ಬಹುಮುಖ ಪ್ರತಿಭೆ ಸ್ನೇಹಾ ಕಪ್ಪಣ್ಣ

7

ಬಹುಮುಖ ಪ್ರತಿಭೆ ಸ್ನೇಹಾ ಕಪ್ಪಣ್ಣ

Published:
Updated:
Prajavani

ಚಿಕ್ಕ ವಯಸ್ಸಿಗೇ ಭರತನಾಟ್ಯದ ಗೀಳು ಹಚ್ಚಿಕೊಂಡಿದ್ದ ಸ್ನೇಹಾ ಕಪ್ಪಣ್ಣ ಕ್ರಮೇಣ ಜನಪದ ನೃತ್ಯಗಳ ಕಡೆಗೆ ಒಲವು ತೋರಿದರು. 

ಈ ಹಾದಿಯಲ್ಲಿ ಮುನ್ನಡೆದ ಅವರಿಗೆ ಅಮೆರಿಕದ ಕನ್ನಡಿಗರಿಗೆ ನೃತ್ಯ ಹೇಳಿಕೊಡುವ ಅವಕಾಶ ಒಲಿದು ಬಂದಿದೆ.

‘ನಾನು ಜನಪದ ನೃತ್ಯಗಳ ಕಡೆಗೆ ಹೊರಳುವುದಕ್ಕೆ ಮುಖ್ಯ ಕಾರಣ ನನ್ನ ಅಪ್ಪ. ಅವರು ನ್ಯಾಷನಲ್‌ ಗೇಮ್ಸ್‌ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳಲ್ಲಿ ನೃತ್ಯ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ.  ಶಿಷ್ಯಂದಿರು ಅವರಿಗೆ ಕೊಡುವ ಗೌರವ ಹಾಗೂ ಅವರಿಗೆ ಸಿಕ್ಕ ಜನಮನ್ನಣೆ ನನ್ನನ್ನು ಈ ಹಾದಿಗೆ ಬರಲು ಪ್ರೇರೇಪಿಸಿತು’ ಎನ್ನುತ್ತಾರೆ ಸ್ನೇಹಾ. 

ಭರತನಾಟ್ಯವನ್ನು ಅವರು ಎಷ್ಟರಮಟ್ಟಿಗೆ ಹಚ್ಚಿಕೊಂಡಿದ್ದರೆಂದರೆ, 2002ರಲ್ಲಿ‘ಭ್ರಮರಿ’ ನೃತ್ಯ ಸಂಸ್ಥೆಯನ್ನು ಆರಂಭಿಸಿದರು. ಹಲವಾರು ವಿದ್ಯಾರ್ಥಿಗಳಿಗೆ ಗುರುವಾದರು. ಭಾನುಮತಿ ಅವರಿಂದ ಕಲಿತ ಎಲ್ಲಾ ಪಟ್ಟುಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು. 

‘ಭರತನಾಟ್ಯದಿಂದಲೂ ನನಗೆ ಯಶಸ್ಸು ಸಿಕ್ಕಿತ್ತು. ಆದರೆ ಇನ್ನಷ್ಟು ಸಾಧಿಸುವ ಛಲ ಇದ್ದೇ ಇತ್ತು.  ದಾರಿ ಯಾವುದು ಅನ್ನುವುದು ಸ್ಪಷ್ಟವಾಗಿರಲಿಲ್ಲ. ಕಾಲೇಜು ದಿನಗಳಿಂದಲೂ ಜನಪದ ನೃತ್ಯಗಳನ್ನು ಕಲಿತು ವೇದಿಕೆ ಮೇಲೆ ಪ್ರದರ್ಶನ ನೀಡಿದ್ದೆ. ಆದರೆ ಅದನ್ನೇ ನನ್ನ ಬದುಕಿನ ದಾರಿಯಾಗಿಸಿಕೊಳ್ಳುವ ಬಗ್ಗೆ ಹೆಚ್ಚು ಯೋಚನೆ ಮಾಡಿರಲಿಲ್ಲ‘ ಎಂದು ವೃತ್ತಿಯ ಆರಂಭಿಕ ದಿನಗಳನ್ನು ತೆರೆದಿಟ್ಟರು. 

ಅಪ್ಪನ ಸಹಕಾರದಿಂದ ಸ್ನೇಹಾ, ಮೊದಲ ಬಾರಿಗೆ ‘ಜಾನಪದ ಜಾತ್ರೆ’ಯಲ್ಲಿ ನೃತ್ಯ ಸಂಯೋಜನೆ ಮಾಡಿದರು. ಅಲ್ಲಿಂದ ಅವರ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಿತು. ಈ ಕ್ಷೇತ್ರದಲ್ಲಿ ಏನಾದರೂ ಸಾಧಿಸುವ ಹುಮ್ಮಸ್ಸು ಬೆಳೆಯಿತು. 

‘ನನಗೆ ಜಾನಪದ ಕಲೆಗಳ ಬಗ್ಗೆ ಮೊದಲಿನಿಂದಲೂ ಕುತೂಹಲ. ಈ ಕಲೆಗೆ ನ್ಯಾಯ ದೊರಕಿಸಿಕೊಡುವ ಕನಸು ಇತ್ತು. ಶಾಸ್ತ್ರೀಯ ನೃತ್ಯಗಳಿಗೆ ಸಿಗುವ ಮನ್ನಣೆ ಜಾನಪದ ಕಲೆಗಳಿಗೆ ಸಿಗುತ್ತಿಲ್ಲ. ಈ ಪ್ರಕಾರವನ್ನು ಕೀಳಾಗಿ ಕಂಡಿದ್ದೇ ಹೆಚ್ಚು. ಈಗ ಮಹಿಳೆ, ಪುರುಷರು ಎನ್ನುವ ಭಿನ್ನತೆ ಇಲ್ಲದೇ ಎಲ್ಲರೂ ಕಂಸಾಳೆ, ಡೊಳ್ಳು ಕುಣಿತ ಮಾಡುತ್ತಿದ್ದಾರೆ. ಆದರೆ ನಮ್ಮ ಕಾಲೇಜಿನ ದಿನಗಳಲ್ಲಿ ಹಾಗೆ ಇರಲಿಲ್ಲ. ನಾವೇ ಮುಂದೆ ಬಂದು ಕಂಸಾಳೆ ಮಾಡಿದ್ದೆವು. ಈ ಕ್ಷೇತ್ರದಲ್ಲಿ ಸಂಶೋಧನೆ ಕೂಡ ಮಾಡಿದ್ದೇನೆ. ಜಾನಪದ ಸರಳ ಅಲ್ಲ. ಅದರಲ್ಲಿ ಗೌರವಯುತ ಜೀವನ ಸಾಧಿಸಬಹುದು ಎಂಬುದಕ್ಕೆ ನಾನು ಮತ್ತು ನನ್ನ ತಂದೆಯೇ ಉದಾಹರಣೆ‘ ಎನ್ನುವುದು ಅವರ ಮನದ ಮಾತು.

ಕೆಲವು ಪತ್ರಿಕೆಗಳಲ್ಲಿ ಲೇಖನಗಳನ್ನೂ ಬರೆದಿರುವ ಸ್ನೇಹಾ ಅವರು ಅಮೆರಿಕದ ಕೆಕೆಎಲ್‌ಸಿ ತಂಡದ ಕಲಾವಿದರಿಗೆ ನೃತ್ಯ ಹೇಳಿಕೊಡಲು ತೆರಳುತ್ತಿದ್ದಾರೆ. ಸಂಕ್ರಾಂತಿಗೆ ಅಲ್ಲಿರುವ ಕನ್ನಡಿಗರು ಜನಪದ ನೃತ್ಯ ಮಾಡುವ ಉತ್ಸಾಹ ತೋರಿದ್ದಾರೆ. 

‘ಇಲ್ಲಿಯವರೆಗೂ ಅಮೆರಿಕದ ಕನ್ನಡಿಗರು ಕರ್ನಾಟಕದ ಸಾಂಪ್ರದಾಯಿಕ ನೃತ್ಯಗಳನ್ನು ಇಷ್ಟಪಡುತ್ತಿದ್ದರು. ಈಗ ಜಾನಪದವನ್ನೂ ಇಷ್ಟಪಟ್ಟು ಮಾಡಲು ಬಯಸಿದ್ದಾರೆ. ಅವರಿಗಾಗಿ ಇಲ್ಲಿಂದಲೇ ಉಡುಗೆಗಳನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಮೂರು ನಗರಗಳಲ್ಲಿ ಜನಪದ ನೃತ್ಯಗಳ ಕುರಿತು ಉಪನ್ಯಾಸ ಕೂಡ ಮಾಡಲಿದ್ದೇನೆ‘ ಎಂದು ಯೋಜನೆಗಳನ್ನು ಹಂಚಿಕೊಂಡರು.

‘ಜನಪದ ಬೆಳೆಸಿ ಉಳಿಸುವವರಿಲ್ಲ. ಆದರೆ ನಮ್ಮ ಶಾಸ್ತ್ರೀಯ ನೃತ್ಯಗಳನ್ನು ಉಳಿಸಲು ದೊಡ್ಡ ತಂಡವೇ ಇದೆ‘ ಎನ್ನುವುದು ಅವರ ಮಾತು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !