ಭಿನ್ನ ಪ್ರಯೋಗದ ‘ರಂಗತೇರು’

7

ಭಿನ್ನ ಪ್ರಯೋಗದ ‘ರಂಗತೇರು’

Published:
Updated:

ಹಿರಿಯ ರಂಗಕರ್ಮಿ ಬಿ.ವಿ.ಕಾರಂತ ಅವರ ಕನಸಿನ ಕೂಸು ರಂಗಾಯಣ. ಮೈಸೂರು, ಶಿವಮೊಗ್ಗ, ಧಾರವಾಡ ಮತ್ತು ಕಲಬುರ್ಗಿ ಹೀಗೆ ರಾಜ್ಯದ ನಾಲ್ಕು ದಿಕ್ಕುಗಳಲ್ಲಿ ಸಮಗ್ರ ರಂಗಭೂಮಿಯನ್ನು ಕಟ್ಟುವ ಕೆಲಸದಲ್ಲಿ ನಿರತವಾಗಿದೆ ರಂಗಾಯಣ. ಈ ನಿಟ್ಟಿನಲ್ಲಿ ಶಿವಮೊಗ್ಗ ರಂಗಾಯಣ ‘ರಂಗತೇರು’ ರಂಗಪಯಣದ ಮೂಲಕ ತನ್ನ ಸೃಜನಶೀಲ–ಪ್ರಯೋಗಶೀಲ ನಾಟಕಗಳನ್ನು ಆಯ್ದ ಜಿಲ್ಲೆಗಳಲ್ಲಿ ಪ್ರದರ್ಶಿಸಲು ಸಜ್ಜಾಗಿದೆ.

ಆಗಸ್ಟ್ 20ರಿಂದ 22ರ ತನಕ ಮೂರು ವಿಭಿನ್ನ ಬಗೆಯ ರಂಗಪ್ರಯೋಗಗಳಿಗೆ ನಗರದ ಎಡಿಎ ರಂಗಮಂದಿರದಲ್ಲಿ ಚಾಲನೆ ದೊರೆಯಲಿದೆ. ಇದೇ ಮೊದಲ ಬಾರಿಗೆ ಶಿವಮೊಗ್ಗ ರಂಗಾಯಣವು ರಂಗ ಸಂಚಾರ ಆರಂಭಿಸಿದ್ದು, ವಾಸ್ತವವಾದಿ ಶೈಲಿಯ ‘ಆಷಾಢದ ಒಂದು ದಿನ’, ಡಿವೈಸ್ಡ್ ಪ್ಲೇ ಆಗಿರುವ ‘ಟ್ರಾನ್ಸ್‌ನೇಷನ್’ ಮತ್ತು ವೃತ್ತಿರಂಗಭೂಮಿ ಸೊಗಡಿನ ‘ದುಬೈ ದೂಳಪ್ಪನ ಭರ್ಜರಿ ಗಾಳ’ ನಾಟಕಗಳು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿವೆ.

ಶಿವಮೊಗ್ಗ ರಂಗಾಯಣ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ತುಮಕೂರಿನ ಮೆಳೇಹಳ್ಳಿ, ಚಿತ್ರದುರ್ಗ, ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ನಾಟಕಗಳನ್ನು ಪ್ರದರ್ಶಿಸಲಿದೆ.

ಭಾವನಾತ್ಮಕ ಸಂಬಂಧ ಮತ್ತು ಬದುಕಿನ ಸತ್ಯಾಸತ್ಯತೆಗಳ ನಡುವಿನ ತಾಕಲಾಟಗಳು ಮತ್ತು ಆ ಮೂಲಕ  ಪದರ–ಪದರವಾಗಿ ಗೋಚರಿಸುವ ವಾಸ್ತವ ಸತ್ಯ ‘ಆಷಾಢದ ಒಂದು ದಿನ’ (ಪರಿಕಲ್ಪನೆ, ನಿರ್ದೇಶನ: ಡಾ.ಎಂ.ಗಣೇಶ್‌) ಈ ನಾಟಕ ಕೇಂದ್ರ ವಸ್ತು. ಪ್ರತಿಭಾಶಾಲಿ ಕವಿ ಕಾಳಿದಾಸನನ್ನು ಪ್ರೇಮಿಸಿ, ಅವನ ಬದುಕನ್ನು ಪೋಷಿಸಿ ಸವೆದುಹೋದ ಮುಗ್ಧ ಹೆಣ್ಣೊಬ್ಬಳ ಚಿತ್ರಣ ಈ ನಾಟಕದಲ್ಲಿದೆ.

ನಿತ್ಯದ ಆಗುಹೋಗು ಘಟನಾವಳಿಗಳು, ಸನ್ನಿವೇಶಗಳ ನ್ನೊಳಗೊಂಡ ಅನುಕರಣೀಯ ಅನಾವರಣ, ಪಿತೃಪ್ರಧಾನ ಸಮಾಜ ಮತ್ತು ರಾಜಕೀಯ ಸನ್ನಿವೇಶಗಳ ಕೊಲಾಜ್‌ನಂತಿದೆ ‘ಟ್ರಾನ್ಸ್‌ನೇಷನ್’ ನಾಟಕ. (ಪರಿಕಲ್ಪನೆ, ನಿರ್ದೇಶನ–ಸವಿತಾ ರಾಣಿ) ಡಿವೈಸ್ಡ್ ಪ್ಲೇ ಆಗಿರುವ ಈ ನಾಟಕದ ವಿಶೇಷ ಗುಣ. ನಿರ್ದಿಷ್ಟವಾಗಿ ಯಾವುದೇ ಮಾನದಂಡಗಳಿಲ್ಲದ, ಕೆಲವೊಮ್ಮ ನಾಟಕ ಕೃತಿಯ ಹಂಗಿಲ್ಲದೇ ಪ್ರದರ್ಶನಗಳನ್ನು ಮುರಿದು ಕಟ್ಟುವಿಕೆಯ ಸಾಮೂಹಿಕ ಪ್ರಕ್ರಿಯೆಯೇ ಡಿವೈಸ್ಡ್ ಪ್ಲೇ. ಎಷ್ಟೆಲ್ಲಾ ಜಾಗೃತಿಯ ನಡುವೆಯೂ ಹೆಣ್ಣು ಏಕೆ ಮತ್ತೆಮತ್ತೆ ಶೋಷಣೆಗೊಳಗಾಗುತ್ತಾಳೆ ಎಂಬುದೇ ನಾಟಕದ ತಿರುಳು. ಒಟ್ಟಾರೆ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡುವ ನಾಟಕವಿದು.

ದೌರ್ಬಲ್ಯವಿರುವ ವ್ಯಕ್ತಿಯ ಪ್ರಾಮಾಣಿಕತೆಗೆ ಎಂದಿಗೂ ಬೆಲೆ ದಕ್ಕಲಾರದು ಎನ್ನುವ ಕಥಾಹಂದರ ‘ದುಬೈ ದೂಳಪ್ಪನ ಭರ್ಜರಿ ಗಾಳ’ (ರಚನೆ, ನಿರ್ದೇಶನ–ಜೇವರ್ಗಿ ರಾಜಣ್ಣ) ನಾಟಕದ್ದು. ಸಾರಾಯಿ ನಿಷೇಧ, ಇಷ್ಟವಿಲ್ಲದ ಮದುವೆ, ಹನಿಟ್ರ್ಯಾಪ್‌ ನಾಟಕದ ವಿಷಯವಾದರೂ ಹಾಸ್ಯ ಪ್ರಸಂಗಗಳಿಗೆ ಕೊರತೆಯಿಲ್ಲ.

ಸಂಗೀತದಲ್ಲಿ ಘರಾನಾಗಳಿದ್ದಂತೆ ವೃತ್ತಿ ಮತ್ತು ಆಧುನಿಕ ರಂಗಭೂಮಿಯಲ್ಲೂ ಒಂದು ರೀತಿಯ ಭಿನ್ನ ಘರಾನಾಗಳಿವೆ. ಆಧುನಿಕರು ರಂಗಭೂಮಿಯನ್ನು ವೃತ್ತಿಯನ್ನಾಗಿ ಸ್ವೀಕರಿಸಿದ್ದರೂ ವೃತ್ತಿ ರಂಗಭೂಮಿಯಿಂದ ಕಲಿಯುವುದು ಸಾಕಷ್ಟಿದೆ. ಅಂತೆಯೇ ಆಧುನಿಕರಿಂದ ವೃತ್ತಿಯೂ ತನ್ನೊಳಗೆ ಅನೇಕ ಮಾರ್ಪಾಡುಗಳನ್ನು ಮಾಡಿಕೊಳ್ಳುವ ಅಗತ್ಯವಿದೆ. ಈ ಎರಡನ್ನೂ ಪರಸ್ಪರ ಅಳವಡಿಸಿಕೊಳ್ಳಲು ಸಹಕಾರಿಯಾಗುವಂತೆ ‘ದುಬೈ ದೂಳಪ್ಪನ ಭರ್ಜರಿ ಗಾಳ’ ನಾಟಕದ ಮೂಲಕ ಪ್ರಯತ್ನ ಮಾಡಿದ್ದೇವೆ ಎನ್ನುತ್ತಾರೆ ಶಿವಮೊಗ್ಗ ರಂಗಾಯಣದ ನಿರ್ದೇಶಕ ಡಾ.ಎಂ. ಗಣೇಶ್.

ಇಂದಿನ ಜನಮಾನಸಕ್ಕೆ ಹತ್ತಿರವಾಗುವ ನಾಟಕಗಳು ‘ರಂಗತೇರು’ ನಾಟಕೋತ್ಸವದಲ್ಲಿ ಪ್ರದರ್ಶಿತವಾಗಲಿವೆ. ತೇರನ್ನು ನೋಡಿದಾಗ ನಮ್ಮ ಮನದಲ್ಲಿ ಜನಸಮೂಹದ ಚಿತ್ರಣ ಮೂಡುತ್ತದೆ. ಅಂತೆಯೇ ರಂಗಭೂಮಿ ಅನ್ನೋದು ಹಳೆಯ ತೇರು. ಬರೀ ರಂಗಾಯಣವಷ್ಟೆ ಅಲ್ಲ ಎಲ್ಲರೂ ಸೇರಿ ಈ ರಂಗತೇರನ್ನು ಎಳೆಯಬೇಕು ಎಂಬುದು ನಮ್ಮ ಆಶಯ ಎನ್ನುತ್ತಾರೆ ಅವರು.
**
ರಂಗತೇರು (ಶಿವಮೊಗ್ಗ ರಂಗಾಯಣದ ರಂಗಪಯಣ) ನಾಟಕೋತ್ಸವ: ಉದ್ಘಾಟನಾ ಕಾರ್ಯಕ್ರಮ–ಅತಿಥಿ– ಪ್ರಸನ್ನ, ಜೆ. ಲೋಕೇಶ್, ಎನ್.ಆರ್.ವಿಶುಕುಮಾರ, ಡಾ.ಎಂ. ಗಣೇಶ್. ಆಯೋಜನೆ–ಸಂಚಯ, ಲೋಕಾಯನ, ಅನಾವರಣ, ಶಿವಮೊಗ್ಗ ರಂಗಾಯಣ. ಸ್ಥಳ– ಎ.ಡಿ.ಎ. ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಎದುರು, ಜೆ.ಸಿ.ರಸ್ತೆ. ಸೋಮವಾರ ಸಂಜೆ 6.45
**
ಶಿವಮೊಗ್ಗ ರಂಗಾಯಣದ ‘ರಂಗತೇರು’ 
ದಿನಾಂಕ ನಾಟಕ ರಚನೆ–ನಿರ್ದೇಶನ

ಆಗಸ್ಟ್‌ 20 ಆಷಾಢದ ಒಂದು ದಿನ ರಚನೆ: ಮೋಹನ ರಾಕೇಶ್ ಕನ್ನಡಕ್ಕೆ: ಸಿದ್ದಲಿಂಗ ಪಟ್ಟಣಶೆಟ್ಟಿ. ನಿ: ಡಾ.ಎಂ.ಗಣೇಶ್

ಆಗಸ್ಟ್ 21 ಟ್ರಾನ್ಸ್‌ನೇಷನ್ ಪರಿಕಲ್ಪನೆ, ನಿರ್ದೇಶನ: ಸವಿತಾರಾಣಿ

ಆಗಸ್ಟ್ 22 ದುಬೈ ಧೂಳಪ್ಪನ ಭರ್ಜರಿ ಗಾಳ ರಚನೆ, ನಿರ್ದೇಶನ: ಜೇವರ್ಗಿ ರಾಜಣ್ಣ

 ಸ್ಥಳ: ಎ.ಡಿ.ಎ. ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಎದುರು, ಜೆ.ಸಿ. ರಸ್ತೆ. ಸಮಯ: ಪ್ರತಿದಿನ ಸಂಜೆ 6.45

ಟಿಕೆಟ್ ದರ: ₹ 100. ಮೂರು ದಿನಕ್ಕೆ ₹ 250

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !