ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಾಯಣದಲ್ಲಿ ಸಲೀಂ ಅಲಿ ‘ರೆಕ್ಕೆಯ ರುಜುಗಳು’

Last Updated 31 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಒಬ್ಬ ಹುಡುಗ ತನ್ನ ಹುಟ್ಟಿದ ಹಬ್ಬಕ್ಕೆ ಚಿಕ್ಕಪ್ಪ ಉಡುಗೊರೆಯಾಗಿ ನೀಡಿದ ಏರ್‌ಗನ್‍ನಿಂದ ಪಕ್ಷಿಯೊಂದನ್ನು ಹೊಡೆದ. ಆ ಪಕ್ಷಿ ಯಾವುದೆಂದು ತಿಳಿಯದೆ, ಅದನ್ನು ತಿಳಿಯುವುದಕ್ಕಾಗಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಗೆ ತೆರಳಿದ. ಆ ಸಂಸ್ಥೆಯ ಗೌರವ ಕಾರ್ಯದರ್ಶಿ ಡಬ್ಲ್ಯೂ.ಎಸ್. ಮಿಲ್ಲಾರ್ಡನ್ ಆ ಹುಡುಗನಿಗೆ ಆ ಪಕ್ಷಿ ಯಾವುದೆಂದು ತಿಳಿಸಿದರು. ಪಕ್ಷಿಗಳ ಕುರಿತು ಹುಡುಗನಿಗೆ ಇರುವ ತೀವ್ರತರ ಆಸಕ್ತಿಯನ್ನು ಗಮನಿಸಿ. ಇಡೀ ಭಾರತದ ಪಕ್ಷಿ ವೈವಿಧ್ಯವನ್ನು ಎಳೆ ಎಳೆಯಾಗಿ ಪರಿಚಯಿಸಿದರು. ಹಾಗೆ ಮಿಲ್ಲಾರ್ಡನ್ ಅವರು ಒಬ್ಬ ಪಕ್ಷಿ ಪಿತಾಮಹನೇ ಭಾರತದಲ್ಲಿ ರೂಪುಗೊಳ್ಳಲು ಕಾರಣರಾದರು. ಸಲೀಂ ಅಲಿ ಎಂಬ ಪಕ್ಷಿ ಲೋಕದ ವಿಸ್ಮಯ ಚಿಗುರಿದ ಕಥೆಯಿದು.

ಸಲೀಂ ಅವರ ಬದುಕು ಮತ್ತು ಪಕ್ಷಿಲೋಕದ ಕುರಿತ ಅವರ ಸಾಧನೆಯನ್ನು ಆಧರಿಸಿ ಇತ್ತೀಚೆಗೆ ಮೈಸೂರಿನ ರಂಗಾಯಣದಲ್ಲಿ ‘ಅರಿವು ರಂಗ, ಮೈಸೂರು’ ಬಳಗದವರು ‘ಸಲೀಂ ಅಲಿ, ಪಕ್ಷಿ ಲೋಕದ ಬೆರಗು’ ನಾಟಕವನ್ನು ರಂಗಕ್ಕೆ ತಂದಿದ್ದಾರೆ. ಒಬ್ಬ ವ್ಯಕ್ತಿಯ ಬದುಕಿನ ಸಾಧನೆಗಳನ್ನು ರಂಗಕ್ಕೆ ತರುವ ಸಂದರ್ಭದಲ್ಲಿ ಸಾಕ್ಷ್ಯಚಿತ್ರದ ಛಾಯೆಗಳು ಅನಿವಾರ್ಯವಾಗಿ ನುಸುಳಿಬಿಡುತ್ತವೆ. ಇಂತಹ ಅಪಾಯದಿಂದ ನಾಟಕವನ್ನು ಪಾರು ಮಾಡುವುದರಲ್ಲಿ ನಿರ್ದೇಶಕರು ಸಾಕಷ್ಟು ಯಶಸ್ವಿಯಾಗಿದ್ದಾರೆ. ನಾಟಕದ ಮೊದಲರ್ಧ ಸ್ವಲ್ಪ ನಿಧಾನಗತಿಯಲ್ಲಿ ಸಾಗಿ ದೀರ್ಘವೆನಿಸುತ್ತದೆ. ಉಳಿದಂತೆ ಸಲೀಂ ಅವರ ಬದುಕಿನ ಕುತೂಹಲಕಾರಿ ತಿರುವುಗಳು, ಕೌಟುಂಬಿಕ ಏಳು ಬೀಳುಗಳು, ಗಾಂಧಿ, ನೆಹರೂ, ಇಂದಿರಾ ಗಾಂಧಿಯವರೊಂದಿಗಿನ ಅವರ ಸಂಬಂಧಗಳು ಲವಲವಿಕೆಯಿಂದ ರಂಗದಲ್ಲಿ ಜೀವ ಪಡೆದು ಪ್ರೇಕ್ಷಕರನ್ನು ಹಿಡಿದಿಡುತ್ತವೆ.

ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿಯೇ ಹಲವರು ತಮ್ಮ ತಮ್ಮ ಕ್ಷೇತ್ರದಲ್ಲಿ ಅಧ್ಯಯನ, ಸಂಶೋಧನೆಗಳಲ್ಲಿ ತೊಡಗಿದ್ದರು. ಸ್ವಾತಂತ್ರ್ಯ ಚಳವಳಿಗೆ ಬೆನ್ನು ತಿರುಗಿಸಿ ಈ ರೀತಿ ತಮ್ಮದೇ ಪ್ರಪಂಚದಲ್ಲಿ ಮುಳುಗುವುದು ಸರಿಯೇ ಎಂಬ ಪ್ರಶ್ನೆಯನ್ನು ಇಂಥವರು ಎದುರಿಸಿದ್ದಿದೆ. ಪಕ್ಷಿತಜ್ಞ ಸಲೀಂ ಅಲಿ ಕೂಡ ಇಂತಹ ಪ್ರಶ್ನೆಯನ್ನು ಎದುರಿಸಿದವರೇ. ನಾಟಕವೂ ಇದಕ್ಕೆ ಉತ್ತರವನ್ನು ಕೊಡಲು ಪ್ರಯತ್ನಿಸಿದೆ.

ಪಕ್ಷಿಸಂಕುಲದ ಅಧ್ಯಯನದ ಮೂಲಕ ಭಾರತದ ಪರಿಸರವನ್ನು ಗ್ರಹಿಸುವಲ್ಲಿ ಮಹತ್ವದ ಕೊಡುಗೆ ನೀಡುವುದರೊಂದಿಗೆ ಸ್ವಾತಂತ್ರ್ಯಾನಂತರ ಅವನತಿಯತ್ತ ಸಾಗಿದ್ದ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯನ್ನು ಸಲೀಂ ಮೇಲೆತ್ತಿದರು. ಅವರ ಪಾಂಡಿತ್ಯ ಹಾಗೂ ನಾಯಕತ್ವದ ಗುಣ, ಸರ್ಕಾರದ ವಿವೇಕಹೀನ ನಿರ್ಧಾರಗಳನ್ನು ಹಿಮ್ಮೆಟ್ಟಿಸಿ ರಾಜಸ್ಥಾನದ ಭರತಪುರದಲ್ಲಿರುವ ಘಾನಾ ಪಕ್ಷಿಧಾಮ ಮತ್ತು ಕೇರಳದ ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಮಡದಿ ತೆಹಮಿನಾ (ಸರಳಾ ನಟರಾಜ್) ಮತ್ತು ಗೆಳತಿ ಮಿಸ್ ಕೆ (ಸೀಮಂತಿನಿ ಬಿ.) ಪಾತ್ರಗಳು ಉತ್ತರಾರ್ಧದ ನಾಟಕದ ಬಹುಪಾಲನ್ನು ಆವರಿಸಿದ್ದವು. ಇದಕ್ಕೆ ಈ ನಟಿಯರ ಅಭಿನಯವೂ ಒಂದು ಕಾರಣ. ಸಲೀಂ ಅವರಿಗೆ ಪಕ್ಷಿಗಳ ಅಧ್ಯಯನದಲ್ಲಿ ಕುಟುಂಬ ನಿರ್ವಹಣೆಗಾಗುವಷ್ಟೂ ಆದಾಯ ಬಾರದಿದ್ದಾಗ ಮತ್ತು ಅದಕ್ಕೆ ಅನಿವಾರ್ಯವಾಗಿ ವಿದಾಯ ಹೇಳಬೇಕಾದ ಸಂದರ್ಭ ಸೃಷ್ಟಿಯಾದಾಗ ತೆಹಮಿನಾ ತಾವೇ ಅರೆಕಾಲಿಕ ಉದ್ಯೋಗಕ್ಕೆ ಸೇರಿ ಸಲೀಂ ಅವರಿಗೆ ಅವರ ಅಧ್ಯಯನವನ್ನು ಮುಂದುವರೆಸಲು ಅವಕಾಶ ಮಾಡಿಕೊಟ್ಟು ಹೃದಯ ವೈಶಾಲ್ಯ ಮೆರೆಯುತ್ತಾರೆ.

ತೆಹಮಿನಾ ಅವರ ಮರಣದ ನಂತರ ಪತ್ರಕರ್ತೆ ಮಿಸ್ ಕೆ ಅವರು ಸಲೀಂ ಅವರ ಬದುಕನ್ನು ಪ್ರವೇಶಿಸುತ್ತಾರೆ. ಇವರೀರ್ವರು ಮದುವೆಯಾಗದೆ ಲಿವಿಂಗ್ ಟುಗೆದರ್ ರೀತಿ ಬದುಕುತ್ತಿರುತ್ತಾರೆ. ಮಿಸ್ ಕೆ ಅವರು ಸಲೀಂ ಅವರೊಂದಿಗೆ ಇರುವ ಸಂದರ್ಭದಲ್ಲಿ ಮಡದಿ ತೆಹಮಿನಾ ಪ್ರತ್ಯಕ್ಷವಾಗಿ ‘ನೀವು ಸಲೀಂ ಅವರೊಂದಿಗೆ ಇರುವುದು ನನಗೇನೂ ಬೇಸರ ತರಿಸಿಲ್ಲ. ಸಲೀಂ ಖುಷಿಯಾಗಿರುವುದು ನನಗೆ ಮುಖ್ಯ’ ಎನ್ನುವ ರೀತಿಯ ಮಾತುಗಳನ್ನು ಹೇಳಿಸುವ ದೃಶ್ಯವೊಂದನ್ನು ಸೃಷ್ಟಿಸಲಾಗಿದೆ. ‘ಮಡದಿಯನ್ನು ಕಳೆದುಕೊಂಡ ನಂತರ ಸಲೀಂ ಅವರು ಇನ್ನೊಂದು ಹೆಣ್ಣಿನೊಂದಿಗೆ ಸಂಬಂಧ ಬೆಳೆಸಬಾರದಿತ್ತೇನೋ’ ಎಂದು ಯೋಚಿಸುವ ಸಾಂಪ್ರದಾಯಿಕ ಮನಸ್ಸುಗಳ ದೃಷ್ಟಿಯಲ್ಲಿ ಸಲೀಂ ಅವರ ವ್ಯಕ್ತಿತ್ವವನ್ನು ಕಾಪಾಡುವ ಉದ್ದೇಶದಿಂದ ಈ ದೃಶ್ಯ ಸೃಷ್ಟಿಸಿದಂತೆ ಭಾಸವಾಗುತ್ತದೆ. ನಾಟಕದ ಒಟ್ಟು ಪರಿಣಾಮದ ದೃಷ್ಟಿಯಿಂದ ಇದು ಭಾರವೆನಿಸುತ್ತದೆ.

ವೈದ್ಯ ಡಾ.ಮನೋಹರ್ ಎಂ.ಸಿ. ಅವರು ಈ ನಾಟಕವನ್ನು ರಚಿಸಿದ್ದು, ಬರ್ಟಿ ಒಲಿವೆರಾ ನಿರ್ದೇಶಿಸಿದ್ದಾರೆ. ನಾಟಕ ರಚನೆ ಮತ್ತು ನಿರ್ದೇಶನದ ಜೊತೆ ಇವರಿಬ್ಬರೂ ಕ್ರಮವಾಗಿ ಯುವ ಸಲೀಂ ಮತ್ತು ಸಲೀಂ ಅವರ ಲೇಖಕಮಿತ್ರ ಜೆ.ಸಿ. ಡೇನಿಯಲ್ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಆರ್. ಚಲಪತಿ ಅವರು ಇಳಿವಯಸ್ಸಿನ ಸಲೀಂ ಅಲಿ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ಧ್ವನಿಯ ಏರಿಳಿತ, ನಡುಗುವ ದೇಹದ ಚಲನೆಯನ್ನು ಒಂದೆರಡು ಕ್ಷಣಗಳನ್ನು ಹೊರತುಪಡಿಸಿದಂತೆ ನಾಟಕದ ಆರಂಭದಿಂದ ಕೊನೆಯವರೆಗೂ ಅವರು ಕಾಪಿಟ್ಟುಕೊಂಡಿದ್ದಾರೆ. ರಂಗಸಜ್ಜಿಕೆ (ಕಾಜು) ಪೂರಕವಾಗಿತ್ತು. ಬೆಳಕಿನ ನಿರ್ವಹಣೆ ಇನ್ನಷ್ಟು ಸುಧಾರಿಸಬೇಕಿತ್ತು. ಸಂಗೀತ ಕೆಲವು ಸಂದರ್ಭಗಳಲ್ಲಿ ಸಂಭಾಷಣೆಗೆ ತೊಡಕಾಗಿ ಮೂಡುತ್ತಿತ್ತು.

ವ್ಯಕ್ತಿಯ ಸಾಧನೆಯನ್ನು ಆತ ಜನಿಸಿದ ಜಾತಿ-ಧರ್ಮದ ಕಾರಣಕ್ಕೆ ವೈಭವೀಕರಿಸುವ ಅಥವಾ ಹಿನ್ನೆಲೆಗೆ ಸರಿಸುವ, ಮಸುಕುಗೊಳಿಸುವ, ವಿಕೃತಗೊಳಿಸುವ ನಿರಂತರ ಪ್ರಯತ್ನ ಒಂದು ಮಟ್ಟದಲ್ಲಿ ಲಾಗಾಯ್ತಿನಿಂದಲೂ ಎಲ್ಲ ಕಡೆಯೂ ನಡೆದುಬಂದಿದೆ. ಈಗ ಢಾಳಾಗಿ ಕಾಣುವಂತೆ ನಡೆಯುತ್ತಿದೆ. ಸಾಹಿತ್ಯ ದಾಟಿ ಸಿನಿಮಾ ಮತ್ತು ರಂಗಭೂಮಿಗೂ ಆ ಪ್ರವೃತ್ತಿ ಪ್ರವೇಶಿಸಿದೆ. ಈ ವಿಷಮ ಸನ್ನಿವೇಶದಲ್ಲಿ ಜಾತಿ-ಧರ್ಮವನ್ನು ಮೀರಿ ನೈಜ ಚಿತ್ರಣ ನೀಡುವ ಪ್ರವೃತ್ತಿ ಕಲಾಕ್ಷೇತ್ರಗಳಲ್ಲಿ ಅತ್ಯಗತ್ಯವಾಗಿದೆ. ಈ ಹಿಂದೆ ಗಣಿತಜ್ಞ ಶ್ರೀನಿವಾಸ ರಾಮಾನುಜಂ ಕುರಿತ ನಾಟಕ ‘ನಿಲುಕದ ನಕ್ಷತ್ರ’, ವಿಜ್ಞಾನಿ ‘ಅಬ್ದುಸ್ ಸಲಾಂ ಒಂದು ವಿಚಾರಣೆ’ ನಾಟಕಗಳನ್ನು ರಂಗಕ್ಕೆ ತಂದಿದ್ದ ‘ಅರಿವು ರಂಗ’ ಈಗ ಸಲೀಂ ಅಲಿ ಕುರಿತ ನಾಟಕದ ಮೂಲಕ ಈ ಕರ್ತವ್ಯವನ್ನು ನಿರ್ವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT