ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ..

Last Updated 19 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಧಾರ್ಮಿಕ ಕೇಂದ್ರ ಒಂದರಲ್ಲಿ ಸಕ್ರಿಯವಾಗಿ ರಂಗಭೂಮಿಗೇ ಮೀಸಲಾದ ಕಲಾಶಾಲೆ ಹೊಸದುರ್ಗ ತಾಲ್ಲೂಕಿನ ಪುಟ್ಟ ಗ್ರಾಮ ಸಾಣೇಹಳ್ಳಿಯಲ್ಲಿದೆ. ಇಲ್ಲಿನ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಕಲೆ, ಸಾಹಿತ್ಯ, ಸಂಗೀತಕ್ಕೆ ಒತ್ತು ನೀಡುವ ಉದ್ದೇಶದಿಂದ 1987ರಲ್ಲಿ ‘ಶ್ರೀ ಶಿವಕುಮಾರ ಕಲಾಸಂಘವನ್ನುʼ ಆರಂಭಿಸಿದರು.

ಆರಂಭದಲ್ಲಿ ಸ್ಥಳೀಯ ನೌಕರರು, ವಿದ್ಯಾಥಿಗಳು, ಗ್ರಾಮದ ಆಸಕ್ತ ಯುವಕರನ್ನು ಒಗ್ಗೂಡಿಸಿ ನಾಟಕ ಆಡಿಸುತ್ತಿದ್ದರು. ಅನಂತರದಲ್ಲಿ ಶಾಸ್ತ್ರೀಯ ಅಧ್ಯಯನಕ್ಕಾಗಿ ರಂಗಶಾಲೆಯನ್ನಾಗಿ ಮಾರ್ಪಡಿಸಿ ಎಸ್ಸೆಸ್ಸೆಲ್ಸಿ ಉತ್ತೀಣರಾದ 20 ರಂಗಾಸಕ್ತ ಯುವಕ-ಯುವತಿಯರನ್ನು ಆಯ್ಕೆ ಮಾಡಿ ಅವರಿಗೆ ಒಂದು ವರ್ಷದ ರಂಗ ತರಬೇತಿ ನೀಡಿ, ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಡಿಪ್ಲೋಮಾ ಇನ್‌ ಥಿಯೇಟರ್‌ ಆರ್ಟ್ಸ್‌ʼ ಸರ್ಟಿಫಿಕೇಟ್‌ ನೀಡಲಾಗುವುದು. ಮರು ವರ್ಷ ಮೂರು ನಾಟಕಗಳನ್ನು ರಾಜ್ಯದಾದ್ಯಂತ ‘ಶಿವಸಂಚಾರ’ ಮಾಡಿ 150ಕ್ಕೂ ಹೆಚ್ಚು ಪ್ರದರ್ಶನ ನೀಡುವರು. ಈ ವರ್ಷದ ಶಿವಸಂಚಾರದ ಭಾಗವಾಗಿ ಮೈಸೂರಿನಲ್ಲಿ ಮೂರು ನಾಟಕಗಳನ್ನು ಆಡಲಿದ್ದಾರೆ. ಈ ವರ್ಷದ ನಾಟಕೋತ್ಸವದ ಧ್ಯೇಯವಾಕ್ಯ ‘ಸ್ಥಾವರಕ್ಕಳಿವುಂಟು...’ ಮೂರು ನಾಟಕಗಳು ಈ ಆಶಯ ಕುರಿತಾದದ್ದು.

ತರಳಬಾಳು ಸಮಾಗಮ, ಶ್ರೀ ಶಿವಕುಮಾರ ಕಲಾಸಂಘ, ಸಾಣೇಹಳ್ಳಿ, ಶ್ರೀ ಹೊಸಮಠ ಮತ್ತು ಕದಂಬ ರಂಗವೇದಿಕೆ ವತಿಯಿಂದ ನಗರದ ಹೊಸಮಠ ಆವರಣದಲ್ಲಿ ಏಪ್ರಿಲ್‌ 24 ರಿಂದ 26ರವರೆಗೆ ಈ ಬಾರಿಯ ಶಿವಸಂಚಾರದ ನಾಟಕಗಳ ಪ್ರದಶನವಿದೆ.

ಏಪ್ರಿಲ್‌ 24ರಂದು ಸಂಜೆ 6.30ಕ್ಕೆ ಹನುಮಂತ ಹಾಲಿಗೇರಿ ವಿರಚಿತ ‘ಊರು ಸುಟ್ಟರೂ ಹನುಮಪ್ಪ ಹೊರಗೆʼ ನಾಟಕ ಮಾಲತೇಶ ಬಡಿಗೇರ ನಿರ್ದೇಶನದಲ್ಲಿ ಪ್ರದಶನಗೊಳ್ಳಲಿದೆ. ನಾಟಕಕ್ಕೆ ಸಂಗೀತ ರಮೇಶ ಕುರುಬಗಟ್ಟಿ ಅವರದ್ದು.

25ರಂದು ಸಂಜೆ 6.30ಕ್ಕೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ರಚಿತ ‘ಗುರುಮಾತೆ ಅಕ್ಕ ನಾಗಲಾಂಬಿಕೆʼ ನಾಟಕ ಖ್ಯಾತ ರಂಗಕರ್ಮಿ ಸಿ.ಬಸವಲಿಂಗಯ್ಯ ನಿದೇಶನದಲ್ಲಿ ಪ್ರದರ್ಶನ ಕಾಣಲಿದೆ.

26ರಂದು ಸಂಜೆ 6.30ಕ್ಕೆ ಜ.ಹೋ. ನಾರಾಯಣಸ್ವಾಮಿ ವಿರಚಿತ ‘ನರಬಲಿʼ ನಾಟಕವನ್ನು ಸವಿತಾ ಪ್ರಸನ್ನ ನಿರ್ದೇಶಿಸಿದ್ದಾರೆ. ಎಲ್ಲ ನಾಟಕಗಳಿಗೂ ಪ್ರವೇಶ ಉಚಿತ. ಏಪ್ರಿಲ್‌ 24ರಂದು ಸಂಜೆ 6ಗಂಟೆಗೆ ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ ಮೈಸೂರು ರಂಗಾಯಣದ ನಿರ್ದೇಶಕಿ ಭಾಗೀರಥಿಬಾಯಿ ಕದಂ, ನಗರದ ಹೊಸಮಠದ ಚಿದಾನಂದ ಸ್ವಾಮಿ ಉಪಸ್ಥಿತರಿರುತ್ತಾರೆ. ಅಧ್ಯಕ್ಷತೆಯನ್ನು ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಬಸವಲಿಂಗಯ್ಯ ವಹಿಸಲಿದ್ದಾರೆ.

ಊರು ಸುಟ್ಟರೂ ಹನುಮಪ್ಪ ಹೊರಗೆ: ಶ್ರೇಷ್ಠ- ಕನಿಷ್ಠ, ಪರಂಪರೆ- ಸಂಪ್ರದಾಯ, ನಂಬಿಕೆ- ಮೂಢನಂಬಿಕೆ, ಮೇಲು-ಕೀಳು ಮುಂತಾದ ವಾದ- ವಿವಾದಗಳು ದೇಶ, ಭಾಷೆ, ಕಾಲ ಮೀರಿದ್ದು. ಜಗತ್ತಿನಾದ್ಯಂತ ಶತ ಶತಮಾಗಳಿಂದಲೂ ಗುದ್ದಾಟಗಳು ಮುಂದುವರಿಯುತ್ತಲೇ ಇವೆ. ಇಂಥ ಘಟನಾಧಾರಿತ ಕಥಾಹಂದರವೇ ನಾಟಕದ ಎಳೆ.

ಗುರುಮಾತೆ ಅಕ್ಕ ನಾಗಲಾಂಬಿಕೆ: 12ನೇ ಶತಮಾನದ ವಚನ ಚಳವಳಿಯ ಹರಿಕಾರ ಬಸವಣ್ಣನನ್ನು ರೂಪಿಸಿದ ಕೀರ್ತಿ ಆತನ ಸಹೋದರಿ, ತಾಯಿಯಂತೆ ಕಾಪಿಟ್ಟ ನಾಗಲಾಂಬಿಕೆಗೆ ಸಲ್ಲುತ್ತದೆ. ಲಿಂಗ ಸಮಾನತೆಯ ಆಲೋಚನೆಗಳನ್ನು ಬಸವಣ್ಣನಲ್ಲಿ ನೆಟ್ಟ ವ್ಯಕ್ತಿ ಈಕೆ. ಬಸವಣ್ಣನ ಬದುಕಿನ ಎಲ್ಲ ನೆಲೆಗಳಲ್ಲೂ ಮಹತ್ತರ ಪಾತ್ರವಹಿಸಿದ ನಾಗಲಾಂಬಿಕೆ ಕಲ್ಯಾಣದ ಕ್ರಾಂತಿಯ ಕಿಚ್ಚು ಮುಗಿಲು ಮುಟ್ಟಿದಾಗ ವಚನಗಳ ಸಂರಕ್ಷಣೆಗೆ ನಿಂತ ಧೀರ ಹೆಣ್ಣು. ಬಸವಣ್ಣನ ವ್ಯಕ್ತಿತ್ವ ಜಾಗೃತಗೊಳ್ಳಲು ಬೆಂಬಲವಾಗಿ ನಿಂತ ಐತಿಹಾಸಿಕ ಪಾತ್ರ ನಾಗಲಾಂಬಿಕೆ. ಆಕೆಯ ಒಟ್ಟು ಆಲೋಚನೆ, ಹೋರಾಟದ ಹಾದಿಯನ್ನು ‘ಗುರುಮಾತೆ ಅಕ್ಕ ನಾಗಲಾಂಬಿಕೆ’ ನಾಟಕ ಎತ್ತಿ ಹಿಡಿಯುತ್ತದೆ.

ನರಬಲಿ: ‘ತೆರಣಿಯ ಹುಳು ತನ್ನ ನೂಲ ತನ್ನನ್ನೇ ಸುತ್ತಿ ಸಾವ ತೆರನಂತೆ..’ ಅಕ್ಕನ ಈ ವಚನ ಪ್ರತಿಬಿಂಬಿಸುವಂತೆ; ಮನುಷ್ಯ- ದೇವರು, ಧರ್ಮ, ಜಾತಿ, ಮತ, ದೇಶ, ಭಾಷೆಗಳ ನೂಲನ್ನು ತನಗೆ ತಾನೇ ಸುತ್ತಿಕೊಂಡು ಸಾಯುತ್ತಿದ್ದಾನೆ. ಇದು ಜಗದಗಲ, ಮುಗಿಲಗಲ.. ವ್ಯಾಪಿಸಿಕೊಂಡಿದೆ. ಇದಕ್ಕೆ ರೂಪಕವಾಗಿ ಮಹಾಭಾರತದ ವೇನ ಮಹಾರಾಜನ ಕಥನ ನಾಟಕದ ರೂಪು ಪಡೆದಿದೆ. ಅಸಮಾನತೆಗಳು ಉಚ್ಚ್ರಾಯ ಸ್ಥಿತಿಯಲ್ಲಿದ್ದ ಕಾಲಮಾನದಲ್ಲಿ ಸರ್ವಸಮಾನತೆಯ ಕನಸು ಕಂಡ ಮಹಾನ್‌ ಮಾನವತಾವಾದಿ ವೇನ ಮಹಾರಾಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT