ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್. ನಾಗೇಶ್ ನೆನಪಿಗೆ ನಾಟಕೋತ್ಸವ

Last Updated 20 ಜನವರಿ 2019, 19:45 IST
ಅಕ್ಷರ ಗಾತ್ರ

ರಂಗಭೂಮಿಯ ಪ್ರಯೋಗಶೀಲ ನಿರ್ದೇಶಕರಾಗಿದ್ದ ಆರ್. ನಾಗೇಶ್ ಬದುಕಿದ್ದರೆ ಅವರಿಗೀಗ 75 ವರ್ಷ ತುಂಬುತ್ತಿತ್ತು. ಅವರು ವೈಚಾರಿಕ ಪ್ರಜ್ಞೆಯ ನಾಟಕಗಳನ್ನು ನಿರ್ದೇಶಿಸಿ ಗಮನ ಸೆಳೆದವರು. ನಗರದ ಅನೇಕ ಕಾರ್ಖಾನೆಗಳಲ್ಲಿ ರಂಗಭೂಮಿಯ ಬಗ್ಗೆ ಒಲವಿದ್ದ ಪ್ರತಿಭೆಗಳನ್ನು ಪತ್ತೆಹಚ್ಚಿ ಅವರಿಗೆ ಕ್ರಿಯಾಶೀಲತೆಯ ಹಾದಿ ತೋರಿದವರು.

ಆರ್. ನಾಗೇಶ್ ಅವರ ನೆನಪಿಗಾಗಿ ಸೂತ್ರಧಾರ ಮತ್ತು ರಂಗಸಂಪದ ತಂಡಗಳು ಇದೇ 22ರಿಂದ 24ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗನೊಗ ಆರ್. ನಾಗೇಶ್ ನಿರ್ದೇಶಿತ ನಾಟಕಗಳ ಉತ್ಸವ ಆಯೋಜಿಸಿದೆ. ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಹವ್ಯಾಸಿ ರಂಗಭೂಮಿ ಗೆಳೆಯರ ಸಹಯೋಗದಲ್ಲಿ ನಡೆಯುತ್ತಿರುವ ಈ ಉತ್ಸವದಲ್ಲಿ ನಾಗೇಶ್ ನಿರ್ದೇಶನದ ‘ತಬರನ ಕಥೆ’, ‘ಕೃಷ್ಣೇಗೌಡನ ಆನೆ’, ಮತ್ತು ‘ನಮ್ಮೊಳಗೊಬ್ಬ ನಾಜೂಕಯ್ಯ’ ನಾಟಕಗಳನ್ನು ಮರು ಪ್ರಸ್ತುತ ಪಡಿಸಲಾಗುತ್ತಿದೆ.

ನಾಟಕಗಳ ನಿರ್ದೇಶಕರು ಆರ್. ನಾಗೇಶ್ ಜತೆಗಿನ ಒಡನಾಟ ಮತ್ತು ನಾಟಕ ರೂಪುಗೊಂಡ ಬಗೆಯನ್ನು ನೆನಪಿಸಿಕೊಂಡಿದ್ದು ಹೀಗೆ...

ತಬರನ ಕಥೆ

80ರ ದಶಕದಲ್ಲಿ ‘ತಬರನ ಕಥೆ’ ನಾಟಕ ಮಾಡಿದ್ದೆವು. ಆಗ ತೇಜಸ್ವಿಯವರ ಸಾಹಿತ್ಯ ನಮ್ಮ ಮೇಲೆ ತುಂಬಾ ಪ್ರಭಾವ ಬೀರಿತ್ತು. ತಬರನ ಕಥೆಯನ್ನು ನಾಟಕ ಮಾಡಬೇಕೆಂದುಕೊಂಡೆವು. ನಾಟಕವಾದ ಮೇಲೆಯೂ ಸಿನಿಮಾ ಕೂಡಾ ಆಯಿತು. ‘ತಬರನ ಕಥೆ’ ಸಿದ್ಧರೂಪದ ನಾಟಕವಲ್ಲ. ಅದಕ್ಕೆ ನಿರ್ದಿಷ್ಟ ಸ್ಕ್ರಿಪ್ಟ್‌ ಕೂಡಾ ಇರಲಿಲ್ಲ. ಇದಕ್ಕೆ ಪೂರಕವಾಗಿ ತೇಜಸ್ವಿಯವರ ಉಳಿದ ಲೇಖನಗಳನ್ನೂ ಬಳಸಿಕೊಂಡೆವು.

ಹಾಗಾಗಿ, ಕೃಷ್ಣೇಗೌಡನ ಆನೆಯ ಪಾತ್ರಗಳೂ ಈ ನಾಟಕದಲ್ಲಿ ಬರುತ್ತವೆ. ಆರ್. ನಾಗೇಶ್ ಮೌಖಿಕವಾಗಿ ಏನೇನು ಮಾಡಬೇಕು ಎಂದು ಚರ್ಚಿಸಿ ದೃಶ್ಯಗಳನ್ನು ಕಟ್ಟಿಕೊಟ್ಟರು. ಆದರೆ, ಇದನ್ನು ಅವರು ಬರೆಯಲಿಲ್ಲ. ನಾಟಕ ಮಾಡ್ತಾ ಮಾಡ್ತಾ ಕಥೆಗೆ ಸಂಭಾಷಣೆ ಕಟ್ಟುತ್ತಾ ಹೋದರು. ಆಗ 25–26 ದಿನಗಳ ರಿಹರ್ಸಲ್ ಮಾಡಿದ್ದೆವು. ಅದಕ್ಕೆ ಪ್ಲೇ ಡಿಸೈನ್ ಅಂತ ಇರಲಿಲ್ಲ. ಅದನ್ನು ಪ್ರಸ್ತುತಪಡಿಸುವುದಷ್ಟೇ ನಮಗೆ ಮುಖ್ಯವಾಗಿತ್ತು’..

‘ಈ ನಾಟಕದಲ್ಲಿ ನಾನು ತಬರನ ಪಾತ್ರ ಮಾಡಿದ್ದೆ. ಅದಕ್ಕೆ ಅತ್ಯುತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ಈಗ ಅದೇ ನಾಟಕವನ್ನು ಮರು ಪ್ರಸ್ತುತ ಪಡಿಸುತ್ತಿದ್ದೇನೆ. ನಾಟಕಕ್ಕೆ ಪೂರಕವಾಗಿ ಹೊಸ ಬಂಧ, ವಿನ್ಯಾಸ ಕೊಡಲು ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದೇನೆ. ನಾಟಕದ ಮೂಲಸ್ವರೂಪವನ್ನು ಹಾಗೇ ಉಳಿಸಿಕೊಂಡಿದ್ದೇನೆ. ಆಗ ಒಳ್ಳೆಯ ನಟರಿದ್ದರು. ನಾಲ್ಕನೇ ತಲೆಮಾರಿನವರು ಈಗ ನಾಟಕದಲ್ಲಿದ್ದಾರೆ. ಈಗಲೂ ತಬರನ ಪಾತ್ರ ನಾನೇ ಮಾಡುತ್ತಿದ್ದೇನೆ.

ನಾಗೇಶ್ ಬಗ್ಗೆ ಹೇಳುವುದಾದರೆ, ನಾವು ನಾಗೇಶ್ ಅವರ ಕೋಪವನ್ನು ತುಂಬಾ ಎಂಜಾಯ್ ಮಾಡುತ್ತಿದ್ದೆವು. ಈಗಲೂ ಅದು ನಮ್ಮನ್ನು ಗತವೈಭವಕ್ಕೆ ಕರೆದೊಯ್ಯುತ್ತದೆ. ನನ್ನ ನೇಪಥ್ಯದ ರಂಗ ಗುರು ನಾಗೇಶ್. ಅವರು ಜೀನಿಯಸ್. ಅವರಿಗೆ ಮೆಥಡಾಲಜಿ ಇರಲಿಲ್ಲ. ತುಂಬಾ ಸೃಜನಶೀಲರಾಗಿದ್ದರು. ಇಂದಿನ ನಾಟಕಗಳಲ್ಲಿ ತಾಂತ್ರಿಕತೆ ಹೆಚ್ಚಿದೆ. ಆದರೆ,ಅದ್ಯಾವುದು ಇಲ್ಲದೇ ಸೃಜನಶೀಲವಾಗಿ ಭಾವಕೋಶವೊಂದನ್ನು ತೆರೆದಿಡುವ ಕೆಲಸ ಮಾಡಿದವರು ನಾಗೇಶ್ ’..

–ಟಿ.ಎಸ್. ನಾಗಾಭರಣ, ನಿರ್ದೇಶಕ

**

ಕೃಷ್ಣೇಗೌಡನ ಆನೆ

‘ಕೃಷ್ಣೇಗೌಡನ ಆನೆ’ ಕಾದಂಬರಿಯನ್ನೇ ಇಪ್ರೂವೈಸೇಷನ್ ಮಾಡಿ ನಾಟಕ ಮಾಡಲಾಯಿತು. ಹಿರಿಯ ಕಲಾವಿದರಷ್ಟೆ ಅಲ್ಲ ರಂಗಾಯಣದ ಸಿಬ್ಬಂದಿಯನ್ನೂ ಬಳಸಿಕೊಂಡು ನಾಗೇಶ್‌ ‘ಕೃಷ್ಣೇಗೌಡನ ಆನೆ’ ನಿರ್ದೇಶಿಸಿದ್ದರು. ಅದರಲ್ಲಿ ನಾನು ಗೂಳೂರುಮಠದ ಸ್ವಾಮಿ ಮತ್ತು ಖಾನ್ ಸಾಹೇಬ್ ಪಾತ್ರಗಳನ್ನು ಮಾಡುತ್ತಿದ್ದೆ. ಇದೇ ನಾಟಕವನ್ನು ಈಗ ಮೈಸೂರು ರಂಗಾಯಣ ಮರು ಪ್ರಸ್ತುತ ಪಡಿಸುತ್ತಿದೆ. ಇದರಲ್ಲಿ ಖಾನ್ ಸಾಹೇಬ್ ಪಾತ್ರ ಮಾಡುತ್ತಿದ್ದೇನೆ.

ನಾಗೇಶ್ ಅವರನ್ನು ನಾನು ವಿದ್ಯಾರ್ಥಿದಿನಗಳಿಂದ ನೋಡುತ್ತಿದ್ದೆ. ಆಗ ಅವರು ಬಾಲಭವನದ ಬಳಿ ಇದ್ದ ನಡುಗಡ್ಡೆಯಲ್ಲಿ ರಂಗ ಸಂಪದ ತಂಡದಿಂದ ‘ಅಂಧಯುಗ’, ‘ತ್ರಿಶಂಕು’ ಮತ್ತೊಂದು ನಾಟಕದ ಹೆಸರು ನೆನಪಾಗುತ್ತಿಲ್ಲ. ಒಟ್ಟು ಮೂರು ನಾಟಕಗಳನ್ನು ಮಾಡಿಸಿದ್ದರು. ನಾಟಕ ವಿದ್ಯಾರ್ಥಿಯಾಗಿದ್ದ ನಾನು ಬೆಂಗಳೂರಿನ ರಂಗಭೂಮಿಗೆ ಪ್ರವೇಶಿಸಿದ್ದು ಆರ್. ನಾಗೇಶ್ ಅವರ ಮೂಲಕವೇ’..

–ಪಿ. ಗಂಗಾಧರಸ್ವಾಮಿ, ಹಿರಿಯ ರಂಗಕರ್ಮಿ

**

ನಮ್ಮೊಳಗೊಬ್ಬ ನಾಜೂಕಯ್ಯ

ನಾಗೇಶ್ ನಾಟಕದ ದೃಶ್ಯಗಳನ್ನು ತುಂಬಾ ಸೂಕ್ಷ್ಮವಾಗಿ ಮಾಡಿಸುತ್ತಿದ್ದರು. ಆಗ ರಂಗಭೂಮಿಯಲ್ಲಿ ಅಬ್ಬರದ ಕಾಲವಿತ್ತು. ಆದರೆ, ನಾಟಕಗಳಲ್ಲಿ ಸೂಕ್ಷ್ಮತೆಗಳನ್ನು ತಂದವರು ನಾಗೇಶ್. ಕೂಗಾಟ, ಮೆಲೋಡ್ರಾಮಾಗಳನ್ನು ಕಡಿಮೆ ಮಾಡಿದರು. ಒಳ್ಳೆಯ ಪ್ರತಿಭೆ ಮತ್ತು ಒಳ್ಳೆಯ ನಟರು ಅವರ ಕಾಂಬಿನೇಷನ್ ಆಗಿತ್ತು. ಸಂಸಾರದಲ್ಲಿ ರಾಜಕಾರಣ ಪ್ರವೇಶಿಸಿದರೆ ಏನಾಗಬಹುದು ಎಂಬುದನ್ನು ಟಿ.ಎನ್. ಸೀತಾರಾಂ ‘ನಮ್ಮೊಳಗೊಬ್ಬ ನಾಜೂಕಯ್ಯ’ ನಾಟಕದಲ್ಲಿ ತಂದರು.

ಈ ನಾಟಕ 1983ರಲ್ಲಿ ಮೊದಲ ಬಾರಿಗೆ ಪ್ರದರ್ಶನವಾಗಿತ್ತು. ನಾಟಕವನ್ನು ಬರೆದಿದ್ದ ಸೀತಾರಾಂ ಅವರೇ ಆಗ ನಾಜೂಕಯ್ಯನ ಪಾತ್ರ ಮಾಡುತ್ತಿದ್ದು ವಿಶೇಷ. ಆದರೆ, ಈಗ ಅವರಿಗೆ ಓಡಾಡಲು ಆಗದು. ಆದ್ದರಿಂದ ಆ ಪಾತ್ರವನ್ನು ಬೇರೊಬ್ಬರು ಮಾಡುತ್ತಿದ್ದಾರೆ. ಈಗ ಮರು ಪ್ರಸ್ತುತಪಡಿಸುತ್ತಿರುವ ಈ ನಾಟಕ ನಾಗೇಶ್ ನಿರ್ದೇಶನದ ಅನುಕರಣೆಯೇ ಹೊರತು ವಿಶೇಷವಾಗಿ ಏನನ್ನೂ ಬದಲಿಸಿಲ್ಲ.ಇದನ್ನು ನಟರಂಗ ತಂಡ ಪ್ರಸ್ತುತಪಡಿಸುತ್ತಿದೆ’..

–ಶ್ರೀನಿವಾಸ ಜಿ. ಕಪ್ಪಣ್ಣ, ಹಿರಿಯ ರಂಗಕರ್ಮಿ

**

ರಂಗನೊಗ ಆರ್. ನಾಗೇಶ್ ನಿರ್ದೇಶಿತ ನಾಟಕಗಳ ಉತ್ಸವ: ಸಂಜೆ 6.30ಕ್ಕೆ ಉದ್ಘಾಟನೆ–ಚಿರಂಜೀವಿ ಸಿಂಗ್, ಅತಿಥಿ–ಡಾ.ವಿಜಯಾ. ಅಧ್ಯಕ್ಷತೆ–ಬಲವಂತರಾವ್ ಪಾಟೀಲ್. ರಾತ್ರಿ 7ಕ್ಕೆ ‘ತಬರನ ಕಥೆ’ ನಾಟಕ ಪ್ರದರ್ಶನ. ಕಥೆ–ಪೂರ್ಣಚಂದ್ರ ತೇಜಸ್ವಿ. ನಿರ್ದೇಶನ–ಆರ್. ನಾಗೇಶ, ಮರು ನಿರ್ದೇಶನ–ಟಿ.ಎಸ್. ನಾಗಾಭರಣ. ಪ್ರಸ್ತುತಿ–ಬೆನಕ ತಂಡ. ಸಹಯೋಗ–ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಹವ್ಯಾಸಿ ರಂಗಭೂಮಿ ಗೆಳೆಯರು. ಸ್ಥಳ–ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ.

**

ಜ. 23 ‘ಕೃಷ್ಣೇಗೌಡನ ಆನೆ’ ನಾಟಕ ಪ್ರದರ್ಶನ. ಕಥೆ–ಪೂರ್ಣಚಂದ್ರ ತೇಜಸ್ವಿ, ನಿರ್ದೇಶನ–ಆರ್. ನಾಗೇಶ್, ಮರು ಪ್ರಸ್ತುತಿ–ರಂಗಾಯಣ ಮೈಸೂರು. ಮರು ನಿರ್ದೇಶನ–ಪಿ. ಗಂಗಾಧರ ಸ್ವಾಮಿ.

ಜ. 24 ‘ನಮ್ಮೊಳಗೊಬ್ಬ ನಾಜೂಕಯ್ಯ’ ನಾಟಕ ಪ್ರದರ್ಶನ. ರಚನೆ–ಟಿ.ಎನ್. ಸೀತಾರಾಂ. ನಿರ್ದೇಶನ–ಆರ್. ನಾಗೇಶ್, ಮರುಪ್ರಸ್ತುತಿ–ನಟರಂಗ, ಮರು ನಿರ್ದೇಶನ–ಶ್ರೀನಿವಾಸ ಜಿ. ಕಪ್ಪಣ್ಣ.

ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಪ್ರತಿದಿನ ರಾತ್ರಿ 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT