತ್ವಾರಗಳನ್ನು ರಂಗಕ್ಕೆ ತರಲಾಗಿದೆ.

ಆಂಗಿಕ ಚಲನೆಗಳ ವಿವಿಧ ಪ್ರಯೋಗಗಳನ್ನು ನಾಟಕದಲ್ಲಿ  ತರಲಾಗಿದ್ದು, ಪಾತ್ರಗಳ ಆಗಮನ- ನಿರ್ಗಮನ, ಸೆಣಸಾಟಗಳ ಆಂಗಿಕ ಮಾದರಿಗಳು ಸ್ವೀಕಾರರ್ಹವೆನಿಸುತ್ತದೆ. ಸಮರಕಲೆಯ ಪಟ್ಟುಗಳು ಅಲ್ಲಲ್ಲಿ ಕಂಡರೂ, ಯಕ್ಷಗಾನದ ಹೆಜ್ಜೆಗಳಲ್ಲಿ, ವಿವಿಧ ಭಂಗಿಗಳಲ್ಲೇ ನಾಟಕ ಸಾಗುತ್ತದೆ. ರಾತ್ರಿ ಆರಂಭವಾಗಿ ಮುಂಜಾನೆವರೆಗೂ ಮುಂದುವರಿಯುವ ಪ್ರಸಂಗಗಳ ಹಾಗೆ ಇಲ್ಲಿನ ಕಥಾಹಂದರ ಸಾಗುತ್ತದೆ. ಸಮಯದ ಅಭಾವದಿಂದ ಇಲ್ಲಿಗೆ ಬೇಕಾದ ಹಾಗೆ ನಾಟಕವನ್ನು ಕಟ್ಟಲಾಗಿದೆ. ಲಯಬದ್ಧ ಹೆಜ್ಜೆ, ಪಾತ್ರಗಳ ವೀರೋಚಿತ ಹೋರಾಟದ ಪ್ರಸಂಗಗಳು ನೋಡುಗರಿಗೆ ಯಕ್ಷಗಾನ, ಭೂತಕೋಲಾದ ಅನುಭವವನ್ನು ನೀಡುತ್ತದೆ. ಇದಕ್ಕೆ ಪೂರಕವಾಗಿ ಯಕ್ಷಗಾನ ತಾಳಮದ್ದಳೆಯಲ್ಲಿ ಬಳಸುವ ವಿಶಿಷ್ಟವಾದ ವಸ್ತ್ರವಿನ್ಯಾಸ, ಪ್ರಸಾಧನಗಳನ್ನು ಬಳಸಲಾಗಿತ್ತು. ಮೈಸೂರು ಭಾಗದ ನೋಡುಗರಿಗೆ ಕರಾವಳಿ ಪ್ರಸಂಗಗಳ ರಸದೌತಣ ಇದಾಗಿತ್ತು.

ಯಾಕೆ ಈ ರಂಗಪ್ರಯತ್ನ ಮುಖ್ಯವಾಗುತ್ತದೆ ಎಂದರೆ ರಂಗಭೂಮಿಯ ವಿದ್ಯಾರ್ಥಿಗಳಿಗೆ ನಟನೆಯ ಎಲ್ಲ ಆಯಾಮಗಳ ಪರಿಚಯ ಈ ಪ್ರಯೋಗದಿಂದ ಸಾಧ್ಯವಾಗಿದೆ. ಕಲಿಕೆಯ ಹಂತದಲ್ಲಿ ಈ ರೀತಿಯ ಪ್ರಯೋಗಗಳು ವಿದ್ಯಾರ್ಥಿಗಳ ಸಾಧ್ಯತೆಯನ್ನು ವಿಸ್ತರಿಸುತ್ತವೆ. ಹೊಸ–ಹೊಸ ಪ್ರಯೋಗಗಳಿಗೆ ಒಡ್ಡಿಕೊಂಡಾಗ, ರಂಗಭೂಮಿಯ ಒಡೆದು ಕಟ್ಟುವ ಪರಿ ಮತ್ತಷ್ಟು ಪ್ರಭಾವಶಾಲಿಯಾಗುತ್ತದೆ. ನಾಟಕದಲ್ಲಿ ಸಾಂಕೇತಿಕವಾಗಿ ಮನುಷ್ಯನ ಮನೋ ಅಭೀಬ್ಸೆಗಳನ್ನು ಯಜ್ಞಕುಂಡದ ಮೂಲಕ ತೋರಿಸಲಾಗಿತ್ತು. ಕಾನನದ ಹಾದು ಹೋಗುವಿಕೆ, ಸರಣಿ ಸೆಣಸಾಟಗಳನ್ನು ರಂಗದ ಮೇಲೆ ಅಚ್ಚುಕಟ್ಟಾಗಿ ತರಲಾಗಿತ್ತು.

ಮಹಿಷಾಸುರನ ದುರುಳತನ, ಉಪಟಳ ಹೆಚ್ಚಾದ್ದರಿಂದ ದೇವಿ ವಿವಿಧ ಅವತಾರಗಳ ಮೂಲಕ ಆತನನ್ನು ಸಂಹಾರ ಮಾಡುತ್ತಾಳೆ. ಪುರಾಣದಲ್ಲಿ ಇದು ಬಹಳ ಜನಜನಿತವಾದ ಕಥನ.

ಮಹಿಷಾಸುರನ ಆಸ್ಥಾನದಲ್ಲಿದ್ದ ಶುಂಭ-ನಿಶುಂಭರು, ಚಂಡ–ಮುಂಡರು. ದೇವಿಯನ್ನು ಸೋಲಿಸಲು ಅವರು ಮಾಡುವ ಪರಿ–ಪರಿಯ ಪ್ರಯತ್ನಗಳು ನಾಟಕದುದ್ದಕ್ಕೂ ಮನುಷ್ಯನ ಜೀವನಕ್ಕೆ ತಳುಕು ಹಾಕಿದಂತೆ ಸಾಗುತ್ತದೆ.

ಪುರುಷ ಪ್ರಧಾನ ಸಮಾಜದ ದರ್ಪ, ದೌರ್ಜನ್ಯಗಳಿಗೆ ಪ್ರಕೃತಿ ಅಂದರೆ ಹೆಣ್ಣಿನ ತಾಳುವಿಕೆ, ಸಹಿಸುವಿಕೆಯ ಸಹನೆ ಕಟ್ಟೆ ಹೊಡೆದಾಗ ರಾಕ್ಷಸಿ ಪ್ರವೃತ್ತಿಯು ಅಂತ್ಯವಾಗಿ ಹೊಸತನ ಉಗಮವಾಗುತ್ತದೆ. ಈ ನಾಟಕ ಹಲವು ನೆಲೆಗಳಲ್ಲಿ ಅರಿವಾಗುತ್ತಾ ಹೋಗುತ್ತದೆ. ನಾಟಕದ ವಿನ್ಯಾಸ ಮಾಡಿರುವ ನಿರ್ದೇಶಕರ ಚಾಕಚಕ್ಯತೆಯನ್ನು ಮೆಚ್ಚಲೇಬೇಕು. ಬೆಳಕು ಜೀವನ್‌ಕುಮಾರ್ ಬಿ.ಹೆಗ್ಗೋಡು, ಸಂಗೀತ ದಿನಕರ್ ಕಟೀಲ್, ವಸ್ತ್ರವಿನ್ಯಾಸ ದಿವ್ಯಾ ರಂಗಾಯಣ ಅವರದ್ದು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !