ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ ರಂಗಭೂಮಿ ಪರಂಪರೆಯ ಕಣ್ಮರೆ

Last Updated 9 ಮಾರ್ಚ್ 2019, 19:36 IST
ಅಕ್ಷರ ಗಾತ್ರ

ಕನ್ನಡ ವೃತ್ತಿ ರಂಗಭೂಮಿಗೆ ನೂರೈವತ್ತು ವರ್ಷಗಳಿಗೂ ಹೆಚ್ಚು ಇತಿಹಾಸವಿದೆ. ಕ್ರಿ.ಶ. 1872ರ ಹಿಂದೆಯೇ ಕನ್ನಡದ ದಾಸಯ್ಯನೆಂದೇ ಖ್ಯಾತನಾಮರಾದ ಶಾಂತಕವಿ ಕಾವ್ಯನಾಮದ ಸಕ್ಕರಿ ಬಾಳಾಚಾರ್ಯರು ‘ಕರ್ನಾಟಕ ಕೃತಪುರ ನಾಟಕ ಮಂಡಳಿ’ ಹೆಸರಿನ ಮೊದಲ ವೃತ್ತಿ ನಾಟಕ ಕಂಪನಿ ಸ್ಥಾಪಿಸಿದರು.

ಅದಕ್ಕೂ ಮೊದಲೇ ಪಾರ್ಸಿ ಮೂಲದಿಂದ ಬಂದಿರುವ ನಾಟಕಗಳು ಕನ್ನಡದ ದೇಸಿ - ನೇಟಿವಿಟಿಗಳೊಂದಿಗೆ ಅಲ್ಲಲ್ಲಿ ಅಂದರೆ ಮರಾಠಿಗರಿಂದ ದಕ್ಷಿಣ ಮಹಾರಾಷ್ಟ್ರವೆಂದು ಆಗ ಕರೆಯಲ್ಪಡುತ್ತಿದ್ದ ಮುಂಬೈ ಕರ್ನಾಟಕ ಪ್ರಾಂತ್ಯಗಳಲ್ಲಿ ಪ್ರಚಲಿತವಾಗಿದ್ದವು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರಾಷ್ಟ್ರೀಯತೆ ಮೆರೆಯುವಲ್ಲಿ, ದೇಶಭಕ್ತಿ- ದೈವಭಕ್ತಿ ಉಕ್ಕಿಸುವಲ್ಲಿ, ಅವಿಭಕ್ತ ಕುಟುಂಬ ಪ್ರೀತಿಯ ಕಿಚ್ಚು ಹಚ್ಚಿಸಿದ, ಗಾಂಧೀ ಪ್ರಣೀತ ಖಾದಿ ಪ್ರೇಮ ಹುಟ್ಟಿಸಿದ, ಸದಭಿರುಚಿ ಪ್ರೇಕ್ಷಕ ಪರಂಪರೆಯ ಪ್ರೀತಿ ಹುಟ್ಟಿಸಿದ ಕೀರ್ತಿ ವೃತ್ತಿ ರಂಗಭೂಮಿಗೆ ಸಲ್ಲುತ್ತದೆ.

ನವೋದಯ ಸಾಹಿತಿಗಳ ಪ್ರೀತಿಗೆ ಪಾತ್ರವಾದ ಬಹುದೊಡ್ಡ ರಂಗ ಸಾಹಿತ್ಯ ಮಾಧ್ಯಮ ಇದಾಗಿತ್ತು. ಒಂದೊಂದು ನಾಟಕ ಕಂಪನಿಯೂ ಸಾಂಸ್ಕೃತಿಕ ವಿಶ್ವವಿದ್ಯಾಲಯದಂತೆ ಅಕ್ಷರಶಃ ಸಾಂಸ್ಕೃತಿಕ ಕೈಂಕರ್ಯ ಮೆರೆದಿವೆ. ಪ್ರಯೋಗಶೀಲತೆಯ ದೃಷ್ಟಿಯಿಂದಲೂ ಇವತ್ತಿನ ರೆಪರ್ಟರಿಗಳಷ್ಟೇ ಪಾಂಡಿತ್ಯ ಹೊಂದಿದ್ದವೆಂಬುದನ್ನು ಅಲ್ಲಗಳೆಯಲಾಗದು. ಮಾಸ್ಟರ್ ಹಿರಣ್ಣಯ್ಯ, ಬಿ. ಓಬಳೇಶ್, ಧೀರೇಂದ್ರ ಗೋಪಾಲ ಮುಂತಾದವರು ವಿರೋಧ ಪಕ್ಷಗಳಂತೆ ಜನಪರ ಕಾಳಜಿಯ ಎಚ್ಚರ ಮೂಡಿಸುವ ಸಾಂಸ್ಕೃತಿಕ ಆಯುಧಗಳಾಗಿ ಸರ್ಕಾರಕ್ಕೆ ಚುರುಕು ಮುಟ್ಟಿಸಿದ್ದಾರೆ.

ಬೃಹತ್ತಾದ ಜಾಗದಲ್ಲಿ ಝಗಮಗಿಸುವ ರಂಗಸಜ್ಜಿಕೆ (ರಂಗು ರಂಗಾದ ಪರದೆ, ಕವಾಟು, ರಂಗ ಪರಿಕರಗಳು ಇತ್ಯಾದಿ) ಗಳನ್ನು ನಿರ್ಮಿಸಿ, ಅಂತಹ ವರ್ಣ ಲಾವಣ್ಯಮಯ ವೇದಿಕೆಯಲ್ಲಿ, ಸಂಭ್ರಮದ ಕಣ್ಮನಗಳ ಲೋಕದೆದುರು ಪ್ರದರ್ಶಿಸಲ್ಪಡುವ ರಂಗ ನಾಟಕಗಳ ಸಂಸ್ಕೃತಿಯನ್ನು ಸಾರ್ವತ್ರಿಕವಾಗಿ ಬೆಳೆಸಿರುವ ಪ್ರಜಾಸತ್ತಾತ್ಮಕ ರಂಗ ಪರಂಪರೆ
ಇದು.

ಅಂತೆಯೇ ಇವತ್ತಿಗೂ ಹಳ್ಳಿ ಹಳ್ಳಿಗಳಲ್ಲೂ ಜನರೇ ನಾಟಕ ಬರೆದು, ತಾವೇ ಪಾತ್ರವಹಿಸಿ, ನಿರ್ದೇಶಿಸಿ, ಲಕ್ಷಗಟ್ಟಲೇ ಹಣ ಖರ್ಚು ಮಾಡಿ, ತಿಂಗಳುಗಟ್ಟಲೇ ತಾಲೀಮು ನಡೆಸಿ ಒಂದು ಆಪ್ತ ಸಾಂಸ್ಕೃತಿಕ ಪರಿಸರದಲ್ಲಿ ಬಹುಪಾಲು ಅನಕ್ಷರಸ್ಥರೇ ಆಡುವ ಜವಾರಿ ಸಡಗರದ ನಾಟಕಗಳೆಲ್ಲವೂ ವೃತ್ತಿ ರಂಗಭೂಮಿ ನಾಟಕಗಳೇ. ಅಪ್ಪಿತಪ್ಪಿಯೂ ಅವರು ಆಧುನಿಕ ರಂಗಭೂಮಿ ನಾಟಕಗಳನ್ನು ಆಡುವುದಿಲ್ಲ. ಅಂತೆಯೇ ವೃತ್ತಿ ರಂಗಭೂಮಿ ಇವತ್ತಿಗೂ ಜನ ಸಾಮಾನ್ಯರ ರಂಗಭೂಮಿ.

ಪ್ರಧಾನ ಸಾಂಸ್ಕೃತಿಕ ಧಾರೆಯಲ್ಲಿ ಗುರುತಿಸಬೇಕಿದ್ದ ಇದನ್ನು ಅಧೀನ ಸಂಸ್ಕೃತಿಯಂತೆ ಪರಿಗಣಿಸಿ ಈ ರಂಗ ಪ್ರಕಾರವನ್ನು ಚರಿತ್ರೆಕಾರರು ದಾಖಲಿಸಲಿಲ್ಲ. ಹೀಗೆ ಪಂಡಿತೋತ್ತಮ ಕಾವ್ಯ ಮೀಮಾಂಸಕರ ಅವಜ್ಞೆಗೊಳಗಾದರೂ ಲೋಕ ಮೀಮಾಂಸಕರ ಹೃನ್ಮನಗಳಲ್ಲಿ ಇವತ್ತಿಗೂ ವೃತ್ತಿ ರಂಗಭೂಮಿ ಗಟ್ಟಿಮುಟ್ಚಾದ ಸ್ಥಾನ ಗಿಟ್ಟಿಸಿಕೊಂಡಿದೆ. ನಮ್ಮ ಗ್ರಾಮೀಣರಿಗೆ ಇಂದಿಗೂ ವೃತ್ತಿ ನಾಟಕ ಕಂಪನಿಗಳೇ ಆದರ್ಶಪ್ರಾಯ. ಅಭಿನಯ, ಸಂಗೀತ, ನೃತ್ಯ, ರಂಗಸಜ್ಜಿಕೆ, ಸಹೃದಯ ಪ್ರೇಕ್ಷಕ... ಹೀಗೆ ಹಲವು ಅಭಿಜಾತ ಪರಂಪರೆಗಳ ಅನನ್ಯತೆಗಳು ಜನಮಾನಸದಲ್ಲಿ ಹೃದಯಸ್ಪರ್ಶಿಯಾಗಿ ನೆಲೆ ನಿಂತಿವೆ. ಪ್ರಾಯಶಃ ಅದು ವೃತ್ತಿ ರಂಗಭೂಮಿಯ ಮನೋಧರ್ಮ.

ನಟ- ನಟಿ ಪರಂಪರೆ, ರಂಗ ಸಂಗೀತ ಪರಂಪರೆ, ರಂಗ ಸಜ್ಜಿಕೆ ಪರಂಪರೆ ಇವು ವೃತ್ತಿ ರಂಗಭೂಮಿಯ ಭೂಮತ್ವ ಹೆಚ್ಚಿಸಿದ ಮುಖ್ಯವಾದ ಸಾಂಸ್ಕೃತಿಕ ಪರಂಪರೆಗಳು. ಮಾನ್ವಿ ಅದೃಶ್ಯಪ್ಪನ ಭೀಮನ ಪಾತ್ರ, ತೀರ್ಥಹಳ್ಳಿ ಶಾಂತಕುಮಾರ ಅವರ ಮೀರ್‌ ಸಾದಿಕ್ ಪಾತ್ರ ಕುಂದಾಪುರ ಸುಮಿತ್ರಮ್ಮರ ಆಂಜನೇಯನ ಪಾತ್ರ ನೋಡಲೇಬೇಕೆಂದು ಪ್ರೇಕ್ಷಕರ ನೂಕುನುಗ್ಗಲು. ಇವತ್ತಿಗೂ ಸುಭದ್ರಮ್ಮನವರ ರಂಗ ಸಂಗೀತವೆಂದರೆ ಸಂಭ್ರಮ ದ್ವಿಗುಣ.

ತೊಂಬತ್ತರ ಪ್ರಾಯದ ಪರಮಶಿವನ್ ಅವರ ಹಾರ್ಮೋನಿಯಂ ಸಾಥಿಯ ವೃತ್ತ, ಕಂದ, ಸೀಸ ಪದ್ಯ ಕೇಳಲು ಮೈಯೆಲ್ಲ ಕಿವಿಯಾಗಿಸಿಕೊಳ್ಳುವ ಪುಳಕ. ಶಿರಹಟ್ಟಿ ವೆಂಕೋಬರಾಯರ, ಗುಬ್ಬಿ ವೀರಣ್ಣನವರ ನಾಟಕ ಕಂಪನಿ ಸಾಮಾನು ಸರಂಜಾಮುಗಳು ರೈಲ್ವೆ ವ್ಯಾಗನ್‌ಗಳಲ್ಲಿ ತುಂಬಿ ಬರುತ್ತಿದ್ದವು. ಸ್ಟೇಜ್ ಮೇಲೆ ಕುದುರೆ, ಜಿಂಕೆ, ಪಾರಿವಾಳ, ಮೊಲ, ನವಿಲುಗಳು. ಮಿನಿ ಸರ್ಕಸ್ ಕಂಪನಿಯೇ ಬಂದಿಳಿದ ಸಂಭ್ರಮ. ಎಡೆಯೂರ ಸಿದ್ದಲಿಂಗೇಶ್ವರ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಮಹಾತ್ಮೆ ನಾಟಕಗಳನ್ನು ನೋಡುವ ಎರಡು ಕಣ್ಣುಗಳ ಸಡಗರ ಹೇಳತೀರದು.

ಇಂತಹ ವೈಶಿಷ್ಟ್ಯ ಮೆರೆದ ಮೇರು ಸಂಸ್ಕೃತಿಯ ಪೌರಾಣಿಕ, ಐತಿಹಾಸಿಕ ನಾಟಕಗಳು ಕಣ್ಮರೆಯಾಗಿವೆ. ಅಷ್ಟೇ ಯಾಕೆ ಅವಿಭಜಿತ ಕುಟುಂಬ ಪ್ರೀತಿಯ ಸಾಮಾಜಿಕ ನಾಟಕ ಪರಂಪರೆಗಳ ಸಾಂಸ್ಕೃತಿಕ ಕೊಂಡಿಯೂ ಕಳಚಿ ಬಿದ್ದಿದೆ. ನ್ಯೂಕ್ಲಿಯರ್ ಕುಟುಂಬದ ಕತೆಗಳೂ ಇಲ್ಲ. ಅವುಗಳ ಜಾಗದಲ್ಲಿ ಹಾಸ್ಯದ ಹೆಸರಿನ ದ್ವಂದ್ವಾರ್ಥ ನಾಟಕಗಳ ಸಂಸ್ಕೃತಿಯದೇ ಮೇಲೋಗರ. ಈ ಬಗೆಯ ನಾಟಕಗಳಿಗೆ ರಿಯಾಲಿಟಿ ಶೋ ಮತ್ತು ಸಿನಿಮಾ, ಕಿರುತೆರೆಗಳ ಅಗ್ಗದ ಪ್ರಭಾವ. ಡಾ.ರಾಜಕುಮಾರರಂತಹ ಮೇರುನಟರು ವೃತ್ತಿ ರಂಗ ಪರಂಪರೆಯವರೆಂಬ ಸ್ಮರಣೆ ವಿಸ್ಮೃತಿಗೆ ಸೇರಿದಂತಾಗಿದೆ.

ತಾಯಿ, ಮಗಳು, ಅಕ್ಕ, ತಂಗಿ, ಅಜ್ಜಿಯರೊಟ್ಟಿಗೆ ಕುಂತು ನೋಡಿ ಸಂತಸಪಡುತ್ತಿದ್ದ ಸ್ಥಿತಿ ಈಗ ಇಲ್ಲ ಎನ್ನುವಂತಾಗಿದೆ. ಮನುಷ್ಯ ಸಂಬಂಧಗಳಿಗೆ ಕೊಡಲಿ ಪೆಟ್ಟು. ಅಕ್ಕ–ತಮ್ಮನ ಮಾನವೀಯ ಸಂಬಂಧದ ನಡುವೆ ಕಾಮುಕತೆಯ ತೆಳುಗೆರೆ. ಹಳೆಯ ನಾಟಕಗಳಿಗೆ ಕೆಟ್ಚ ಕೆಟ್ಟ ಹೆಸರಿನ ಹೊಸ ಹೆಸರಿಡುವ ಕೆಟ್ಟ ಪರಿಪಾಠವೇ ಬೆಳೆದಿದೆ. ‘ಹೆಣ್ಣಿಗೆ ಹಟ ಗಂಡಿಗೆ ಚಟ’ ಇದು ನಾಟಕವೊಂದರ ಹೆಸರು. ಇದಕ್ಕಿಂತಲೂ ಅಸಹನೀಯ ಹೆಸರಿನ ನಾಟಕಗಳು ಬಂದಿವೆ. ಕೀಳು ಅಭಿರುಚಿ ಬಿತ್ತುವ ಬೆಳೆಯುವ ಆ ಮೂಲಕ ಸದಭಿರುಚಿ ಎಂಬುದನ್ನೇ ವಿರೂಪಗೊಳಿಸುವ ಬೆಳವಣಿಗೆಗಳು ಕೂಡದು. ಜಾತ್ರೆಗಳ ಕ್ಯಾಂಪುಗಳಲ್ಲಿ ಅನಾರೋಗ್ಯಕರ ಪೈಪೋಟಿ ಸಲ್ಲದು.

ಸರ್ಕಾರಕ್ಕೆ ವೃತ್ತಿ ರಂಗಭೂಮಿ ಉಳಿಸಿಕೊಳ್ಳುವ ಸಂಕಲ್ಪ ಇದೆ. ಹೀಗಾಗಿ ಎರಡು ಡಜನ್ ನಾಟಕ ಕಂಪನಿಗಳಿಗೆ
₹ 11ರಿಂದ 12 ಲಕ್ಷದವರೆಗೆ ವಾರ್ಷಿಕ ಅನುದಾನವನ್ನು ಕಂಪನಿಗಳ ಶ್ರೇಣೀಕರಣಗೊಳಿಸಿ ನೆರವಾಗುತ್ತಿದೆ. ಈ ಎಲ್ಲ ಅಪಸವ್ಯಗಳಿಗೆ ಪರಿಹಾರ ಹುಡುಕುವ ಸಂಕಲ್ಪದಿಂದ ಈಗ್ಗೆ ವರ್ಷದ ಹಿಂದೆ (2018, ಫೆಬ್ರುವರಿ 16) ಸರ್ಕಾರ ವೃತ್ತಿ ರಂಗಭೂಮಿ ಕೇಂದ್ರವನ್ನು ದಾವಣಗೆರೆಗೆ ಮಂಜೂರು ಮಾಡಿದೆ.

ದಾವಣಗೆರೆ ಜಿಲ್ಲಾಧಿಕಾರಿ ಹೆಸರಿಗೆ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ವೃತ್ತಿ ರಂಗಭೂಮಿಯ ಸಮಗ್ರ ಅಧ್ಯಯನ, ಸಂಶೋಧನೆ, ರಂಗ ಶಿಕ್ಷಣ, ವೃತ್ತಿ ರಂಗಭೂಮಿ ಮ್ಯೂಸಿಯಂ ಹೀಗೆ ಹತ್ತು ಹಲವು ಶಿಸ್ತುಗಳ ಕೇಂದ್ರವಾಗಿ (ವರ್ಷ ತಡವಾದರೂ) ತನ್ನ ಕೆಲಸ ಕೂಡಲೇ ಆರಂಭಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT